ಆಟದಂಗಳದ ಸುತ್ತ ಚಿತ್ರಾವಳಿ

7

ಆಟದಂಗಳದ ಸುತ್ತ ಚಿತ್ರಾವಳಿ

Published:
Updated:

ಭಾರತ-ಪಾಕಿಸ್ತಾನದ ನಡುವೆ ಚುಟುಕು ಕ್ರಿಕೆಟ್ ನಡೆದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಕಂಡಿದ್ದು ಚಿತ್ರಾವಳಿ. ಕನ್ನಡ ಚಿತ್ರ ನಿರ್ದೇಶಕರು ಶೂಟಿಂಗ್ ಪ್ರಾರಂಭವಾಗದ ತಮ್ಮ ಸಿನಿಮಾ ಪ್ರಚಾರಕ್ಕೆಂದು ಬ್ಯಾನರ್ ಹಿಡಿದುಕೊಂಡು ಬಂದಿದ್ದರು. ಹೊಸಕೋಟೆಯಿಂದ ಬಂದಿದ್ದ ಸಚಿನ್ ಅಭಿಮಾನಿ ಬಳಗ ತಾನು ಆರಾಧಿಸುವ ಆಟಗಾರನ ಅಲಂಕರಿಸಿದ ಪಟವನ್ನು ಮೆರವಣಿಗೆ ಮಾಡಿತು.ಇನ್ನೂ ಚಿತ್ರೀಕರಣ ಆರಂಭವಾಗಬೇಕಿದ್ದ ಚಲನಚಿತ್ರದ ಬ್ಯಾನರ್ ಹಿಡಿದು ಇಬ್ಬರು ಯುವಕರು ನಗರದ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಸುತ್ತು ಹಾಕುತ್ತಿದ್ದರು. ಚಿತ್ರದ ಹೆಸರನ್ನು ಕೂಗುತ್ತ ಜನರನ್ನು ಆಕರ್ಷಿಸುತ್ತಿದ್ದರು. ಮತ್ತೊಂದೆಡೆ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರದ ಮೆರವಣಿಗೆ. ವಿವಿಧ ಹೂಗಳಿಂದ ಸಿಂಗರಿಸಿದ್ದ ಟ್ರ್ಯಾಕ್ಟರ್‌ನಲ್ಲಿ ಅಭಿಮಾನಿಗಳು ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾದ ಸಚಿನ್‌ಗೆ ಗೌರವ ಸಲ್ಲಿಸುತ್ತಿದ್ದರು.ಭಾರತ, ಪಾಕಿಸ್ತಾನ ನಡುವೆ ಮಂಗಳವಾರ ನಡೆದ `ಟ್ವೆಂಟಿ-20' ಕ್ರಿಕೆಟ್ ಪಂದ್ಯವನ್ನು ಪಾಕಿಸ್ತಾನ ಗೆದ್ದು ಬೀಗಿತು. ಆದರೆ ಪಂದ್ಯದ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಜನಸಂದಣಿಯ ನಡುವೆ ಇಂಥ ಅನೇಕ ದೃಶ್ಯಗಳು ಕಣ್ಣಿಗೆ ಬಿದ್ದವು.ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳ ಕಾತುರ. ಎಲ್ಲರಿಗಿಂತ ಮೊದಲು ಕ್ರೀಡಾಂಗಣದೊಳಗೆ ಪ್ರವೇಶಿಸಿ ಆಸನವನ್ನು ಹಿಡಿಯುವ ತವಕದಿಂದ ಸಾಗರೋಪಾದಿಯಲ್ಲಿ ಕ್ರೀಡಾಭಿಮಾನಿಗಳು ಧಾವಿಸುತ್ತಿದ್ದಲ್ಲಿ ಉತ್ಸಾಹದ ಅಲೆಗಳಂಥ ದೃಶ್ಯ. ಅಲ್ಲೊಬ್ಬರು ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರುವ ಫಲಕವನ್ನು ಹಿಡಿದುಕೊಂಡು ಕ್ರಿಕೆಟ್ ಪ್ರೇಮಿಗಳತ್ತ ಮುಖ ಮಾಡಿದ್ದರು.ನಗರದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ `ಟಿ-20' ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಮುಗಿಬೀಳುತ್ತಿದ್ದರೆ, ಮತ್ತೊಂದೆಡೆ ಎಸ್.ಅಭಿಹನಕೆರೆ ತಾವು ನಿರ್ದೇಶಿಸಿದ `ಆರಂಭ' ಚಿತ್ರದ ಬ್ಯಾನರ್ ಹಿಡಿದು ಪ್ರೇಕ್ಷಕರತ್ತ ಪ್ರದರ್ಶಿಸುತ್ತಿದ್ದರು. ಕ್ರೀಡಾಂಗಣದೊಳಗೆ ಬ್ಯಾನರ್‌ಗಳನ್ನು ನಿಷೇಧಿಸಿದ್ದರಿಂದ ಹೊರಾಂಗಣದಲ್ಲೇ ಪ್ರಚಾರ ಮಾಡಲು ತೀರ್ಮಾನಿಸಿದ್ದರು ಆ ನಿರ್ದೇಶಕ.`ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ. ಪಂದ್ಯ ವೀಕ್ಷಣೆಯ ಜೊತೆಗೆ ಚಿತ್ರದ ಹೆಸರು ಪ್ರಚಾರ ಮಾಡಬೇಕೆಂಬ ಉದ್ದೇಶದಿಂದ ಈ ಬ್ಯಾನರ್‌ಗಳನ್ನು ತಂದಿದ್ದೆವು. ಆದರೆ ಒಳಗೆ ಪ್ರವೇಶ ಸಿಗದ ಕಾರಣ ಕ್ರೀಡಾಂಗಣದ ಸುತ್ತ ಪ್ರಚಾರ ಮಾಡುತ್ತಿದ್ದೇವೆ. ಹೆಚ್ಚು ಪ್ರಚಾರವಾಗಲಿ, ಚಿತ್ರ ಯಶಸ್ವಿಯಾಗಲಿ ಎಂದು ಈ ರೀತಿ ತಯಾರಿ ಮಾಡಿಕೊಂಡು ಬಂದೆವು.

ಒಳಗೆ ಬ್ಯಾನರ್ ತೆಗೆದುಕೊಂಡು ಹೋಗಲು ಬಿಡದೇ ಇದ್ದದ್ದರಿಂದ ನಿರಾಸೆಯಾಯಿತು. ಇಲ್ಲಿಯವರೆಗೂ ಬಂದಿದ್ದರಿಂದ ಕ್ರೀಡಾಂಗಣದ ಹೊರಗೇ ಪ್ರಚಾರ ಮಾಡಬೇಕಾಯಿತು' ಎಂದು ಅಭಿಹನಕೆರೆ ಮಾತಿಗೆ ತೆರೆದುಕೊಂಡರು.ಕುಂಬ್ಳೆ ಸರ್ಕಲ್‌ನಿಂದ ಮೇಯೊಹಾಲ್‌ವರೆಗೂ ಸಂಚಾರ ದಟ್ಟಣೆಯಾಗಿದ್ದ ಎಂ.ಜಿ.ರಸ್ತೆಯಲ್ಲಿ ಹೊಸಕೋಟೆಯಿಂದ ಬಂದಿದ್ದ ಸಚಿನ್ ಅಭಿಮಾನಿಗಳು ಗಮನ ಸೆಳೆದರು. ಇವರು ಪಂದ್ಯ ವೀಕ್ಷಿಸಲು ಬಂದಿರಲಿಲ್ಲ. ಬದಲಿಗೆ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಸಚಿನ್ ತೆಂಡೂಲ್ಕರ್‌ಗೆ ಗೌರವ ಸೂಚಿಸಲು ಬಂದಿದ್ದರು. `ಏಕದಿನ ಕ್ರಿಕೆಟ್‌ನಿಂದ ನಿಮ್ಮನ್ನು ಮಿಸ್ ಮಾಡಿಕೊಂಡೆವು' ಎಂಬಿತ್ಯಾದಿ ಬರಹಗಳಿದ್ದ ಬ್ಯಾನರ್‌ಗಳು ಹಾಗೂ ಸಚಿನ್ ಭಾವಚಿತ್ರಕ್ಕೆ ದೀಪಾಲಂಕಾರ ಮಾಡಿಕೊಂಡು ಬಂದಿದ್ದ ರೀತಿ ಎಲ್ಲರ ಗಮನ ಸೆಳೆಯಿತು.ಚನ್ನಪಟ್ಟಣದಿಂದ ಬಂದಿದ್ದ ಅಭಿಮಾನಿಯೊಬ್ಬ ಪಾಕಿಸ್ತಾನ ತಂಡದ ಟಿ-ಶರ್ಟ್ ಧರಿಸಿ, ಆ ತಂಡವನ್ನು ಬೆಂಬಲಿಸಲು ಬಂದಿದ್ದ. `ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳಾದರೆ ಮಾತ್ರ ವೀಕ್ಷಣೆಗೆ ಬರುತ್ತೇನೆ. ನನಗೆ ಪಾಕಿಸ್ತಾನ ತಂಡವೇ ಫೇವರಿಟ್. ಆ ತಂಡವನ್ನಷ್ಟೇ ಇಷ್ಟಪಡುತ್ತೇನೆ, ದೇಶವನ್ನಲ್ಲ. ಮಿಸ್ಬಾ ಉಲ್ ಹಕ್, ಶಾಹಿದ್ ಅಫ್ರಿದಿ ನೆಚ್ಚಿನ ಆಟಗಾರರು' ಎಂದು ಹೆಮ್ಮೆಯಿಂದ ಹೇಳಿಕೊಂಡ ಆ ಅಭಿಮಾನಿಯ ಹೆಸರು ಸೊಹೇಲ್.ಪಾಕಿಸ್ತಾನದಿಂದ ಬಂದಿದ್ದ ಕ್ರಿಕೆಟ್ ಪ್ರೇಮಿಗಳು ಕೂಡ ಕುತೂಹಲಕಾರಿ ಪಂದ್ಯ ವೀಕ್ಷಣೆಗೆ ಸಾಕ್ಷಿಯಾದರು. ಕರಾಚಿಯಿಂದ ಬೆಂಗಳೂರಿಗೆ ಮೊದಲ ಬಾರಿಗೆ ಬಂದಿದ್ದ ರಫಿ `ಮೆಟ್ರೊ'ದೊಂದಿಗೆ ಮಾತಿಗಿಳಿದರು. `ನಮ್ಮ ತಂಡ ಯಾವ ದೇಶಕ್ಕೆ ಹೋದರೂ ಅಲ್ಲಿಗೆ ಹೋಗುತ್ತೇನೆ. ಬೆಂಗಳೂರಿಗೆ ಇದೇ ಮೊದಲ ಬಾರಿ ಬಂದಿದ್ದು. ಇಲ್ಲಿನ ಜನ ಸ್ನೇಹಪರರು, ಹೊಸಬರಿಗೆ ಮಾರ್ಗದರ್ಶನ ಮಾಡುತ್ತಾರೆ. ಶಾಹಿದ್ ಅಫ್ರಿದಿ ಅಂದರೆ ಪಂಚಪ್ರಾಣ. ಅವರು ಹೊಡೆಯುವ ಸಿಕ್ಸರ್ ನೋಡುವುದೇ ಚೆಂದ' ಎಂದು ಅಭಿಮಾನ ವ್ಯಕ್ತಪಡಿಸುತ್ತಾರೆ ರಫಿ.ಮೂರರಿಂದ ನಾಲ್ಕು ಗಂಟೆ ನಡೆಯುವ ಪಂದ್ಯ ಅದೆಷ್ಟೋ ಕುಟುಂಬಗಳ ಪಾಲಿಗೆ ಆದಾಯ ತರುವ ಸಂದರ್ಭ ಸೃಷ್ಟಿಸುತ್ತದೆ. ರಾಮಮೂರ್ತಿ ನಗರದ ಆಂಜಿನಪ್ಪ ಕ್ರಿಕೆಟ್ ಪಂದ್ಯಗಳು ನಡೆದರೆ ಸಾಕು ಬಾವುಟಗಳನ್ನು ಮಾರಾಟ ಮಾಡಲು ಕ್ರೀಡಾಂಗಣದತ್ತ ಧಾವಿಸುತ್ತಾರೆ. ಪೊಲೀಸರ ಭಯದಲ್ಲೇ ದಿನಕ್ಕೆ 400ರಿಂದ 500 ಬಾವುಟಗಳನ್ನು ಮಾರಿ ಒಂದಿಷ್ಟು ಹಣ ಸಂಪಾದಿಸುತ್ತಾರೆ.

`ದೇಶದಲ್ಲಿ ಎಲ್ಲಿ ಕ್ರಿಕೆಟ್ ಪಂದ್ಯ ನಡೆದರೂ ಅಲ್ಲಿ ಹೋಗಿ ವ್ಯಾಪಾರ ಮಾಡುತ್ತೇನೆ. ನೂರು ರೂಪಾಯಿಗೊಂದು ಬಾವುಟ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯಗಳ ವೇಳೆ ಎಚ್ಚರಿಕೆಯಿಂದ ಮಾರಾಟ ಮಾಡುತ್ತೇವೆ. ಗಲಾಟೆಗಳಾಗುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ಭಯದಿಂದಲೇ ಮಾರಾಟ ಮಾಡುತ್ತೇನೆ' ಎಂದು ಬಾವುಟ ಮಾರಲು ಮುಂದಾಗುತ್ತಾರೆ ಆಂಜಿನಪ್ಪ.`ಹನ್ನೆರಡು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದೇವೆ. ನನ್ನ ಮಗ ಮನ್ವೀರ್ ಸಿಂಗ್‌ಗೆ ಯುವರಾಜ್ ಸಿಂಗ್ ಇಷ್ಟ. ಹಾಗಾಗಿ ಯಾವುದೇ ಪಂದ್ಯ ನಡೆದರೂ ತಪ್ಪದೇ ಬರುತ್ತೇವೆ' ಎಂದು ಹೇಳುತ್ತಾರೆ ಪಂಜಾಬ್‌ನ ವರ್ಯಾಮ್ ಸಿಂಗ್. ದೇಶದ ಅಭಿಮಾನಿಗಳ ಜೊತೆಗೆ ಪಾಕಿಸ್ತಾನದಿಂದ ಬಂದಿದ್ದ ಕುಟುಂಬದ ಸದಸ್ಯರು ಒಟ್ಟಾಗಿ ಪಂದ್ಯ ವೀಕ್ಷಣೆಗೆ ಮುಂದಾಗುತ್ತಿದ್ದರು.

ಒಂದು ಪಂದ್ಯ ನಡೆದರೆ ಇಷ್ಟೆಲ್ಲಾ ನೆನಪಿನ ಹೂರಣ ಅಚ್ಚಳಿಯದೆ ಉಳಿಯುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry