ಆಟೊ ಗ್ಯಾಸ್ ಬಂಕ್ ಕೊರತೆ: ನೀಗದ ಸಮಸ್ಯೆ

7

ಆಟೊ ಗ್ಯಾಸ್ ಬಂಕ್ ಕೊರತೆ: ನೀಗದ ಸಮಸ್ಯೆ

Published:
Updated:

ಬಳ್ಳಾರಿ: ಎರಡು ಆಟೊಗಳು ಅತಿ ವೇಗದಲ್ಲಿ ಸಮಾನಾಂತರವಾಗಿ ಸಾಗುತ್ತ, ಎದುರುಗಡೆಯಿಂದ ಬರುವ ವಾಹನಗಳ ಚಾಲಕರನ್ನು ಗೊಂದಲಕ್ಕೆ ಈಡುಮಾಡುವ ದೃಶ್ಯ ನಗರದ ಅನಂತಪುರ ರಸ್ತೆಯಲ್ಲಿ ನಿತ್ಯವೂ ಕಂಡುಬರುತ್ತದೆ.ಒಂದು ಆಟೊ ರಿಕ್ಷಾದ ಚಾಲಕ ಇನ್ನೊಂದು ಆಟೊ ರಿಕ್ಷಾದ ಹಿಂಭಾಗಕ್ಕೆ ಕಾಲಿಟ್ಟು, ಅದನ್ನು ದೂಡಿಕೊಂಡು ವೇಗವಾಗಿ ಹೋಗುವ ಈ ಪ್ರಕ್ರಿಯೆಯಿಂದ ಅನೇಕರಿಗೆ ಗೊಂದಲ ಉಂಟಾಗುತ್ತದೆ.

ಒಂದು ಆಟೊ ರಿಕ್ಷಾದ ಚಾಲಕ ಇನ್ನೊಂದು ಆಟೊ ರಿಕ್ಷಾವನ್ನು ದೂಡಿಕೊಂಡು ಹೋಗುವ ಇಂತಹ ಹತ್ತಾರು ದೃಶ್ಯಗಳು ಬೆಳಿಗ್ಗೆಯಿಂದ ಸಂಜೆಯವರೆಗೂ ಈ ರಸ್ತೆಯಲ್ಲಿ ಕಂಡುಬರುತ್ತಿದ್ದು, ಇದಕ್ಕೆ ಕೊನೆ ಎಂಬುದೇ ಇಲ್ಲದಂತಾಗಿದೆ.ಅನಂತಪುರ ರಸ್ತೆಯಲ್ಲಿರುವ ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಬಳಿ ಏಕೈಕ ಆಟೋಗ್ಯಾಸ್ ಬಂಕ್ ಇದ್ದು, ಗ್ಯಾಸ್ ಖಾಲಿಯಾದ ಆಟೊಗಳ ಚಾಲಕರು ಮತ್ತೊಂದು ಆಟೊದ ಸಹಾಯದಿಂದ  ಗ್ಯಾಸ್ ತುಂಬಿಸಿಕೊಳ್ಳಲು ಸಾಗುವುದೇ ಇದಕ್ಕೆ ಕಾರಣ.ಏಕೈಕ ಬಂಕ್: ನಗರದಲ್ಲಿ ಏಳು ಸಾವಿರಕ್ಕೂ ಅಧಿಕ ಆಟೊ ರಿಕ್ಷಾಗಳಿದ್ದು, ಆ ಪೈಕಿ ಮೂರುವರೆ ಸಾವಿರಕ್ಕೂ ಅಧಿಕ ಆಟೊಗಳಿಗೆ ಗ್ಯಾಸ್ ಕಿಟ್ ಅಳವಡಿಸಲಾಗಿದೆ. ಮಿಕ್ಕವು ಪೆಟ್ರೋಲ್‌ನಿಂದ ಚಲಾಯಿಸುವ ಆಟೊಗಳಾಗಿದ್ದು, ಪೆಟ್ರೋಲ್ ಖಾಲಿಯಾದರೆ, ಒಂದು ಖಾಲಿ ಬಾಟಲ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದು ಮತ್ತೆ ವಾಹನ ಮುಂದಕ್ಕೆ ಕೊಂಡೊಯ್ಯಬಹುದಾಗಿದೆ.

ಆದರೆ, ಗ್ಯಾಸ್ ಖಾಲಿಯಾದರೆ ವಾಹನವನ್ನು ಬಂಕ್‌ವರೆಗೆ ತಳ್ಳಿಕೊಂಡು ಹೋಗಿಯೇ ತುಂಬಿಸಬೇಕು. ನಗರದ ಏಕೈಕ ಗ್ಯಾಸ್ ಬಂಕ್ ಅನಂತಪುರ ರಸ್ತೆಯಲ್ಲಿ ಇರುವುದರಿಂದ ಗ್ಯಾಸ್ ಖಾಲಿಯಾದಾಗಲೆಲ್ಲ ಬಂಕ್‌ವರೆಗೆ ತಳ್ಳಿಕೊಂಡೇ ಹೋಗುವ ಅನಿವಾರ್ಯತೆ ಆಟೊ ಚಾಲಕರದ್ದಾಗುತ್ತದೆ.ನಗರದ ಸಂಗಮ್ ವೃತ್ತದಿಂದ ಎಂ.ಜಿ. ಆಟೊಮೊಬಾಯಿಲ್ ವೃತ್ತದ ಮೂಲಕ ಗ್ಯಾಸ್ ಬಂಕ್‌ವರೆಗೆ ಇಳಿಜಾರು ಇರುವುದರಿಂದ ಅಲ್ಲಿ ಬೇರೊಂದು ಆಟೊ ನೆರವಿನೊಂದಿಗೆ ಮುಂದಕ್ಕೆ ಸಾಗಿ ಬಂಕ್ ತಲುಪುವ ಆಟೊಗಳು ಕಂಡುಬರುತ್ತವೆ. ಇನ್ನು ಕೆಲವು ಗ್ಯಾಸ್ ಬಂಕ್‌ಗಳು ಆರಂಭವಾದಲ್ಲಿ ಆಟೊ ಚಾಲಕರಿಗೆ ನೆರವಾಗಲಿದೆ.ಒಂದರ ಹಿಂದೊಂದರಂತೆ ಸಾಗುವ ಈ ಆಟೊಗಳ ಹಿಂದಿನ ಚಾಲಕ ಕಾಲು ಇರಿಸಿ ಮುಂದಿನ ಆಟೊವನ್ನು ದೂಡುತ್ತ ಸಾಗುವಾಗ ಅಪಾಯ ಸಂಭವಿಸುವ ಸಾಧ್ಯತೆಗಳೂ ಇವೆ. ಇದನ್ನು ತಡೆಯುವುದಕ್ಕೆ ಸಂಚಾರ ಠಾಣೆ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.ನಗರದ ಮಹರ್ಷಿ ವಾಲ್ಮೀಕಿ ವೃತ್ತ, ಕೌಲ್‌ಬಝಾರ್, ಸುಧಾ ವೃತ್ತ, ರಾಯಲ್ ವೃತ್ತ, ಮೋತಿ ವೃತ್ತ, ಹವಂಭಾವಿ ರಸ್ತೆ, ಕಪಗಲ್ ರಸ್ತೆ, ಮೋಕಾ ರಸ್ತೆ ಮತ್ತಿತರ ಕಡೆ ಇನ್ನೊಂದೆರಡು ಗ್ಯಾಸ್ ಬಂಕ್‌ಗಳು ಆರಂಭವಾದಲ್ಲಿ ಆಟೊ ರಿಕ್ಷಾಗಳ ಚಾಲಕರಿಗೆ ನೆರವಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, ಇದುವರೆಗೂ ಹೊಸ ಬಂಕ್ ಆರಂಭಿಸಲಾಗಿಲ್ಲ ಎಂದು ಅಮ್ಮಶ್ರೀ ಆಟೊ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಜಾನ್ ಬಾಸ್ಕೋ ತಿಳಿಸುತ್ತಾರೆ.ಆಟೊಗಳಿಗೆ ಕಡ್ಡಾಯವಾಗಿ ಗ್ಯಾಸ್ ಕಿಟ್ ಅಳವಡಿಸುವಂತೆ ಸೂಚಿಸಿರುವ ಪ್ರಾದೇಶಿಕ  ಸಾರಿಗೆ ಇಲಾಖೆ ಬಂಕ್ ಆರಂಭಿಸಲೂ ಗಮನ ಹರಿಸಬೇಕು. ಖಾಸಗಿಯವರು ಬಂಕ್ ಆರಂಭಿಸದಿದ್ದರೆ ಸರ್ಕಾರವೇ ಮುಂದೆಬಂದು ಬಂಕ್ ತೆರೆಯಬೇಕು ಎಂದು ಅವರು ಕೋರುತ್ತಾರೆ.ಇದೀಗ ನಿತ್ಯ 12,500 ಲೀಟರ್ ಗ್ಯಾಸ್ ನಗರದಲ್ಲಿನ ಬಂಕ್‌ಗೆ ಬರುತ್ತಿದ್ದು, 21 ಲೀಟರ್‌ನಷ್ಟು ಬೇಡಿಕೆ ಇದೆ. ಕೊರತೆಯೂ ಇರುವುದರಿಂದ ಸಮಸ್ಯೆ ತಲೆದೋರುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಗಮನಹರಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry