ಆಗಲಿಲ್ಲ ಇನ್ನೂ ಆಕೆ ಋತುಮತಿ

7

ಆಗಲಿಲ್ಲ ಇನ್ನೂ ಆಕೆ ಋತುಮತಿ

Published:
Updated:
ಆಗಲಿಲ್ಲ ಇನ್ನೂ ಆಕೆ ಋತುಮತಿ

ಅದೊಂದು ವಠಾರ. ಅಲ್ಲಿ ಅನೇಕ ಕುಟುಂಬಗಳು, ವಠಾರದ ತುಂಬ ಮಕ್ಕಳು, ಆಡುತ್ತಾ, ನಲಿಯುತ್ತಾ ಬೆಳೆಯುತ್ತಾ ಹದಿಹರೆಯಕ್ಕೆ ಕಾಲಿಟ್ಟಂತೆ, ಹೆಣ್ಣು ಮಕ್ಕಳಿರುವ ಮನೆಯಲ್ಲಿ ಸಂತಸ.`ಮಗಳು ದೊಡ್ಡಾಕಿ ಆದಳು~ ಎಂದು ಆಕೆಯನ್ನಲಂಕರಿಸಿ, ಆರತಿ ಬೆಳಗಿ, ಸಿಹಿ ಊಟಕ್ಕೆ ಎಲ್ಲರನ್ನೂ ಆಹ್ವಾನಿಸಿ, ಹಬ್ಬದಂತೆ ಹೆಣ್ಣಿನ ಜೀವನದ ಆ ಒಂದು ಘಟ್ಟವನ್ನು ಆಚರಿಸುವ ಸಂಭ್ರಮ. ಅದೇ ವಠಾರದಲ್ಲಿದ್ದ ದಂಪತಿಗಳಿಗೆ ಆಕೆ ಏಕೈಕ ಪುತ್ರಿ. ಮುದ್ದಾಗಿ ಬೆಳೆಸಿದ್ದಾರೆ. ಆ ಹುಡುಗಿ ಎರಡನೇ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯೂ ಆಗಿದ್ದಾಳೆ. ಹದಿನೆಂಟು ವರ್ಷ ತುಂಬುತ್ತಿದೆ. ಆದರೆ ಆಕೆ ಇನ್ನೂ ಋತುಮತಿಯಾಗಿಲ್ಲ. ತಂದೆ, ತಾಯಿ ಇಬ್ಬರಿಗೂ ಆತಂಕ, ಆಕೆಯ ವಾರಿಗೆಯವರೆಲ್ಲರೂ ಋತುಮತಿಯಾಗಿ 4- 5 ವರ್ಷಗಳೇ ಕಳೆದಿವೆ. ಆ ಹುಡುಗಿಗೂ ಸಹ ಏನೋ ದುಗುಡ, ಆತಂಕ, ಭಯ. ತನಗೆ ಯಾಕೆ ಹೀಗೆ? ಈ ರೀತಿಯಾದರೆ ನಂತರದ ದಿನಗಳಲ್ಲಿ ಮದುವೆ ? ಮಕ್ಕಳು, ಸಂಸಾರ ... ಈಕೆಯ ಪಾಲಿಗೆ ಇಲ್ಲವೇ ಎಂಬ ಭಯ ತಂದೆ ತಾಯಿಯರಿಗೆ. ಇಷ್ಟು ದಿನ ಕಾದರೂ ಆಕೆ ಋತುಮತಿಯಾಗಿಲ್ಲದ್ದರಿಂದ ಕೊನೆಗೆ ವೈದ್ಯರ ಮೊರೆಹೊಕ್ಕರು.ಯಾಕೆ ಹೀಗೆ? ಇದಕ್ಕೆ ಕಾರಣ ಪರಿಹಾರ? ಹೆಣ್ಣು ಮಕ್ಕಳಿಗೆ ಹದಿನಾರು ವಯಸ್ಸು ದಾಟಿದರೂ ಋತುಚಕ್ರ ಪ್ರಾರಂಭವಾಗಲಿಲ್ಲವೆಂದರೆ ಆತಂಕ ಸಹಜ. ವೈದ್ಯರನ್ನು ಸಂದರ್ಶಿಸಿ ಸರಿಯಾದ ಕಾರಣ ತಿಳಿದು ಚಿಕಿತ್ಸೆಗೆ ಒಳಪಡಬೇಕು. ಹೆಣ್ಣು ಋತುಮತಿಯಾಗದಿದ್ದಲ್ಲಿ ಅಥವಾ ಋತುಚಕ್ರ ಸರಿಯಾಗಿ ಆಗುತ್ತಿದ್ದ ಮಹಿಳೆಯರಲ್ಲಿ ಋತುಚಕ್ರ ಅಥವಾ ಮುಟ್ಟಾಗುವುದು ನಿಂತಾಗ ಅದನ್ನು  ಅಮೆನೋರಿಯ  (AMENORRHOEA) ಎನ್ನುತ್ತೇವೆ. ಇದು ಗ್ರೀಕ್ ಪದ. ಅ ಅಂದರೆ ನೆಗೆಟಿವ್ (ನಕಾರಾತ್ಮಕ)  MEN ಎಂದರೆ ಮಂತ್, ಅಂದರೆ ತಿಂಗಳು,   RHOEA ಎಂದರೆ  ಫ್ಲೋ (ಸ್ರವಿಕೆ, ಸುರಿಯುವುದು). ಪ್ರತಿ ತಿಂಗಳು ಗರ್ಭಕೋಶವು ಹೊರ ಹರಿಸುವಂಥಹ ರಕ್ತಸ್ರಾವದ ನಿಲ್ಲುವಿಕೆ ಎಂದರ್ಥ.ಹದಿಹರೆಯದ ಹೆಣ್ಣುಮಗುವಿನಲ್ಲಿ 14 ವರ್ಷ ವಯಸ್ಸಾದರೂ ದೈಹಿಕ ಬದಲಾವಣೆಯ ಚಿನ್ಹೆಗಳು ಕಾಣಿಸಿಕೊಳ್ಳದಿದ್ದಲ್ಲಿ ಹಾಗೂ ಆಕೆ ಋತುಮತಿಯಾಗದಿದ್ದಾಗ, ಅಥವಾ ದೈಹಿಕ ಬದಲಾವಣೆಗಳು ಕಂಡರೂ 16 ವರ್ಷ ವಯಸ್ಸಾದರೂ ಹುಡುಗಿ ಋತುಮತಿಯಾಗದಿದ್ದ ಪಕ್ಷದಲ್ಲಿ `ಪ್ರೈಮರಿ ಅಮೇನೋರಿಯ~ ಎನ್ನಲಾಗುವುದು.ಇತಿಹಾಸದ ಪುಟಗಳನ್ನು ತಿರುವಿದಾಗ ತಿಳಿದು ಬರುವ ಮಾಹಿತಿಯೇನೆಂದರೆ, ಇಂಥಹ ಸಂದರ್ಭಗಳಲ್ಲಿ ಹೆಣ್ಣಿನ ಜನನೇಂದ್ರಿಯದಲ್ಲಿ `ಅಮೋನಿಯಾ~ ಇಂಜೆಕ್ಷನ್ ಕೊಡಲಾಗುತ್ತಿತ್ತು. ಇದರಿಂದ ಉಂಟಾಗುವ ನೋವು, ಋತುಚಕ್ರ ಶುರುವಾಗಲು ಪ್ರಚೋದಿಸುತ್ತದೆ ಎಂಬ ಕಾರಣದಿಂದ! ಸಾಧಾರಣವಾಗಿ 9 ರಿಂದ 16 ವಯಸ್ಸಿನೊಳಗೆ ಹೆಣ್ಣುಮಕ್ಕಳು ಋತುಮತಿಯಾಗುವರು.ಕಾರಣಗಳು ಅನೇಕ

 * ಬೆಳವಣಿಗೆಯ ಸಮಸ್ಯೆಗಳು: ರ್ಭಕೋಶ ಅತೀ ಚಿಕ್ಕದಿರುವುದು, ಗರ್ಭಕೋಶವೇ ಇಲ್ಲದಿರುವುದು, ಕನ್ಯಾಪೊರೆಯಲ್ಲಿ ರಂಧ್ರವಿಲ್ಲದಿರುವುದು, ಗರ್ಭಕೋಶದ ಕೊರಳಿನ ದ್ವಾರ ಅತೀ ಚಿಕ್ಕದಾಗಿರುವುದು.*ಹಾರ್ಮೋನು ಸಮಸ್ಯೆ: ಇದು ಮಿದುಳಿನಲ್ಲಿರುವ ಪಿಟ್ಯುಟರಿ, ಹೈಪೋಥೆಲಾಮಸ್‌ಗೆ ಸಂಬಂಧಪಟ್ಟಿರಬಹುದು. ಅಥವಾ ಅಂಡಾಶಯಕ್ಕೆ ಸೀಮಿತವಾಗಿರಬಹುದು.* ಕೆಲವರಲ್ಲಿ ಗೊನೇಡೋಟ್ರೋಪಿಕ್ ಹಾರ್ಮೋನಿನ ಅಂಶ ಹೆಚ್ಚಾಗಿದ್ದು ಅವರ ಅಂಡಾಶಯದ ಬೆಳವಣಿಗೆಯೇ ಆಗಿರುವುದಿಲ್ಲ.* ವರ್ಣತಂತುಗಳ ಸಮಸ್ಯೆ: ಹೆಣ್ಣೆಂದು ಗುರ್ತಿಸಲ್ಪಡಲು ಗಿಗಿ ಎಂಬ ಎರಡು ಲಿಂಗ ನಿರ್ಧಾರಕ ವರ್ಣತಂತುಗಳು ಅವಶ್ಯ. ಒಂದೇ ಒಂದು ವರ್ಣತಂತುವಿದ್ದಲ್ಲಿ  ಈ ರೀತಿಯ ತೊಂದರೆ ಸಾಮಾನ್ಯ.* ಕೆಲವರು ಹೆಣ್ಣಿನಂತೆ ದೇಹ ಹೊಂದಿದ್ದರೂ ದೇಹದೊಳಗೆ ಪುರುಷನ ವೃಷಣವಿರುವುದು, ಇನ್ನೂ ಕೆಲವರಲ್ಲಿ ಜನನೇಂದ್ರಿಯ ನಿರ್ದಿಷ್ಟವಾದ ಲಿಂಗವನ್ನು ಸೂಚಿಸುವಂತೆ ಬೆಳವಣಿಗೆಯಾಗಿರುವುದಿಲ್ಲ.* ಗರ್ಭಕೋಶದ ಬೆಳವಣಿಗೆ ಕುಂಠಿತವಾದಲ್ಲಿ, ಗರ್ಭಕೋಶ ಅತೀ ಚಿಕ್ಕದಾದಲ್ಲಿ, ಇತರೇ ಸಮಸ್ಯೆಗಳು ಅಂಗರಚನೆಯ ಕುರಿತಾದಲ್ಲಿ, ಅಂಥಹವರ ದೇಹದ ಹಾರ್ಮೋನಿನ (FSH) ಅಂಶ ಸರಿಪ್ರಮಾಣದಲ್ಲಿರಬಹುದು.* ಪಿಟ್ಯುಟರಿ ಗ್ರಂಥಿ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಅಥವಾ ಅಲ್ಲಿ ಗಡ್ಡೆಯಿದ್ದಲ್ಲಿ  ಅಥವಾ ದೇಹದ ಇತರೇ ಕಾಯಿಲೆಗಳಿಂದ ತೊಂದರೆಯಾದಲ್ಲಿ, FSH ಎಂಬ (ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನು) ಪ್ರಮಾಣ ಕಡಿಮೆಯಾಗುವುದು.* ಅನೋರೆಕ್ಸಿಯ ನರ್ವೋಸ, ದೇಹದ ತೂಕ ಅತೀ ಕಡಿಮೆಯಾಗುವುದು, ಮಿದುಳಿನಲ್ಲಿನ ನರವಾಹಕ ಪ್ರೊಟೀನ್‌ಗಳು  ಸರಿಯಾಗಿ ಉತ್ಪತ್ತಿಯಾಗದಿರುವುದು.