ಆಗಸ ಜಿಗಿತ ಸಾಹಸ ಮುಂದಕ್ಕೆ

7

ಆಗಸ ಜಿಗಿತ ಸಾಹಸ ಮುಂದಕ್ಕೆ

Published:
Updated:
ಆಗಸ ಜಿಗಿತ ಸಾಹಸ ಮುಂದಕ್ಕೆ

ಲಾಸ್ ಏಂಜಲೀಸ್ (ಪಿಟಿಐ):  ಹೊಸ ವಿಶ್ವ ದಾಖಲೆ ಸೃಷ್ಟಿಸುವ ನಿಟ್ಟಿನಲ್ಲಿ, ಆಕಾಶದಿಂದ ಜಿಗಿಯುವ ಆಸ್ಟ್ರಿಯಾದ ಸಾಹಸಿಯೊಬ್ಬನ ಮಹಾತ್ವಾಕಾಂಕ್ಷೆಯ ಪ್ರಯತ್ನವನ್ನು ಪ್ರತಿಕೂಲ ಹವಾಮಾನದ ಕಾರಣದಿಂದ ಒಂದು ದಿನ ಮಟ್ಟಿಗೆ ಮುಂದೂಡಲಾಗಿದೆ.ಆಸ್ಟ್ರಿಯಾದ 43 ವರ್ಷದ ಫೆಲಿಕ್ಸ್ ಬೌಮ್‌ಗಾರ್ಟ್ನರ್ ಅವರ ಈ ರೋಮಾಂಚನಕಾರಿ ಸಾಹಸ ಪ್ರದರ್ಶನ ನ್ಯೂ ಮೆಕ್ಸಿಕೊದ ಆಗಸದಲ್ಲಿ ಸೋಮವಾರ (ಅ. 8) ನಡೆಯಬೇಕಿತ್ತು.ಆದರೆ ತೀವ್ರ ಶೀತ ಮಾರುತದ ಕಾರಣದಿಂದಾಗಿ ಈ ಯತ್ನವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ಪ್ರದರ್ಶನದ ಆಯೋಜಕ ಸಂಸ್ಥೆ ರೆಡ್ ಬುಲ್ ಸ್ಟ್ರಾಟೊಸ್ ಮಿಷನ್ ಹೇಳಿದೆ.ಪ್ಯಾರಾಶೂಟ್ ತೆರೆದುಕೊಳ್ಳುವುದಕ್ಕೂ ಮೊದಲಿನ ಅವಧಿಯಲ್ಲಿ (ಫ್ರೀ ಫಾಲ್) ಶಬ್ದದ ವೇಗಕ್ಕಿಂತಲೂ (ಗಂಟೆಗೆ 1,236 ಕಿ.ಮೀ) ಹೆಚ್ಚಿನ ವೇಗದಲ್ಲಿ ಚಲಿಸಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸುವ ಸಾಹಸಕ್ಕೆ ಫೆಲಿಕ್ಸ್ ಕೈ ಹಾಕಿದ್ದಾರೆ.ಕೋಶವೊಂದರಲ್ಲಿ ಕುಳಿತು ಫೆಲಿಕ್ಸ್ ಅವರು ಬೃಹತ್ ಹೀಲಿಯಂ ಬಲೂನಿನ ಮೂಲಕ 1,20,000 ಅಡಿ (36 ಕಿ.ಮೀ) ಎತ್ತರಕ್ಕೆ ತೆರಳಿ ಅಲ್ಲಿಂದ ಭೂಮಿಯತ್ತ ಧುಮುಕಲಿದ್ದಾರೆ.ಈ ಸಾಹಸಕ್ಕಾಗಿ ಫೆಲಿಕ್ಸ್ ಐದು ವರ್ಷಗಳ ತರಬೇತಿ ಪಡೆದಿದ್ದಾರೆ. ಬಾನಿನಿಂದ ಜಿಗಿದ ಬಳಿಕ ಐದು ನಿಮಿಷಗಳ ಕಾಲ ಫೆಲಿಕ್ಸ್ ಅವರು  ಸ್ವತಂತ್ರವಾಗಿ ಭೂಮಿಯತ್ತ ಧಾವಿಸಲಿದ್ದಾರೆ. ಫೆಲಿಕ್ಸ್ ಅವರು ನೆಲದಿಂದ 5000 ಅಡಿ ಎತ್ತರದಲ್ಲಿರುವಾಗ  ಪ್ಯಾರಾಶೂಟ್ ತೆರೆದುಕೊಳ್ಳಲಿದೆ.ಈ ಮಹಾನ್ ಜಿಗಿತದ ವೇಳೆ ನಿಯಂತ್ರಣ ಕಳೆದುಕೊಂಡು ತಿರುಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಪ್ರಜ್ಞೆ ಕಳೆದುಕೊಳ್ಳುವ ಸಂಭವ ಇದೆ. ಈ ಸಾಹಸ ಕಾರ್ಯದಲ್ಲಿ ಫೆಲಿಕ್ಸ್ ಮುಂದಿರುವ ಬೃಹತ್ ಸವಾಲು ಇದು. ಹಾಗಾಗಿ ಅವರು ಕೋಶದಿಂದ ಜಿಗಿಯುವ ಮುನ್ನ ನಿಯಂತ್ರಣ ಸಾಧಿಸುವುದು ಬಹಳ ಮುಖ್ಯ.

ರೆಡ್ ಬುಲ್ ಸ್ಟಾಟೊಸ್ ಮಿಷನ್ ಈ ಸಾಹಸ ಪ್ರದರ್ಶನವನ್ನು ಆಯೋಜಿಸಿದ್ದು, 100 ಜನರ ತಂಡ ಫೆಲಿಕ್ಸ್‌ಗೆ ಈ ಕಾರ್ಯದಲ್ಲಿ ನೆರವಾಗಲಿದೆ.  ನ್ಯೂ ಮೆಕ್ಸಿಕೊದ ರಾಸ್‌ವೆಲ್‌ನಿಂದ  ಫೆಲಿಕ್ಸ್ ಬೌಮ್‌ಗಾರ್ಟ್ನರ್  ಮಂಗಳವಾರ ಆಗಸಕ್ಕೆ ನೆಗೆಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry