ಭಾನುವಾರ, ಮಾರ್ಚ್ 7, 2021
24 °C
ಜಿಲ್ಲಾಧಿಕಾರಿ ವಿ. ಶಂಕರ್ ಭರವಸೆ

ಆಟೊ ಚಾಲಕರಿಗೆ ವಸತಿ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟೊ ಚಾಲಕರಿಗೆ ವಸತಿ ವ್ಯವಸ್ಥೆ

ಬೆಂಗಳೂರು: ‘ಆಟೊ ಚಾಲಕರಿಗೆ ವಸತಿ ಸೌಕರ್ಯ ಕಲ್ಪಿಸಲು ‘ವಿಶೇಷ ಪ್ರವರ್ಧ ಯೋಜನೆ’ ಜಾರಿಗೆ ತರಲಾಗಿದೆ’ ಎಂದು ಬೆಂಗಳೂರು  ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ನಗರ ಜಿಲ್ಲಾಧಿಕಾರಿ ವಿ. ಶಂಕರ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ನಗರ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.‘ಯೋಜನೆ ಅಡಿ ಆಟೊ ಚಾಲಕರಿಗೆ ಮನೆ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ನಗರದ ಐದು ಕಡೆಗಳಲ್ಲಿ 50 ಎಕರೆ ಭೂಮಿ ಗುರುತಿಸಲಾಗಿದೆ. ಪ್ರತಿ ಮನೆ ನಿರ್ಮಾಣಕ್ಕೆ ರಾಜೀವ್‌ಗಾಂಧಿ ವಸತಿ ನಿಗಮದ ಮತಿಯಿಂದ ತಲಾ ₹ 1.60 ಲಕ್ಷ ಮತ್ತು ಕೇಂದ್ರ ಸರ್ಕಾರದ ವತಿಯಿಂದ ₹ 1 ಲಕ್ಷ ನೀಡಲಾಗುತ್ತದೆ’ ಎಂದರು.‘ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆ ಅಡಿ ಸಹ ನೆರವು ಪಡೆಯಲಾಗುವುದು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆಟೊ ಚಾಲಕರ ಸಂಘಟನೆಯವರು ಸಹ ಅರ್ಹರನ್ನು ಸೂಚಿಸಬೇಕು’ ಎಂದರು. ರಾಜ್ಯ ಅಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ.ವೆಂಕಟಗೌಡ ಮಾತನಾಡಿ, ‘ನಗರದಲ್ಲಿ 1.50 ಲಕ್ಷಕ್ಕೂ ಹೆಚ್ಚು ಆಟೊ ಚಾಲಕರಿದ್ದಾರೆ. ಆದರೆ, ಅವರನ್ನು ಎರಡನೇ ದರ್ಜೆ ನಾಗರಿಕರಂತೆ ಕಾಣಲಾಗುತ್ತಿದೆ’ ಎಂದು ದೂರಿದರು.‘ಚಾಲನಾ ಪರವಾನಗಿ ವರ್ಗಾವಣೆ, ಪರವಾನಗಿ ನವೀಕರಣದ ಸಂದರ್ಭದಲ್ಲಿ ಸಾರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ಸಂಚಾರ ಪೊಲೀಸರ ದೌರ್ಜನ್ಯವೂ ಹೆಚ್ಚಾಗಿದೆ. ಇದನ್ನು ತಡೆಯಬೇಕು’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಈ ಸಂಬಂಧ ಸಾರಿಗೆ ಇಲಾಖೆ ಆಯುಕ್ತರು, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಹಾಗೂ ಡಿಸಿಪಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಸಂಚಾಲಕ ಸಿದ್ಧಾರ್ಥ್ ಶರ್ಮಾ, ‘ಆಟೊ ಚಾಲಕರಿಗೆ ಚಾಲನಾ ಪರವಾನಗಿ ಪಡೆಯಲು ಎಂಟನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಎಂಬ ನಿಯಮ ಇದೆ. ಇದರ ನೆಪದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆಟೊ ಚಾಲಕರನ್ನು ಸುಲಿಗೆ ಮಾಡುತ್ತಿದ್ದಾರೆ. ಇದನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.ಆಟೊಗಳಿಗೆ ಸಬ್ಸಿಡಿ ಹಣವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಇದರಿಂದ ಆಟೊ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಸಬ್ಸಿಡಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ವಾಹನಗಳ ಮೇಲೆ ಜಾಹೀರಾತು ಅಳವಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದವರಿಗೆ ಅನುಮತಿ ನೀಡಲಾಯಿತು. ಜಾಹೀರಾತು ಅಳವಡಿಸಿಕೊಳ್ಳುವವರು ವಾರ್ಷಿಕ ₹ 5 ಸಾವಿರ ಶುಲ್ಕ ಪಾವತಿಸಬೇಕು ಮತ್ತು ವಾಹನಗಳ ಮೇಲೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆಗಳನ್ನು ಹಾಕಬೇಕು ಎಂದು ಸೂಚಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.