ಆಜ್ ಕಾ ಅಭಿಮನ್ಯು!

7

ಆಜ್ ಕಾ ಅಭಿಮನ್ಯು!

Published:
Updated:

ಅಪೂರ್ವ ದೇಹಸಿರಿಯ ಸಪೂರ ಸುಂದರಿ

ನಿದ್ದೆಗೆಟ್ಟ ಪಡ್ಡೆಗಳ ಕನಸಿನ ಕಿನ್ನರಿ

ಬಳ್ಳಿ ನಡುವಿನ ಬಳುಕೇಶ್ವರಿ

ಹೇಗಿದ್ದವಳು ಹೇಗಾದಳು...ಮಗುವ ಹೆತ್ತಳು, ದಪ್ಪಗಾದಳು

ಅಭಿಷೇಕನ ಅರಗಿಣಿ

ಅಲ್ಪವಸ್ತ್ರ ಅವತಾರಿಣಿ

`ಜೀರೋ~ ಫಿಗರಿನ ಸಾಮ್ರೋಟಿಣಿ

ಹೇಗಿದ್ದವಳು ಹೇಗಾದಳು...ದಪ್ಪಗಾದಳು, ತೆಪ್ಪಗಾದಳು

`ಮಹನೀಯರೆ ಮತ್ತು ಮಹಿಳೆಯರೆ, ಬಿಸಿ ಬಿಸಿ ಬೆಣ್ಣೆ ದೋಸೆ ಜೊತೆಗೆ ಬ್ರೇಕಿಂಗ್ ನ್ಯೂಸ್! ಜಗದೇಕ ಸುಂದರಿ ಐಶ್ವರ್ಯಾ ರೈ ಬೋಂಡಾ  ತರ ಊದಿಕೊಂಡಿರೋ ಶಾಕಿಂಗ್ ನ್ಯೂಸ್! ಓದಿರಿ ತಿನ್ನಿರಿ, ತಿನ್ನಿರಿ ಓದಿರಿ......~ ಎನ್ನುತ್ತ ಬೆಣ್ಣೆ ದೋಸೆ ಪ್ಯಾಕೆಟ್‌ಗಳೊಂದಿಗೆ ಹರಟೆಕಟ್ಟೆಗೆ ಬಂದ ತೆಪರೇಸಿ.`ಲೇ ತೆಪರ, ಐಶ್ವರ್ಯ ರೈ ದಪ್ಪಗಾಗಿರೋದೂ ಒಂದು ಬ್ರೇಕಿಂಗ್ ನ್ಯೂಸಾ? ನಿನ್ತೆಲಿ.~ ದುಬ್ಬೀರ ಆಕ್ಷೇಪಿಸಿದ.`ಅಬ್ಜೆಕ್ಷನ್! ನೋಡು ಯಡ್ಯೂರಪ್ಪ ಅವರ‌್ನ ಯಡ್ಡಿ ಅಂತ ಕರೆದಂಗೆ ನನ್ನ ಯಾರಾದ್ರೂ ತೆಪರ ಗಿಪರ ಅಂತ ಕರೆದ್ರೆ ಸುಮ್ನಿರಲ್ಲ. ಯಡ್ಯೂರಪ್ಪ ಮೊನ್ನೆ ಪೇಪರ್‌ನೋರಿಗೆ ಬೆಂಡೆತ್ತಿದ್ದು ಗೊತ್ತು ತಾನೆ? ನಮ್ಮಪ್ಪ ನಂಗೆ ತೆಪರೇಸಿ ಅಂತ ಮುದ್ದಾದ ಹೆಸರಿಟ್ಟಿದ್ದಾರೆ. ಹಾಗಂತ ಬಾಯ್ತುಂಬ ಕರೀರಿ.  ಕರಿಯೋಕಾಗದಿದ್ರೆ ದಾಸಯ್ಯ ಅನ್ನಿ.  ನೋ ಪ್ರಾಬ್ಲಂ...~ ತೆಪರೇಸಿ ಇದ್ದಕ್ಕಿದ್ದಂತೆ ಗರಂ ಆದ.`ಓಕೆ ದಾಸಯ್ಯನವರೇ ನೀವು ಮಾತ್ರ ನನ್ನ ಗುಡ್ಡೆ ಅಂತ, ಯಬಡೇಶಿನ ಯಬಡ ಅಂತ ಕರೀಬಹುದೋ?~ ಗುಡ್ಡೆ ನಗುತ್ತ ಪ್ರಶ್ನಿಸಿದ.ಅದೆಲ್ಲ ನಂಗೊತ್ತಿಲ್ಲ.  ತೆಪರ ಅಂದ್ರೆ ನನ್ನ ಮರ‌್ಯಾದೆ ಹೋಗುತ್ತೆ, ನಂಗೆ ಇಷ್ಟ ಆಗಲ್ಲ~ ವಾದಿಸಿದ ತೆಪರೇಸಿ.`ಆಯ್ತು ಬಿಡೋ ತೆಪರೇಸಿ, ಅದೇನೋ ಬ್ರೇಕಿಂಗ್ ನ್ಯೂಸ್ ಅಂತಿದ್ಯಲ್ಲ.... ಹೆಣ್ಮಕ್ಕಳು ಮದುವೆ ಆದ ಮೇಲೆ ದಪ್ಪ ಆಗೇ ಆಗ್ತಾರಪ. ಐಶ್ವರ್ಯ ರೈ ಆಗೋದ್ರಲ್ಲೇನು ವಿಶೇಷ?~ ಮಿಸ್ಸಮ್ಮ ಪ್ರಶ್ನಿಸಿದಳು.`ಈಗ ನಮ್ಮ ದುಬ್ಬೀರ ಮದುವೆಯಾದ ಹೊಸತರಲ್ಲಿ ಅವನ ಹೆಂಡ್ತಿ ಮೇಲೆ ದಿನಕ್ಕೊಂದು ಕವಿತೆ ಬರೀತಿದ್ದ. ಈಗ ಅವನ ಹೆಂಡ್ತಿ ಮೇಲೆ ದೊಡ್ಡ ಕಾದಂಬರೀನೇ ಬರೀಬಹುದೇನಪ, ಅಷ್ಟು ದಪ್ಪ ಆಗಿದಾಳೆ. ಏನ್ಮಾಡಾಕಾಗುತ್ತೆ?~ ಗುಡ್ಡೆ ಕಿಚಾಯಿಸಿದಾಗ ದುಬ್ಬೀರನಿಗೆ ಸಿಟ್ಟು ಬಂತು. `ಲೇ ಗುಡ್ಡೆ, ಬೇಡ ನೋಡು...~ ಎಂದ.`ಸ್ಸಾರಿ ಸ್ಸಾರಿ~ ಎಂದ ಗುಡ್ಡೆ, `ಮಿಸ್ಸಮ್ಮೋ, ನೀನು ಹೇಳೋ ಪ್ರಕಾರ ಮದುವೆ ಆದೋರು ದಪ್ಪ ಆಗ್ತಾರೆ ಅಲ್ವಾ? ಆದ್ರೆ ನಮ್ಮ ಕುಮಾರಿ ಜಯಲಲಿತಾ ಯಾಕೆ ಅಷ್ಟು ದಪ್ಪ?~ ಎಂದ.`ಹೋಗಿ ಅವರ‌್ನೇ ಕೇಳು, ನಿನ್ನ ಗ್ರಹಚಾರ ಬಿಡಿಸ್ತಾರೆ. ಹಂಗೆಲ್ಲ ದೊಡ್ಡೋರ ಬಗ್ಗೆ ಮಾತಾಡಬಾರದು, ತರ‌್ಲೆ...~ ಮಿಸ್ಸಮ್ಮ ಗದರಿದಳು.`ದೊಡ್ಡೋರ ಸಣ್ಣ ವಿಷಯಗಳೇ ಬ್ರೇಕಿಂಗ್ ನ್ಯೂಸ್ ಆಗೋದು ಮಿಸ್ಸಮ್ಮ, ಈಗ ಐಶ್ವರ್ಯಾ ರೈ ಮಗು ಹುಟ್ಟಿದ ಕೂಡ್ಲೆ ಅಳ್ತಂತೆ. ಹಾಗಂತ ಬ್ರೇಕಿಂಗ್ ನ್ಯೂಸ್ ತೋರಿಸ್ತಿದ್ರು. ಅಲೆ ಇವ್ನ, ಜಗತ್ತಿನಲ್ಲಿ ಹುಟ್ಟಿದ ಮಕ್ಕಳೆಲ್ಲ ಅತ್ತೇ ಅಳ್ತಾವಪ.  ಅದೂ ಒಂದು ಬ್ರೇಕಾ? ಒಂದು ಪಕ್ಷ ಮಗು `ಅಮ್ಮೋ~ ಅಂತ ಅತ್ತಿದ್ರೆ, `ತಾತಾ~ ಅಂತ ಅಮಿತಾಬ್ ಬಚ್ಚನ್‌ನ ಕರೆದಿದ್ರೆ ಅದು ಬ್ರೇಕಿಂಗ್ ನ್ಯೂಸು.  ಈಗ ನೋಡು ಐಶ್ವರ್ಯ ರೈ ದಪ್ಪಗಾಗಿರೋದನ್ನ ಇಂಟರ್‌ನ್ಯಾಶನಲ್ ನ್ಯೂಸ್ ತರ ತೋರಿಸ್ತಿದಾರೆ.  ನಾಳೆ ಮತ್ತೆ ತೆಳ್ಳಗಾದ್ರೆ ಅದೂ ಬ್ರೇಕಿಂಗ್ ನ್ಯೂಸೇ....~ ಎಂದ ಗುಡ್ಡೆ.`ಹೋಗ್ಲಿ, ಈಗ ಐಶ್ವರ್ಯನೂ ಜಯಲಲಿತಮ್ಮನೂ ತೆಳ್ಳಗಾಗೋಕೆ ಏನು ಮಾಡಬೇಕು ಹೇಳಲೆ~ ದುಬ್ಬೀರ ಕೇಳಿದ.`ಏನ್ ಮಾಡಬೇಕಾ? ಊಟ ಬಿಟ್ಟು ಬರೀ ನೀರು ಕುಡೀಬೇಕು ಅಷ್ಟೆ.~

`ಓ ಅದ್ಕೇ ಏನೋ ಜಯಲಲಿತ ನೀರು ಬಿಡಿ, ನೀರು ಬಿಡಿ ಅಂತ ಸದಾನಂದಗೌಡ್ರ ಮೇಲೆ ಗಲಾಟೆ ಮಾಡ್ತಿದ್ದು. ಆದ್ರೆ ಗೌಡ್ರು ಜಯಲಲಿತಾರಿಗೆ ನೀರು ಬಿಡೋ ಬದ್ಲು ಯಡ್ಯೂರಪ್ಪ ಅವರಿಗೆ ನೀರು ಕುಡಿಸ್ತಾ ಕುಂತಿದಾರೆ... ಒಳ್ಳೆ ಮಜ....~ ಎಂದ ತೆಪರೇಸಿ.

`ಈಗ ಯಡ್ಯೂರಪ್ಪ ಕೇಸ್‌ನ ಸಿಬಿಐಗೆ ಬೇರೆ ವಹಿಸಿರೋದು ಗೌಡ್ರಿಗೆ ಹಾಸಿಗೆ ಹಾಸಿ ಕೊಟ್ಟಂಗಾತು ಅಲ್ವಾ?~~`ಆದ್ರೆ ಯಡ್ಯೂರಪ್ಪ ನಾನು ಈ ಚಕ್ರವ್ಯೆಹದಲ್ಲಿ ಗೆದ್ದು ಬರ‌್ತೀನಿ, ಮಹಾಭಾರತದ ಅಭಿಮನ್ಯು ಚಕ್ರವ್ಯೆಹದಲ್ಲಿ ಸೋತಿರಬಹುದು. ಆದ್ರೆ ನಾನು ಹೆದರೋದಿಲ್ಲ, ಗೆದ್ದು ಬರ‌್ತೀನಿ ಅಂದ್ರಂತೆ?~`ಪಾಪ ಬರ‌್ಲಿ ಬಿಡು, ಒಂದು ವೇಳೆ ಯಡ್ಯೂರಪ್ಪ ಈ ಚಕ್ರವ್ಯೆಹ ಭೇದಿಸಿ ಗೆದ್ದು ಬಂದ್ರೆ ಅವರನ್ನ ಏನಂತ ಕರೀಬಹುದು?~`ಆಜ್ ಕಾ ಅಭಿಮನ್ಯು~ ಅಂತ ಕರೆದು ಶಭಾಶ್‌ಗಿರಿ ಕೊಡಬಹುದು ನೋಡ್ರಪ್ಪ~ ಗುಡ್ಡೆ ನಗುತ್ತ ಹೇಳಿದ.`ಅದಿರ‌್ಲಿ, `ಉತ್ತರಕ್ಕಾಗಿ ಉಪವಾಸ~ ಮಾಡಿದ ಶ್ರೀರಾಮುಲು ಉತ್ತರ ಸಿಗ್ಲಿಲ್ಲ ಅಂತ ಈಗ `ಪ್ರಶ್ನೆಗಳಿಗಾಗಿ ಪಾದಯಾತ್ರೆ~ ಮಾಡ್ತಿದಾರಲ್ಲ, ಎಲ್ಲಿಗೆ ಬಂತು ಅದು?~ ದುಬ್ಬೀರನ ಪ್ರಶ್ನೆ.`ಅಯ್ಯೋ ಪಾದಯಾತ್ರೆ ಎಲ್ಲಿಗಾದ್ರು ಬರಲಿ, ನಮ್ಮ ಬಿಳಿಗಿರಿ ರಂಗನ ಪಾದಗಳೇ ಮಾಯ ಆಗಿದಾವಂತಲ್ಲ ಇದಕ್ಕೇನು ಹೇಳ್ತೀರಿ?~ ಮಿಸ್ಸಮ್ಮ ಆತಂಕ ವ್ಯಕ್ತಪಡಿಸಿದಳು.

`ಆ ಪಾದಗಳ ಕತೆ ಹಾಗಿರ‌್ಲಿ, ರಾಮುಲು ಪಾದಯಾತ್ರೇಲಿ ಬಿಸಿಲಲ್ಲಿ ನಡೆದೂ ನಡೆದೂ ನಮ್ಮ ಹೀರೋಯಿನ್ ರಕ್ಷಿತಾ ಕಪ್ಪಗಾಗಿದ್ದು ಯಾವ ಬ್ರೇಕಿಂಗ್ ನ್ಯೂಸಲ್ಲೂ ಬರ‌್ಲೇ ಇಲ್ವಲ್ಲ?~ ತೆಪರೇಸಿ ಪ್ರಶ್ನಿಸಿದ. ತಕ್ಷಣ ಗುಡ್ಡೆ `ಇದರ ಮೇಲೊಂದು ಚುಟುಕು ಹೇಳ್ಲಾ?~ ಎನ್ನುತ್ತ ಶುರು ಮಾಡಿಯೇ ಬಿಟ್ಟ.... ಮಗುವನ್ನು ಹಡೆದು

 ದಪ್ಪಗಾದಳು ಐಶ್ವರ್ಯ

 ರಾಮುಲು ಜೊತೆ ನಡೆದು

 ಕಪ್ಪಗಾದಳು ರಕ್ಷಿತಾ!`ಹೆಂಗೆ?~ ಎಂದ ಗುಡ್ಡೆ, `ಆಹಾ, ಭಾರೀ ಚುಟುಕ ನಿಂದು~ ನಕ್ಕಳು ಮಿಸ್ಸಮ್ಮ. ಅಷ್ಟರಲ್ಲಿ ಹರಟೆಕಟ್ಟೆಗೆ ಓಡುತ್ತ ಬಂದ ಚಾಂದು~ ಅರೇ ಸುನೋ, ನಂ ಜನಾರ್ದನ್‌ರೆಡ್ಡಿದುಕೆ ಜಾಮೀನ್ ಸಿಕ್ತಂತೆ.  ಖುಷಿಗೆ ಸ್ವೀಟ್ ಇಲ್ವಾ?~ ಎಂದ. ತಕ್ಷಣ ಗುಡ್ಡೆ `ಯಾವ ಜನಾರ್ದನ ರೆಡ್ಡಿ? ಯಾವಾಗ ಜೈಲಿಗೆ ಹೋಗಿದ್ರು? ಓ, ನಂಗೆ ಮರೆತೇ ಹೋಗಿತ್ತು~ ಎಂದ. ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.

                             

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry