ಆಟೊದಲ್ಲಿ ಚೀನಿ ಯುವಕರ ಭಾರತ ದರ್ಶನ!

ಶನಿವಾರ, ಜೂಲೈ 20, 2019
22 °C

ಆಟೊದಲ್ಲಿ ಚೀನಿ ಯುವಕರ ಭಾರತ ದರ್ಶನ!

Published:
Updated:

ಹುಬ್ಬಳ್ಳಿ:  ದಕ್ಷಿಣ ಚೀನಾದಿಂದ ಚೆನ್ನೈಗೆ. ಅಲ್ಲಿಂದ ಆಟೊದಲ್ಲಿ ಬೆಂಗಳೂರು ಸುತ್ತಿ ಶುಕ್ರವಾರ ಹುಬ್ಬಳ್ಳಿಗೆ ಬಂದಿದ್ದರು ಆ ಚೀನಿ ಯುವಕರು. ಆ ಯುವಕರಿಗಿಂತ ಅವರೊಂದಿಗಿದ್ದ ಆಟೊ ಎಲ್ಲರ ಗಮನ ಸೆಳೆಯುತ್ತಿತ್ತು. ಏಕೆಂದರೆ, ರಾಜ್ಯದಿಂದ ರಾಜ್ಯಕ್ಕೆ ಆ ಯುವಕರನ್ನು ಹೊತ್ತು ತಿರುಗಿದ್ದೇ ಆ ಆಟೊ. ಬಗೆ ಬಗೆಯ ಬಣ್ಣ ಹೊದ್ದು, ಚೀನಿ ಅಕ್ಷರಗಳನ್ನು ಒಳಗೊಂಡಿದ್ದ ಟಿಎನ್-32 ವೈ 6985 ಸಂಖ್ಯೆಯ ಈ ಆಟೊ ಹುಬ್ಬಳ್ಳಿಗೆ ಬಂದಾಗ ಜನರಲ್ಲಿ ಕುತೂಹಲ ಮನೆ ಮಾಡಿತ್ತು.ಚೀನಾದಿಂದ ಬಂದಿರುವ ಈ ಯುವಕರ ಹೆಸರು ಟಿಮ್ ಹೋ ಮತ್ತು ಹಾಂಗ್ ಹೊಯಿಫು. ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಂಗ್ ಮತ್ತು ಚೀನಾದಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಟಿಮ್ ಬಾಲ್ಯದ ಸ್ನೇಹಿತರು.ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ಯೋಚಿಸುತ್ತಿದ್ದಾಗ ಇವರಿಗೆ ಆಟೊದಲ್ಲಿ ಭಾರತ ಸುತ್ತಬಾರದೇಕೆ ಎಂದೆನಿಸಿತಂತೆ. ಅದರಂತೆ, ದಕ್ಷಿಣ ಚೀನಾದ ಗ್ಯೂ ಜೋ ಪ್ರಾಂತ್ಯದಿಂದ ಹೊರಟ ಇವರು, ಚೆನ್ನೈನಲ್ಲಿ ಆಟೊವನ್ನು ಬಾಡಿಗೆಗೆ ಪಡೆದು `ಭಾರತ್ ಯಾತ್ರಾ' ಆರಂಭಿಸಿದರು.ಹೀಗೆ, ಇವರು ಭಾರತ ದರ್ಶನ ಆರಂಭಿಸಿದ್ದು ಜುಲೈ ಮೂರರಂದು. ಇವರ ವಿಭಿನ್ನ ಪ್ರಯತ್ನದ ಬಗ್ಗೆ ಮಾಹಿತಿ ಪಡೆದ ಚೀನಾದ `ಟ್ರಾವೆಲ್ ಚಾನೆಲ್' ಎಂಬ ಟಿವಿ ವಾಹಿನಿ, ಈ ಸ್ನೇಹಿತರನ್ನು ಹಿಂಬಾಲಿಸುತ್ತಾ ಇವರ ಪ್ರವಾಸದ ಕ್ಷಣಗಳನ್ನು ಸೆರೆ ಹಿಡಿಯುತ್ತಿದೆ.ಅಂತರರಾಷ್ಟ್ರೀಯ ವಾಹನ ಚಾಲನಾ ಪರವಾನಿಗೆ ಹೊಂದಿರುವ ಹಾಂಗ್ ತಾವೇ ಆಟೊ ಚಾಲನೆ ಮಾಡುತ್ತಾರೆ. ಕರ್ನಾಟಕದಲ್ಲಿ ಹುಬ್ಬಳ್ಳಿ ಇವರ ಕೊನೆಯ ಭೇಟಿ ಸ್ಥಳ. ಇಲ್ಲಿಂದ ಅವರು ಗೋವಾದ ಪಣಜಿಗೆ ತೆರಳಿದರು.ಆಟೊ ಯಾಕೆ?: `ಭಾರತದಲ್ಲಿ  ಕಾಲಿಟ್ಟ ನಾವು ಇಲ್ಲಿನ ಸಾರಿಗೆ ವ್ಯವಸ್ಥೆಯಲ್ಲಿ ಆಟೊಗೆ ಇರುವ ಮಹತ್ವ ತಿಳಿದುಕೊಂಡೆವು.  ನಮ್ಮ ಪ್ರವಾಸಕ್ಕೆ ಆ ವಾಹನವನ್ನೇ ಬಳಸಲು ನಿರ್ಧರಿಸಿದೆವು' ಎಂದು ಟಿಮ್ `ಪ್ರಜಾವಾಣಿ'ಗೆ ತಿಳಿಸಿದರು.`ಆಟೊ ಸುಲಭವಾಗಿ ಕೈಗೆಟುಕುವ ವಾಹನ. ಇದರಲ್ಲಿ ಪ್ರಯಾಣಿಸುವಾಗ ಜನರ ಜೊತೆ ಬೆರೆಯುವುದು ಸುಲಭ. ಹೀಗಾಗಿ ಈ ವಾಹನವನ್ನೇ ಆಯ್ಕೆ ಮಾಡಿಕೊಂಡೆವು' ಎಂದು ಸ್ನೇಹಿತನನ್ನು ಬೆಂಬಲಿಸಿದರು ಹಾಂಗ್.ಟಿಮ್ ಮತ್ತು ಹಾಂಗ್ ಅವರ ಈ `ಭಾರತ ಪ್ರವಾಸ'ಕ್ಕೆ ಸುಮಾರು 5,000 ಅಮೆರಿಕನ್ ಡಾಲರ್ (ಅಂದಾಜು ರೂ3 ಲಕ್ಷ ) ವೆಚ್ಚ ಆಗಲಿದೆಯಂತೆ.ಇನ್ನು, ಭಾರತೀಯರು ಮತ್ತು ಕನ್ನಡಿಗರ ಬಗ್ಗೆ ಏನು ಹೇಳುತ್ತೀರಿ ಎಂದಾಗ, `ಭಾರತೀಯರ ಸೌಜನ್ಯ ಗುಣ ಏನೆಂಬುದನ್ನು ಕೇಳಿ ತಿಳಿದಿದ್ದೆವು. ಇಲ್ಲಿ ಬಂದ ನಂತರ ಅದನ್ನು ಅನುಭವಿಸುತ್ತಿದ್ದೇವೆ. ಇಷ್ಟು ಒಳ್ಳೆಯ ಜನರು ಜಗತ್ತಿನ ಬೇರೆಲ್ಲೂ ಇರಲಾರರು.ಅದರಲ್ಲೂ ಕರ್ನಾಟಕದ ಜನರ ಔದಾರ್ಯ ಅಪಾರ, ಬೆಂಗಳೂರಿನಿಂದ ಇಲ್ಲಿಯವರೆಗೆ ಎಂದೂ ನಮಗೆ ಅನ್ಯತಾ ಭಾವ ಕಾಡದಂತೆ ಅವರು ನಡೆದುಕೊಂಡಿದ್ದಾರೆ. ನಮ್ಮ ಜೀವನದಲ್ಲಿ ಈ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ' ಎಂದು ಸಂತಸಪಟ್ಟರು ಟಿಮ್ ಮತ್ತು ಹಾಂಗ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry