ಸೋಮವಾರ, ನವೆಂಬರ್ 18, 2019
23 °C

ಆಗ ಒಗ್ಗರಣೆ; ಈಗ ಕನಿಷ್ಠ `ಕನಕಾಂಬರ'

Published:
Updated:
ಆಗ ಒಗ್ಗರಣೆ; ಈಗ ಕನಿಷ್ಠ `ಕನಕಾಂಬರ'

ಬಳ್ಳಾರಿ: ಮಳೆಗಾಲದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುವಂತೆ ಇತ್ತೀಚಿನ ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಿರುವ `ಗಣಿಧಣಿ'ಗಳಿಂದಾಗಿ ಬಳ್ಳಾರಿಯನ್ನು ಜನ ವಿಶೇಷವಾಗಿ ಗುರುತಿಸುವಂತಾಗಿದೆ. ಚುನಾವಣೆ ಎಂದರೆ `ಬಳ್ಳಾರಿ ಕನಕಾಂಬರ' (ಇಲ್ಲಿ ಕನಕಾಂಬರ ಎಂದರೆ ಸಾವಿರ ರೂಪಾಯಿ ನೋಟು) ಎಂದೇ ಹೊರಗಿನ ಜನ ಮಾತನಾಡಿಕೊಳ್ಳುವುದು ಜಿಲ್ಲೆಯವರಿಗೆ ಬೇಸರ ತರಿಸಿದೆ.ಗತಕಾಲದ ಗಣಿ ಉದ್ಯಮಿಗಳ ನಡೆ, ಆದರ್ಶವನ್ನು ನೆನೆದು ಈಗಿನವರನ್ನು ತುಲನೆ ಮಾಡಿ `ಛೀ, ಥೂ' ಎನ್ನುತ್ತಾರೆ. ಆದರೂ ಈ ಬಾರಿಯ ಚುನಾವಣೆಯಲ್ಲೂ ಮತ್ತೆ ಅದೇ ರಾಗ, ಅದೇ ಹಾಡನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ.ಜಿಲ್ಲೆಯ ಕಂಪ್ಲಿ, ಹೊಸಪೇಟೆ, ಮರಿಯಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು, ಬಳ್ಳಾರಿ ಮೊದಲಾದೆಡೆ ಒಂದು ಸುತ್ತು ಹಾಕಿ ಮಾತಿಗೆಳೆದವರೆಲ್ಲರ ಬಾಯಲ್ಲೂ ಇದೇ ಮಾತು. ಚುನಾವಣಾ ಆಯೋಗ ಎಷ್ಟೇ ಕಠಿಣ ಕ್ರಮ ತೆಗೆದುಕೊಂಡರೂ ಇವರು ರಂಗೋಲಿ ಕೆಳಗೆ ನುಸುಳುವುದನ್ನು ತಪ್ಪಿಸಲು ಆಗದು ಎಂದೇ ವಾದಿಸುತ್ತಾರೆ. ಕುರುಡು ಕಾಂಚಾಣದ ನರ್ತನ ಇನ್ನೂ ಹಲವು ವರ್ಷ ಇರುತ್ತದೆ. ಈ ಚುನಾವಣೆಗೂ ಅಲ್ಲಲ್ಲಿ ಈಗಾಗಲೇ ಹಣ ಸಂಗ್ರಹವಾಗಿದೆ. ಇನ್ನು ಜನರಿಗೆ ತಲುಪಿಸುವುದೊಂದೇ ಬಾಕಿ ಎಂದು ಗುಟ್ಟಾಗಿ ಹೇಳುತ್ತಾರೆ. ಆದರೆ ಜಿಲ್ಲೆಗೆ ಅಪಕೀರ್ತಿ ತರಲು ಕಾರಣಕರ್ತರಾದ `ಗಣಿಧಣಿ'ಗಳ ಬಗ್ಗೆ ಜನಸಾಮಾನ್ಯರು ಕೆಂಡ ಉಗುಳುವುದು ಜಿಲ್ಲೆಯಲ್ಲಿ ಒಂದು ಸುತ್ತು ಹಾಕಿದಾಗ ಗಮನಕ್ಕೆ ಬರುತ್ತದೆ.ಚುನಾವಣಾ ಅಖಾಡಕ್ಕಿಳಿದವರು ಮತದಾರರಿಗೆ ಹಣ ಹಂಚಲು ವ್ಯವಸ್ಥಿತ ಜಾಲವನ್ನು ನಿರ್ಮಿಸಿಕೊಂಡಿದ್ದಾರೆ. 2008ರಲ್ಲಿ ನಡೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಜಯ ಸಾಧಿಸಿದ ವ್ಯಕ್ತಿಯ ಕಡೆಯವರು ಕೊಟ್ಟ ಹಣವನ್ನು ಜನರಿಗೆ ಮುಟ್ಟಿಸದ ಕಾರಣ ಕಡಿಮೆ ಮತ ಬಂತು ಎಂಬುದನ್ನು ಪತ್ತೆ ಹಚ್ಚಿ, ಹಂಚದೇ ಬಚ್ಚಿಟ್ಟುಕೊಂಡಿದ್ದವರನ್ನು ಹುಡುಕಿ ತದುಕಿದ್ದರು ಎಂಬ ಬೆಚ್ಚಿಬೀಳುವ ಸಂಗತಿಯನ್ನು ಗುಟ್ಟಾಗಿ ಹೇಳುತ್ತಾರೆ.ಇದರಿಂದಾಗಿಯೇ ಇಂಥ ಕೆಲಸಕ್ಕೆ ಕನ್ನಡಿಗರನ್ನು ಈ ಬಾರಿ ನಿಯೋಜಿಸಲು ಇಚ್ಛಿಸದೇ ಈ ಕೆಲಸವನ್ನು ಆಂಧ್ರದ ಜನರಿಗೆ ಒಪ್ಪಿಸುತ್ತಾರಂತೆ. ಅಲ್ಲಿಯವರು ತಮಗೆ ವಹಿಸಿದ ಕೆಲಸದಲ್ಲಿ ಕೊಂಚವೂ ಲೋಪವಾಗದಂತೆ ಕಾರ್ಯನಿರ್ವಹಿಸುತ್ತಾರಂತೆ. ಒಂದು ರೂಪಾಯಿಯನ್ನೂ ಬಚ್ಚಿಟ್ಟುಕೊಳ್ಳದೆ ಪೂರ್ತಿಯಾಗಿ ಹಂಚಿ ತಮ್ಮ ಕೂಲಿಯನ್ನು ಮಾತ್ರ ಪಡೆದುಕೊಳ್ಳುತ್ತಾರಂತೆ. ಹಾಗಾಗಿ ಆಂಧ್ರದ ಜನರ ಮೇಲೆ ವಿಶ್ವಾಸ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.`ರಾಜ್ಯದ ಪ್ರಮುಖ ಗಣಿ ಉದ್ಯಮಿ, ಮಾಜಿ ಸಚಿವ ಎಂ.ವೈ.ಘೋರ್ಪಡೆಯವರು 2004ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಣದಿಂದ ದೂರ ಉಳಿದರು. ಆದರೆ ಕಾಂಗ್ರೆಸ್ ಪಕ್ಷ, ಅವರ ಸೋದರ ವೆಂಕಟರಾವ್ ಘೋರ್ಪಡೆ ಅವರನ್ನು  ಕಣಕ್ಕಿಳಿಸಿತು. ಪ್ರಚಾರದ ಭರಾಟೆ, ಆರ್ಭಟವನ್ನು ಕಂಡ ಎಂ.ವೈ.ಘೋರ್ಪಡೆ ಬೆಂಬಲಿಗರು ಈ ಬಾರಿಯ ಚುನಾವಣೆಯಲ್ಲಿ ವೆಂಕಟರಾವ್ ಅವರ ಗೆಲುವು ಕಷ್ಟವಿದ್ದು ಮತವನ್ನು ಖರೀದಿಸಬೇಕಾಗುತ್ತದೆ ಎಂದಾಗ, ಒಂದು ನಿಮಿಷ ಮೌನ ವಹಿಸಿದ ಎಂ ವೈ ಘೋರ್ಪಡೆ, ಅಂಥ ಪರಿಸ್ಥಿತಿ ಬಂದರೆ ನನ್ನ ಸೋದರ ಸೋಲಲಿ. ಮತ ಖರೀದಿಸುವುದು ಬೇಡ. ಇಂಥ ಚಾಳಿಯನ್ನು ಹುಟ್ಟು ಹಾಕಬೇಡಿ ಎಂದು ಹೇಳಿ ಸುಮ್ಮನಾಗಿಸಿದ್ದರು. ಚುನಾವಣಾ ಖರ್ಚು ಎಂದರೆ ಓಡಾಟ ಮತ್ತು ಪ್ರಚಾರಕ್ಕೆ ಮಾತ್ರ ಎಂದಿದ್ದರು' ಎಂದು ಸ್ಮರಿಸುತ್ತಾರೆ ಸಂಡೂರು ನಿವಾಸಿ, ಘೋರ್ಪಡೆಯವರನ್ನು ಹತ್ತಿರದಿಂದ ಬಲ್ಲ ಎನ್.ಜಿಲಾನ್.`ಈಗ ಬಳ್ಳಾರಿ, ಅಷ್ಟೇ ಏಕೆ ರಾಜ್ಯದ ಇತರೆ ಕಡೆಯೂ ಹಣ ಹಂಚದೇ ಚುನಾವಣೆ ಗೆಲ್ಲುವುದು ಕಷ್ಟಸಾಧ್ಯ ಎಂದೇ ಎಲ್ಲರೂ ಹೇಳುವುದು. ಅದಕ್ಕಾಗಿಯೇ ಕೋಟಿಗಟ್ಟಲೆ ವಿನಿಯೋಗಿಸಲೂ ಹಲವರು ಸಜ್ಜಾಗಿದ್ದಾರೆ. ಅಂಥವರನ್ನೇ ಎಲ್ಲ ರಾಜಕೀಯ ಪಕ್ಷಗಳು `ಗೆಲ್ಲುವ ಸಾಮರ್ಥ್ಯ'ದ ಹೆಸರಿನಲ್ಲಿ ಗುರುತಿಸುವುದು. ಇದು ಸರ್ವರಿಗೂ ಗೊತ್ತಿರುವ ಸತ್ಯ. ಆದರೆ ಬಳ್ಳಾರಿಯಲ್ಲಿ `ಗಣಿಧಣಿ'ಗಳು 2004ರ ಚುನಾವಣೆಯಿಂದಲೇ `ಕನಕಾಂಬರ'ದ ರೂಢಿ ಮಾಡಿಬಿಟ್ಟರು. ಗಣಿ ಉದ್ಯಮದಲ್ಲಿರುವವರು ಚುನಾವಣಾ ಅಖಾಡಕ್ಕೆ ಇಳಿದ ಮೇಲೆ ಜಿಲ್ಲೆಯಲ್ಲಿ ಎಲ್ಲವೂ ಅಯೋಮಯವಾಯಿತು' ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.ಇದಕ್ಕೆ `ಗಣಿಧಣಿ'ಗಳಷ್ಟೇ ಮತದಾರರೂ ಕಾರಣಕರ್ತರು. ರುಚಿಕಂಡಿರುವ ಮತದಾರ ಕೂಡ ಅದನ್ನೇ ಬಯಸುತ್ತಾನೆ. ಹೆಚ್ಚು ಹಣ ಕೊಟ್ಟವರಿಗಷ್ಟೇ ಆತ ಒಲವು ತೋರುವುದು. ಇದು ವಾಸ್ತವ.ಹಿಂದಿನ ಚುನಾವಣೆಗಳಲ್ಲಿ ದೂರದ ಊರುಗಳಿಂದ ಮತ ಚಲಾಯಿಸಲು ಬರುವವರಿಗೆ ಪ್ರೀತಿಗೆಂದು ಒಗ್ಗರಣೆ ಮಂಡಕ್ಕಿ, ಚಹಾದ ಕೂಪನ್‌ಗಳನ್ನು ವಿತರಿಸುವ ಪದ್ಧತಿ ಬಳ್ಳಾರಿ ಜಿಲ್ಲೆಯಲ್ಲಿ ಇತ್ತು ಎಂಬ ಅಂಶವನ್ನು ಸಂಡೂರು ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಯ ಮರಿಯಮ್ಮನಹಳ್ಳಿ ಹಿರಿಯ ನಾಗರಿಕರು ಹಳೆಯ ದಿನಗಳನ್ನು ಸ್ಮರಿಸಿದರು. ಆದರೆ ಈಗ ಮಂಡಕ್ಕಿ-ಚಹಾದ ಚೀಟಿ ಕೊಟ್ಟರೆ ಅದನ್ನು ತೆಗೆದುಕೊಳ್ಳುವವರು ಯಾರೂ ಇಲ್ಲ. ಎಲ್ಲರಿಗೂ `ಕನಕಾಂಬರದ್ದೇ' ವ್ಯಾಮೋಹ ಎಂದು ಕುಹಕವಾಡುತ್ತಾರೆ.ಹೂವಿನಹಡಗಲಿಯಲ್ಲಿ ಮಲ್ಲಿಗೆ ಹೂವನ್ನು ಬುಟ್ಟಿಯಲ್ಲಿ ಹಾಕಿ ನದಿಯಲ್ಲಿ ತೇಲಲು ಬಿಟ್ಟರೆ ಅದನ್ನು ಹಂಪಿಯಲ್ಲಿ ತೆಗೆದುಕೊಂಡು ವಿರೂಪಾಕ್ಷನ ಪೂಜೆಗೆ ಬಳಸಲಾಗುತ್ತಿತ್ತು. ಈಗ ಆ ಕಡೆಯಿಂದ ಮಲ್ಲಿಗೆ ಬಿಟ್ಟರೆ ಈ ಕಡೆ `ಕನಕಾಂಬರ'ವಾಗಿ ಬದಲಾಗಿರುತ್ತದೆ ಎಂಬ ಛೇಡಿಸುವ ಮಾತುಗಳು ಈ ಭಾಗದಲ್ಲಿ ಸಾಮಾನ್ಯವಾಗಿದೆ.`ಗಣಿಧಣಿ'ಗಳು `ದುಡ್ಡಿನಿಂದ ಅಧಿಕಾರ, ಅಧಿಕಾರದಿಂದ ದುಡ್ಡು' ಎಂಬುದನ್ನು ಅರಿತೇ ಕಳೆದ ಚುನಾವಣೆಯಲ್ಲಿ ಯಥೇಚ್ಛವಾಗಿ ಹಣದ ಥೈಲಿ ಹರಿಸಿದರು. ಅದರ ಲಾಭವೂ ಅವರಿಗೆ ಸಿಕ್ಕಿತು. ಐದಾರು ಸಾವಿರ ರೂಪಾಯಿಗೆ ಕೈ ಒಡ್ಡಿ ನಿಲ್ಲುತ್ತಿದ್ದವರು 500-600 ಕೋಟಿ ಒಡೆಯರಾಗಿ ಬಿಟ್ಟರು. ಇದಕ್ಕೆ ಪಕ್ಷಭೇದವಿಲ್ಲ. ಎಲ್ಲ ಪಕ್ಷದಲ್ಲೂ ಇಂಥವರು ಇದ್ದಾರೆ. ಪಾಳೇಗಾರಿಕೆ ಕುಸಿದ ನಂತರ ಸಾಮಂತರು ಎದ್ದು ಸ್ವತಂತ್ರವಾಗಿ ಕಣಕ್ಕಿಳಿದಿದ್ದಾರೆ. ಬಳ್ಳಾರಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ ಪರಿಶಿಷ್ಟ ಪಂಗಡಕ್ಕೆ ಐದು ಮತ್ತು ಪರಿಶಿಷ್ಟ ಜಾತಿಗೆ ಎರಡು  ಮೀಸಲಾಗಿವೆ. ಇದು ಸಾಮಾಜಿಕ ನ್ಯಾಯ, ಜನಸಂಖ್ಯೆ ಆಧರಿಸಿ ಮಾಡಿದ್ದಾರೆ ಸರಿ. ಇನ್ನೆರಡು ಕ್ಷೇತ್ರಗಳು (ಬಳ್ಳಾರಿ ನಗರ ಮತ್ತು ವಿಜಯನಗರ) `ಗಣಿಧಣಿ'ಗಳಿಗೆ ಮೀಸಲಾಗಿವೆ. ಇದೂ ಸಾಮಾಜಿಕ ನ್ಯಾಯವೇ ಎಂಬ ಪ್ರಶ್ನೆ ಎತ್ತುತ್ತಾರೆ ನಾಗರಿಕರು.`ಅಷ್ಟು ಕೋಟಿ ವಶಪಡಿಸಿಕೊಳ್ಳಲಾಗಿದೆ. ಇಷ್ಟು ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಅವರ ಬಳಿ ಬೇನಾಮಿ ಹಣ ಬಹಳ ಇದೆ. ಅದನ್ನು ಚುನಾವಣೆ ಸೇರಿದಂತೆ ನಾನಾ ಕಾರ್ಯಗಳಿಗೆ ಬಳಸುತ್ತಾರೆ. ಜತೆಗೆ ಅವರು ಚಾಣಕ್ಯರು ಕೂಡ. ನೇರವಾಗಿ ಜನರಿಗೆ ಹಣ ತಲುಪಿಸುತ್ತಾರೆ. ಜನರನ್ನು ಮೇಲ್ನೋಟಕ್ಕೆ ಗೌರವದಿಂದಲೇ ಕಾಣುತ್ತಾರೆ. ಮದುವೆ-ಮುಂಜಿ ಎಂದು ಹಣ ಕೊಡುತ್ತಾರೆ. ಮರಿ ಪುಢಾರಿಗಳನ್ನು ಖರೀದಿಸಿ ಇಟ್ಟುಕೊಂಡಿರುತ್ತಾರೆ. ಅವರ ಮೂಲಕ ಕಾರ್ಯ ಸಾಧಿಸುತ್ತಾರೆ' ಎನ್ನುತ್ತಾರೆ ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ.`ಕೆಲ ಖಾಸಗಿ ಬ್ಯಾಂಕ್‌ಗಳೂ ಕಳೆದ ಚುನಾವಣೆ ಸಂದರ್ಭದಲ್ಲಿ ಗಣಿಧಣಿಗಳಿಗೆ ಪೂರ್ಣ ಸಹಕಾರ ನೀಡಿದ್ದವು. ಹಣ ಸಾಗಿಸುವ ಸಂದರ್ಭದಲ್ಲಿ ಬ್ಯಾಂಕಿಗೆ ಎಂದು ಸುಳ್ಳು ಹೇಳಿ ಬೇಕಾದವರಿಗೆ ಬೇಕೆಂದ ಕಡೆಗೆ ಹಣ ಒದಗಿಸಿದ್ದವು. ಇದರಿಂದ ಅವರು ಮಧ್ಯಮವರ್ಗದವರಿಗೂ ಹಣ ತಲುಪಿಸುವ ಮೂಲಕ ಅವರನ್ನೂ ಇವರು ಕೈಒಡ್ಡುವಂತೆ ಮಾಡಿಬಿಟ್ಟರು. ಈಗಲೂ ಅಲ್ಲಲ್ಲಿ ಹಣ ಮತ್ತಿತರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಹೊಸಪೇಟೆ ಸಮೀಪ ಸಾವಿರಾರು ರೂಪಾಯಿ ಮೌಲ್ಯದ ಫ್ಯಾನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಹಂಚಲು ನಡೆದಿರುವ ಸಿದ್ಧತೆ' ಎನ್ನುತ್ತಾರೆ ಬಳ್ಳಾರಿಯ ಕಾರ್ಮಿಕ ಮುಖಂಡ ಟಿ.ಜಿ.ವಿಠ್ಠಲ್.`ಹಿಂದೊಮ್ಮೆ ಜಾತ್ರೆ ಸಂದರ್ಭದಲ್ಲಿ ಹಾಕಿದ್ದ ಫ್ಲೆಕ್ಸ್‌ನಲ್ಲಿ ತಮ್ಮ ಚಿತ್ರ ಇರುವುದನ್ನು ಕಂಡು ಬೇಸರಗೊಂಡ ಎಂ.ವೈ.ಘೋರ್ಪಡೆಯವರು ಅದನ್ನು ಕಿತ್ತು ಹಾಕಲು ಸೂಚಿಸಿದ್ದರು. ಅವರು ಎಂದೂ ಬ್ಯಾನರ್, ಕಟೌಟ್ ಬಯಸಲಿಲ್ಲ. ಜನರ ಮನಸ್ಸಿನಲ್ಲಿದ್ದು ರಾಜಕೀಯ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಅಂಥವರನ್ನು ಕಂಡಿದ್ದ ನಮಗೆ ಇಂದಿನವರನ್ನು ಕಂಡರೆ ನೋವಾಗುತ್ತದೆ' ಎಂದು ವಿಠ್ಠಲ್ ಹೇಳುತ್ತಾರೆ.`ವಾಕರಿಕೆ ತರಿಸುವ ಇಂಥ ವಿಚಾರಗಳ ಬಗ್ಗೆ ಮಾತನಾಡುವುದೇ ಕಷ್ಟ. ಇಂಥವನ್ನು ತಡೆಯಲು ನಿಯಮಗಳಿಗೆ ತಿದ್ದುಪಡಿ ತರಬೇಕು. ವಶಪಡಿಸಿಕೊಂಡ ಹಣ, ವಸ್ತುಗಳು ಯಾರಿಗೆ ಸೇರಿದವು ಎಂಬುದನ್ನು ಆಯೋಗ ತನಿಖೆ ನಡೆಸಿ ಬಹಿರಂಗಪಡಿಸಬೇಕು. ವಶಪಡಿಸಿಕೊಂಡ ನಗದು ಯಾರದ್ದೋ ಗೊತ್ತಿಲ್ಲ ಎಂದರೆ ಹೇಗೆ? ಅವರನ್ನು ಪತ್ತೆ ಹಚ್ಚಿ ಶಿಕ್ಷೆ ಕೊಟ್ಟರೆ ಜನರಿಗೂ ನಂಬಿಕೆ ಬರುತ್ತದೆ. ಚುನಾವಣಾ ಆಯೋಗ ಇನ್ನಷ್ಟು ಸುಧಾರಣೆ ತರಬೇಕು' ಎಂದು ಅಭಿಪ್ರಾಯಪಡುತ್ತಾರೆ ವಕೀಲ ಹಾಗೂ ಸಂಡೂರು ತಾಲ್ಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ.ಎಂ.ಶಿವಕುಮಾರ್.ಚುನಾವಣೆಯಿಂದ ಚುನಾವಣೆಗೆ ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಜಿಲ್ಲೆಯ ರಾಜಕಾರಣದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಬಿಜೆಪಿ ಮೂರು ಹೋಳಾಗಿದೆ. ಆಗ ಬಿಜೆಪಿಗೆ ಶಕ್ತಿವರ್ಧಕ ಟಾನಿಕ್ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದಾರೆ. ಅವರ ಸೋದರ ಸೋಮಶೇಖರ ರೆಡ್ಡಿ ಅವರೂ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ಆತ್ಮೀಯರಾದ ಮಾಜಿ ಸಚಿವ ಬಿ.ಶ್ರೀರಾಮುಲು ಹೊಸ ಪಕ್ಷ ಸ್ಥಾಪಿಸಿ ರಾಜ್ಯದಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ.ಗತಕಾಲದ ವೈಭವ (2008ರ ಚುನಾವಣೆಯ ಗೆಲುವು) ಮತ್ತೆ ಗಳಿಸಲು ಬಿಜೆಪಿ ಹವಣಿಸುತ್ತಿದೆ. ಬಳ್ಳಾರಿ ಕೋಟೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಗಣಿ ಉದ್ಯಮದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿರುವ 10 ಅಭ್ಯರ್ಥಿಗಳು ವಿವಿಧ ರಾಜಕೀಯ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಜನರೂ ಅವರತ್ತ ದೃಷ್ಟಿ ನೆಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)