ಆಗ ಹೋಗಿ ಹಾಳು, ಈಗ ಬಂದು ಹಾಳು

7
ಬರ ಬದುಕು ಭಾರ - ಯಾದಗಿರಿ ಜಿಲ್ಲೆ

ಆಗ ಹೋಗಿ ಹಾಳು, ಈಗ ಬಂದು ಹಾಳು

Published:
Updated:

ಯಾದಗಿರಿ: ‘ಮಳಿ ಬರೂ ಟೈಮ್‌ನ್ಯಾಗೂ ಬರಲಿಲ್ಲ. ಹಾಂಗು ಹಿಂಗೂ ಮಾಡಿ, ಒಂದಿಟ ಬೆಳಿ ತೆಗಿಬೇಕ ಅಂತ ನೀರು, ಗೊಬ್ರ ಹಾಕಿದ್ವಿ. ಬಾ ಅಂದ್ರು ಬರದ ಮಳಿ, ಈಗ ಬ್ಯಾಡ ಅಂದ್ರು ಬಂದ ನಮ್ಮ ಜೀವನಾ ಹಾಳ ಮಾಡೇತಿ ನೋಡ್ರಿ. ಈ ವರ್ಷ ಮಳಿಲಿಂದ ನಮ್ಮ ಬದಕು ಮೂರಾಬಟ್ಟಿ ಆತ್ರಿ. ಗಂಟು ಮೂಟಿ ಕಟ್ಟಿಕೊಂಡ ಬೆಂಗಳೂರ ಸೇರ್‍ತೇವ್ರಿ’. ಬೆಳೆದು ನಿಂತಿದ್ದ ಹತ್ತಿಯ ಪೈರು ಮಳೆಯ ಹುಚ್ಚಾಟಕ್ಕೆ ಆಹುತಿ ಆಗಿದ್ದನ್ನು ತೋರಿಸುವಾಗ ಗುರುಸುಣಗಿ ಗ್ರಾಮದ ಮಲ್ಲಯ್ಯನ ಕಣ್ಣಾಲಿಗಳು ತುಂಬಿದ್ದವು.ಬಿತ್ತನೆ ಸಮಯದಲ್ಲಿ ಕೈಕೊಟ್ಟ ಮಳೆ, ಕಾಯಿ ಬಿಡುವ ಸಂದರ್ಭದಲ್ಲಿ ಧಾರಾಕಾರವಾಗಿ ಸುರಿದಿದೆ. ಹೀಗಾಗಿ ಹತ್ತಿ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಎರಡು ಎಕರೆಯಲ್ಲಿ ಹತ್ತಿ ಬಿತ್ತನೆ ಮಾಡಿದ್ದ ಮಲ್ಲಯ್ಯನ ಆಸೆಗೆ ಮಳೆ ತಣ್ಣೀರು ಎರಚಿದೆ.ಜಿಲ್ಲೆಯ ಬಹುತೇಕ ರೈತರ ಬದುಕಿನ ಚಿತ್ರಣವೂ ಇದೇ ಆಗಿದೆ. ಮೊದಲು ಬರಗಾಲದ ದವಡೆಗೆ ಸಿಲುಕಿದ್ದ ರೈತರು, ಈಗ ಮಳೆಯ ಹೊಡೆತಕ್ಕೆ ನಲುಗುವಂತಾಗಿದೆ. ಬರದಿಂದ ಒಣಗುತ್ತಿದ್ದ ಬೆಳೆಗಳು, ಈಗ ನೀರಿನಲ್ಲಿ ಕೊಳೆತು ಹೋಗುತ್ತಿವೆ. ಸುರಪುರ ತಾಲ್ಲೂಕಿನಲ್ಲಿ ಬರದ ಛಾಯೆ ಇದ್ದರೆ, ಯಾದಗಿರಿ ಮತ್ತು ಶಹಾಪುರ ತಾಲ್ಲೂಕುಗಳಲ್ಲಿ ನೆರೆಯ ಸ್ಥಿತಿ ಎದುರಿಸುವಂತಾಗಿದೆ.ಜಿಲ್ಲೆಯಲ್ಲಿ ಈ ವರ್ಷ ಮಳೆಯದ್ದೇ ಆಟ. ಜೂನ್‌ ಆರಂಭದಲ್ಲಿ ರೋಹಿಣಿ, ಮೃಗಶಿರಾ ಮಳೆ ಕೈಕೊಟ್ಟವು. ಜುಲೈ ಆರಂಭದಲ್ಲಿ ಬಿದ್ದ ಅಲ್ಪ ಮಳೆಯಿಂದಾಗಿ ರೈತರಿಗೆ ಹೋದ ಜೀವ ಬಂದಂತಾಗಿತ್ತು. ಇರುವ ನೀರಿನಲ್ಲಿಯೇ ಬೆಳೆ ಬೆಳೆಯಲು ಹರಸಾಹಸ ಮಾಡಿದ್ದ ರೈತರಿಗೆ, ಮತ್ತೆ ಮಳೆಯೇ ಶತ್ರುವಾಗಿ ಪರಿಣಮಿಸಿದೆ.ಮುಂಗಾರು ಹಂಗಾಮಿನ ಆರಂಭದಿಂದ ಆಗಸ್ಟ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ 191 ಮಿ.ಮೀ. ನಷ್ಟು ಮಳೆಯ ಕೊರತೆ ಇತ್ತು. ಹೀಗಾಗಿ ಸಕಾಲದಲ್ಲಿ ಬಿತ್ತನೆ ಮಾಡಲಾಗದೇ ರೈತರು ತೊಂದರೆ ಅನುಭವಿಸುವಂತಾಗಿತ್ತು. ಆದರೆ ಸೆಪ್ಟೆಂಬರ್‌ 14 ರ ರಾತ್ರಿ ಸುರಿದ ಒಂದೇ ಮಳೆಯಿಂದಾಗಿ ಶಹಾಪುರ ಹಾಗೂ ಯಾದಗಿರಿ ತಾಲ್ಲೂಕಿನ ಬಹುತೇಕ ಕೆರೆ, ಹಳ್ಳಗಳು ತುಂಬಿ ಹರಿದಿವೆ. ಬೆಳೆದು ನಿಂತಿದ್ದ ಅಷ್ಟಿಷ್ಟು ಪೈರು ಜಲಾವೃತವಾಗಿದೆ.ಬಂಪರ್‌ ಭತ್ತ: ಸುರಪುರ ತಾಲ್ಲೂಕಿನಲ್ಲಿ ಮಾತ್ರ ಭತ್ತದ ಬಂಪರ್ ಬೆಳೆ ಬರುವ ನಿರೀಕ್ಷೆ ಇದೆ. ಇಲ್ಲಿ ನೀರಾವರಿ ಸೌಲಭ್ಯವಿದ್ದು, ಕಾಲುವೆಯ ಮೇಲ್ಭಾಗದ ರೈತರು ಮಾತ್ರ ಕಳೆದ ಬಾರಿಗಿಂತ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಹೇಳಲಾಗುತ್ತಿದೆ.ಎಡದಂಡೆ ಕಾಲುವೆಯ ನವೀಕರಣ ಆಗಿದ್ದು, ಜಲಾಶಯವೂ ತುಂಬಿರುವುದರಿಂದ ಕಾಲುವೆಯ ಮೇಲ್ಭಾಗದ ರೈತರಿಗೆ ಅನುಕೂಲವಾಗಿದೆ. ಕಳೆದ ವರ್ಷ ನೀರು ಸಿಗದೇ ಪರದಾಡಿದ್ದ ರೈತರು, ಈ ವರ್ಷ ಹೆಚ್ಚಿನ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಸುರಪುರ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕಾಲುವೆಯ ಕೊನೆಯ ಭಾಗದ ರೈತರು ಬರದ ದವಡೆಗೆ ಸಿಲುಕುವಂತಾಗಿದೆ.‘ಮಳಿ ಬರಲಾದ್ರಕ್ಕ ಮನ್ಯಾಗಿನ ದನಗೋಳಿಗಿ ಖಣಕಿ ಇರಲಾದ್ಹಂಗ ಆಗೇದ್ರಿ. ಒಣ ಬೇಸಾಯ ಮಾಡೋ ನಮಗ ಮಳೀನ ಆಧಾರ. ಹಾಕಿದ ಹೆಸರು ಒಣಗಿ ಹೋತು. ನೀರ ಕಡಿಮಿ ಆಗಿ ತೊಗರಿನೂ ಕೆಂಪ ಒಡದೈತಿ. ನಮ್ಮ ಗತಿ ದೇವರ ಬಲ್ಲ. ದೇಶಾಂತರ ಹೋಗುದ ಒಂದ ಬಾಕಿ ಉಳದೈತಿ ನೋಡ್ರಿ’ ಎನ್ನುತ್ತಾರೆ ಕೆಂಭಾವಿಯ ಸಣ್ಣ ರೈತ ರಂಗಪ್ಪ.ಕೈಗೆ ಸಿಗದ ಹೆಸರು: ಬಿತ್ತನೆಯ ಸಮಯದಲ್ಲಿ ಬರದ ಮಳೆ, ಕಟಾವಿನ ಸಂದರ್ಭದಲ್ಲಿ ಸುರಿದಿದ್ದರಿಂದ ಈ ಭಾಗದ ಪ್ರಮುಖ ಬೆಳೆಯಾದ ಹೆಸರೂ ರೈತರ ಕೈಗೆಟುಕ­ದಂತಾ­ಗಿದೆ. ಜೂನ್‌ ಆರಂಭದಲ್ಲಿ ಬಿತ್ತನೆ ಮಾಡಿ, ಜುಲೈ ಅಂತ್ಯದವರೆಗೆ ಕಟಾವಿಗೆ ಬರುತ್ತಿದ್ದ ಹೆಸರು, ರೈತರಿಗೆ ಆರ್ಥಿಕ ಆಸರೆ ನೀಡುತ್ತಿತ್ತು. ಆದರೆ ಈ ಬಾರಿ ಹೆಸರು ಬೆಳೆಯಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ.‘ಪ್ರತಿ ವರ್ಷ ಇಲ್ಲಿಯ ಎಪಿಎಂಸಿಯಲ್ಲಿ ಸುಮಾರು ರೂ.30–40 ಕೋಟಿ ಮೌಲ್ಯದ ಹೆಸರಿನ ವಹಿವಾಟು ನಡೆಯುತ್ತದೆ. ಆದರೆ ಈ ಬಾರಿ ಸುಮಾರು ರೂ.30 ಕೋಟಿಯಷ್ಟು ಹೆಸರು ನಷ್ಟವಾಗಿದೆ. ಇದೀಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೆಸರಿನ ಆವಕವೂ ಕಡಿಮೆ ಆಗಿದ್ದು, ಬರುತ್ತಿರುವ ಹೆಸರು ಕಾಳುಗಳೂ ಗುಣಮಟ್ಟದಿಂದ ಕೂಡಿಲ್ಲ’ ಎನ್ನುತ್ತಾರೆ ಎಪಿಎಂಸಿ ವರ್ತಕ ವಿನೋದ್‌ ಜೈನ್‌.ಈ ವರ್ಷ ಶೇ 90 ರಷ್ಟು ಬಿತ್ತನೆ ಆಗಿದ್ದರೂ, ಫಸಲು ಮಾತ್ರ ಕೈಸೇರುವ ವಿಶ್ವಾಸ ರೈತರಲ್ಲಿ ಉಳಿದಿಲ್ಲ. ಒಂದೇ ಹಂಗಾಮಿನಲ್ಲಿ ಬರ ಮತ್ತು ನೆರೆಯ ಹೊಡೆತಕ್ಕೆ ಸಿಲುಕಿರುವ ರೈತರು, ಮತ್ತೆ ಮಹಾನಗರಗಳತ್ತ ಮುಖ ಮಾಡಿದ್ದಾರೆ. ಗುಳೆ ಹೋಗುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.‘ಬೆಳೆ ಹಾನಿ ಸಮೀಕ್ಷೆಗೆ ಸೂಚನೆ’

ಜಿಲ್ಲೆಯಲ್ಲಿ ನೆರೆ ಹಾಗೂ ಬರದಿಂದ ಆಗಿರುವ ಬೆಳೆ ಹಾನಿಯ ಸಮೀಕ್ಷೆ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಮಾಡಿ, ಶೀಘ್ರ ವರದಿ ಸಲ್ಲಿಸಲಿದ್ದಾರೆ. ವರದಿ ಆಧರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು, ನಿಖರ ಮಾಹಿತಿ ಪಡೆದು ರೈತರಿಗೆ ಅಗತ್ಯ ನೆರವು ನೀಡಲಾಗುವುದು.

–ಎಫ್‌.ಆರ್‌. ಜಮಾದಾರ, ಜಿಲ್ಲಾಧಿಕಾರಿ‘ಮಳಿ ಎಲ್ಲಾ ತೊಳಕೊಂಡ ಹೋತ್ರಿ’


ಬಾ ಅಂದಾಗ ಬರಲಿಲ್ಲ. ಮುಗಿಲ ನೋಡಿಕೊಂತ ಬೀಜಾ ಬಿತ್ತಿದ್ವಿ. ಬೋರ್‌ ನೀರ ಹಾಯಿಸಿ, ಒಂದೀಟ ಬೆಳಿ ಬರತೈತಿ ಅಂತ ಆಸೆ ಇತ್ತು. ಮಳಿ ಬಂದ ಎಲ್ಲಾ ತೊಳಕೊಂಡ ಹೋತ್ರಿ. ಮಳೀನ ನಂಬಿ ಬದುಕೋ ಮಂದಿ ನಾವು. ಮಳೀನ ನಮಗ ಹಿಂಗ ಮಾಡಿದ್ರ, ಇನ್ನ ನಮ್ಮನ್ನ ಕೇಳಾವ್ರ ಯಾರು? ಹೊಲದಾಗಿನ ಹತ್ತಿ ನೀರಾಗ ನಿಂತೈತಿ. ಮಳಿ ಆದ್ರ ತ್ರಾಸ್‌, ಆಗಲಿಲ್ಲ ಅಂದ್ರು ತ್ರಾಸ್‌ ನೋಡ್ರಿ. ನಮ್ಮ ಪರಿಸ್ಥಿತಿ ಯಾರಿಗೂ ಬರೋದ ಬ್ಯಾಡ್ರಿ.

–ನೀಲಕಂಠರಾಯಗೌಡ ದ್ಯಾವಪನೋರ್, ರೈತ, ನಾಯ್ಕಲ್‘ಬೆಳಿ ಒಣಗಾಕತ್ತಾ’

‘ಎರಡ ವರ್ಷದಿಂದ ಮಳಿ ಆಗಲಾರದಕ್ಕ ಬೆಳಿನ ನೋಡಿಲ್ರಿ. ಈ ಸಲಾನೂ ಮಳಿ ಪೂರ್ತಿ ಬಂದಿಲ್ಲ. ಹೊಲದಾಗಿನ ಬೆಳಿ ಒಣಗಾಕತ್ತಾವ. ಹ್ವಾದ ಸರ್ತಿನೂ ನಮಗ ಸರ್ಕಾರದಿಂದ ಪರಿಹಾರ ಬಂದಿಲ್ಲ. ಈ ಸಲಾನಾದ್ರು ಕೊಟ್ರ ಛೋಲೋ ಆಗತದ್ರಿ. ಬರಗಾಲದಿಂದ ನಮ್ಮ ರೈತರ ಪರಿಸ್ಥಿತಿ ಗಂಭೀರ ಆಗೇದ್ರಿ’

–ಶರಣಪ್ಪ ಬಂಡೋಳಿ, ರೈತ, ಕೆಂಭಾವಿ‘ರೈತನ ಮೇಲೆ ಮುನಿದ ಪ್ರಕೃತಿ’


ಎಲ್ಲರಂತೆಯೇ ಪ್ರಕೃತಿಯೂ ರೈತರ ಮೇಲೆ ಮುನಿಸಿಕೊಂಡಿದೆ. ಸರ್ಕಾರ, ಅಧಿಕಾರಶಾಹಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೆ ಈ ಬಾರಿ ಮಳೆಯೂ ಬೆಂಬಲ ನೀಡಿಲ್ಲ. ಮೊದಲು ಬರದಿಂದ ಕಂಗೆಡುವಂತೆ ಮಾಡಿದ ಮಳೆ, ಈಗ ಅಬ್ಬರಿಸುವ ಮೂಲಕ ನೆರೆಯ ಸ್ಥಿತಿಯನ್ನು ತಂದಿಟ್ಟಿದೆ. ಅನ್ನದಾತನ ಬವಣೆಗೆ ಕೊನೆಯೇ ಇಲ್ಲದಂತಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಮುಂದಾಗಬೇಕು. ಕೇವಲ ಅಷ್ಟಿಷ್ಟು ಬೆಳೆ ಪರಿಹಾರ ನೀಡಿ ಕೈತೊಳೆದುಕೊಳ್ಳಬಾರದು. ನಿಖರವಾದ ಸಮೀಕ್ಷೆ ಮಾಡಿ, ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು.

–ಮಲ್ಲಿಕಾರ್ಜುನ ಸತ್ಯಂಪೇಟೆ

ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ), ಯಾದಗಿರಿ ಜಿಲ್ಲಾ ಘಟಕಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry