ಆಟಗಾರರ ಹಿತಕ್ಕಾಗಿ ಚರ್ಚೆಗೆ ಸಿದ್ಧ

7

ಆಟಗಾರರ ಹಿತಕ್ಕಾಗಿ ಚರ್ಚೆಗೆ ಸಿದ್ಧ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಐಪಿಎಲ್ ತಂಡವಾದ ಪುಣೆ ವಾರೀಯರ್ಸ್ ಹಿತಕ್ಕಾಗಿ ಬಿಸಿಸಿಐ ಜೊತೆ ಚರ್ಚೆ ಮಾಡಲು ಸಿದ್ಧರಾಗಿರುವ ಸಹಾರಾ ಇಂಡಿಯಾ ಮುಖ್ಯಸ್ಥ ಸುಬ್ರತೊ ರಾಯ್ ಅವರು `ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಒಪ್ಪಂದದ ಮಾತು ಮಾತ್ರ ಬೇಡ~ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.`ಪುಣೆ ತಂಡದ ಬಗ್ಗೆ ಮಾತ್ರ ಈಗ ನಮ್ಮ ಕಾಳಜಿ~ ಎಂದಿರುವ ಅವರು `ಇಂಡಿಯನ್ ಪ್ರೀಮಿಯರ್ ಲೀಗ್‌ನ ಐದನೇ ಅವತರಣಿಕೆಯ ಟ್ವೆಂಟಿ-20 ಟೂರ್ನಿಯಲ್ಲಿ ಆಡುವ ಅವಕಾಶದಿಂದ ಆಟಗಾರರು ವಂಚಿತರಾಗಬಾರದು. ಆ ಒಂದೇ ಕಾರಣಕ್ಕಾಗಿ ಮಾತುಕತೆಗೆ ಆಸಕ್ತಿ ತೋರಿಸಲಾಗಿದೆ~ ಎಂದು ರಾಯ್ ಸುದ್ದಿ ಸಂಸ್ಥೆಯೊಂದಕ್ಕೆ ಮಂಗಳವಾರ ತಿಳಿಸಿದರು.ಪ್ರಾಯೋಜಕತ್ವದ ಕುರಿತು ಈಗ ಮಾತು ಅಗತ್ಯ ಎನಿಸುವುದಿಲ್ಲ. ಆ ವಿಷಯದಲ್ಲಿ ಆಸಕ್ತಿಯೂ ತಮಗಿಲ್ಲವೆಂದು ಹೇಳಿದ ಅವರು `ನಾವು ಹಿಂದೆ ಸರಿದಿದ್ದರಿಂದ ದೊಡ್ಡ ಪರಿಣಾಮ ಏನೂ ಆಗದು. ಏಕೆಂದರೆ ಕ್ರಿಕೆಟ್ ಜನಪ್ರಿಯ. ಹತ್ತು ವರ್ಷಗಳ ಹಿಂದಿದ್ದ ಪರಿಸ್ಥಿತಿಯಂತೂ ಈಗಿಲ್ಲ. ಈ ಆಟವನ್ನು ಬೆಂಬಲಿಸಲು ಕಾರ್ಪೊರೇಟ್ ಕ್ಷೇತ್ರದ ಅನೇಕ ದಿಗ್ಗಜರು ಸಿದ್ಧರಿದ್ದಾರೆ~ ಎಂದರು.`ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆತಂಕಗೊಳ್ಳುವ ಅಗತ್ಯವಿಲ್ಲ. ನಾವು ಈಗಲೇ ಕೈಬಿಟ್ಟು ಹೊರಟು ಹೋಗುತ್ತಿಲ್ಲ. ಬೇರೊಬ್ಬರು ಕೈಹಿಡಿಯುವವರೆಗೆ ಇದ್ದೇ ಇರುತ್ತೇವೆ~ ಎಂದ ಅವರು `ನಮ್ಮ ತಕ್ಷಣದ ಕಾಳಜಿ ವಾರೀಯರ್ಸ್ ತಂಡ. ನಮ್ಮಂದಿಗೆ ಇರುವ ಆಟಗಾರರು ಈ ವರ್ಷವೂ ಆಡಬೇಕು ಎನ್ನುವುದು ಆಶಯ. ಒಂದು ವೇಳೆ ಹಾಗೆ ಆಗದಿದ್ದರೆ ಅದು ಕ್ರಿಕೆಟಿಗರಿಗೆ ಬೀಳುವ ದೊಡ್ಡ ಪೆಟ್ಟು. ಇದೇ ಕಾರಣಕ್ಕಾಗಿ ತಕ್ಷಣವೇ ಬೇರೊಂದು ಸಂಸ್ಥೆಗೆ ಈ ತಂಡವನ್ನು ಹಸ್ತಾಂತರ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಬಿಸಿಸಿಐಗೆ ಕೇಳಿಕೊಳ್ಳಲಾಗಿದೆ.

 

ನಾವು ಕೂಡ ಮುಕ್ತ ಮನಸ್ಸಿನಿಂದ ಮಾತುಕತೆಗೆ ಹಾಜರಾಗುತ್ತೇವೆಂದು ಕೂಡ ತಿಳಿಸಿದ್ದೇವೆ. ಒಮ್ಮೆ ಕುಳಿತುಗೊಂಡು ಚರ್ಚೆ ಮಾಡಿದರೆ ಸೂಕ್ತ ಪರಿಹಾರಮಾರ್ಗ ಖಂಡಿತ ಸಿಗುತ್ತದೆ~ ಎಂದು ನುಡಿದರು.

ಐಪಿಎಲ್‌ನಲ್ಲಿ ಪುಣೆ ತಂಡವು ಅಂತ್ಯಂತ ಬೆಲೆಯುಳ್ಳದ್ದೆನಿಸಿದೆ. ಅದನ್ನು 1,700 ಕೋಟಿ ರೂಪಾಯಿಗೆ ಸಹಾರಾ ಕೊಂಡುಕೊಂಡಿತ್ತು. ಈಗ ಅಂಥದೊಂದು ತಂಡವು ಅತಂತ್ರವಾಗುವ ಸ್ಥಿತಿ ಎದುರಾಗಿದೆ. ಅದರ ನೇರ ಪರಿಣಾಮ ಆಗುವುದು ಆಟಗಾರರ ಮೇಲೆ. ಆದ್ದರಿಂದ ಬಿಸಿಸಿಐ ತುರ್ತಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲೇಬೇಕು. ಸದ್ಯಕ್ಕೆ ಈ ದುಬಾರಿ ತಂಡವನ್ನು ಕೊಂಡುೊಳ್ಳಲು ಯಾರೂ ಆಸಕ್ತಿ ತೋರಿಸಿಲ್ಲ. ಆದ್ದರಿಂದ ತೊಡಕು ನಿವಾರಣೆ ಕ್ರಿಕೆಟ್ ಮಂಡಳಿ ಮುಂದಿರುವ ದೊಡ್ಡ ಸವಾಲು.ಕ್ರಿಕೆಟ್ ಮಂಡಳಿಯು ಸಂಧಾನ ಮಾಡಿಕೊಂಡರೆ ವಾರೀಯರ್ಸ್ ತಂಡಕ್ಕೆ ಫ್ರಾಂಚೈಸಿಯಾಗಿ ಉಳಿಯಲು ಸಹಾರಾ ಮತ್ತೆ ಯೋಚನೆ ಮಾಡಲು ಸಿದ್ಧವಾಗಿದೆ. `ಪುಣೆ ತಂಡವು ಈ ಬಾರಿಯೂ ಆಡಬೇಕು ಎನ್ನುವುದು ಜನರ ನಿರೀಕ್ಷೆ. ಆದರೆ ಗುಣಮಟ್ಟದ ಪೈಪೋಟಿ ನಡೆಯಬೇಕು. ಕಳೆದ ವರ್ಷವೇ ನಾನು ಈ ವಿಷಯವಾಗಿ ಮಾತನಾಡಿದ್ದೆ. ಎಲ್ಲ ಆಟಗಾರರನ್ನೂ ಹರಾಜಿಗೆ ಬಿಡಬೇಕು. ಆ ಮೂಲಕ ಹೊಸ ಹಾಗೂ ಹಳೆಯ ತಂಡಗಳ ನಡುವೆ ಸಮತೋಲನ ಸಾಧ್ಯವಾಗುವಂತೆ ಮಾಡಬೇಕು ಎನ್ನುವುದು ನನ್ನ ಒತ್ತಾಯ ಹಾಗೂ ಬೇಡಿಕೆ. ಅದಕ್ಕೆ ಸೂಕ್ತವಾದ ರೀತಿಯಲ್ಲಿ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಸ್ಪಂದಿಸಲಿಲ್ಲ~ ಎಂದರು.`ವಿಶ್ವಕಪ್‌ನಲ್ಲಿ ಶ್ರೇಷ್ಠ ಆಟಗಾರ ಎನಿಸಿಕೊಂಡ ಯುವರಾಜ್ ಸಿಂಗ್ ಲಭ್ಯವಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪುಣೆಗೆ ಭಾರತದ ದೊಡ್ಡ ಕ್ರಿಕೆಟಿಗ ಯಾರೂ ನೆರವಿಗೆ ಇಲ್ಲದಂತಾಗಿದೆ. ಇದೇ ಕಾರಣಕ್ಕಾಗಿ ರವೀಂದ್ರ ಜಡೇಜಾ ನಮಗೆ ಬೇಕೆಂದು ಕೋರಲಾಗಿತ್ತು. ಆದರೆ ಅದನ್ನು ಯಾರೂ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry