`ಆಚಾರ ಭ್ರಷ್ಟತೆಯೂ' ಭ್ರಷ್ಟಾಚಾರ- ಅಣ್ಣಾ

7

`ಆಚಾರ ಭ್ರಷ್ಟತೆಯೂ' ಭ್ರಷ್ಟಾಚಾರ- ಅಣ್ಣಾ

Published:
Updated:
`ಆಚಾರ ಭ್ರಷ್ಟತೆಯೂ' ಭ್ರಷ್ಟಾಚಾರ- ಅಣ್ಣಾ

ಬೀದರ್: `ನಿಮಗೆ ಆನಂದ, ಸುಖ ಬೇಕು ಎಂದಾದರೆ ಮೊದಲು ಅನ್ಯರು ಸುಖವಾಗಿ ಇರುವಂಥ ವಾತಾವರಣ ನಿರ್ಮಿಸಿ. ಭ್ರಷ್ಟಾಚಾರ ಎಂದರೆ ಕೇವಲ ಕಾನೂನುಬಾಹಿರವಾಗಿ ಹಣ ಪಡೆಯುವುದಷ್ಟೇ ಆಲ್ಲ. ಆಚಾರಗಳಲ್ಲಿ ಭ್ರಷ್ಟತೆಯೂ ಭ್ರಷ್ಟಾಚಾರ'. -ಭ್ರಷ್ಟಾಚಾರ ವಿರೋಧಿ ಜನಾಂದೋಲನದ ನೇತಾರ ಅಣ್ಣಾ ಹಜಾರೆ ಅವರ ವ್ಯಾಖ್ಯಾನ ಇದು.ಇಲ್ಲಿನ ಬಸವ ಸೇವಾ ಪ್ರತಿಷ್ಠಾನ ಆಯೋಜಿಸಿರುವ `ವಚನ ವಿಜಯೋತ್ಸವ'ದಲ್ಲಿ `ಗುರುಬಸವ ಪುರಸ್ಕಾರ' ಸ್ವೀಕರಿಸಲು ಭಾನುವಾರ ಆಗಮಿಸಿದ್ದ ಅವರು ಯುವಜನರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸುಮಾರು ಒಂದು ಗಂಟೆ ಮಾತನಾಡಿದರು.ಭ್ರಷ್ಟಾಚಾರದ ಪಿಡುಗು, ಅದರ ವಿರುದ್ಧ ಹೋರಾಟ, ಗ್ರಾಮಗಳ ಅಭಿವೃದ್ಧಿಯ ಮಹತ್ವವನ್ನು ಉಲ್ಲೇಖಿಸಿದ ಅವರು, `ಗಣರಾಜ್ಯ ವ್ಯವಸ್ಥೆಯಲ್ಲಿ ಮತದಾರರೇ ಮಾಲೀಕರು. ಇವರಿಗೆ ಈಗ ಅವಕಾಶ ಬಂದಿದೆ. ಬದಲಾವಣೆಯನ್ನು ತರಲು ಚುನಾವಣೆಯೇ ಅಸ್ತ್ರ. ಬದಲಾವಣೆಯ ರೀತಿಯನ್ನು  ನಿರ್ಧರಿಸಿ' ಎಂದು ಕರೆ ನೀಡಿದರು.`ಚುನಾವಣೆ ಘೋಷಣೆಯಾದೊಡನೆ ಬದಲಾವಣೆಗಾಗಿ ರಾಮಲೀಲಾ ಮೈದಾನದಲ್ಲಿ ಮತ್ತೆ ಧರಣಿ ಕೂರುತ್ತೇನೆ. ನೀವು, ರಾಷ್ಟ್ರಧ್ವಜ ಹಿಡಿದು ರಸ್ತೆಗೆ ಬನ್ನಿ. ಒಟ್ಟಿಗೇ ಸೇರಿ ಕೈಜೋಡಿಸೋಣ. ಅಣ್ಣಾ ನಿಮ್ಮ ಹಿಂದೆ ನಾವಿದ್ದೇವೆ ಎಂದು ಘೋಷಿಸಿದರೆ ಸಾಲದು. ಹಿಂದೆ ನೋಡಿದರೆ ಒಬ್ಬರೂ ಇರುವುದಿಲ್ಲ' ಎಂದು ಬೇಸರ ಸೂಚಿಸಿದರು.`ಭ್ರಷ್ಟಾಚಾರ ತಡೆಯುವ ಗುರಿ ಸಾಧನೆ ಒಬ್ಬ ಅಣ್ಣಾ ಹಜಾರೆಯಿಂದ ಸಾಧ್ಯವಾಗದು. ನನ್ನೊಂದಿಗೆ ಬರುವವರು, ಜೈಲಿಗೆ ಹೋಗಲು ಸಿದ್ಧ ಇರುವವರು ನಿಮ್ಮ ವಿಳಾಸವನ್ನು ಎಸ್‌ಎಂಎಸ್ ಮಾಡಿ. ನಿಮ್ಮ ಜೊತೆಗೆ ನಾನೇ ಮಾತನಾಡುತ್ತೇನೆ. ಒಟ್ಟಿಗೆ ಹೋರಾಟ ನಡೆಸೋಣ' ಎಂದು ಅವರು ಮೊಬೈಲ್ ದೂರವಾಣಿ ಸಂಖ್ಯೆಯನ್ನು (099235 99234) ನೀಡಿದರು. `ಇದಕ್ಕೆ ಕರೆ ಮಾಡಬೇಡಿ. ಕೇವಲ ಸಂದೇಶ ಕಳುಹಿಸಿ. ನಾನೇ ಮಾತನಾಡುತ್ತೇನೆ' ಎಂದು ಹೇಳಿದರು.ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು ಇರಬೇಕು. ಇದಕ್ಕಾಗಿ ಚುನಾವಣೆ ವ್ಯವಸ್ಥೆಯಲ್ಲಿಯೇ ಬದಲಾವಣೆ ಇರಬೇಕು ಎಂದು ಪ್ರತಿಪಾದಿಸಿದ ಅವರು, ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಹೆಸರಿನ ಜೊತೆಗೆ ಮತಪತ್ರದಲ್ಲಿ `ಇವರು ಯಾರೂ ಇಷ್ಟವಿಲ್ಲ' ಎಂಬುದು ಇರಬೇಕು. ಕಣದಲ್ಲಿರುವ ಅಭ್ಯರ್ಥಿಗಳು ಇಷ್ಟವಿಲ್ಲದಿದ್ದರೆ ಈ ಕಾಲಂನಲ್ಲಿ ಮತ ಹಾಕಲು ಅವಕಾಶ ಇರಬೇಕು. ಇದೇ ಅಂಶಕ್ಕೆ ಹೆಚ್ಚು ಮತಗಳು ಬಿದ್ದರೆ, ಆಗ ಚುನಾವಣೆ ರದ್ದು ಮಾಡಿ ಮತ್ತೆ ಚುನಾವಣೆ ನಡೆಯಬೇಕು. ಆಗ, ಈ ಮೊದಲು ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮತ್ತೆ ಸ್ಪರ್ಧಿಸುವ ಅವಕಾಶ ಇರಬಾರದು. ಇಂಥ ಬದಲಾವಣೆ ತರಬೇಕು. ಆಗಷ್ಟೇ ಚುನಾವಣೆ ವ್ಯವಸ್ಥೆಯು ಸುಧಾರಿಸಲಿದೆ ಎಂದರು.

ಅಧ್ಯಕ್ಷತೆಯನ್ನು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ವಹಿಸಿದ್ದರು.

ಆಸ್ತಿ ಇಲ್ಲದೇ ಆನಂದ

`ನನಗೆ ಆಸ್ತಿ ಇಲ್ಲ. ಹೊದಿಯಲು ಹೊದಿಕೆ, ಮಲಗಲು ಮಂದಿರ ಇದೆ. ಆದರೂ ಆನಂದವಾಗಿದ್ದೇನೆ. ಸಮಾಜವನ್ನು ಆನಂದವಾಗಿ ಇಡುವುದರಲ್ಲೇ ಸುಖವಿದೆ. ಇಲ್ಲವಾದರೆ, ಹಣ, ಮಹಲು ಎಂದು ಹೋದರೆ ಹವಾನಿಯಂತ್ರಿತ ಕೊಠಡಿಯಲ್ಲಿ ಇದ್ದರೂ ನಿದ್ರೆ ಮಾಡಲು ಮಾತ್ರೆ ಸೇವಿಸಬೇಕಾಗುತ್ತದೆ'.

ಅಣ್ಣಾ ಹಜಾರೆ`ಅಣ್ಣಾ ಹತ್ಯೆಗೆ 30 ಲಕ್ಷ ಸುಪಾರಿ'

ಬೀದರ್: `ನನ್ನ ಕೊಲೆಗೆ ಎರಡು ಬಾರಿ 30 ಲಕ್ಷ ರೂಪಾಯಿಗಳ ಸುಪಾರಿ ನೀಡಲಾಗಿತ್ತು. ಇದಕ್ಕಾಗಿ ಮಧ್ಯಪ್ರದೇಶದಿಂದ ಹಂತಕರೂ ಬಂದಿದ್ದರು. ಆದರೆ, ಬಂದವರು ನನ್ನನ್ನು ಕೊಲ್ಲುವುದಿಲ್ಲ ಎಂದು ಹೋದರು'.ಅಣ್ಣಾ ಹಜಾರೆ ಅವರು ಈ ಮಾತು ಹೇಳಿ ತಾವು ಕೈಗೊಂಡಿದ್ದ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹತ್ತಿಕ್ಕುವ ಯತ್ನದ ವಿವರ ನೀಡಿದರು.`ಒಂದಲ್ಲ, ಎರಡು ಬಾರಿ 30 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಆದರೆ, ನಾವು ಅಣ್ಣಾ ಅವರನ್ನು ಹತ್ಯೆ ಮಾಡುವುದಿಲ್ಲ. ಬೇಕಿದ್ದರೆ ಅವರೊಂದಿಗೆ ಇರುವವರಿಗೆ ಹೊಡೆಯುತ್ತೇವೆ ಎಂದು ಹೇಳಿಹೋದರು' ಎಂದರು. ಆದರೆ, ಹೀಗೆ ಸುಪಾರಿಯನ್ನು ನೀಡಿದ್ದವರು ಯಾರು ಎಂಬುದನ್ನು ಅಣ್ಣಾ ಬಹಿರಂಗಪಡಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry