ಆಟಕ್ಕೆ ಬಡತನ ಯಾವತ್ತೂ ಅಡ್ಡಿಯಾಗಿಲ್ಲ

7

ಆಟಕ್ಕೆ ಬಡತನ ಯಾವತ್ತೂ ಅಡ್ಡಿಯಾಗಿಲ್ಲ

Published:
Updated:
ಆಟಕ್ಕೆ ಬಡತನ ಯಾವತ್ತೂ ಅಡ್ಡಿಯಾಗಿಲ್ಲ

ಬೆಂಗಳೂರು: ಬಡ ಕುಟುಂಬದ ಜೀವನ ನಿರ್ವಹಣೆಗಾಗಿ ಗಾಲ್ಫ್ ಕೋರ್ಸ್‌ನಲ್ಲಿ ದುಡಿಯುತ್ತಿದ್ದ ಹುಡುಗ ಇಂದು ಚಾಂಪಿಯನ್.ಇದು ಗಾಲ್ಫ್ ಚಾಂಪಿಯನ್ 17ರ ಹರೆಯದ ಎಸ್.ಚಿಕ್ಕರಂಗಪ್ಪನ ಕಥೆ. ಬೆಂಗಳೂರಿನ ಬಿಡದಿ ಬಳಿಯ ಈಗಲ್ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ಕೆಲಸಕ್ಕೆ ಸೇರಿದಾಗ ಆತನ ವಯಸ್ಸು ಒಂಬತ್ತು. ಗಣ್ಯ ವ್ಯಕ್ತಿಗಳು ಗಾಲ್ಫ್ ಆಡುವಾಗ ಚೆಂಡನ್ನು ಎತ್ತಿ ಕೊಡುತ್ತಿದ್ದ. ಚೆಂಡು ಎತ್ತಿ ಕೊಡುವಾಗಲೇ ತನ್ನ ಕನಸುಗಳಿಗೆ ಬಣ್ಣ ಹಚ್ಚಿದ್ದ.ಆ ಕನಸುಗಳೆಲ್ಲಾ ಈಗ ನಿಜವಾಗುತ್ತಿವೆ. ಯಶಸ್ಸಿನ ಬೆನ್ನು ಹಿಡಿದಿರುವ ಚಿಕ್ಕರಂಗಪ್ಪ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶುಕ್ರವಾರ ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಕೊನೆಗೊಂಡ ದಕ್ಷಿಣ ಭಾರತ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನ ಪಡೆದರು.`ಬಡತನದ ಕಾರಣ ನಾನು ಗಾಲ್ಫ್ ಕೋರ್ಸ್‌ನಲ್ಲಿ ಕೆಲಸಕ್ಕೆ ಸೇರಬೇಕಾಯಿತು. ಅದರಿಂದ ಬಂದ ಹಣದಿಂದ ಶಾಲೆಯ ಪುಸ್ತಕ ಖರೀದಿಸುತ್ತಿದ್ದೆ. ಆದರೆ ಒಮ್ಮೆಲೆ ಗಾಲ್ಫ್‌ನತ್ತ ಆಸಕ್ತಿ ಹುಟ್ಟಿತು. ಶಾಲೆಯಲ್ಲಿ ಪಾಠ ಕೇಳುತ್ತಿದಾಗಲೂ ಅದರ ಬಗ್ಗೆ ಚಿಂತಿಸುತ್ತಿದ್ದೆ. ಹಾಗಾಗಿ ಏಳನೇ ತರಗತಿ ಓದುತ್ತಿದ್ದ ನಾನು ಶಾಲೆ ಬಿಟ್ಟು ಕ್ಲಬ್ ಹಿಡಿದೆ. ಆದರೆ ಬಡತನ ನನ್ನ ಆಟಕ್ಕೆ ಯಾವತ್ತೂ ಅಡ್ಡಿಯಾಗಲಿಲ್ಲ~ ಎಂದು ಚಿಕ್ಕರಂಗಪ್ಪ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಚಾಂಪಿಯನ್ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ತವರಿನಲ್ಲಿ ಮತ್ತೆ ಚಾಂಪಿಯನ್ ಆಗಿದ್ದು ತುಂಬಾ ಖುಷಿ ತಂದಿದೆ. ಇಲ್ಲಿ ನಡೆದ ಯಾವುದೇ ಚಾಂಪಿಯನ್‌ಷಿಪ್‌ನಲ್ಲಿ ನಾನು ಸೋಲು ಕಂಡಿಲ್ಲ. ಈ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ದಿನ ಹಿನ್ನಡೆ ಕಂಡಿದ್ದೆ. ಆದರೆ ಕೊನೆಯ ದಿನ ತಪ್ಪನ್ನು ಸರಿಪಡಿಸಿಕೊಂಡು ಆಡಿದೆ~ ಎಂದಿದ್ದಾರೆ.`ಈ ಗೆಲುವಿನ ಕ್ರೆಡಿಟ್ ತ್ರಿಶೂಲ್ ಚಿನ್ನಪ್ಪ ಅವರ ಕುಟುಂಬಕ್ಕೆ ಸಲ್ಲಬೇಕು. ಕರ್ನಾಟಕ ಗಾಲ್ಫ್ ಸಂಸ್ಥೆಯ ಕೋರ್ಸ್‌ನಲ್ಲಿ ಟೂರ್ನಿ ನಡೆದಾಗಲೆಲ್ಲಾ ನಾನು ಅವರ ಮನೆಯಲ್ಲಿ ಉಳಿದುಕೊಳ್ಳುತ್ತೇನೆ. ಅವರು ತುಂಬಾ ನೆರವು ನೀಡುತ್ತಾರೆ. ಸ್ವಂತ ಮಗನಂತೆ ನೋಡಿಕೊಳ್ಳುತ್ತಾರೆ. ಈ ವಾತಾವರಣ ಉತ್ತಮ ಪ್ರದರ್ಶನ ತೋರಲು ನನಗೆ ನೆರವಾಗಿದೆ~ ಎಂದು ಚಿಕ್ಕರಂಗಪ್ಪ ವಿವರಿಸಿದ್ದಾರೆ.ಬೆಂಗಳೂರಿನಿಂದ 30 ಕಿ.ಮೀ ದೂರದಲ್ಲಿರುವ ರಂಗದೊಡ್ಡೇನಹಳ್ಳಿ ಚಿಕ್ಕ ಅವರ ಊರು. ಅವರು ಬೆಳಿಗ್ಗೆ 4.30ಕ್ಕೆ ಎದ್ದು ಗಾಲ್ಫ್ ಕೋರ್ಸ್‌ಗೆ ಬಂದರೆ ಮತ್ತೆ ಹಿಂತಿರುಗುವುದು ಸಂಜೆ ಆರು ಗಂಟೆಗೆ. ಆ ಕಠಿಣ ಪ್ರಯತ್ನವೇ ಇವತ್ತು ಯಶಸ್ಸಿಗೆ ದಾರಿ ಮಾಡಿಕೊಟ್ಟಿದೆ.`ನನಗೆ ವಿನೋದ್ ಕುಮಾರ್ ಅವರು ಫಿಜಿಯೋ ಹಾಗೂ ದೈಹಿಕ ತರಬೇತುದಾರರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಡಿದ ಕೊನೆಯ 6 ಟೂರ್ನಿಗಳಲ್ಲಿ 5ರಲ್ಲಿ ಗೆದ್ದಿದ್ದೇನೆ. ಆರಂಭದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದ ಪೋಷಕರು ಕೂಡ ಈಗ ಪೂರ್ಣ ಬೆಂಬಲ ನೀಡುತ್ತಿದ್ದಾರೆ~ ಎಂದರು.ಈ ತಿಂಗಳ ಅಂತ್ಯದಲ್ಲಿ ಕೊಯಮತ್ತೂರಿನಲ್ಲಿ ನಮುರಾ ಕಪ್ ಅರ್ಹತಾ ಸುತ್ತಿನ ಗಾಲ್ಫ್ ಟೂರ್ನಿ ನಡೆಯುತ್ತಿದೆ. ಅದರಲ್ಲಿ ದೇಶದ ಅಗ್ರ ಎಂಟು ಮಂದಿ ಅಮೆಚೂರ್ ಗಾಲ್ಫರ್ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಗೆಲ್ಲುವ ನಾಲ್ಕು ಮಂದಿ ವಿದೇಶದಲ್ಲಿ ನಡೆಯಲಿರುವ ಪ್ರಮುಖ ಸುತ್ತಿಗೆ ಅರ್ಹತೆ ಪಡೆಯುತ್ತಾರೆ ಎಂದು ಚಿಕ್ಕರಂಗಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry