ಬುಧವಾರ, ನವೆಂಬರ್ 13, 2019
21 °C

ಆಟದೊಂದಿಗೆ ರಜಾ - ಮಜಾ

Published:
Updated:

ನಾಪೋಕ್ಲು: ಮಕ್ಕಳ ಶಾಲೆಗೆ ಮತ್ತೆ ರಜೆ ಬಂದಿದೆ. ಪರೀಕ್ಷಾ ಭಾರ ಇಳಿದು ಬಿಡುವಿನ ದಿನಗಳು ದೊರೆತಿವೆ. ರಜೆ ಎಂದರೆ ಮಕ್ಕಳಿಗೆ ಹಬ್ಬ. ಈ ಹಬ್ಬವನ್ನು ಇನ್ನಷ್ಟು ವಿಶೇಷಗೊಳಿಸಲು ಈಗ ಬೇಸಿಗೆ ಕ್ರೀಡಾಶಿಬಿರಗಳು ಆರಂಭವಾಗಿವೆ.ರಜೆಯ ದಿನಗಳು ಹರಟೆಯಲ್ಲಿಯೇ ಕಳೆದುಹೋಗದಿರಲೆಂದು ಸಮೀಪದ ಮೂರ್ನಾಡು ವಿದ್ಯಾಸಂಸ್ಥೆಯ ಆಶ್ರಯದಲ್ಲಿರುವ ಜನರಲ್ ಕೆ.ಎಸ್. ತಿಮ್ಮಯ್ಯ ಅಕಾಡೆಮಿ ಫಾರ್ ಸ್ಪೋರ್ಟ್ಸ್ ಆ್ಯಂಡ್ ಗೇಮ್ಸ ವತಿಯಿಂದ ಒಂದು ತಿಂಗಳ ಬೇಸಿಗೆ ಕ್ರೀಡಾಶಿಬಿರವನ್ನು ಹಮ್ಮಿಕೊಂಡಿದೆ. ದೈಹಿಕ ವ್ಯಾಯಾಮ, ಕ್ರೀಡೆ, ಕಸರತ್ತುಗಳೊಂದಿಗೆ ವಿಶೇಷವಾಗಿ ಹಾಕಿ ಮತ್ತು ಕ್ರಿಕೆಟ್‌ನಲ್ಲಿ ಯುವಪೀಳಿಗೆಯನ್ನು ತೊಡಗಿಸುವ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಅಕಾಡೆಮಿಯು ಬೇಸಿಗೆ ಕ್ರೀಡಾತರಬೇತಿ ಶಿಬಿರವನ್ನು ಹಮ್ಮಿಕೊಳ್ಳುತ್ತ ಬಂದಿದೆ.ಮಕ್ಕಳಿಗೆ ಆಟದ ಮೂಲಕ ಬದುಕಿನ ಪಾಠ ಕಲಿಸುವಲ್ಲಿ ಶಿಬಿರ ನೆರವಾಗುತ್ತಿದೆ. ಪ್ರತಿದಿನ ಬೆಳಿಗ್ಗೆ 7ರಿಂದ 9ಗಂಟೆಯವರೆಗೆ ನುರಿತ ತರಬೇತಿದಾರರಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಹಾಕಿ ಮತ್ತು ಕ್ರಿಕೆಟ್ ತರಬೇತಿಗೆ ಬೇಕಾದ ಎಲ್ಲ ರೀತಿಯ ಕ್ರೀಡಾ ಸಾಮಗ್ರಿಗಳನ್ನು ಅಕಾಡೆಮಿಯು ಹೊಂದಿದೆ. ಮೂರ್ನಾಡು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಬೇಸಿಗೆ ಕ್ರೀಡಾ ತರಬೇತಿ ಶಿಬಿರವು ಪ್ರಯೋಜನಕಾರಿಯಾಗಿದೆ.ಹಾಕಿ ಕ್ರೀಡೆಗೆ ಐಕೊಳ ಗ್ರಾಮದ ಎ.ಜಿ. ಕುಶಾಲಪ್ಪ ಹಾಗೂ ಕ್ರಿಕೆಟ್‌ಗೆ ಬೇತ್ರಿ ಗ್ರಾಮದ ಜಿ.ವಿ. ಚಂದ್ರಶೇಖರ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವರ್ಷ ನಾಲ್ಕನೇ ತರಬೇತಿ ಶಿಬಿರವು ಶುಕ್ರವಾರವೇ ಪ್ರಾರಂಭಗೊಂಡಿದೆ.ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯ

ಮೂರ್ನಾಡು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಜನರಲ್ ತಿಮ್ಮಯ್ಯ ಕ್ರೀಡಾ ಅಕಾಡೆಮಿಯನ್ನು ನಾಲ್ಕು ವರ್ಷಗಳ ಹಿಂದೆ ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಪಿ. ಗಣೇಶ್ ಉದ್ಘಾಟಿಸಿದರು. ನಂತರದ ವರ್ಷಗಳಲ್ಲಿ ಅಕಾಡೆಮಿ ವತಿಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಹಲವರು. ವಿದ್ಯಾರ್ಥಿಗಳ ತರಬೇತಿಗಾಗಿ ಸುಸಜ್ಜಿತವಾದ ಎರಡು ಆಟದ ಮೈದಾನಗಳಿವೆ.ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಎರಡು ಕ್ರೀಡಾ ಕೊಠಡಿಗಳಿವೆ. ಮೂರ್ನಾಡಿನ ಕೃಷಿಕ ಹಾಗೂ ನಿವೃತ್ತ ಶಿಕ್ಷಕ ಲಾಲುಮುದ್ದಯ್ಯ ಮಕ್ಕಳ ಕ್ರೀಡಾಚಟುವಟಿಕೆಗಳಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಮಕ್ಕಳ ಮನೋವಿಕಾಸಕ್ಕಾಗಿ, ಕುತೂಹಲ ಉದ್ದೀಪಿಸುವ ಸಲುವಾಗಿ, ಕ್ರಿಯಾಶೀಲತೆಗೆ ಚಾಲನೆ ನೀಡುವ ಕಾರಣದಿಂದ ವ್ಯವಸ್ಥಿತವಾಗಿ ಬೇಸಿಗೆ ಕ್ರೀಡಾ ತರಬೇತಿ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎನ್ನುತ್ತಾರೆ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಜಿ. ಮಾದಪ್ಪ. ಶಿಬಿರದಿಂದಾಗಿ ಮಕ್ಕಳು ಕ್ರಿಕೆಟ್ ಮತ್ತು ಹಾಕಿ ಕ್ರೀಡೆಗಳಲ್ಲಿ ತರಬೇತಿ ಹೊಂದುತ್ತ ರಜೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)