ಆಗುಂಬೆ ರಸ್ತೆ ವಿಸ್ತರಣೆ-ಸರ್ವೆ ಪೂರ್ಣ

7
ಉಡುಪಿ: ಕೆಡಿಪಿ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಆಗುಂಬೆ ರಸ್ತೆ ವಿಸ್ತರಣೆ-ಸರ್ವೆ ಪೂರ್ಣ

Published:
Updated:

ಉಡುಪಿ: `ಆಗುಂಬೆ ಘಾಟ್ ರಸ್ತೆ ವಿಸ್ತರಣೆಗೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳನ್ನು ಸರ್ವೆ ಮಾಡಲಾಗಿದ್ದು, 40 ಮೀಟರ್ ವ್ಯಾಪ್ತಿಯ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಗುರುತಿಸಿದೆ' ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಮಣಿಪಾಲ ರಜತಾದ್ರಿಯ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಸ್ತೆ ವಿಸ್ತರಣೆಗೆ ಬಂಡೆ ಒಡೆಯವ ಬಗ್ಗೆ ಅನುಮತಿ ಅಗತ್ಯ ಇಲ್ಲದಿರುವುದರಿಂದ ಕಾಮಗಾರಿಯನ್ನು ಆರಂಭಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಗಿರಿಜನ ಕಲ್ಯಾಣ ಇಲಾಖಾ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಿಗೆ ಹಾಗೂ ಅಂಗನವಾಡಿಗಳಿಗೆ ಆಯಾ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಮಕ್ಕಳ ಹಾಜರಾತಿ ಮತ್ತು ಕಾರ್ಯನಿರ್ವಹಣೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಸಚಿವರು ಸೂಚಿಸಿದರು.ಜಿಲ್ಲೆಯ ಮೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಆಯಾ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಣಾ ಅಧಿಕಾರಿಗಳು ಭೇಟಿ ನೀಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯ ವೈಖರಿಯನ್ನು ಪರಿಶೀಲಿಸಬೇಕು ಎಂದರು.2011-12ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮೀನುಗಾರಿಕಾ ಮನೆಗಳಿಗೆ 260ಅರ್ಜಿಗಳು ಬಂದಿದ್ದು 116 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಅದನ್ನು ಒಂದು ವಾರದಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ. 2012-13ನೇ ಸಾಲಿನಲ್ಲಿ 900 ಅರ್ಜಿ ಸ್ವೀಕರಿಸಲಾಗಿದ್ದು ಫಲಾನುಭವಿಗಳು ಸಮುದ್ರ ತೀರದಲ್ಲಿ ಮನೆ ನಿರ್ಮಿಸುವುದರಿಂದ ಕರಾವಳಿ ನಿಯಂತ್ರಣ ಕಾಯ್ದೆ (ಸಿಆರ್‌ಝಡ್) ಸಡಿಲಗೊಳಿಸಬೇಕು ಹಾಗೂ ಫಲಾನುಭವಿಗಳಿಗೆ ಮನೆಯ ಪರವಾನಿಗೆ ಪತ್ರ ಕಡ್ಡಾಯ ಮಾಡಲಾಗುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.ಜಿಲ್ಲೆಯ ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿಗೆ ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ 20 ಲಕ್ಷ ರೂಪಾಯಿ, ಬೈಂದೂರಿಗೆ 40 ಲಕ್ಷ ರೂಪಾಯಿ, ಕುಂದಾಪುರಕ್ಕೆ 10 ಲಕ್ಷ ರೂಪಾಯಿ ಹಾಗೂ ಕಾಪುವಿಗೆ  45 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.ಉಡುಪಿ ನಗರದ ಮೀನು ಮಾರುಕಟ್ಟೆಯ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸುವಂತೆ ಹಾಗೂ ಮಲ್ಪೆ ಬಂದರಿನಲ್ಲಿ ಕೊಳಚೆ ನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚರಂಡಿಗೆ ಹಾಕುವುದನ್ನು ತಡೆಯಲು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಶಾಸಕರಾದ ಲಾಲಾಜಿ ಆರ್.ಮೆಂಡನ್, ಗೋಪಾಲ ಭಂಡಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂಟಿ. ರೇಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಎ. ಪ್ರಭಾಕರ್ ಶರ್ಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಬಿ.ಬೋರಲಿಂಗಯ್ಯ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry