ಶುಕ್ರವಾರ, ನವೆಂಬರ್ 22, 2019
20 °C

ಆಗ ಆಕ್ರೋಶ, ಈಗ ಪ್ರಚಾರ !

Published:
Updated:

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷದ ಹೈಕಮಾಂಡ್ ತಮಗೆ ಟಿಕೆಟ್ ನೀಡದಿರುವುದಕ್ಕೆ ಕೆಲ ದಿನಗಳ ಹಿಂದೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. `ಪಕ್ಷದಲ್ಲಿ ದಶಕಗಳ ದುಡಿದ ನನಗೆ ಟಿಕೆಟ್ ನೀಡದೇ ಪಕ್ಷದ ಹೈಕಮಾಂಡ್ ಮೋಸ ಮಾಡಿದೆ' ಎಂದು ಆರೋಪಿಸಿದ್ದರು.`ಹೈಕಮಾಂಡ್‌ನಿಂದ ಟಿಕೆಟ್ ಪಡೆದ ಡಾ. ಕೆ.ಸುಧಾಕರ್ ಪಕ್ಷಕ್ಕಾಗಿ ಏನನ್ನೂ ಮಾಡಿಲ್ಲ. ಪಕ್ಷದ ಪರ ಮತಯಾಚಿಸಿಲ್ಲ, ಮತವೂ ಹಾಕಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ನೂರಾರು ಕಾರ್ಯಕರ್ತರ ಎದುರು ಕಣ್ಣೀರು ಹಾಕಿದ್ದರು. `ಡಾ. ಕೆ.ಸುಧಾಕರ್‌ಗೆ ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ' ಎಂದು ಪಕ್ಷದ ಕಾರ್ಯಕರ್ತರು ಘೋಷಿಸಿದ್ದರು. ಪಕ್ಷದ ಜಿಲ್ಲಾ ಘಟಕದ ಕಚೇರಿಯ ಮೇಲೆ ಕಲ್ಲು ತೂರಾಟವೂ ನಡೆದಿತ್ತು.ಆದರೆ ಗುರುವಾರ ಎಂ.ಆಂಜನಪ್ಪ ಅವರು ದಿಢೀರ್‌ನೇ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಸುಧಾಕರ್ ಜೊತೆ ಕಾಣಿಸಿಕೊಂಡರು. ಕೆಲ ದಿನಗಳ ಹಿಂದೆ ಅವರು ತೋರಿದ್ದ ಸಿಟ್ಟು, ಸೆಡುವು, ಕೋಪ-ತಾಪ ಏನೂ ಇಲ್ಲವೇ ಇಲ್ಲ ಎಂಬಂತೆ ಅವರು ಮಂಚೇನಹಳ್ಳಿ ಸಮೀಪದ ಬೂದಗಾನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡರು.ಡಾ.ಕೆ.ಸುಧಾಕರ್ ಪರ ಮತ ಯಾಚಿಸಿದ ಅವರು ಇತರ ಗ್ರಾಮಗಳಲ್ಲೂ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದರು. ಮಾಜಿ ಶಾಸಕ ಎಂ.ಶಿವಾನಂದ ಅವರು ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬಿ.ಎನ್.ಗಂಗಾಧರಪ್ಪ ನೇತೃತ್ವದ ದಲಿತ ಸಂಘರ್ಷ ಸಮಿತಿ ಸಂಘಟನೆಯು ಡಾ. ಕೆ.ಸುಧಾಕರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ.

ಪ್ರತಿಕ್ರಿಯಿಸಿ (+)