ಆಗಿದ್ದು ಸಾಸಿವೆಯಷ್ಟು ಆಗಬೇಕಾದ್ದು ಬೆಟ್ಟದಷ್ಟು

7
ಗಣಿ ಅಕ್ರಮ ಕ್ರಮ ಹೇಗೆ?

ಆಗಿದ್ದು ಸಾಸಿವೆಯಷ್ಟು ಆಗಬೇಕಾದ್ದು ಬೆಟ್ಟದಷ್ಟು

Published:
Updated:

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾ ಯುಕ್ತರು ತನಿಖಾ ವರದಿಯನ್ನು ಸಲ್ಲಿಸಿ ಭರ್ತಿ ಎರಡು ವರ್ಷ ಕಳೆದಿದೆ. ಈ ಅವಧಿಯಲ್ಲಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಹೋರಾಟ ಫಲವಾಗಿ ಒಂದಷ್ಟು ಕ್ರಮಗಳು ಜಾರಿಯಾಗಿವೆ. ಸರ್ಕಾರವೇ ಸ್ವಯಂ ಪ್ರೇರಿತವಾಗಿ ಕೈಗೊಂಡ ಕ್ರಮಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.ಅಕ್ರಮ ಗಣಿಗಾರಿಕೆ ನಡೆಸಿದವರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಕುರಿತು ಪರಿಶೀಲನೆ ನಡೆಸಲು ಸರ್ಕಾರ ಎರಡು ಸಮಿತಿಗಳನ್ನು ರಚಿಸಿತ್ತು. ಪೊಲೀಸ್‌ ಇಲಾಖೆಯನ್ನು ಹೊರತುಪಡಿಸಿ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲಿಸಲು ರಾಜ್ಯ ಸರ್ಕಾರದ ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ 490 ಅಧಿಕಾರಿಗಳು, ನೌಕರರನ್ನು ಗುರುತಿಸಿದೆ.ಪೊಲೀಸ್‌ ಅಧಿಕಾರಿಗಳು ಮತ್ತು ನೌಕರರಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಡಿಸಿಪಿ ವಿ.ಎಸ್‌. ಡಿಸೋಜಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ 190 ಪೊಲೀಸರನ್ನು ಗುರುತಿಸಿದೆ.ಈ ಎರಡೂ ವರದಿಗಳು ಕೈಸೇರಿದ ಬಳಿಕ ಕೆಲವರಿಗೆ ಷೋಕಾಸ್‌ ನೋಟಿಸ್‌ ನೀಡಿದ್ದೇ ಸರ್ಕಾರದ ಸಾಧನೆ. ಅದಕ್ಕೆ ಕೆಲವರು ಇನ್ನೂ ಉತ್ತರಿಸಿಲ್ಲ.ಸುಪ್ರೀಂ ಕೋರ್ಟ್‌ ಚಾಟಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈವರೆಗೆ ಹಲವರು ಜೈಲು ಸೇರಿದ್ದಾರೆ. ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಸ್ಥಗಿತ ಗೊಂಡಿದ್ದ ಗಣಿಗಾರಿಕೆ ಚಟುವಟಿಕೆ ಈಗಷ್ಟೇ ಪುನರಾರಂಭ ಆಗಿದೆ. ಹೆಚ್ಚು ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಿದವರು ಗಣಿ ಗುತ್ತಿಗೆಗಳನ್ನು ಕಳೆದುಕೊಳ್ಳುವುದು ಖಚಿತವಾಗಿದೆ.ರಾಜ್ಯ ಸರ್ಕಾರದ ವಿಳಂಬ ಧೋರಣೆಯ ನಡುವೆಯೇ ಕೆಲವೊಂದು ಕ್ರಮಗಳು ಆಗಿರುವುದಕ್ಕೆ  ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್‌) ಮತ್ತು ಸುಪ್ರೀಂ ಕೋರ್ಟ್‌ ಕಾರಣ. ಎಸ್‌ಪಿಎಸ್‌ನ ದಿಟ್ಟ ನಡೆ ಮತ್ತು ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪುಗಳ ಪರಿಣಾಮವಾಗಿ ರಾಜ್ಯದಲ್ಲಿ  ಗಣಿಗಾರಿಕೆ ನಿಯಂತ್ರಣದಲ್ಲಿದೆ. ಅಕ್ರಮ ಎಸಗಿರುವ ಮತ್ತಷ್ಟು ಮಂದಿ ಜೈಲು ಸೇರುವ ಭೀತಿಯಲ್ಲಿದ್ದಾರೆ.2009ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಎಸ್‌ಪಿಎಸ್‌ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಮತ್ತು ಸದಸ್ಯ ಡಾ.ಪಿ. ವಿಷ್ಣು ಕಾಮತ್‌ ಅವರು, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಒಡೆತನದ ಓಬಳಾಪುರಂ ಮೈನಿಂಗ್‌ ಕಂಪೆನಿ (ಓಎಂಸಿ), ಆಂಧ್ರಪ್ರದೇಶದಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಓಎಂಸಿ ವಿರುದ್ಧ ಸಿಬಿಐ ತನಿಖೆಗೆ ಆದೇಶಿ ಸಿತು. ನಂತರ ಈ ತನಿಖೆ ರಾಜ್ಯದ ಜೊತೆಗೂ ತಳಕು ಹಾಕಿಕೊಂಡಿತು. ಬಳಿಕ ಲೋಕಾಯುಕ್ತ ವರದಿಯನ್ನೂ ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದ ಎಸ್‌ಪಿಎಸ್‌, ವರದಿ ಆಧರಿಸಿ ಕ್ರಮಕ್ಕೆ ಆದೇಶಿಸುವಂತೆ ಮನವಿ ಮಾಡಿತು. ತನ್ನದೇ ಅಧೀನದಲ್ಲಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮೂಲಕ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯದಲ್ಲೂ ಜನಾರ್ದನ ರೆಡ್ಡಿ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತು.ಲೋಕಾಯುಕ್ತರ ಎರಡನೇ ವರದಿಯನ್ನೂ ಎಸ್‌ಪಿಎಸ್‌ ಸುಪ್ರೀಂ ಕೋರ್ಟ್‌ಗೆ ತಲುಪಿಸಿತು. ಇದಾದ ಬಳಿಕ ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿ, ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಪ್ರಕರಣಗಳ ಬಗ್ಗೆ ಮೊದಲು ಸಿಬಿಐ ತನಿಖೆಗೆ ಆದೇಶ ಹೊರಬಿದ್ದಿತು. ನಂತರ ಬೇಲೆಕೇರಿ ಬಂದರಿನ ಮೂಲಕ ನಡೆದ ಅದಿರು ಕಳ್ಳಸಾಗಣೆ ಬಗ್ಗೆಯೂ ತನಿಖೆಗೆ ಆದೇಶಿಸಿತು.ಸೌತ್‌ವೆಸ್ಟ್‌ ಮೈನಿಂಗ್‌ ಕಂಪೆನಿಯಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಬೇಕೆಂಬ ಎಸ್‌ಪಿಎಸ್‌ ಕೋರಿಕೆಯನ್ನೂ ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿತು. ಅದರಂತೆ ತನಿಖೆ ನಡೆಸಿದ ಸಿಬಿಐ ಪೊಲೀಸರು, ಯಡಿಯೂರಪ್ಪ ಸೇರಿದಂತೆ ಎಂಟು ಮಂದಿಯ ವಿರುದ್ಧ 2012ರ ಅಕ್ಟೋಬರ್‌ 16ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದರು.ಆಂಧ್ರಪ್ರದೇಶದಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್‌ 5ರಂದು ಬಂಧಿತರಾದ ಜನಾರ್ದನ ರೆಡ್ಡಿ ಈಗಲೂ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ರಾಜ್ಯದಲ್ಲೇ ಐದಕ್ಕೂ ಹೆಚ್ಚು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ.ರೆಡ್ಡಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಐಎಫ್‌ಎಸ್‌ ಅಧಿಕಾರಿಗಳಾದ ಮನೋಜ್‌ಕುಮಾರ್‌ ಶುಕ್ಲಾ, ಎಸ್‌. ಮುತ್ತಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್‌.ಪಿ.ರಾಜು, ವಲಯ ಅರಣ್ಯಾಧಿಕಾರಿ ಮಹೇಶ್‌ ಪಾಟೀಲ್‌ ಬಂಧನದಲ್ಲಿದ್ದಾರೆ.ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಡಿಸಿಎಫ್‌ ನರೇಂದ್ರ ಹಿತ್ತಲಮಕ್ಕಿ, ವಲಯ ಅರಣ್ಯಾಧಿಕಾರಿ ಚಂದ್ರಕಾಂತ ನಾಯಕ, ಬಂದರು ಇಲಾಖೆ ಅಧಿಕಾರಿ ಕ್ಯಾಪ್ಟನ್‌ ಸಿ.ಸ್ವಾಮಿ ಜೈಲಿನಲ್ಲಿದ್ದಾರೆ. ಜನಾರ್ದನ ರೆಡ್ಡಿ ಅವರ ನಿಕಟವರ್ತಿಗಳಾದ ಖಾರದಪುಡಿ ಮಹೇಶ್‌, ಸ್ವಸ್ತಿಕ್‌ ನಾಗರಾಜ್‌, ಕೋವೂರು ಸೋಮಶೇಖರ, ಕೆ.ಎರ್ರಿಸ್ವಾಮಿ, ಶಾಸಕ ಆನಂದ್‌ ಸಿಂಗ್‌ ಸಂಬಂಧಿ ಶ್ಯಾಮ್‌ ಸಿಂಗ್‌ ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಪ್ರಕರಣದಲ್ಲಿ ಕಂಪೆನಿ ಮಾಲೀಕ ರಾಜೇಂದ್ರಕುಮಾರ್‌ ಜೈನ್‌, ವ್ಯವಸ್ಥಾಪಕ ನಿರ್ದೇಶಕ ರಿತೇಶ್‌ಕುಮಾರ್‌ ಜೈನ್‌, ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಎನ್‌.ವಿಶ್ವನಾಥನ್‌, ಶಮೀಂ ಬಾನು, ಹೊಸಪೇಟೆಯ ಹಿಂದಿನ ಪೊಲೀಸ್‌ ಇನ್‌ಸ್ಪೆಕ್ಟರ್‌ ವೈ.ರಮಾಕಾಂತ್‌ ಹುಲ್ಲೂರು ಜೈಲು ಸೇರಿದ್ದಾರೆ.ಗಣಿ ಗುತ್ತಿಗೆ ರದ್ದು: ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದ ಸಿಇಸಿ, ಅಕ್ರಮದ ಪ್ರಮಾಣವನ್ನು ಆಧರಿಸಿ ಗಣಿ ಗುತ್ತಿಗೆಗಳನ್ನು ಮೂರು ದರ್ಜೆಗಳಲ್ಲಿ ವರ್ಗೀಕರಿಸಿದೆ. ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಸಿದ 51 ಗಣಿಗಳನ್ನು ‘ಸಿ’ ವರ್ಗದಲ್ಲಿ ಗುರುತಿಸಿದ್ದು, ಈ ಗುತ್ತಿಗೆಗಳನ್ನು ರದ್ದು ಮಾಡಲು ಶಿಫಾರಸು ಮಾಡಿದೆ.ಈ ಎಲ್ಲಾ ಗುತ್ತಿಗೆಗಳನ್ನು ರದ್ದು ಮಾಡಿ ರಾಜ್ಯ ಸರ್ಕಾರ ಇದೇ ಗುರುವಾರ ಅಧಿಸೂಚನೆ ಹೊರಡಿಸಿದೆ. ಮಧ್ಯಮ ಪ್ರಮಾಣದಲ್ಲಿ ಅಕ್ರಮ  ಎಸಗಿರುವ 69 ಗಣಿಗಳನ್ನು ‘ಬಿ’ ವರ್ಗದಲ್ಲಿ; ಹೆಚ್ಚು ಅಕ್ರಮಗಳು ಕಂಡು ಬರದ 46 ಗಣಿಗಳನ್ನು ‘ಎ’ ವರ್ಗದಲ್ಲಿ ಸಿಇಸಿ ಗುರುತಿ ಸಿದೆ. ‘ಎ’ ವರ್ಗದ ಗಣಿಗಳಿಗೆ ದಂಡ ವಿಧಿಸುವ ಪ್ರಸ್ತಾವ ಇಲ್ಲ. ಗಣಿ ಗುತ್ತಿಗೆ ಪ್ರದೇಶ ದಲ್ಲಿ ಪರಿಹಾರ ಮತ್ತು ಪುನ ಶ್ಚೇತನ ಯೋಜನೆಯನ್ನು ಸ್ವಂತ ವೆಚ್ಚದಲ್ಲೇ ಜಾರಿಗೊಳಿಸಬೇಕು.‘ಬಿ’ ವರ್ಗದ ಗಣಿ ಗುತ್ತಿಗೆಗಳಲ್ಲಿ ಗುತ್ತಿಗೆ ಪ್ರದೇಶದ ಹೊರಗೆ ಅಕ್ರಮ ಗಣಿಗಾರಿಕೆ ನಡೆಸಿರುವುದಕ್ಕೆ ಪ್ರತೀ ಹೆಕ್ಟೇರ್‌ಗೆ ರೂ 5 ಕೋಟಿ ಮತ್ತು ಹೊರಗೆ ಗಣಿ ತ್ಯಾಜ್ಯ ಗಳನ್ನು ಸುರಿದಿರುವುದಕ್ಕೆ ಪ್ರತೀ ಹೆಕ್ಟೇರ್‌ಗೆ ರೂ 1 ಕೋಟಿ ದಂಡ ವಿಧಿಸಬೇಕೆಂದು ಸಿಇಸಿ ಶಿಫಾರಸು ಮಾಡಿದೆ. ಇದನ್ನು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್‌, ‘ಇದು ಆರಂಭದ ದಂಡ ಮಾತ್ರ. ನಂತರದಲ್ಲಿ ಉನ್ನತಮಟ್ಟದ ಸಮಿತಿಯೊಂದು ಅಕ್ರಮ ಗಣಿಗಾರಿಕೆಯ ನೈಜ ಪ್ರಮಾ ಣವನ್ನು ಅಂದಾಜು ಮಾಡಬೇಕು. ಅಕ್ರಮವಾಗಿ ಹೊರ ತೆಗೆದ ಅದಿರಿನ ಮಾರುಕಟ್ಟೆ ದರದಲ್ಲಿ ದಂಡ ವಿಧಿಸ ಬೇಕು’ ಎಂದು ಹೇಳಿದೆ. ಈ ಪ್ರಕ್ರಿಯೆ ಇನ್ನೂ ಸರಿಯಾದ ವೇಗ ಪಡೆದಿಲ್ಲ. ಸದ್ಯ ‘ಎ’ ವರ್ಗದ ಖಾಸಗಿ ಸ್ವಾಮ್ಯದ 15 ಗಣಿಗಳು ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಎರಡು ಗಣಿಗಳಲ್ಲಿ ಮಾತ್ರ ಗಣಿಗಾರಿಕೆ ನಡೆಯುತ್ತಿದೆ.ಶಿಕ್ಷಿಸುವುದೇ ಭಾರ: ಅಕ್ರಮ ಗಣಿಗಾರಿಕೆ ನಡೆಸಿದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಈಗ ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದಾರೆ. ಉಳಿದವರ ವಿರುದ್ಧವೂ ಅಂತಹ ಕ್ರಮವನ್ನು ಕೈಗೊಳ್ಳಲೇಬೇಕಿದೆ. ಸಿಇಸಿ ‘ಬಿ’ ವರ್ಗದಲ್ಲಿ ಗುರುತಿಸಿರುವ ಗಣಿ ಮಾಲೀಕರಿಂದ ದಂಡ ವಸೂಲಿ ಮಾಡಿ ಸುಮ್ಮನಾದರೆ ಅರ್ಥ ಇರುವುದಿಲ್ಲ. ಯಾವುದೇ ತಪ್ಪು ಮಾಡಿದರೂ ದಂಡ ಪಾವತಿಸಿ ಅದನ್ನು ‘ಸಕ್ರಮ’ ಮಾಡಿಕೊಳ್ಳ ಬಹುದು ಎಂಬ ಕೆಟ್ಟ ಸಂದೇಶ ಇದರಿಂದ ರವಾನೆ ಆಗುತ್ತದೆ. ‘ಸಿ’ ವರ್ಗದ ಗಣಿ ಗುತ್ತಿಗೆಗಳನ್ನು ರದ್ದು ಮಾಡಿ ಸುಮ್ಮನಾಗುವುದು ಕೂಡ ಸಮಂಜಸ ಎನಿಸು ವುದಿಲ್ಲ. ಈವರೆಗೂ ಆ ಗಣಿಗಳ ಮಾಲೀಕರು ಅಕ್ರಮ ವಾಗಿ ಹೊರ ತೆಗೆದಿರುವ ಅದಿರಿನ ಮೌಲ್ಯವನ್ನು ವಸೂಲಿ ಮಾಡುವ ಮತ್ತು ಅವರನ್ನು ಕಾನೂನಿನ ಅಡಿ ಯಲ್ಲಿ ದಂಡನೆಗೆ ಗುರಿಪಡಿಸುವ ಕೆಲಸವೂ ಆಗಬೇಕಿದೆ.ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಗಣಿ ಮತ್ತು ಖನಿಜ ಕಾಯ್ದೆ ಮತ್ತು ಅರಣ್ಯ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ವಿಚಾರಣೆಗೆ ಗುರಿಪಡಿಸಬೇಕು ಎಂದು ಲೋಕಾ ಯುಕ್ತರು ಶಿಫಾರಸು ಮಾಡಿದ್ದಾರೆ. ಈ ಶಿಫಾರಸನ್ನು ಜಾರಿಗೆ ತರದೇ ಇದ್ದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳುವ ಇತರೆ ಎಲ್ಲಾ ಕ್ರಮಗಳೂ ವ್ಯರ್ಥ ಎನಿಸಿಕೊಳ್ಳುತ್ತವೆ.ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಈ ಜಿಲ್ಲೆಗಳಲ್ಲೂ ದೊಡ್ಡ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬುದನ್ನು ಲೋಕಾಯುಕ್ತ ವರದಿ ಬಿಚ್ಚಿಟ್ಟಿದೆ.  ಈ ಜಿಲ್ಲೆಗಳಿಗೆ ಸಂಬಂಧಿಸಿದಂತೆಯೂ ಸರ್ಕಾರ ಕಠಿಣ ನಿಲುವು ತಳೆಯಬೇಕಿದೆ.ಅಕ್ರಮ ಗಣಿಗಾರಿಕೆ ನಡೆಸಿದವರ ಜೊತೆ ಶಾಮೀಲಾ ಗಿರುವ ಮತ್ತು ಅವರಿಂದ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಕ್ರಮ ಕೈಗೊಳ್ಳುವುದು ಮುಖ್ಯಮಂತ್ರಿಯವರ ಎದುರಿಗಿರುವ ಮತ್ತೊಂದು ಸವಾಲು. ಅಧಿಕಾರಿಗಳು, ನೌಕರರ ವಿರುದ್ಧದ ಆರೋಪಗಳ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೇ ಸಲ್ಲಿಸಿರುವ ಎರಡು ವರದಿಗಳು ಅವರ ಮೇಜಿನ ಮೇಲಿವೆ. ಮುಂದಿನ ಹಂತದಲ್ಲಿ ಆರೋಪಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ಆಗಬೇಕಿದೆ.ಆದಾಯ ತೆರಿಗೆ ಇಲಾಖೆ ಒದಗಿಸಿದ ದಾಖಲೆಗಳು ಮತ್ತು ಲೋಕಾಯುಕ್ತ ದಾಳಿಯ ವೇಳೆ ಖಾಸಗಿ ಕಂಪೆನಿಗಳ ಕಂಪ್ಯೂಟರ್‌ಗಳಲ್ಲಿ ದೊರೆತ ಮಾಹಿತಿ ಆಧರಿಸಿ ಲೋಕಾಯುಕ್ತರು ಆರೋಪಿತ ಅಧಿಕಾರಿಗಳು, ನೌಕರರ ಪಟ್ಟಿ ನೀಡಿದ್ದಾರೆ. ಆದಾಯ ತೆರಿಗೆ ಇಲಾಖೆ ನೀಡಿದ ದಾಖಲೆಗಳಲ್ಲಿ ಇರುವ ವಿವರ ನಿಖರವಾದುದು ಎಂದು ಲಂಚ ನೀಡಿದ ಆರೋಪ ಎದುರಿಸುತ್ತಿರುವ ಖಾರದಪುಡಿ ಮಹೇಶ್ ಖುದ್ದಾಗಿ ಸಿಬಿಐ ಅಧಿಕಾರಿಗಳ ಎದುರು ಒಪ್ಪಿಕೊಂಡಿದ್ದಾನೆ. ಹೀಗಿರುವಾಗ ಲೋಕಾ ಯುಕ್ತ ವರದಿಯಲ್ಲಿರುವುದು ‘ಸಾಂದರ್ಭಿಕ ಸಾಕ್ಷ್ಯ’ ಎಂದು ಸರ್ಕಾರ ನಿರ್ಲಕ್ಷಿಸಲು ಸಾಧ್ಯವಿಲ್ಲ.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳು ಮಾಡ ಬೇಕಾದ ಕೆಲಸ ಸಾಕಷ್ಟಿದೆ. ಆದರೆ, ರಾಜ್ಯವೊಂದರಲ್ಲಿನ ಬೆಳವಣಿಗೆಗೆ ಸಂಬಂಧಿಸಿದಂತೆ ಕೇಂದ್ರದ ಯಾವುದೇ ಇಲಾಖೆ ಸ್ವಯಂಪ್ರೇರಿತವಾಗಿ ಕ್ರಮಕ್ಕೆ ಮುಂದಾಗುವ ಸಾಧ್ಯತೆ ವಿರಳ. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳಲ್ಲೂ ಅದು ನಿಜವಾಗಿದೆ.ರಾಜ್ಯದಿಂದ ವಿದೇಶಗಳಿಗೆ ಭಾರೀ ಪ್ರಮಾಣದಲ್ಲಿ ಅದಿರು ರಫ್ತು ಮಾಡಿದ ಕೆಲ ಪ್ರಭಾವಿ ವ್ಯಕ್ತಿಗಳು ಅದಿರಿನ ಮೌಲ್ಯವನ್ನು ಕಡಿಮೆ ದಾಖಲಿಸಿ (ಅಂಡರ್‌ ಇನ್‌ವಾಯ್ಸ್‌) ತೆರಿಗೆ ವಂಚಿಸಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸುವಂತೆ ಜಾರಿ ನಿರ್ದೇಶನಾಲಯ, ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯ, ಸುಂಕ ಇಲಾಖೆಯ ಮೇಲೆ ರಾಜ್ಯ ಸರ್ಕಾರ ಒತ್ತಡ ತರಬೇಕಿದೆ. ಅಕ್ರಮ ಗಣಿಗಾರಿಕೆ ನಡೆಸಿರುವ ಕೆಲವರು ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣ ಇರಿಸಿರುವುದು ಈಗಾಗಲೇ ದೃಢಪಟ್ಟಿದೆ. ಮತ್ತಷ್ಟು ಮಂದಿ ಇದೇ ಹಾದಿಯಲ್ಲಿ ಸಾಗಿರುವ ಸಂಶಯವೂ ಇದೆ. ಆ ಬಗ್ಗೆಯೂ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕಿದೆ.ಅಕ್ರಮ ಹಣದ ವಹಿವಾಟಿಗೆ ಕೆಲವು ಬ್ಯಾಂಕುಗಳು ನೆರವು ನೀಡಿರುವ ಬಗ್ಗೆಯೂ ಲೋಕಾಯುಕ್ತರ ವರದಿಯಲ್ಲಿ ಉಲ್ಲೇಖವಿದೆ. ಒಂದು ಹಂತದಲ್ಲಿ ಈ ಬ್ಯಾಂಕುಗಳೇ ಅಕ್ರಮಕ್ಕೆ ಮೂಲ ಆಗಿದ್ದವು. ಆದರೆ, ಬ್ಯಾಂಕುಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಮಾತ್ರ ಇದೆ. ಆದ್ದರಿಂದ ಆರ್‌ಬಿಐ ಜೊತೆ ವ್ಯವಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ರೈಲಿನ ಮೂಲಕ ಹೊರರಾಜ್ಯಗಳಿಗೆ ಸಾಗಿಸಿರುವ ಅದಿರಿನ ಕುರಿತೂ ಮತ್ತಷ್ಟು ತನಿಖೆಯ ಅಗತ್ಯವಿದೆ.ರಾಜ್ಯ ಸರ್ಕಾರ ಮಾಡಬೇಕಿರುವ ಕೆಲಸಗಳೇನು?

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸಲ್ಲಿಸಿರುವ ಎರಡನೇ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ಕೆಲಸಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೈ ಹಾಕಿದೆ. ಈ ಹಂತದಲ್ಲಿ ಸಂಖ್ಯೆಯ ದೃಷ್ಟಿಯಿಂದ ನೋಡಿದರೆ ರಾಜ್ಯ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳು ಕಡಿಮೆಯೇ. ಆದರೆ, ದಿಟ್ಟ ನಿಲುವನ್ನು ಪ್ರದರ್ಶಿಸಬೇಕಿದೆ.ಅಕ್ರಮ ಗಣಿಗಾರಿಕೆಯಿಂದ ಆಗಿರುವ ನಷ್ಟವನ್ನು ವಸೂಲಿ ಮಾಡುವುದು ಸರ್ಕಾರದ ಮುಂದೆ ಇರುವ ದೊಡ್ಡ ಸವಾಲು. 2006–2010ರ ನಡುವಿನ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಒಟ್ಟು ರೂ 16,085 ಕೋಟಿ ನಷ್ಟವಾಗಿದೆ ಎಂದು ಲೋಕಾಯುಕ್ತರು ಅಂದಾಜು ಮಾಡಿದ್ದಾರೆ. ನಷ್ಟದ ಐದು ಪಟ್ಟು ದಂಡವನ್ನು ಸಂಬಂಧಿಸಿದವರಿಂದ ವಸೂಲಿ ಮಾಡುವಂತೆ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.ಅಕ್ರಮ ಗಣಿಗಾರಿಕೆ ನಡೆಸಿದವರಿಂದ ಸರ್ಕಾರ ರೂ 80 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ದಂಡ ರೂಪದಲ್ಲಿ ವಸೂಲಿ ಮಾಡಬೇಕಿದೆ. ದಂಡ ವಸೂಲಿಯನ್ನು ಹೇಗೆ ಮಾಡಬೇಕು ಎಂಬುದನ್ನು ನಿರ್ಧರಿಸುವುದೇ ಸರ್ಕಾರದ ಮುಂದಿರುವ ಪ್ರಮುಖ ಕೆಲಸ. ಈಗಿರುವ ಕಾಯ್ದೆಗಳ ಅಡಿಯಲ್ಲೇ ದಂಡ ವಸೂಲಿ ಮಾಡಲು ಸಾಧ್ಯ ಆಗದೇ ಇದ್ದಲ್ಲಿ, ಕಾಯ್ದೆಗಳಿಗೆ ಒಂದಷ್ಟು ತಿದ್ದುಪಡಿ ತರಬೇಕಾಗುತ್ತದೆ.  ಅಲ್ಲದೇ ದಂಡ ವಸೂಲಿಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಲೇವಾರಿಗೂ ಅಗತ್ಯ ವ್ಯವಸ್ಥೆ ಮಾಡಬೇಕಾಗುತ್ತದೆ.ಕಾನೂನು ತಜ್ಞರ ಅಭಿಮತ

ಸುದೀರ್ಘ ಕಾನೂನು ಪ್ರಕ್ರಿಯೆ


ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟವನ್ನು ವಸೂಲುಮಾಡಲು, ನಷ್ಟ ಉಂಟು ಮಾಡಿದ್ದಾರೆ ಎನ್ನಲಾದವರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸ ಬೇಕಾಗುತ್ತದೆ. ನಷ್ಟ ಉಂಟು ಮಾಡಿದ ಆರೋಪ ಎದುರಿಸು ತ್ತಿರುವವರನ್ನು ಇದರಲ್ಲಿ ಪ್ರತಿ ವಾದಿಗಳನ್ನಾಗಿ ಮಾಡಬೇಕು. ಇದು ಸುದೀರ್ಘ ಕಾನೂನು ಪ್ರಕ್ರಿಯೆ.ಲೋಕಾಯುಕ್ತರು ನೀಡಿರುವುದು, ಏಕವ್ಯಕ್ತಿ ಆಯೋಗ ನೀಡಿರುವ ವರದಿ. ಅವರು ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಇನ್ನೂ ಸಾಬೀತಾಗ ಬೇಕು. ಅವರು ನೀಡಿರುವ ವರದಿಯನ್ನು ಮೇಲ್ನೋಟದ ಸಾಕ್ಷ್ಯ ಮತ್ತು ಆಧಾರ ಎಂದು ಪರಿ ಗಣಿಸಬಹುದು. ಆದರೆ, ಇದನ್ನು ಆಧರಿಸಿಯೇ, ಸುಪ್ರೀಂ ಕೋರ್ಟ್‌ ಕೆಲವು ಕ್ರಮಗಳನ್ನು ತೆಗೆದು ಕೊಂಡಿದೆ ಎಂಬುದು ನಿಜ.ಗಣಿ ಕಂಪೆನಿಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿ, ಅದರಲ್ಲಿ ‘ಸಿ’ ಪ್ರವರ್ಗದ ಕಂಪೆನಿಗಳಿಗೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿದೆ. ಆದರೆ ಹಾಗೆ ಮಾಡುವ ಮುನ್ನ ಎಲ್ಲ ಕಂಪೆನಿಗಳ ವಾದವನ್ನು ಆಲಿಸಬೇಕಿತ್ತು ಎಂದು ಅನಿಸುತ್ತಿದೆ. ಈ ಪ್ರಕ್ರಿಯೆ ಪರಿ ಪೂರ್ಣವಾಗಿ ನಡೆದಂತಿಲ್ಲ. ಲೋಕಾಯುಕ್ತ ವರದಿ ಯಲ್ಲಿ ಹೇಳಿರುವ ಅಂಶಗಳನ್ನು ಸಾಬೀತು ಪಡಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ.