ಮೇಲೆ ತಿಳಿಸಿದ ಹಾಗೂ ಇನ್ನೂ ಅನೇಕ ಸಮಸ್ಯೆಗಳೇ ಋತುಮತಿಯಾಗದಿರಲು ಕಾರಣ (ಸ್ಥೂಲಕಾಯ, ಥೈರಾಯಿಡ್ ಸಮಸ್ಯೆ). ಸ್ತ್ರೀರೋಗ ತಜ್ಞರನ್ನು ಕಂಡಲ್ಲಿ, ಅವರು ಕೂಲಂಕಷವಾಗಿ ಚರ್ಚಿಸಿ, ಪರೀಕ್ಷಿಸಿ, ನಂತರ ಇತರೇ ಟೆಸ್ಟ್‌ಗಳಾದ ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ವರ್ಣತಂತುಗಳ ಪರೀಕ್ಷೆ ಎಲ್ಲದರ ಮಾಹಿತಿಯ ಮೇರೆಗೆ ಕಾರಣ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡುವರು.17 ವರ್ಷದ ಯುವತಿ ಇಂತಹ ಸಮಸ್ಯೆಯಿಂದ ವೈದ್ಯರನ್ನು ಭೇಟಿಯಾದಳು. ಪ್ರತಿ ತಿಂಗಳೂ ಆಕೆಗೆ ಹೊಟ್ಟೆನೋವು ಬರುತ್ತಿತ್ತು. ವೈದ್ಯರು ಸ್ಕ್ಯಾನಿಂಗ್ ಸಹಾಯ ಹಾಗೂ ಪರೀಕ್ಷೆಯ ಮೂಲಕ ಆಕೆಯ ಕನ್ಯಾಪೊರೆಯಲ್ಲಿ ರಂಧ್ರವೇ ಇಲ್ಲದ್ದನ್ನು ಖಚಿತ ಪಡಿಸಿಕೊಂಡರು. ಪ್ರತಿ ತಿಂಗಳೂ ಆಗುತ್ತಿದ್ದ ರಕ್ತಸ್ರಾವ ಹೊರಬರಲು ಮಾರ್ಗವೇ ಇಲ್ಲವಾಗಿದ್ದು, ರಕ್ತವು ಒಳಗೇ ಶೇಖರಣೆಯಾಗಿ ಕೆಳ ಹೊಟ್ಟೆಯ ಭಾಗದಲ್ಲಿ ಗಡ್ಡೆಯಾದಂತಾಗಿ, ಆಕೆಗೆ ಮೂತ್ರ ವಿಸರ್ಜನೆಗೂ ತೊಂದರೆಯಾಗಿತ್ತು. ಸಕಾಲದಲ್ಲಿ  ಸ್ತ್ರೀರೋಗ ತಜ್ಞರು ಅದನ್ನು ಗುರುತಿಸಿ, ಚಿಕ್ಕ ಆಪರೇಷನ್ ಮುಖಾಂತರ ಕನ್ಯಾಪೊರೆಯನ್ನು ಸ್ವಲ್ಪ ಸೀಳಿದ ನಂತರ ಆಕೆ ಗುಣಮುಖಳಾಗಿದ್ದಳು.ಹುಡುಗಿ ಋತುಮತಿಯಾಗಲಿಲ್ಲ ಎಂದು ತಲೆಯ ಮೇಲೆ ಕೈಹೊತ್ತು ಕುಳಿತು ಹತಾಶರಾಗಬೇಡಿ. ವೈದ್ಯರನ್ನು ಭೇಟಿ ಮಾಡಿದರೆ ಅವರು ಕಾರಣ ಕಂಡುಹಿಡಿದು ಅದಕ್ಕನುಗುಣವಾದ ಚಿಕಿತ್ಸೆ ನೀಡುವರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry