ಮಂಗಳವಾರ, ನವೆಂಬರ್ 19, 2019
29 °C

ಆಟೊದಲ್ಲಿ ಪುಸ್ತಕ ಭಂಡಾರ

Published:
Updated:
ಆಟೊದಲ್ಲಿ ಪುಸ್ತಕ ಭಂಡಾರ

ಬೆಂಗಳೂರಿನ ಹಲವು ಆಟೊ ಚಾಲಕರು ಗೊತ್ತಲ್ಲ, ಪ್ರಯಾಣಿಕರು ತಲುಪಬೇಕಿರುವ ಸ್ಥಳ ತೀರಾ ಹತ್ತಿರವಾದರೂ ಬರಲೊಲ್ಲರು. ಹೆಚ್ಚು ದೂರ ಇದ್ದರೂ ಗೊಣಗುತ್ತಾರೆ.ಜೆ.ಸಿ.ನಗರದಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಆಟೊ ಹಿಡಿಯಲು ಯತ್ನಿಸುವವರದ್ದು ಅದೇ ಗೋಳು. ಇಲ್ಲಿಂದ ಅಲ್ಲಿಗೆ ಹೋಗುವುದೆಂದರೆ ಆಟೊ ಚಾಲಕರಿಗೆ ಯಾಕೋ ಬೇಸರ. ಹೆಚ್ಚು ದೂರವೂ ಅಲ್ಲದ, ಅಷ್ಟೇನೂ ಸಮೀಪವೂ ಇಲ್ಲದ ಈ ಮಾರ್ಗಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು ಎಷ್ಟೋ ಆಟೊ ಚಾಲಕರಿಗೆ ಒಲ್ಲದ ಸಂಗತಿ. ಇನ್ನು ಕೆಲವರು ಮೀಟರ್ ತೋರಿಸುವ ದರಕ್ಕಿಂತ ಹೆಚ್ಚು ಕೊಡಬೇಕೆಂದು ಬಯಸುತ್ತಾರೆ.ಒಮ್ಮೆ ಆದದ್ದು ಅದೇ ಅನುಭವ. `ಮೆಜೆಸ್ಟಿಕ್' ಎಂದ ತಕ್ಷಣ ನಾಲ್ಕೈದು ಆಟೊ ಚಾಲಕರು ಒಂದು ಕ್ಷಣವೂ ನಿಲ್ಲದೇ ಹೋಗಿಯೇಬಿಟ್ಟರು. ಇನ್ನೂ ಗಂಟೆ ರಾತ್ರಿ 9 ಆಗಿದ್ದರೂ ಕೆಲವರು ಮೀಟರ್ ತೋರಿಸುವ ಹಣದ ದುಪ್ಪಟ್ಟು ಕೊಡಿ ಎಂದು ಬೇಡಿಕೆ ಇಟ್ಟರು. ಅಷ್ಟರಲ್ಲಿಯೇ ಬಂತು ಇನ್ನೊಂದು ಆಟೊ. ಅವರೂ ಅದೇ ರಾಗ ಹಾಡಬಹುದು ಎಂದುಕೊಂಡು, `ಮೆಜೆಸ್ಟಿಕ್' ಎಂದು ಕೇಳಿದೆ. `ಸರಿ, ಕುಳಿತುಕೊಳ್ಳಿ' ಎಂಬ ಉತ್ತರ ಬಂತು. ಅನುಮಾನ, ಅಚ್ಚರಿ ಬೆರೆತ ದನಿಯಲ್ಲಿ `ಮೆಜೆಸ್ಟಿಕ್ ಬಸ್ ನಿಲ್ದಾಣದ ಒಳಗಡೆ ಹೋಗಬೇಕು' ಎಂದೆ. `ಆಯ್ತಮ್ಮ ಕುಳಿತುಕೊಳ್ಳಿ' ಎಂದರು. ಒಳಗೆ ಕುಳಿತಾಗ ಕಂಡದ್ದು ನಿಜದ ಅಚ್ಚರಿ.ಕುಳಿತುಕೊಳ್ಳುವ ಸೀಟಿನ ಮುಂಭಾಗದಲ್ಲಿ ಗಾಜಿನ ಶೆಲ್ಫ್. ಅದರಲ್ಲಿ ಪುಸ್ತಕಗಳ ರಾಶಿ. ಮಕ್ಕಳ ಪುಸ್ತಕದಿಂದ ಹಿಡಿದು ಕನ್ನಡ, ಇಂಗ್ಲಿಷ್ ಭಾಷೆಯ ವಿವಿಧ ಚಿಕ್ಕಚಿಕ್ಕ ಪುಸ್ತಕಗಳ ಸಂಗ್ರಹ ಅಲ್ಲಿದೆ. `ಅರೆ, ಇದೇನು ಮಾರಾಟಕ್ಕೆ ಇಟ್ಟ ಪುಸ್ತಕವಾ' ಎಂದು ಪ್ರಶ್ನಿಸಿದೆ. `ಇಲ್ಲಾ ಮೇಡಂ. ಇದು ಫ್ರೀ. ಯಾರು ಬೇಕಾದರೂ ಒಯ್ಯಬಹುದು. ಖಾಲಿಯಾದಾಗ ಮತ್ತೆ ಇಡುತ್ತೇನೆ. ನನ್ನ ಬಳಿ ಸಾಕಷ್ಟು ಪುಸ್ತಕಗಳಿವೆ. ಅವನ್ನೆಲ್ಲ ತಂದು ಇಲ್ಲಿ ಇಡುತ್ತೇನೆ. ಅದೂ ಖಾಲಿಯಾದಾಗ ಖರೀದಿ ಮಾಡಿ ಇಡುತ್ತೇನೆ' ಎಂದರು.`ಉಚಿತ' ಎಂದ ತಕ್ಷಣ ಮನಸ್ಸಿನಲ್ಲಿ ಒಂದೇ ಬಾರಿ ಎಷ್ಟೆಲ್ಲ ಪ್ರಶ್ನೆ ಹುಟ್ಟಿತು. ಈ ಸೇವೆ ಯಾಕೆ, ಇದರ ಉದ್ದೇಶವೇನು? ಎಷ್ಟು ವರ್ಷಗಳಿಂದ ಈ ಸೇವೆ, ಪುಸ್ತಕ ಯಾರು ಕೊಡುತ್ತಾರೆ.... ಹೀಗೆ ಕೇಳಿದ ಪ್ರಶ್ನೆಗಳಿಗೆ ಅವರು ಶಾಂತಚಿತ್ತದಿಂದ ಉತ್ತರಿಸುತ್ತಾ ಹೋದರು...`ನನ್ನ ಹೆಸರು ಜೋಸೆಫ್ ನಟರಾಜನ್. ಸುಮಾರು 10 ವರ್ಷಗಳಿಂದ ನಾನು ಆಟೊ ಓಡಿಸುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ಇಲ್ಲಿ ಇಟ್ಟಿರುವ ಪುಸ್ತಕಗಳು ಅದೆಷ್ಟೋ ಲೆಕ್ಕ ಹಾಕಿಲ್ಲ. ಹೆಚ್ಚಿನ ಪ್ರಯಾಣಿಕರು ತೆಗೆದುಕೊಂಡು ಹೋಗುತ್ತಾರೆ. ಕೆಲವರು ತಾವು ತಲುಪುವ ಜಾಗ ಬರುವವರೆಗೆ ಓದಿ ವಾಪಸು ಇಟ್ಟು ಹೋಗುತ್ತಾರೆ. ಖಾಲಿಯಾದಾಗ ಪುನಃ ಇಡುತ್ತೇನೆ.ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂದು ಕನ್ನಡ ಮಾತ್ರವಲ್ಲದೆ ಇಂಗ್ಲಿಷ್, ತಮಿಳು, ತೆಲುಗು ಪುಸ್ತಕಗಳನ್ನೂ ಇಟ್ಟಿದ್ದೇನೆ. ಇವುಗಳಲ್ಲಿ ಹೆಚ್ಚಿನವು ಭಜನೆ ಪುಸ್ತಕಗಳು. ಈ ಸೇವೆ ಹಿಂದೆ ಅಂಥಾದ್ದೇನೂ ವಿಶೇಷತೆ ಇಲ್ಲ. ಸುಮ್ಮನೆ ಜನರಿಗೆ ಪುಸ್ತಕ ಓದುವ ಗೀಳು ಹುಟ್ಟಲಿ, ಎಲ್ಲರೂ ಪುಸ್ತಕ ಪ್ರೇಮಿ ಆಗಲಿ. ಪುಸ್ತಕ ಓದುವುದಕ್ಕಿಂತ ಉತ್ತಮ ಹವ್ಯಾಸ ಇನ್ನೊಂದಿಲ್ಲವಲ್ಲ ಅದಕ್ಕೇ. ಮತ್ತೇನೂ ಇಲ್ಲ' ಎಂದರು.ಅವರ ಮಾತಿನಿಂದ ಇದರ ಹಿಂದೆ ಏನೋ `ಗುಟ್ಟು' ಇದೆ ಎಂದು ಎನ್ನಿಸಿತು. ಅದನ್ನು ಕೆದಕಿದಾಗ ಅವರು ಹೇಳಿದ್ದಿಷ್ಟು: `ನನ್ನ ಜೀವನದ ಒಂದು ಘಟನೆ ಈ ಸೇವೆಗೆ ಪ್ರೇರಣೆ. ನನಗೆ ಮದುವೆಯಾಗಿ 14 ವರ್ಷ ಆಗಿದ್ದರೂ ಮಕ್ಕಳಾಗಿರಲಿಲ್ಲ. ಕಂಡಕಂಡಲ್ಲೆಲ್ಲ ಔಷಧೋಪಚಾರ ಮಾಡಿದೆ. ಏನೂ ಪ್ರಯೋಜನ ಆಗಲಿಲ್ಲ. ಕೆಲವು ಸ್ನೇಹಿತರು, ಸಂಬಂಧಿಗಳು ನಮ್ಮನ್ನು ನೋಡುವ ದೃಷ್ಟಿಯೇ ಬೇರೆಯಾಯಿತು.ನನ್ನ ಪತ್ನಿ ಕೂಡ ತುಂಬಾ ನೊಂದುಕೊಂಡಳು. ಕೊನೆಯದಾಗಿ ಜೀಸಸ್ ಮೊರೆಹೋದೆ. ನನಗೆ ಮಕ್ಕಳಾದರೆ ಸಮಾಜಕ್ಕೆ ನನ್ನ ಕೈಲಾಗುವ ಏನಾದರೊಂದು ಸೇವೆ ಮಾಡುತ್ತೇನೆ' ಎಂದು ಕೋರಿಕೊಂಡೆ. ಕೊನೆಗೂ ಏಸು ನನ್ನ ಮೇಲೆ ಕರುಣೆ ತೋರಿದ. ಮಗಳು ಹುಟ್ಟಿದಳು. ಹೇಳಿಕೇಳಿ ನಾನು ಆಟೊ ಚಾಲಕ. ಈ ವೃತ್ತಿ ಬಿಟ್ಟು ಬೇರೆ ಸಂಪಾದನೆ ಇಲ್ಲ. ನನ್ನ ಸಂಪಾದನೆಗೆ ಪುಸ್ತಕ ಸೇವೆಗಿಂತ ಮಿಗಿಲಾದ ಸೇವೆ ಬೇರೊಂದಿಲ್ಲ ಎನ್ನಿಸಿತು. ವಿದ್ಯಾದಾನವೇ ಶ್ರೇಷ್ಠ ಅಲ್ಲವೇ? ಅದಕ್ಕೇ ಓದನ್ನು ಹಂಚುವ ಮನಸ್ಸಾಯಿತು. ಮೊದಲೆಲ್ಲ ಮಾರುಕಟ್ಟೆಯಿಂದ ಖರೀದಿ ಮಾಡುತ್ತಿದ್ದೆ. ಈಚೆಗೆ ಬೈಬಲ್ ಸೊಸೈಟಿಯವರು ನನಗೆ ಈ ಪುಸ್ತಕಗಳನ್ನು ನೀಡುತ್ತಿದ್ದಾರೆ'.`ಜೀಸಸ್ ನಮಗೆ ಎಷ್ಟು ಕೊಡಬೇಕೋ ಅಷ್ಟು ಕೊಡುತ್ತಾರೆ. ಹೆಚ್ಚಿಗೆ ಹಣ ಪಡೆಯುವ ಆಸೆ ನನಗಿಲ್ಲ. ನನ್ನ ಪಾಲಿಗೆ ಎಷ್ಟು ಇದೆಯೋ ಅಷ್ಟು ಬರುತ್ತದೆ ಅಷ್ಟೇ' ಎಂಬ ಅವರ ಮಾತಿಗೆ ಬೇರೇನೂ ಹೇಳಲು ತೋಚಲಿಲ್ಲ. ಜೋಸೆಫ್ ನಟರಾಜನ್ ಅವರನ್ನು ಸಂಪರ್ಕಿಸಲು: 95382 03811.

ಚಿತ್ರಗಳು: ಗೋವಿಂದರಾಜ ಜವಳಿ

ಪ್ರತಿಕ್ರಿಯಿಸಿ (+)