–ಉದಯ ಹೊಳ್ಳ, ಮಾಜಿ ಅಡ್ವೊಕೇಟ್‌ ಜನರಲ್‌.ಸರ್ಕಾರದ ಧರ್ಮ

ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರಿಂದಲೇ ಹಣ ವಸೂಲು ಮಾಡಬೇಕಿರುವುದು ಸರ್ಕಾರದ ಧರ್ಮ. ಅದಕ್ಕೆ ಲೋಕಾಯುಕ್ತರ ವರದಿ ಬೇಕೆಂ ದಿಲ್ಲ. ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇದೆ. ನಷ್ಟ ಉಂಟುಮಾಡಿದವರ ಆಸ್ತಿಯನ್ನು ಸರ್ಕಾರ ಮೊದಲು ಮುಟ್ಟುಗೋಲು ಹಾಕಿಕೊಳ್ಳಲಿ. ನಂತರ ಆರೋಪ ಸಾಬೀತಾಗದಿದ್ದರೆ, ಆಸ್ತಿಯನ್ನು ಮರಳಿಸ ಬಹುದು. ಕಾನೂನಿನಲ್ಲಿ ಅದಕ್ಕೆ ಅವಕಾಶ ಇದೆ. ಲೋಕಾಯುಕ್ತರ ಶಿಫಾರಸುಗಳನ್ನು ಸರ್ಕಾರ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು.ತಪ್ಪು ಮಾಡಿದ್ದಾರೆ ಎನ್ನಲಾದ ಅಧಿಕಾರಿಗಳ ವಿರುದ್ಧ ಇರುವುದು ಸಾಂದರ್ಭಿಕ ಸಾಕ್ಷ್ಯಗಳು ಮಾತ್ರ ಎಂದಾದರೆ ಅದರಿಂದ ತೊಂದರೆ ಏನೂ ಇಲ್ಲ. ಆ ಬಗ್ಗೆ ಇನ್ನಷ್ಟು ತನಿಖೆ ನಡೆಸಿ, ಅವರ ವಿರುದ್ಧ ಕ್ರಮ ಜರುಗಿಸಬಹುದು.ಗಣಿ ಕಂಪೆನಿಗಳನ್ನು ಎ. ಬಿ, ಸಿ ಎಂದು ವರ್ಗೀಕ ರಿಸಿದ ಸುಪ್ರೀಂ ಕೋರ್ಟ್‌ ಕ್ರಮ ವೈಜ್ಞಾನಿಕವಾಗಿಲ್ಲ ಎಂಬ ಟೀಕೆ ಇದೆ. ಅಕ್ರಮ ಗಣಿಗಾರಿಕೆ ನಿಷೇಧದಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ ಆಗುವುದಿಲ್ಲ. ಆದರೆ ಹಾಗೆ ಆಗುತ್ತದೆ ಎಂಬ ಒತ್ತಡವನ್ನು ಕೆಲವರು ತಂದಿದ್ದರು. ಎ, ಬಿ, ಸಿ ಎಂಬ ವರ್ಗೀಕರಣವನ್ನು ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ಮತ್ತೆ ವಿಮರ್ಶೆಗೆ ಒಳಪಡಿಸುತ್ತದೆ ಎಂಬ ನಂಬಿಕೆ ನನಗಿದೆ.ಲೋಕಾಯುಕ್ತ ವರದಿಯ ಅನುಷ್ಠಾನಕ್ಕೆ ಕಾನೂ ನಿನ ಯಾವುದೇ ತೊಂದರೆ ಇಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಇದ್ದರೆ ಸಾಕು. ಅನುಷ್ಠಾನ ಮಾಡಲು ಮನಸ್ಸಿಲ್ಲದವರು, ಕಾನೂನು ತೊಡಕಿದೆ ಎಂದು ಹೇಳುತ್ತಿದ್ದಾರೆ. ಕಾನೂನು ತೊಡಕಿದೆ ಎಂದವರಿಗೆ ಕಾನೂನಿನ ಜ್ಞಾನ ಇಲ್ಲ ಎಂದೇ ಹೇಳಬೇಕಾಗುತ್ತದೆ.

– ಕೆ.ವಿ. ಧನಂಜಯ, ಸುಪ್ರೀಂ ಕೋರ್ಟ್‌ ವಕೀಲ.ಕಾನೂನು ತೊಡಕಿಲ್ಲ

ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು, ಅದಕ್ಕೆ ಕಾರಣ ರಾದವರಿಂದಲೇ ವಸೂಲು ಮಾಡಬೇಕು ಎಂದು ವರದಿ ಯಲ್ಲಿ ಶಿಫಾರಸು ಮಾಡಲಾ ಗಿದೆ. ರಾಜ್ಯದ ಅಕ್ರಮ ಗಣಿ ಗಾರಿಕೆ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಆಧರಿಸಿಯೇ, ನಷ್ಟವನ್ನು ಭರಿಸಲು ಮಾರ್ಗವಿದೆ.ರಾಜ್ಯದ ಗಣಿ ಕಂಪೆನಿಗಳು ನಡೆಸಿದ ಅಕ್ರಮ ಆಧರಿಸಿ ಸುಪ್ರೀಂ ಕೋರ್ಟ್‌ ಅವುಗಳನ್ನು ಎ, ಬಿ, ಸಿ ಎಂದು ವರ್ಗೀಕರಿಸಿದೆ. ‘ಸಿ’ ಪ್ರವರ್ಗದ ಅಡಿ ಬರುವ ಕಂಪೆನಿಗಳ ಗಣಿ ಪರವಾನಗಿ ರದ್ದು ಮಾಡಬೇಕು, ‘ಬಿ’ ಪ್ರವರ್ಗದ ಕಂಪೆನಿಗಳಿಂದ ದಂಡ ವಸೂಲು ಮಾಡಬೇಕು ಎಂದು ತೀರ್ಪಿತ್ತಿದೆ. ಇದು ಆಯಾ ಕಂಪೆನಿಗಳಿಂದ ಆಗಿರುವ ನಷ್ಟ, ಅಕ್ರಮದ ಪ್ರಮಾಣ ಆಧರಿಸಿ ಮಾಡಿರುವ ವರ್ಗೀಕರಣ. ಇದು ಸರಿ.ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯದ ಅಧಿಕಾರಿ ಗಳು ಕೈಗೊಂಡ ಎಲ್ಲ ನಿರ್ಧಾರಗಳು ತಪ್ಪು ಎಂದು ಸಾರಾಸಗಟಾಗಿ ಹೇಳುವುದು ಸರಿಯಲ್ಲ. ಕೆಲವರು ಒಳ್ಳೆಯ ಉದ್ದೇಶದಿಂದ ಕೈಗೊಂಡ ಒಂದು ನಿರ್ಣಯ, ಮುಂದೊಂದು ದಿನ ತಪ್ಪು ನಿರ್ಣಯ ಎಂದೆನಿಸಬ ಹುದು. ಇಂಥ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿ ಸಬೇಕು. ಇಲ್ಲವಾದರೆ, ಮುಂದೊಂದು ದಿನ ಯಾವ ಅಧಿಕಾರಿಯೂ ಯಾವುದೇ ನಿರ್ಣಯ ವನ್ನು ಧೈರ್ಯವಾಗಿ ಕೈಗೊಳ್ಳಲಾಗದ ಸ್ಥಿತಿ ಎದುರಾಗುತ್ತದೆ.ಲೋಕಾಯುಕ್ತ ವರದಿಯ ಅನುಷ್ಠಾನಕ್ಕೆ ಸರ್ಕಾರಕ್ಕೆ ದೊಡ್ಡಮಟ್ಟದ ಕಾನೂನು ತೊಡಕು ಇದ್ದಂತಿಲ್ಲ. ಸುಪ್ರೀಂ ಕೋರ್ಟ್‌ನ ಕೇಂದ್ರ  ಉನ್ನತಾಧಿ ಕಾರ ಸಮಿತಿ (ಸಿ.ಇ.ಸಿ) ನೀಡಿರುವ ಶಿಫಾರಸುಗಳಲ್ಲಿ ಕೆಲವನ್ನು ಸುಪ್ರೀಂ ಕೋರ್ಟ್‌ ಅನುಷ್ಠಾನಕ್ಕೆ ತಂದಿದೆ. ಲೋಕಾಯುಕ್ತ ವರದಿಯ ಶಿಫಾರಸುಗಳನ್ನೂ ಸರ್ಕಾರ ಪರಿಶೀಲಿಸಿ, ಅನುಷ್ಠಾನಗೊಳಿಸಬಹುದು.

–ಅಶೋಕ ಹಾರನಹಳ್ಳಿ, ಮಾಜಿ ಅಡ್ವೊಕೇಟ್ ಜನರಲ್‌.

ಸಂದರ್ಶನ: ವಿಜಯ್‌ ಜೋಷಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry