ಶನಿವಾರ, ಜೂನ್ 19, 2021
23 °C

ಆಗ ಜಿಲ್ಲೆಗೆ ಇಬ್ಬರು , ಈಗ 2 ಜಿಲ್ಲೆಗೆ ಒಬ್ಬರು

ಪ್ರಜಾವಾಣಿ ವಾರ್ತೆ/ಎಂ.ಎಸ್. ರಾಜೇಂದ್ರಕುಮಾರ್/ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮೈಸೂರು: ‘ಮೈಸೂರು– ಕೊಡಗು’ ಜಿಲ್ಲಾ ವ್ಯಾಪ್ತಿಯುಳ್ಳ ಈ ಲೋಕಸಭಾ ಕ್ಷೇತ್ರದ ಇತಿಹಾಸ ಕೆದಕಿದರೆ ಹಲವು ಕೌತುಕಗಳು ಬಿಚ್ಚಿಕೊಳ್ಳುತ್ತವೆ.

1951ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆ ಮತ್ತು 1957ರ ಚುನಾವಣೆಯಲ್ಲಿ ಮೈಸೂರು ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ‘ದ್ವಿಸದಸ್ಯ ಕ್ಷೇತ್ರ’ವಾಗಿತ್ತು.ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲೇ ಕುತೂಹಲದ ಘಟನೆಯೊಂದಕ್ಕೂ ಇದು ಸಾಕ್ಷಿಯಾಗಿತ್ತು. ಬೆಂಗಳೂರಿನಲ್ಲಿ ಪತ್ರಕರ್ತನಾಗಿದ್ದ 29ರ ಹರೆಯದ ಯುವಕನೊಬ್ಬನನ್ನು ಕರೆತಂದು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯ ಅಭ್ಯರ್ಥಿ­ಯಾಗಿ ಕಣಕ್ಕೆ ಇಳಿಸಲಾಗಿತ್ತು. ಎದುರಾಳಿ ಸಾಮಾನ್ಯರಲ್ಲ. ‘ಮೈಸೂರು ಗಾಂಧಿ’ ಎಂದೇ ಪ್ರಸಿದ್ಧರಾಗಿದ್ದ, ಗಾಂಧೀಜಿಗೆ ಪ್ರೀತಿಪಾತ್ರರಾಗಿ, ನೆಹರೂ ಅವರ ಆಪ್ತಸ್ನೇಹಿತರಾಗಿದ್ದ ಕಾಂಗ್ರೆಸ್ ಮುಖಂಡ ಎಚ್.ಸಿ. ದಾಸಪ್ಪ. ಚುನಾವಣಾ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ಆಘಾತ ತಂದಿತ್ತು. ಯುವಕ ಎಂ.ಎಸ್. ಗುರುಪಾದಸ್ವಾಮಿ ದಿಗ್ಗಜರನ್ನೇ ಸೋಲಿಸಿ ಅಚ್ಚರಿಯ ಫಲಿತಾಂಶ ನೀಡಿದ್ದರು.‘ದಾಸಪ್ಪ ಅವರನ್ನು ಸೋಲಿಸಿದ ಯುವಕ ಯಾರು?’ ಎಂದು ಸ್ವತಃ ನೆಹರೂ ಅವರೇ ಕೇಳಿದ್ದರಂತೆ. ಹಾಗಾಗಿ, ಗುರು­ಪಾದಸ್ವಾಮಿ  ಲೋಕಸಭೆಗೆ ಕಾಲಿಟ್ಟಾಗಲೇ ಕುತೂಹ­ಲದ ಕೇಂದ್ರವಾಗಿದ್ದರು. ದಾಸಪ್ಪ ಅವರಂತಹ ಸ್ವಾತಂತ್ರ್ಯ ಸೇನಾನಿ ಮಣಿಸಿದ ‘ದೈತ್ಯ ಸಂಹಾರಿ’ಯ ವರ್ಚಸ್ಸು. ಜತೆಗೆ, ಪ್ರಥಮ ಲೋಕಸಭೆಯ ‘ಅತಿ ಕಿರಿಯ ಸದಸ್ಯ’ ಎಂಬ ದಾಖಲೆ ಬೇರೆ.ಚುನಾವಣಾ ರಾಜಕಾರಣಕ್ಕೂ ಮುನ್ನ ಅವರು  ‘ಪ್ರಜಾಮತ’ ವಾರಪತ್ರಿಕೆಯ ಸಂಪಾದಕರಾಗಿದ್ದರು. ಮುಂದೆ ರಾಜ್ಯಸಭಾ ಸದಸ್ಯರಾಗಿ ಇಂದಿರಾ ಗಾಂಧಿ ಹಾಗೂ ವಿ.ಪಿ. ಸಿಂಗ್‌ ಸರ್ಕಾರದಲ್ಲಿ ಸಚಿವರೂ ಆದರು. ಪ್ರಥಮ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡರೂ ಮೈಕೊಡವಿ ಮೇಲೆದ್ದ ದಾಸಪ್ಪ, 1967, 1971 ಹಾಗೂ 1977­ರ ಚುನಾವಣೆಗಳಲ್ಲಿ ಗೆದ್ದು  ‘ಹ್ಯಾಟ್ರಿಕ್ ಸಾಧನೆ’­ಯಿಂದ ಮಿಂಚಿದರು. ರೈಲ್ವೆ ಸಚಿವರಾದರು.ಮೂರು ಗೆಲುವುಗಳ ಮೂಲಕ ದಾಸಪ್ಪ ನಿರ್ಮಿಸಿದ್ದ ದಾಖಲೆ­ಯನ್ನು ಅಳಿಸಿ ಹಾಕಿದವರು ಮೈಸೂರು ಯದು­ವಂಶದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್. ಅರ­ಮನೆಯ ವ್ಯಕ್ತಿ ಚುನಾವಣಾ ಅಖಾಡಕ್ಕೆ ಬಂದಾಗ ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಉಂಟಾಗಿತ್ತು. ರಾಜ ವಂಶಸ್ಥರು ಮನೆ ಬಾಗಿಲಿಗೆ ಬಂದದ್ದು ಕಂಡು ಜನ ಗಲಿಬಿಲಿಗೊಂಡರು. ಏನೋ ಅಪಚಾರವಾಗುತ್ತಿದೆ ಎಂದು ಕನಲಿದರು. ‘ದೊರೆಗಳು ನೀವೇಕೆ ಬಂದಿದ್ದೀರಿ? ಅರಮನೆಗೆ ಹೋಗಿ. ನಿಮ್ಮನ್ನು ಗೆಲ್ಲಿಸುತ್ತೇವೆ’ ಎಂಬ ಜನಸಾಮಾನ್ಯರ ‘ಅಭಯ’ದ ವಾಗ್ದಾನ ಬಹುತೇಕ ಕಡೆಗಳಲ್ಲಿ ಅನುರಣಿಸಿತು. ಹಾದಿ–ಬೀದಿಗಳಲ್ಲಿ ಆರತಿ ಎತ್ತಿ, ಕಾಲಿಗೆ ಬಿದ್ದು, ಕೈಜೋಡಿಸಿ ನಿಲ್ಲುತ್ತಿದ್ದ ದೃಶ್ಯವನ್ನು ಹಳೆಯ ತಲೆಮಾರಿನವರು ಇಂದಿಗೂ ಕಣ್ಣಿಗೆ ಕಟ್ಟುವಂತೆ ವಿವರಿಸು­ವಾಗ, ಮೈಸೂರು ಭಾಗದ ಜನ ಮತ್ತು ಅರಮನೆಯ ನಡುವಿನ ಸಂಬಂಧದ ಆಳ ಮನವರಿಕೆಯಾಗುತ್ತದೆ.ಈ ಕ್ಷೇತ್ರದಿಂದ ಹೆಚ್ಚು ಬಾರಿ (1984, 1989, 1996 ಹಾಗೂ 1999) ಆಯ್ಕೆಯಾದ ದಾಖಲೆ ಶ್ರೀಕಂಠದತ್ತ ನರಸಿಂಹ­ರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಆದರೆ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಕಣಕ್ಕೆ ಇಳಿದ ಅವರಿಗೂ ಸೋಲಿನ ಬಿಸಿ ತಟ್ಟಿತು. ಈ ಅರಸು ಪುತ್ರ ಸೋತಿದ್ದು, ಇನ್ನೊಬ್ಬ ಅರಸು ಪುತ್ರಿಗೆ ಎಂಬುದು ಗಮನಾರ್ಹ. ಅವರನ್ನು 1998ರ ಚುನಾವಣೆ­ಯಲ್ಲಿ ಮಣಿಸಿದ್ದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪುತ್ರಿ, ಕಾಂಗ್ರೆಸ್‌ನ ಚಂದ್ರಪ್ರಭಾ ಅರಸು. ಈ ಕ್ಷೇತ್ರ ಪ್ರತಿನಿಧಿಸಿದ ಏಕಮಾತ್ರ ಮಹಿಳೆ ಅವರು. 1998ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಸೋತಿತ್ತು. ಮತ್ತೆ 2004ರಲ್ಲಿ ಬಿಜೆಪಿ ಗೆದ್ದರೂ, 2009ರ ಚುನಾವಣೆಯಲ್ಲಿ  ಸೋಲನ್ನಪ್ಪಿತು.ಅನುಕಂಪಕ್ಕೆ ಹುನ್ನಾರ: ನಾಲ್ಕು ಬಾರಿ ಗೆದ್ದ ಸರದಾರ ಶ್ರೀಕಂಠ­ದತ್ತ ನಿಧನದ ನಂತರ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳೂ ಒಡೆಯರ್‌ ಪತ್ನಿ ಪ್ರಮೋದಾ ದೇವಿ ಅವರಿಗೆ ಮಣೆ ಹಾಕಲು ಅರಮನೆಯತ್ತ ಮುಖ ಮಾಡಿದವು.ಪ್ರಮೋದಾ ದೇವಿ ಸ್ಪರ್ಧಿಸುವುದಾದರೆ ಅವರನ್ನು ಬೆಂಬಲಿಸುವುದಾಗಿ ಹಾಲಿ ಸಂಸದ ವಿಶ್ವನಾಥ್ ಬಹಿರಂಗವಾಗಿಯೇ ಹೇಳಿಕೆ ನೀಡಿ­ದರು. ಜೆಡಿಎಸ್ ನಾಯಕರೂ ತಮ್ಮ ಪಕ್ಷದಿಂದ ಪ್ರಮೋದಾ ದೇವಿ ಅವರನ್ನು ಕಣಕ್ಕೆ ಇಳಿಸುವ ಪ್ರಯತ್ನ ನಡೆಸಿದರು. ಆದರೆ, ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಸಂದೇಶ ಅರಮನೆ­ಯಿಂದ ರವಾನೆಯಾದ್ದರಿಂದ ಎಲ್ಲ ಊಹಾ­ಪೋಹಗಳಿಗೆ ತೆರೆ ಬಿತ್ತು.  ಒಡೆಯರ್ ನಿಧನದ ಅನುಕಂಪ ಬಾಚಿಕೊಳ್ಳಲು ಹವಣಿಸಿದ್ದ ಪಕ್ಷಗಳ ಆಸೆಗೂ ತೆರೆ ಬಿತ್ತು.ಮೈಸೂರು ತೆಕ್ಕೆಗೆ ಬಂದ ಕೊಡಗು: ‘ಸಿ’ ರಾಜ್ಯದ ಸ್ಥಾನಮಾನ ಹೊಂದಿದ್ದ ಕೊಡಗು, 1956ರಲ್ಲಿ ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಂಡಿತು. ಮೂರು ತಾಲ್ಲೂಕುಗಳನ್ನು ಹೊಂದಿ­ದ್ದರೂ ಜನಸಂಖ್ಯೆಯ ಆಧಾರದ ಮೇಲೆ ಕೊಡಗು ಜಿಲ್ಲೆ­ಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಮಾತ್ರ ಸೃಷ್ಟಿಸ­ಲಾಯಿತು. ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಮಂಗಳೂರು ಲೋಕಸಭಾ ಕ್ಷೇತ್ರದ ತೆಕ್ಕೆಗೆ ಹೋದವು. 1967ರ ಚುನಾವಣೆಯಲ್ಲಿ ಮಡಿಕೇರಿ ಮತ್ತು ವಿರಾಜ­ಪೇಟೆ ಕ್ಷೇತ್ರಗಳ ಜತೆಗೆ ಸೋಮವಾರಪೇಟೆ ಕ್ಷೇತ್ರ ಸೇರ್ಪಡೆಯಾಯಿತು.2007ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆಯೋಗದ ಶಿಫಾರಸ್ಸಿನಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ವಿಧಾನ­ಸಭಾ ಕ್ಷೇತ್ರವನ್ನು ಕೈಬಿಡಲಾಯಿತು. ಜತೆಗೆ, ಅದುವರೆಗೆ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದ ಮಡಿಕೇರಿ, ವಿರಾಜಪೇಟೆ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾದವು. ಹಾಗೆಯೇ, ಅದುವರೆಗೆ ಮೈಸೂರು ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ನೆರೆಯ ಮಂಡ್ಯ ಲೋಕಸಭಾ ಕ್ಷೇತ್ರದ ಪಾಲಾದರೆ; ಎಚ್.ಡಿ. ಕೋಟೆ, ವರುಣಾ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳು ನೆರೆಯ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾಲಾದವು. ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ನಡೆದ ಮೊದಲ ಚುನಾವಣೆ (2009)ಯಲ್ಲಿ ಕಾಂಗ್ರೆಸ್ ಪಕ್ಷದ ಅಡಗೂರು ಎಚ್. ವಿಶ್ವನಾಥ್ ಆಯ್ಕೆ­ಯಾದರು.ಪ್ರತ್ಯೇಕ ಸ್ಥಾನ: 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾತ್ರ ಕೊಡಗು ಜಿಲ್ಲೆಗೆ ಪ್ರತ್ಯೇಕವಾದ ಸಂಸದರ ಸ್ಥಾನವಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎನ್‌. ಸೋಮಣ್ಣ ಜಯ ಗಳಿಸಿದ್ದರು.ಏಕೀಕೃತ ಮೈಸೂರಿನ ಭಾಗವಾದ ನಂತರ ಪ್ರತ್ಯೇಕ ಲೋಕಸಭಾ ಸ್ಥಾನಮಾನವನ್ನು ಕಳೆದುಕೊಂಡು ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ನಂತರ, 1967ರ ಚುನಾವಣೆ­ಯಲ್ಲಿ ಗೆದ್ದ ಕೊಡಗಿನ ಏಕಮಾತ್ರ ಸಂಸದ ಸಿ.ಎಂ. ಪೂಣಚ್ಚ. ಹಿಂದೆ ‘ಸಿ’ ರಾಜ್ಯದ ಸ್ಥಾನಮಾನ ಇದ್ದಾಗ ಕೊಡಗಿನ ಮುಖ್ಯಮಂತ್ರಿಯಾಗಿದ್ದ ಪೂಣಚ್ಚ  ಮತ್ತೆ 1973ರಲ್ಲಿ ಸ್ಪರ್ಧಿಸಿ­ದರೂ ಗೆಲ್ಲಲಾಗಲಿಲ್ಲ. ಆ ನಂತರ ಕೊಡಗಿನಿಂದ ಯಾರೊ­ಬ್ಬರೂ ಲೋಕಸಭಾ ಚುನಾವಣೆಗೆ ಈ ಕ್ಷೇತ್ರದಿಂದ ಆಯ್ಕೆ ಆಗಲಿಲ್ಲ. ಜೆಡಿಎಸ್‌ನಿಂದ ಮಾಜಿ ಸಚಿವ, ಬಿ.ಎ. ಜೀವಿಜಯ ಹಲವು ಬಾರಿ ಕಣಕ್ಕೆ ಇಳಿದು ಪ್ರತಿರೋಧ ಒಡ್ಡಿದರೂ, ಗೆಲುವಿನ ನಗೆ ಬೀರಲಾಗಲಿಲ್ಲ.ಈಗ ಇದು ಮುಖ್ಯಮಂತ್ರಿ  ಅವರ ತವರು ಜಿಲ್ಲೆಯ ಕ್ಷೇತ್ರ. ಇದನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್‌ ಪಕ್ಷಕ್ಕಷ್ಟೇ ಅಲ್ಲ; ಸ್ವತಃ ಸಿದ್ದರಾಮಯ್ಯ ಅವರಿಗೂ ಪ್ರತಿಷ್ಠೆಯ ಪ್ರಶ್ನೆ.  ಕ್ಷೇತ್ರವನ್ನು ಮೂರನೇ ಬಾರಿಗೆ ಕಸಿದುಕೊಳ್ಳಲು ಬಿಜೆಪಿ ಕಸರತ್ತು ನಡೆಸಿದ್ದರೆ, ‘ಕ್ಷೇತ್ರದ ಪರೋಕ್ಷ ಕಾಂಗ್ರೆಸ್‌ ಅಭ್ಯರ್ಥಿ’ ಸಿದ್ದರಾಮಯ್ಯ ಅವರಿಗೆ ಮುಖಭಂಗ ಉಂಟು ಮಾಡುವ ಯಾವುದೇ ಅವಕಾಶವನ್ನು ಬಿಟ್ಟುಕೊಡದಿರಲು ಜೆಡಿಎಸ್ ಕಾದು ಕುಳಿತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.