ಶನಿವಾರ, ಜೂಲೈ 4, 2020
22 °C

ಆಟಗಾರರ ಪ್ರದರ್ಶನ ತೃಪ್ತಿ ನೀಡಿದೆ: ಚಿಗುಂಬುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟಗಾರರ ಪ್ರದರ್ಶನ ತೃಪ್ತಿ ನೀಡಿದೆ: ಚಿಗುಂಬುರ

ಕೋಲ್ಕತ್ತ (ಪಿಟಿಐ): ಎರಡು ಪಂದ್ಯಗಳಲ್ಲಿನ ಗೆಲುವು ನಿರೀಕ್ಷಿತ. ಆದರೆ ವಿಶ್ವಕಪ್ ಕ್ರಿಕೆಟ್‌ನಲ್ಲಿ ದೊಡ್ಡ ತಂಡಗಳ ವಿರುದ್ಧ ಒಂದಾದರೂ ಅಚ್ಚರಿಯ ಫಲಿತಾಂಶ ಪಡೆಯಬೇಕಿತ್ತು...!ಹೀಗೆ ಹೇಳಿದ್ದು ಜಿಂಬಾಬ್ವೆ ತಂಡದ ನಾಯಕ ಎಲ್ಟಾನ್ ಚಿಗುಂಬುರ. ಭಾನುವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಕೀನ್ಯಾ ಎದುರು 161 ರನ್‌ಗಳ ಅಂತರದಿಂದ ವಿಜಯ ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಅನಿರೀಕ್ಷಿತ ಎನಿಸಿದ್ದನ್ನು ನಾವು ಸಾಧಿಸಲಿಲ್ಲ.ಆದರೆ ನಮ್ಮ ತಂಡದ ಆಟಗಾರರು ಲೀಗ್ ಹಂತದ ಆರು ಪಂದ್ಯಗಳಲ್ಲಿ ಚೆನ್ನಾಗಿ ಆಡಿದ್ದಾರೆ. ಪ್ರದರ್ಶನ ತೃಪ್ತಿ ನೀಡಿದೆ’ ಎಂದು ಹೇಳಿದರು.ಕೀನ್ಯಾ ವಿರುದ್ಧದ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಅವರು ‘ಹಿಂದೆ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಆಡಿದ್ದ ದೇಶದ ತಂಡವಿದು. ಅಂಥದೊಂದು ತಂಡವನ್ನು ಸೋಲಿಸಿದ್ದೇವೆ. ಅದಕ್ಕಿಂತ ಬೇರೆ ಏನೂ ಹೇಳಲು ಸಾಧ್ಯವಿಲ್ಲ. ನಮ್ಮ ಮಟ್ಟಿಗೆ ಇದು ನಿರೀಕ್ಷಿತ ಫಲಿತಾಂಶ’ ಎಂದರು.‘ಬಲಾಢ್ಯ ತಂಡಗಳು ಇದ್ದ ಗುಂಪಿನಲ್ಲಿ ನಾವಿದ್ದೆವು. ಆದ್ದರಿಂದ ಅತಿಯಾದ ಆಸೆ ಹೊಂದುವುದಕ್ಕೆ ಅವಕಾವೂ ಇರಲಿಲ್ಲ. ಚೆನ್ನಾಗಿ ಆಡಬೇಕು ಎನ್ನುವುದೊಂದೇ ನಮ್ಮ ಗುರಿಯಾಗಿತ್ತು. ದೊಡ್ಡ ತಂಡಗಳ ವಿರುದ್ಧವೂ ನಮ್ಮ ಆಟಗಾರರು ತಮ್ಮ ಸಾಮರ್ಥ್ಯವನ್ನು ತೋರಲು ಶ್ರಮಿಸಿದರು.

ಅದಕ್ಕಾಗಿ ಅವರೆಲ್ಲರಿಗೂ ಕೃತಜ್ಞತೆ’ ಎಂದ ಅವರು ‘ವಿಶ್ವಕಪ್‌ನಂಥ ಟೂರ್ನಿಯಲ್ಲಿ ಆಡುವಾಗ ಸಹಜವಾಗಿಯೇ ಒತ್ತಡ ಇರುತ್ತದೆ. ಅದರಲ್ಲಿಯೂ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹೊಸಬರಿಗೆ ಇದೊಂದು ಹೊಸ ಅನುಭವ. ಕೆಲವು ಪಂದ್ಯಗಳಲ್ಲಿ ಒತ್ತಡವನ್ನು ನಿಭಾಯಿಸುವುದು ಅವರಿಗೆ ಕಷ್ಟವಾಯಿತು’ ಎಂದು ವಿವರಿಸಿದರು.ಈ ಬಾರಿಯ ವಿಶ್ವಕಪ್‌ನಲ್ಲಿ ಒಂದು ಪಂದ್ಯವನ್ನು ಕೂಡ ಗೆಲ್ಲುವಲ್ಲಿ ವಿಫಲವಾದ ಕೀನ್ಯಾ ತಂಡದ ನಾಯಕ ಸ್ಟೀವ್ ಟಿಕೊಲೊ ಅವರು ಮಾತನಾಡಿ ‘ನಮ್ಮದು ಹೊಸಬರ ತಂಡ. ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವವೂ ತೀರ ಕಡಿಮೆ. ಹೆಚ್ಚಿನವರು ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ್ದಾರೆ. ಸಾಕಷ್ಟು ತಪ್ಪುಗಳನ್ನು ಮಾಡಿದ್ದು ಕೂಡ ನಿಜ. ಆದರೆ ತಿದ್ದಿಕೊಂಡು ಇದೇ ಯುವಕರ ಪಡೆಯು ಮುಂದೆ ಬಲಾಢ್ಯ ತಂಡವಾಗುತ್ತದೆ ಎನ್ನುವ ವಿಶ್ವಾಸ ನನಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.