ಆಟಬಿಟ್ಟು ಪಾಠಕ್ಕೆ ತೆರಳಿದ ಮಕ್ಕಳು

7

ಆಟಬಿಟ್ಟು ಪಾಠಕ್ಕೆ ತೆರಳಿದ ಮಕ್ಕಳು

Published:
Updated:
ಆಟಬಿಟ್ಟು ಪಾಠಕ್ಕೆ ತೆರಳಿದ ಮಕ್ಕಳು

ಚಿಕ್ಕಮಗಳೂರು: ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭ ಗೊಂಡಿದ್ದರಿಂದ ವಿದ್ಯಾರ್ಥಿಗಳು ಬುಧವಾರ ಆಟ ಕೈಬಿಟ್ಟು ಪಾಠಕ್ಕಾಗಿ ಶಾಲೆಗೆ ತೆರಳಲು ಮುಂದಾದರು.ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ಕೈಚೀಲವನ್ನು ಹೆಗಲಿಗೇರಿಸಿಕೊಂಡು ಬಸ್ ಹತ್ತಿ ನಗರಕ್ಕೆ ಆಗಮಿಸಿದರೆ, ನಗರದ ವಿದ್ಯಾರ್ಥಿಗಳು ಬ್ಯಾಟು, ಬಾಲು ಮರೆತು ಪುಸ್ತಕ ಹಿಡಿದು ಸೈಕಲ್‌ಗಳಲ್ಲಿ ಶಾಲೆಗೆ ತೆರಳಿದರು. ಪ್ರಾರ್ಥನೆ ಸಲ್ಲಿಸಿ, ಶಾಲೆಗೆ ಪಾದಾರ್ಪಣೆ ಮಾಡಿದರು.ಸಹೋದರ, ಸಹೋದರಿಯನ್ನು, ಅಕ್ಕ, ತಮ್ಮ ಮತ್ತು ತಂಗಿಯ ಕೈಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಶಾಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಕಂಡು ಬರಲಿಲ್ಲ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ  ಬ್ಯಾನರ್‌ಗಳು ಗೋಚರಿಸಿದರೆ, `ಶಾಲಾ ಪ್ರಾರಂಭೋತ್ಸವ~, `ಇಂದೇ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ದಾಖಲು ಮಾಡಿ~ ದಾಖಲಾತಿ ಆರಂಭಗೊಂಡಿದೆ ಎಂಬ ಬರಹಗಳು ಕಂಡು ಬಂದವು.ಮಕ್ಕಳನ್ನು ಬೇರೆ ಶಾಲೆಗಳಲ್ಲಿ ಸೇರಿಸಲು ವರ್ಗಾವಣೆ ಪತ್ರ ಪಡೆಯಲು ಪೋಷಕರು ಮಕ್ಕಳೊಂದಿಗೆ ಶಾಲೆಗಳಿಗೆ ತೆರಳಿದರೆ,ಮತ್ತೆ ಕೆಲವರು ತಮ್ಮ ಮಕ್ಕಳನ್ನು ಶಾಲೆಗಳಲ್ಲಿ ಸೇರಿಸಲು ಮುಂದಾದರು. ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳು ಹಾಗೂ ಬ್ಯಾಗ್‌ಗಳನ್ನು ಖರೀದಿಸಲು ಪುಸ್ತಕ ಅಂಗಡಿಗಳ ಮುಂದೆ ವಿದ್ಯಾರ್ಥಿಗಳು, ಪೋಷಕರು ನಿಂತಿದ್ದು ಗೋಚರಿಸಿತು.ನಗರದ ಹೃದಯ ಭಾಗದಲ್ಲಿರುವ ಆಜಾದ್ ಪಾರ್ಕ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಳಿರು, ತೋರಣಗಳಿಂದ ಶಾಲೆಯನ್ನು ಸಿಂಗರಿಸಲಾಗಿತ್ತು. ಶಾಲೆ ಮುಂಭಾಗದಲ್ಲಿ ತೋರಣ ಕಂಡು ಬಂದರೆ, ಹೊಸದಾಗಿ ಮಕ್ಕಳನ್ನು ಸೇರಿಸಲು ಶಾಲೆಗೆ ಪೋಷಕರನ್ನು ಸ್ವಾಗತಿಸಲು ಬಾಳೆಕಂಬ ನೆಡಲಾಗಿತ್ತು.

ರಜೆ ದಿನಗಳಲ್ಲಿ ಅತ್ತ ಚಿಕ್ಕಮಗಳೂರು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬ್ಯಾಟು ಬಾಲಿನದ್ದೆ ಸಪ್ಪಳ.ಕ್ರಿಕೆಟ್ ಆಟಕ್ಕೆ ಕೆಲವರು ಮುಂದಾಗಿದ್ದರು. ಕಲ್ಲುಗಳನ್ನೆ ವಿಕೆಟ್‌ಗಳನ್ನಾಗಿಸಿಕೊಂಡು ಆಟವಾಡು ತ್ತಿದ್ದರು. ಇತ್ತ ನಗರಸಭೆ ಉದ್ಯಾನ ವನದಲ್ಲಿ ಪೋಷಕರು ಮಕ್ಕಳನ್ನು ಕರೆತಂದು ಜೋಕಾಲಿ, ಜಾರುಬಂಡಿ ಗಳಲ್ಲಿ ಕುಳ್ಳಿರಿಸಿ ಆಟವಾಡಿಸಿಕೊಂಡು ಮಕ್ಕಳನ್ನು ಮನೆಗೆ ಕರೆದೊಯ್ಯು ತ್ತಿದ್ದರು.ಆದರೆ ಈ ದಿನ ಶಾಲೆ ಆರಂಭವಾಗಿದ್ದರಿಂದ ಪ್ರತಿನಿತ್ಯ ಗಿಜಿಗುಡುತ್ತಿದ್ದ ಜಿಲ್ಲಾ ಆಟದ ಮೈದಾನ ಮತ್ತು ನಗರಸಭೆ ಉದ್ಯಾನವನ ಮಕ್ಕಳಿಲ್ಲದೆ ಬಣಗುಡುತ್ತಿತ್ತು. ಒಟ್ಟಾರೆಯಾಗಿ ಶಾಲೆ ಆರಂಭ ಗೊಂಡಿದ್ದರಿಂದ ಕೆಲವು ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಶಾಲೆಯತ್ತ ಹೆಜ್ಜೆಹಾಕಿದರು. ಮತ್ತೆ ಕೆಲವರು ಸೈಕಲ್ ಏರಿ ರಜೆಯಲ್ಲಿ ಕಳೆದ ದಿನಗಳನ್ನು ಸ್ನೇಹಿತರಿಗೆ ವಿವರಿಸುತ್ತಾ ಶಾಲೆಗೆ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry