ಆಘಾತಕಾರಿ ಅಪಹರಣ

ಸೋಮವಾರ, ಜೂಲೈ 22, 2019
23 °C

ಆಘಾತಕಾರಿ ಅಪಹರಣ

Published:
Updated:

ಹುಣಸೂರಿನ ಸುಧೀಂದ್ರ ಮತ್ತು ವಿಘ್ನೇಶ್ ಎಂಬ ಬಿಬಿಎಂ ವಿದ್ಯಾರ್ಥಿಗಳು ಅಪಹರಣಕ್ಕೊಳಗಾಗಿ ನಂತರ ಕೊಲೆಯಾಗಿದ್ದಾರೆ. ಇದು ಅತ್ಯಂತ ಆಘಾತಕಾರಿ ದುಷ್ಕೃತ್ಯ. ಈ ಘಟನೆ ಅನೇಕ ಪೋಷಕರಲ್ಲಿ ಆತಂಕ, ಭಯಗಳನ್ನು ಹುಟ್ಟಿಸಿದೆ. ಹಣಕ್ಕಾಗಿ ಶ್ರೀಮಂತರ ಮಕ್ಕಳನ್ನು, ಉದ್ಯಮಿಗಳನ್ನು ಅಪಹರಿಸುವ ಪ್ರಕರಣಗಳು ಬೆಂಗಳೂರಿನಲ್ಲೇ ಹೆಚ್ಚಾಗಿ ನಡೆಯುತ್ತಿದ್ದವು. ಈ ಚಾಳಿ ರಾಜ್ಯದ ಇತರೆ ನಗರಗಳಿಗೂ ಹಬ್ಬುತ್ತಿದೆ. ಇಂತಹ ಬೆಳವಣಿಗೆಗಳನ್ನು ಆರಂಭದಲ್ಲೇ ತಡೆಯಬೇಕು. ಇಲ್ಲವಾದರೆ ಅನೇಕ ಅಮಾಯಕ ಜೀವಗಳು ಬಲಿಯಾಗುತ್ತವೆ. ಅಪಹರಣಕ್ಕೆ ಒಳಗಾದ ಇಬ್ಬರು ವಿದ್ಯಾರ್ಥಿಗಳ ಪೋಷಕರ ಪೈಕಿ ಒಬ್ಬರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಆದರೆ ಒತ್ತೆಯಲ್ಲಿದ್ದ ಮಕ್ಕಳನ್ನು ಬಿಡಿಸಿಕೊಳ್ಳಲು ಐದು ಕೋಟಿ ರೂಪಾಯಿ ಕೊಡುವ ಸ್ಥಿತಿಯಲ್ಲಿದ್ದರೇ ಎಂಬುದು ತಿಳಿದಿಲ್ಲ. ಅದೇನೇ ಇರಲಿ, ಹಣಕ್ಕಾಗಿ ಅಪಹರಣ ಮಾಡುವ ವ್ಯಕ್ತಿಗಳು ಪೊಲೀಸರ ಕೈಗೆ ಸಿಕ್ಕಿಬೀಳುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಒತ್ತೆ ಹಣ ಸಿಗುವುದಿಲ್ಲ ಎನ್ನುವುದು ಖಾತರಿಯಾದರೆ ಅವರೇ ಅಪಹೃತರನ್ನು ಬಿಡುಗಡೆ ಮಾಡುತ್ತಾರೆ. ಈ ಪ್ರಕರಣದಲ್ಲಿ ಅಪಹರಣಕಾರರು ತಮ್ಮ ಸುಳಿವು ಪತ್ತೆ ಆಗದಂತೆ ಎಚ್ಚರ ವಹಿಸಿದ್ದಾರೆ. ಅಪಹೃತ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದರೆ ಸಿಕ್ಕಿಹಾಕಿಕೊಳ್ಳುತ್ತೇವೆಂದು ಹೆದರಿ ನಾಲ್ಕು ದಿನ ಅವರನ್ನು ವಶದಲ್ಲಿಟ್ಟುಕೊಂಡು ನಂತರ ಕೊಲೆ ಮಾಡಿರುವ ಸಾಧ್ಯತೆ ಇದೆ. ಸ್ವಲ್ಪವೂ ಸುಳಿವು ಕೊಡದ ಅಪಹರಣಕಾರರ ವರ್ತನೆ ನಿಗೂಢವಾಗಿದೆ. ಪರಿಚಿತರೇ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.ಅಪಹರಣಕಾರರನ್ನು ಪತ್ತೆ ಮಾಡುವ ವಿಷಯದಲ್ಲಿ ಮೈಸೂರು ಪೊಲೀಸರು ಸಾಕಷ್ಟು ಶ್ರಮವಹಿಸಿದ್ದರು. ಅವರ ಪ್ರಯತ್ನ ಯಶಸ್ವಿ ಆಗಲಿಲ್ಲ. ಬಹುತೇಕ ಅಪಹರಣ ಪ್ರಕರಣಗಳನ್ನು ರಾಜ್ಯದ ಪೊಲೀಸರು ಅತ್ಯಂತ ಚಾಕಚಕ್ಯತೆಯಿಂದ ನಿರ್ವಹಿಸಿದ ಉದಾಹರಣೆಗಳಿವೆ. ಈ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಲಿಲ್ಲ. ಆಗಿದ್ದರೆ ಅದು ಸಾರ್ವಜನಿಕರ ಗಮನಕ್ಕೆ ಬಂದು ಅಪಹರಣಕಾರರ ಪತ್ತೆಗೆಸಹಾಯಕವಾಗುವ ಸಾಧ್ಯತೆ ಇತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅಪಹರಣಕಾರರು ಮೈಸೂರು, ಮಂಡ್ಯ, ಕೃಷ್ಣಗಿರಿಗಳಲ್ಲಿ ಸಾರ್ವಜನಿಕ ಟೆಲಿಫೋನ್ ಬೂತ್‌ಗಳಿಂದ ಅಪಹೃತರ ಮೂಲಕವೇ ಅವರ ಪೋಷಕರನ್ನು ಸಂಪರ್ಕಿಸಿದ್ದಾರೆ. ಇದು ಸಾರ್ವಜನಿಕರ ಗಮನಕ್ಕೆ ಬಾರದಿರುವುದು ದುರದೃಷ್ಟಕರ. ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿರುವುದಾಗಿ ಗೃಹ ಸಚಿವರು ಹೇಳಿದ್ದಾರೆ. ವಿಶೇಷ ತಂಡ ಈ ಪ್ರಕರಣವನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು. ಅಪಹರಣ ನಡೆಸಿ ಹತ್ಯೆ ಮಾಡಿದವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಅವರಿಗೆ ನ್ಯಾಯಾಲಯಗಳು ವಿಧಿಸುವ ಶಿಕ್ಷೆ ಹೆಚ್ಚಿನ ಸಂದರ್ಭಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬರುವುದೇ ಇಲ್ಲ. ಅಪಹರಣಕಾರರು ಶಿಕ್ಷೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ವಾತಾವರಣ ನಿರ್ಮಾಣ ಆಗಬೇಕು. ಈ ವಿಷಯದಲ್ಲಿ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಕೆಲಸವೂ ಆಗಬೇಕು. ಶಾಲಾ ಕಾಲೇಜು ಆಡಳಿತ ಮಂಡಳಿಗಳು, ಸಾರ್ವಜನಿಕ ಸಂಘ ಸಂಸ್ಥೆಗಳು ಒಂದಾಗಿ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಇಲ್ಲವಾದರೆ ಅಮಾಯಕರು ಬಲಿಯಾಗುತ್ತಲೇ ಇರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry