ಆಚಾರ್ಯರಿಲ್ಲದೇ ಹೇಗೆ ಬಜೆಟ್ ಮಂಡಿಸಲಿ

7

ಆಚಾರ್ಯರಿಲ್ಲದೇ ಹೇಗೆ ಬಜೆಟ್ ಮಂಡಿಸಲಿ

Published:
Updated:
ಆಚಾರ್ಯರಿಲ್ಲದೇ ಹೇಗೆ ಬಜೆಟ್ ಮಂಡಿಸಲಿ

ಉಡುಪಿ: ಪಂಚಭೂತಗಳಲ್ಲಿ ಲೀನರಾದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ಅವರ ನಿಧನಕ್ಕೆ ಬಿಜೆಪಿ ರಾಷ್ಟ್ರೀಯ ಮುಖಂಡರೂ, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ, ಸಂಪುಟದ ಹಲವು ಸಚಿವರು, ಜನಸಾಮಾನ್ಯರು ಬುಧವಾರ ಬೆಳಿಗ್ಗೆ  ನಗರದ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಗುಣಗಾನ ಮಾಡಿದರು.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಆಚಾರ್ಯ ಜತೆಗಿನ ಒಡನಾಟ ಸ್ಮರಿಸಿ ಕಣ್ಣೀರಾದರು. `ಅವರಿಲ್ಲದೇ ನಾನು ಹೇಗೆ ನನ್ನ ಚೊಚ್ಚಲ ಬಜೆಟ್~ ಮಂಡಿಸಲಿ ಎಂದು ಗದ್ಗದಿತರಾದರು.`ತನ್ನ ಜೀವನದುದ್ದಕ್ಕೂ ಯಾವುದೇ ಮುಚ್ಚುಮರೆ ಇಲ್ಲದೇ, ವ್ಯಂಗ್ಯವಿಲ್ಲದೇ ಪಾರದರ್ಶಕ ಜೀವನ ನಡೆಸಿ ತೆರೆದ ಪುಸ್ತಕದಂತೆ ನಿಷ್ಕಳಂಕವಾಗಿ ಬದುಕಿದರು. ಸರಳತೆಯಲ್ಲಿ ಅತ್ಯಂತ ಸರಳ ವ್ಯಕ್ತಿ ಆಚಾರ್ಯರು. ಕೋಪ ಎನ್ನುವುದು ಅವರ ಪದಕೋಶದಲ್ಲಿ ಇರಲಿಲ್ಲ. ವಿರೋಧಿಗಳೊಂದಿಗೆ ಕೂಡ ವಿಶ್ವಾಸದ ರಾಜಕಾರಣ ಮಾಡಿದ್ದರು.

ದ್ವೇಷದ ರಾಜಕಾರಣ ಎನ್ನುವ ಮಾತು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಅವರ ಬಳಿ ದ್ವೇಷವೇ ಇರಲಿಲ್ಲ ಎಂಬುದು ನಮಗೆಲ್ಲ ಅಚ್ಚರಿಯಾಗಿ ಕಾಣುತ್ತಿದೆ. ಸರ್ಕಾರ ಹಲವು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿದ್ದ ಸಂದರ್ಭದಲ್ಲಿ ಆಚಾರ್ಯ ಅವರು ನಮಗೆ ಮಾರ್ಗದರ್ಶಕರಾಗಿದ್ದರು~ ಎಂದು ಸ್ಮರಿಸಿದರು.ಆತಂಕದಲ್ಲಿದ್ದೇನೆ: `ವಿಶೇಷವಾಗಿ ಡಾ.ಆಚಾರ್ಯ ಅವರ ಆಶೀರ್ವಾದ ನನ್ನ ಮೇಲಿತ್ತು. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಾರಂಭದ 15 ದಿನಗಳಲ್ಲಿ ಆಚಾರ್ಯರು ನನಗೆ ಎಲ್ಲ ಇಲಾಖೆಗಳ ಕುರಿತು ಪಟ್ಟಿಮಾಡಿಕೊಟ್ಟಿದ್ದರು. ಯಾವ ಇಲಾಖೆಯಲ್ಲಿ ಯಾವ ಕೆಲಸವಾಗಬೇಕು ಎನ್ನುವ ಬಗ್ಗೆ ಮಾರ್ಗದರ್ಶನ ಮಾಡಿದ್ದರು~ ಎಂದರು.`ಇಷ್ಟು ದಿನಗಳಲ್ಲಿ ನಾನು ನೂರಾರು ಆತಂಕದ ಕ್ಷಣಗಳನ್ನು ಎದುರಿಸಿದ್ದೇನೆ. ಮುಂದಿನ ತಿಂಗಳು ಬಜೆಟ್ ಮಂಡಿಸುವ ಬಗ್ಗೆ ನಾನು ಈಗ ಕೂಡ ತುಂಬಾ ಆತಂಕದಲ್ಲಿದ್ದೇನೆ. ರಾಜ್ಯದಲ್ಲಿ ಆಚಾರ್ಯ ಅವರಂತಹ ದೊಡ್ಡ ಆರ್ಥಿಕ ತಜ್ಞ ಇಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ಅವರಿಂದ ಸಲಹೆ ಸಹಕಾರ ಪಡೆಯಲು ನಾನು ಬಯಸಿದ್ದೆ. ಅದಕ್ಕಾಗಿಯೇ ಅವರಿಗೆ, ಆಚಾರ್ಯರೇ ನೀವು 10 ದಿನ ವಿಶ್ರಾಂತಿ ತೆಗೆದುಕೊಳ್ಳಬೇಕು. ಬಳಿಕ 15 ದಿನ ನಿಮಗೆ ವಿಶ್ರಾಂತಿ ಇಲ್ಲ ನನ್ನೊಂದಿಗೆ ಕುಳಿತು ಬಜೆಟ್ ಬಗ್ಗೆ ಸಮಗ್ರ ಮಾರ್ಗದರ್ಶನ ಮಾಡಿಕೊಡಬೇಕು ಎಂದಿದ್ದೆ. ಅದಕ್ಕೆ -ನೀವೇನೂ ಯೋಚನೆ ಮಾಡಬೇಡಿ, ಒಳ್ಳೆಯ ಬಜೆಟ್ ಕೊಡೋಣ, ನಿಮ್ಮಂದಿಗೆ 15 ದಿನ ನಾನು ಇರುತ್ತೇನೆ-ಎಂದು ಭರವಸೆ ನೀಡಿದ್ದರು~ ಎಂದರು.`10 ದಿನ ಸದಾನಂದಗೌಡರೊಂದಿಗೆ ಇದ್ದು ಬಜೆಟ್ ಸಿದ್ಧಪಡಿಸಲು ನೆರವಾಗಬೇಕಿದೆ~ ಎಂದು ಬೆಂಗಳೂರಿಗೆ ತೆರಳುವ ಮುನ್ನ ಮಂಗಳವಾರ ಬೆಳಿಗ್ಗೆ ಮಗಬ ಬಳಿಯೂ ಹೇಳಿದ್ದರಂತೆ. ಹೀಗೆ ಹೇಳಿದ ಆಚಾರ್ಯರೇ ಈಗ ನಮ್ಮಂದಿಗೆ ಇಲ್ಲ. ಆಚಾರ್ಯರಿಲ್ಲದೇ ನಾನು  ಹೇಗೆ ಬಜೆಟ್ ಮಂಡಿಸಲಿ?~ ಎಂದ ಸದಾನಂದ ಗೌಡ ಅವರು ಉಮ್ಮಳಿಸಿ ಬಂದ ದುಃಖ ತಡೆಯಲಾಗದೆ ಅಳುತ್ತಾ, ಕಣ್ಣೊರೆಸಿಕೊಳ್ಳುತ್ತ ಮಾತು ಮುಗಿಸಿದರು.ಬಜೆಟ್ ಯಶಸ್ಸಿನ ಹಿಂದೆ ಆಚಾರ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, `ಸಮಾಜಕ್ಕಾಗಿ ಬದುಕುವುದು ಹೇಗೆ ಎಂದು ಆಚಾರ್ಯರಿಂದ ಕಲಿಯಬೇಕು. ಕಳೆದ ಆರು ವರ್ಷಗಳಲ್ಲಿ ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿ ಯಶಸ್ವಿಯಾಗಿದ್ದರು. ನಾನು ವಿಧಾನಸಭೆಯಲ್ಲಿ ಮಾತನಾಡುವಾಗ ಅಂಕಿ-ಅಂಶ ಬರೆದುಕೊಡುತ್ತಿದ್ದರು. ನನ್ನ ಬಜೆಟ್‌ನ ಯಶಸ್ಸಿಗೆ ಆಚಾರ್ಯರೇ ಕಾರಣರಾಗಿದ್ದರು~ ಎಂದರು.`ಸ್ವಾರ್ಥ ಎಲ್ಲಡೆ ಕಾಣುತ್ತಿರುವ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕರಾಗಿರುವುದು ಸುಲಭವಲ್ಲ. ಆದರೆ ಆಚಾರ್ಯ ಅಂತಹ ಬದುಕು ನಡೆಸಿದರು~ ಎಂದು ಸ್ಮರಿಸಿದರು.ಮಾಜಿ ಸಚಿವ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಮಾತನಾಡಿ, `ನಮ್ಮಲ್ಲಿನ ಬಹುತೇಕರ ಕೊರತೆ ವಿಧಾನಮಂಡಲದಲ್ಲಿನ ಪುಸ್ತಕ ಭಂಡಾರಕ್ಕೆ ಕಾಲಿಡದೇ ಇರುವುದು. ಆದರೆ ಆಚಾರ್ಯರು ಅಲ್ಲಿನ ಪುಸ್ತಕಗಳನ್ನು ಅಧ್ಯಯನ ಮಾಡಿದ್ದರು~ ಎಂದು ಸ್ಮರಿಸಿದರು.`ವಿರೋಧ ಪಕ್ಷದವರು ಅವರನ್ನು ಕಾಣಲು ಬಂದರೂ ಕೂಡ ಉತ್ತಮವಾಗಿ ನಡೆಸಿಕೊಳ್ಳುತ್ತಿದ್ದರು. ನಮ್ಮಲ್ಲಿ ಕೇವಲ ರಾಜಕೀಯ ಭಿನ್ನಾಭಿಪ್ರಾಯವಿತ್ತೇ ಹೊರತೂ ವೈಯಕ್ತಿಕ ದ್ವೇಷವಿರಲಿಲ್ಲ. ಆಚಾರ್ಯರು ಬದುಕಿದ್ದಾಗಲೂ ನಾವು ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿದ್ದೇವೆ~ ಎಂದರು.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, `ಅಸೀಮ ಜೀವನೋತ್ಸಾಹದ ವ್ಯಕ್ತಿಯಾಗಿದ್ದ ಆಚಾರ್ಯ ಅವರು ಕಲುಷಿತ ವಾತಾವರಣದ ರಾಜಕಾರಣ ತಿಳಿಗೊಳಿಸಲು ಇನ್ನಷ್ಟು ದಿನ ಇರಬೇಕಿತ್ತು~ ಎಂದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, `ಆಚಾರ್ಯ ಅವರು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದಿರುವ ಆಚಾರ, ವಿಚಾರ, ತತ್ವಸಿದ್ಧಾಂತಗಳಿಗೆ ಯಾವತ್ತಿಗೂ ಬೆಲೆ ಇದೆ. ಅವರ ವಿಚಾರಗಳನ್ನು ಮನೆಮನೆಗೂ ತಲುಪಿಸುವ ಕೆಲಸ ಆಗಬೇಕು. ಆಚಾರ್ಯರ ನೆನಪುಗಳು ನಿರಂತರವಾಗಿ ಉಳಿಸಲು ಕಾರ್ಯತತ್ಪರರಾಗಬೇಕು~ ಎಂದರು.ಬಿಜೆಪಿಯ ಹಿರಿಯ ಮುಖಂಡ ಸೋಮಶೇಖರ್ ಭಟ್ ಮಾತನಾಡಿ, `45 ವರ್ಷಗಳಿಂದ ನಾನು ಅವರ ಹಿರಿಯ ಸಹೋದರನಂತೆ ನೆರಳಾಗಿ ಕೆಲಸ ಮಾಡಿದ್ದೆ ಎಂದರು.ನಗರದ ಚರ್ಚ್‌ನ ಧರ್ಮಗುರು ಫಾ.ಮ್ಯಾಥ್ಯೂವಾಜ್, ಮೌಲಾನಾ ಅಬ್ದುಲ್ ಅಜೀಜ್ ದಾರಿಮಿ ಕಲ್ಲೇಗ ನುಡಿನಮನ ಸಲ್ಲಿಸಿದರು. ಬಳಿಕ ಸಾರ್ವಜನಿಕರು ಆಚಾರ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಸಂಸದ ನಳಿನ್‌ಕುಮಾರ್ ಕಟೀಲ್,  ವಿಧಾನಸಭಾ ಉಪಸಭಾಧ್ಯಕ್ಷ  ಯೋಗೀಶ್ ಭಟ್, ಕಲ್ಲಡ್ಕ ಪ್ರಭಾಕರ ಭಟ್, ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪುಜಾರಿ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಹಿರಿಯ ಪತ್ರಕರ್ತ ಎಂ.ವಿ.ಕಾಮತ್, ರಾಮದಾಸ್ ಪೈ, ಜಿ.ಶಂಕರ್, ಉದಯ್‌ಕುಮಾರ್ ಶೆಟ್ಟಿ, ಸುನೀಲ್ ಕುಮಾರ್, ಗುಜ್ಜಾಡಿ ಪ್ರಭಾಕರ ನಾಯಕ್, ಕಿರಣ್ ಕುಮಾರ್, ಜಿಲ್ಲಾಧಿಕಾರಿ ಎಂ.ಟಿ.ರೇಜು, ಧರ್ಮದರ್ಶಿ ವಿಜಯ ಬಲ್ಲಾಳ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry