ಆಟದ ಪ್ರೀತಿ, ಯಶಸ್ಸಿನ ಕೀರ್ತಿ!

7

ಆಟದ ಪ್ರೀತಿ, ಯಶಸ್ಸಿನ ಕೀರ್ತಿ!

Published:
Updated:

‘ಗೆಲ್ಲಲೇಬೇಕು ಎನ್ನುವ ಒತ್ತಡದಿಂದ ಯಾವತ್ತಿಗೂ ಆಡಲಿಲ್ಲ. ಅದಕ್ಕೋಸ್ಕರ ಚಿಂತಿಸಲಿಲ್ಲ. ಸೋತಾಗ ಬೇಸರಿಸಿಕೊಳ್ಳಲಿಲ್ಲ. ಸುಮ್ಮನೇ ಆಡುತ್ತಾ ಹೋದೆ. ಆಟವನ್ನು ಸಂತೋಷದಿಂದ ಅನುಭವಿಸುತ್ತಾ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಮುನ್ನುಗ್ಗಿದೆ. ಇದೇ ತತ್ವವೇ ನನಗೆ ಯಶಸ್ಸು ತಂದು ಕೊಟ್ಟಿತು. ಭವಿಷ್ಯದಲ್ಲಿ ಹೊಸ ಹೊಸ ಸಾಧನೆಗಳನ್ನು ಮಾಡಲು ಪ್ರೇರೆಪಿಸಿತು...’ಹೀಗೆ ಹೇಳುತ್ತಲೇ ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಆರಂಭಿಸಿದರು ಕಿರಿಯ ವಯಸ್ಸಿನ ಪ್ರತಿಭಾವಂತ ಗಾಲ್ಫ್ ಆಟಗಾರ ಅಜ್ಜಿಕುಟ್ಟಿರ ತ್ರಿಶೂಲ್ ಚಿನ್ನಪ್ಪ. ಇವರು ಮೂಲತಃ ಕೊಡಗಿನವರು.ಹಾಕಿ ಆಟಕ್ಕೆ ಹೆಸರುವಾಸಿಯಾದ ಕೊಡಗಿನ ‘ಹಾಕಿ’ ಪ್ರಭಾವದಿಂದ ತಪ್ಪಿಸಿಕೊಂಡು ‘ಗಾಲ್ಫ್’ ಮೇಲಿನ ಪ್ರೀತಿಗೋಸ್ಕರ ತಮ್ಮ 10ನೇ ವಯಸ್ಸಿಗೆ ಬೆಂಗಳೂರಿಗೆ ಬಂದರು. ಅವರ ‘ಗಾಲ್ಫ್’ ಪ್ರೀತಿಯೇ ಅವರಿಗಿಂದು ಯಶಸ್ಸನ್ನು ತಂದು ಕೊಡುತ್ತಿದೆ. ಬದುಕಿನಲ್ಲಿ ದೊಡ್ಡ ಸಾಧನೆಯನ್ನು ತಮ್ಮದಾಗಿಸಿಕೊಳ್ಳಲು ನೆರವಾಗುತ್ತಿದೆ.11 ವರ್ಷದವರಿದ್ದಾಗಲೇ ಗಾಲ್ಫ್ ಆಡಲು ಆರಂಭಿಸಿದ ತ್ರಿಶೂಲ್ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಸಾಧನೆಗಳನ್ನು ಮಾಡಿದ್ದಾರೆ. 2007ರಲ್ಲಿ ಭಾರತೀಯ ಗಾಲ್ಫ್ ಯೂನಿಯನ್ ಟೂರ್ನಿಗೆ ಆಡಲು ಆರಂಭಿಸಿದ್ದು, ಇದೇ ವರ್ಷದಲ್ಲಿ ಚೀನಾದಲ್ಲಿ ನಡೆದ 16 ವರ್ಷದೊಳಗಿನವರ ‘ನಿಕ್ ಫಾಲ್ಡೊ  ಗಾಲ್ಫ್’ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 2008ರಲ್ಲಿ ಸಿಂಗಪುರದಲ್ಲಿ ನಡೆದ ‘ಜೂನಿಯರ್ ಗಾಲ್ಪ್ ಚಾಂಪಿಯನ್‌ಷಿಪ್’ನಲ್ಲಿ ಭಾರತ ತಂಡದ ಸದಸ್ಯರಾಗಿದ್ದು, 2010ರಲ್ಲಿ ನಡೆದ ‘10ನೇಏಷ್ಯನ್ ಫೆಸಿಫಿಕ್ ಜೂನಿಯರ್ ಗಾಲ್ಫ್ ಚಾಂಪಿಯನ್‌ಷಿಪ್’ನಲ್ಲಿ ಪಾಲ್ಗೊಂಡಿದ್ದು, ಕಳೆದ ವರ್ಷ  ನಡೆದ ‘ಸಿಂಗಪುರ ಜೂನಿಯರ್ ಗಾಲ್ಪ್ ಚಾಂಪಿಯನ್‌ಷಿಪ್’ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು ಸೇರಿದಂತೆ ಇತರ ಅನೇಕ ಸಾಧನೆಗಳು ತ್ರಿಶೂಲ್ ಹೆಸರಿನಲ್ಲಿವೆ.ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವದ ಪ್ರಬಲ 16 ತಂಡಗಳು ಭಾಗವಹಿಸಿದ್ದ 2008ರ ಫ್ರಾನ್ಸ್ ಹಾಗೂ ಜಿನಿವಾದಲ್ಲಿ ನಡೆದಿದ್ದ ‘ಇವೆನ್ ಮಾಸ್ಟರ್ಸ್‌ ಜೂನಿಯರ್ ಕಪ್ ಟೂರ್ನಿ’ಗೆ ತ್ರಿಶೂಲ್ ಭಾರತ ತಂಡದ ಸದಸ್ಯರಾಗಿದ್ದರು. ಕೋಚ್ ತರುಣ್ ಸರ್‌ದೇಸಾಯಿ ಅವರ ಗರಡಿಯಲ್ಲಿ ಪಳಗಿದ ತ್ರಿಶೂಲ್  2010ರಲ್ಲಿ ಕೊಯಮುತ್ತೂರಿನಲ್ಲಿ ನಡೆದ ‘ಐಜಿಯು ವಿಭಾಗದ ರಾಷ್ಟ್ರೀಯ ಗಾಲ್ಫ್ ಟೂರ್ನಿ’ಯಲ್ಲಿ ಗೆಲುವು ಪಡೆದಿದ್ದರು.ಕಳೆದ ತಿಂಗಳು ‘ಮಲೇಷ್ಯಾದಲ್ಲಿ ನಡೆದ ಏಷ್ಯಾ ಜೂನಿಯರ್ ಗಾಲ್ಫ್ ಚಾಂಪಿಯನ್’ಷಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

ಸದ್ಯಕ್ಕೆ ‘ನಿಕ್ ಫಾಲ್ಡೋ ಸರಣಿ’ಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇದರಿಂದ ಇದೇ ವರ್ಷದ ಏಪ್ರಿಲ್‌ನಲ್ಲಿ ನಡೆಯಲಿರುವ ‘ನಿಕ್ ಫಾಲ್ಡೋ ಸರಣಿ’ಯ ಏಷ್ಯಾ ಗ್ರ್ಯಾಂಡ್ ಫೈನಲ್‌ನಲ್ಲಿ ಚೀನಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದಲ್ಲಕ್ಕಿಂತ ಮಿಗಿಲಾಗಿ 2010ರಲ್ಲಿ ‘ವರ್ಷದ ಆಟಗಾರ’ ಎನ್ನುವು ಕೀರ್ತಿಯೂ ಅವರಿಗೆ ಲಭಿಸಿದೆ.ತ್ರಿಶೂಲ್ ಅವರ ತಂದೆ ಎ.ಸಿ. ಕಾವೇರಪ್ಪ. ಅವರು ಕೂಡಾ ಹವ್ಯಾಸಿ ಗಾಲ್ಫ್ ಆಟಗಾರರು. ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ತ್ರಿಶೂಲ್ ಪಿಯುಸಿ ಓದುತ್ತಿದ್ದಾರೆ. ಮುಂದೆ ವೃತ್ತಿಪರ ಗಾಲ್ಫ್ ಆಟ ಗಾರ ಆಗಬೇಕು. ‘ಗಾಲ್ಫ್’ ಮೂಲಕವೇ ಭಾರತದ ಕ್ರೀಡಾ ಕ್ಷೇತ್ರಕ್ಕೆ ಕಾಣಿಕೆ ಸಲ್ಲಿಸಬೇಕು ಎನ್ನುವ ತುಡಿತ. ಕನಸು ಅವರದು.ಅವರ ಕನಸುಗಳು ಈಡೇರಲಿ ಎನ್ನುವ ಹಾರೈಕೆಯೊಂದಿಗೆ!..

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry