ಆಚಾರ್ಯ ನೆನಪು ಜಿಲ್ಲೆಯಲ್ಲೂ ಅಜರಾಮರ....

7

ಆಚಾರ್ಯ ನೆನಪು ಜಿಲ್ಲೆಯಲ್ಲೂ ಅಜರಾಮರ....

Published:
Updated:

ಚಿಕ್ಕಮಗಳೂರು:ಸರಳ, ಸಜ್ಜನಿಕೆಯ ರಾಜಕಾರಣಿ ಎನಿಸಿಕೊಂಡಿದ್ದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನಿಧನಕ್ಕೆ ಬಿಜೆಪಿ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.1986ರಿಂದ 1995ರವರೆಗೆ ಜಿಲ್ಲೆಯಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡು, ಪಕ್ಷವನ್ನು ಸಂಘಟಿಸಿದ್ದ ಅವರ ಚತುರತೆ ಮತ್ತು ಸಾಮರ್ಥ್ಯ ಸ್ಮರಿಸುವ ಕಾರ್ಯಕರ್ತರು, ಇಂದು ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರು ಗೆದ್ದುಬಂದಿದ್ದರೆ ಅದಕ್ಕೆ ಆಚಾರ್ಯರು ಹಾಕಿಕೊಟ್ಟ ಭದ್ರಬುನಾದಿಯೂ ಕಾರಣ ಎನ್ನುತ್ತಾರೆ.`ಆಚಾರ್ಯರು ಕಳಂಕರಹಿತ ರಾಜಕಾರಣಿ. ಅವರ ಸರಳತೆ, ವಿಷಯ ಜ್ಞಾನ, ಶಿಸ್ತು, ಸಂಯಮ ಎಲ್ಲರ ಗಮನ ಸೆಳೆಯುತ್ತಿತ್ತು. ಅವರಿಂದ ಪ್ರತಿಯೊಬ್ಬ ರಾಜಕಾರಣಿ ಕಲಿಯಬೇಕಾದುದು ಸಾಕಷ್ಟು ಇತ್ತು. ಅವರು ಕಲಾಪದಲ್ಲಿ ಮಂಡಿಸುತ್ತಿದ್ದ ವಿಷಯಗಳು ಗಂಭೀರವಾಗಿರುತ್ತಿದ್ದವು~ ಎಂದು ಸಂಸದ ಡಿ.ಬಿ.ಚಂದ್ರೇಗೌಡ ಪ್ರತಿಕ್ರಿಯಿಸಿದ್ದಾರೆ.ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ `ಆಚಾರ್ಯ ಅವರ ಕುಟುಂಬದೊಂದಿಗೆ ಆತ್ಮೀಯ ಸಂಬಂಧವಿತ್ತು. ಇತ್ತೀಚೆಗೆ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ವಿಶ್ರಾಂತಿ ಪಡೆಯುವಂತೆ ಹೇಳಿದರೂ ಕೇಳಲಿಲ್ಲ. ಅವರ ನಿಧನ ನೋವು ತಂದಿದೆ ಎಂದು ಸಂತಾಪ ವ್ಯಕ್ತಪಡಿಸಿದರು.`ದತ್ತಪೀಠ ಹೋರಾಟದಲ್ಲೂ ಪಾಲ್ಗೊಂಡು, ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು. ಮಿತಭಾಷಿ ಯಾಗಿದ್ದ ಅವರು ಆರ್ಥಿಕತೆ, ವಿಜ್ಞಾನ, ವೈದ್ಯಕೀಯ, ಇತಿಹಾಸ ಹೀಗೆ ಯಾವುದೇ ಕ್ಷೇತ್ರದ ಬಗ್ಗೆ ಅಧಿಕೃತವಾಗಿ ಮತನಾಡುತ್ತಿದ್ದರು ಎಂದು ಶಾಸಕ ಸಿ.ಟಿ.ರವಿ ಸ್ಮರಿಸಿದರು.ಶಾಸಕ ಡಿ.ಎನ್.ಜೀವರಾಜ್ ` ಆಚಾರ್ಯ ಅವರು ತೆಗೆದುಕೊಳ್ಳುತ್ತಿದ್ದ ಸಮರ್ಥ ನಿರ್ಧಾರ ಅನುಕರಣೀಯ ~ ಎಂದು ಪ್ರತಿಕ್ರಿಯಿಸಿದ್ದಾರೆ.ಬಿಜೆಪಿ ಸಂತಾಪ ಸೂಚಕ ಸಭೆ: ಬಿಜೆಪಿ ಹಿರಿಯ ನಾಯಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ನಿಧನಕ್ಕೆ ಬಿಜೆಪಿ ಜಿಲ್ಲಾ ಕಚೇರಿ ಪಾಂಚಜನ್ಯದಲ್ಲಿ ಮಂಗಳವಾರ ಸಂತಾಪ ಸಭೆ ನಡೆಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿ ಹಾಗೂ ನಗರಸಭೆ ಅಧ್ಯಕ್ಷ ಪ್ರೇಮ್ ಕುಮಾರ್, ಪಕ್ಷದ ಹಿರಿಯ ಮುತ್ಸದ್ದಿ, ಸಜ್ಜನ ರಾಜಕಾರಣಿ ಹಾಗೂ ಅಜಾತ ಶತ್ರು ಕಳೆದುಕೊಂಡಿರುವುದು ರಾಜ್ಯಕ್ಕೆ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದರು.ನಗರ ಘಟಕ ಅಧ್ಯಕ್ಷ ನಾರಾಯಣಗೌಡ, ತಾಲ್ಲೂಕು ಅಧ್ಯಕ್ಷ ಕನಕರಾಜ್, ತೆಂಗು ನಾರು ಮಂಡಳಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಸಿಡಿಎ ಅಧ್ಯಕ್ಷ ಬಿ.ರಾಜಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಜಯಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry