ಮಂಗಳವಾರ, ನವೆಂಬರ್ 19, 2019
27 °C

ಆಟೊ ಟೆಕ್

Published:
Updated:

ತಂಪು ಸಮಾಚಾರ

ಹಿಮಾಚ್ಛಾದಿತ ಪ್ರದೇಶಗಳಲ್ಲಿ ವಾಹನ ಚಾಲನೆ ಕಷ್ಟ. ಕೆಲವೊಮ್ಮೆ ವಾಹನಗಳು ಸ್ಟಾರ್ಟ್ ಆಗುವುದೇ ಇಲ್ಲ. ಇದಕ್ಕೆ ಕಾರಣ ಸುಲಭ. ಸಾಧಾರಣ ಇಂಧನಗಳು ತಣ್ಣನೆಯ ವಾತಾವರಣದಲ್ಲಿ ಉರಿಯುವುದಿಲ್ಲ. ಈಗಿನ ವಾಹನಗಳು ಅಂತರ್ದಹನ ಎಂಜಿನ್ ಹೊಂದಿರುವುದು ಇದಕ್ಕೆ ಕಾರಣ. ಅಂತರ್ದಹನ ಎಂಜಿನ್‌ಗಳಲ್ಲಿ ಇಂಧನ ಎಂಜಿನ್‌ನ ಒಳಗೆ ಉರಿಯುತ್ತದೆ. ಅದಕ್ಕಾಗಿ ಬೇಕಾದ ಸ್ಪಾರ್ಕ್ ಪ್ಲಗ್, ಆಮ್ಲಜನಕವನ್ನು ಬೆರೆಸಲು ಬೇಕಾದ ಕಾರ್ಬುರೇಟರ್ ಸಹಾಯಕಾರಿಯಾಗಿವೆ. ಸಾಮಾನ್ಯವಾದ ಸ್ಥಳಗಳಲ್ಲಿ ಈ ಸಮಸ್ಯೆ ಬಾರದು. ಆದರೆ ಕಾಶ್ಮೀರದಂತಹ ಸ್ಥಳಗಳಲ್ಲಿ ಇದು ದೊಡ್ಡ ಸಮಸ್ಯೆಯೇ.ಆದರೆ ಇದಕ್ಕೆ ಪರಿಹಾರ ಇಲ್ಲ ಎಂದೇನೂ ಇಲ್ಲ. ಕಾಶ್ಮೀರದಂತಹ ಪ್ರದೇಶಗಳಿಗಾಗಿಯೇ ಕಡಿಮೆ ಸ್ನಿಗ್ಧತೆ ಇರುವ ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದಕ್ಕೆ ಇಂಗ್ಲಿಷ್‌ನಲ್ಲಿ ವಿಸ್ಕಾಸಿಟಿ ಎನ್ನುತ್ತಾರೆ. ಅಂದರೆ ಎಣ್ಣೆಯ ಗಡಸುತನವನ್ನು ಆಧರಿಸಿ ಹೇಳುವಂಥದ್ದು. ತೆಳುವಾಗಿದ್ದರೆ ಉರಿಯುವ ವೇಗ ಹೆಚ್ಚು. ಗಟ್ಟಿಯಾಗಿದ್ದರೆ ತಡ. ಹಾಗಾಗಿ ಯಾವ ಪ್ರದೇಶಗಳಲ್ಲಿ ಶೀತ ಹೆಚ್ಚಿರುತ್ತದೆಯೋ ಅಂತಹ ಪ್ರದೇಶಗಳಲ್ಲಿ ತೆಳುವಾದ ಇಂಧನ ಸಿಗುತ್ತದೆ. ಕಡಿಮೆ ವಿಸ್ಕಾಸಿಟಿಯ ಪೆಟ್ರೋಲ್, ಡೀಸೆಲ್‌ಗಳು ಕಾಶ್ಮೀರದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಆ ಇಂಧನವನ್ನು ಬೇರೆ ಕಡೆ ಬಳಸಲಾಗದು. ಬಳಸಿದರೆ ಎಂಜಿನ್‌ನ ಮೇಲೆ ಹೊಡೆತ ಬೀಳುವುದರ ಜತೆಗೆ ಅಪಘಾತಗಳೂ ಸಂಭವಿಸಬಹುದು.

ತೆಳು ಎಂಜಿನ್ ಆಯಿಲ್

ಎಂಜಿನ್ ಆಯಿಲ್‌ಗಳಲ್ಲೂ ಗಟ್ಟಿಯಾದ ಹಾಗೂ ತೆಳುವಾದ ಎಂಜಿನ್ ಆಯಿಲ್‌ಗಳು ಲಭ್ಯವಿವೆ. ಸಾಮಾನ್ಯವಾಗಿ 4 ಸ್ಟ್ರೋಕ್ ಎಂಜಿನ್‌ಗಳಿಗೆ ಕೊಂಚ ತೆಳುವಾದ ಎಂಜಿನ್ ಆಯಿಲ್ ಬಳಸಲಾಗುತ್ತದೆ. 2 ಸ್ಟ್ರೋಕ್ ಎಂಜಿನ್‌ಗಳಲ್ಲಿನ ಎಂಜಿನ್ ಆಯಿಲ್ ಕೊಂಚ ಗಟ್ಟಿ ಇರುತ್ತದೆ. 2 ಸ್ಟ್ರೋಕ್ ಎಂಜಿನ್ ಆಯಿಲ್ ಬಳಸಿದರೆ ಹೆಚ್ಚು ಹೊಗೆಯೂ ಬರುತ್ತದೆ. ಆದರೆ ಡೀಸೆಲ್ ಎಂಜಿನ್‌ಗಳಲ್ಲಿ ಬಳಸುವ ಎಂಜಿನ್ ಆಯಿಲ್‌ಗಳು ಕೊಂಚ ತೆಳು ಇರಲೇಬೇಕು.ಏಕೆಂದರೆ ಡೀಸೆಲ್ ಎಣ್ಣೆಯೇ ಕೊಂಚ ಗಡಸು. ಇದರ ಜತೆಗೆ ಬಳಕೆಯಾಗುವ ಎಂಜಿನ್ ಆಯಿಲ್ ಕೊಂಚ ತೆಳುವಾಗೇ ಇರಬೇಕು. ಇದರಿಂದ ಎಂಜಿನ್‌ನ ಕಾರ್ಯಕ್ಷಮತೆ ಹೆಚ್ಚುವುದರ ಜತೆಗೆ ಮೈಲೇಜ್ ಸಹ  ಜಾಸ್ತಿಯಾಗುತ್ತದೆ. ಆದರೆ ಭಾರತೀಯ ಕಾರ್‌ಗಳಲ್ಲಿ ವಿಶೇಷವಾದ ತೆಳುವಾದ ಎಂಜಿನ್ ಆಯಿಲ್ ಬಳಕೆ ಆಗುವುದು ಕಡಿಮೆ. ಏಕೆಂದರೆ ಇದು ದುಬಾರಿ. ಇನ್ನೇನು ಹೊರಬರಲಿರುವ ಹೋಂಡಾದ ಅಮೇಸ್ ಕಾರ್‌ನಲ್ಲಿ ಹೊಸ ಪ್ರಯೋಗ ಆಗುತ್ತಿದೆ. ಇದಕ್ಕಾಗಿ ಹೋಂಡಾ ಹೆಚ್ಚುವರಿ ಹಣ ಪಡೆಯದೇ ಇರುವುದು ವಿಶೇಷವಾಗಿದೆ.

ಕೂಲೆಂಟ್

ಎಂಜಿನ್ ತಣ್ಣಗಿರುವಂತೆ ನೋಡಿಕೊಳ್ಳಲು ಹಳೆಯ ವಾಹನಗಳಲ್ಲಿ ನೀರನ್ನೇ ಬಳಸಲಾಗುತ್ತಿತ್ತು. ಎಂಜಿನ್ ಎದುರಿನ ರೇಡಿಯೇಟರ್‌ನಲ್ಲಿ ನೀರನ್ನು ತುಂಬಬೇಕಿತ್ತು. ಈ ರೇಡಿಯೇಟರ್‌ನಲ್ಲಿರುವ ಸಣ್ಣ ಸಣ್ಣ ಅಲ್ಯೂಮಿನಿಯಂನ ತಡಗಿನ ರಚನೆಗಳ ಮೂಲಕ ಗಾಳಿ ಹಾದು ಹೋಗುವಾಗ ಅದರ ಮೂಲಕ ನೀರು ಆವಿಯಾಗಿ ಎಂಜಿನ್ ಅನ್ನು ತಣ್ಣಗೆ ಮಾಡುತ್ತಿತ್ತು.ಆದರೆ ನೀರು ಸಹ ಆಗಾಗ ಹೆಚ್ಚು ಬಿಸಿಯಾಗಿ ಕುದಿಯಲು ಆರಂಭಿಸಿ ಎಂಜಿನ್ ಅನ್ನು ಸ್ತಬ್ಧಗೊಳಿಸಬೇಕಾದ ಪರಿಸ್ಥಿತಿ ಬರುತ್ತಿತ್ತು. ಈ ಮಿತಿಯನ್ನು ಸರಿಪಡಿಸಲು ಕೂಲೆಂಟ್ ಅನ್ನು ಪರಿಚಯಿಸಲಾಯಿತು. ಇದು ಒಂದು ರೀತಿ ಕೃತಕ ನೀರು. ಆದರೆ ಎಣ್ಣೆಯ ಸ್ವರೂಪದಲ್ಲಿ ಇರುತ್ತದೆ. ಹೆಚ್ಚಾಗಿ ಹಸಿರು ಬಣ್ಣದಲ್ಲಿ ಇರುವ ಈ ಕೂಲೆಂಟ್ ಎಂಜಿನ್‌ಗೆ ನೇರವಾಗಿ ಪ್ರವೇಶಿಸಿ, ಅದರ ವಿವಿಧ ಭಾಗಗಳ ಮೂಲಕ ಹರಿದು ತಣ್ಣಗೆ ಮಾಡುತ್ತದೆ. ಈಗಿನ ಎಂಜಿನ್‌ಗಳಲ್ಲೂ ರೇಡಿಯೇಟರ್ ಇದ್ದು, ಅದರ ಮೂಲಕವೂ ಕೂಲೆಂಟ್ ಹರಿದು ಎಂಜಿನ್ ಬಿಸಿಯಾಗದಂತೆ ನೋಡಿಕೊಳ್ಳುತ್ತದೆ.ವಾಹನದ ಹಿಂಭಾಗದ ಹೊಗೆ ಕೊಳವೆಯಲ್ಲಿ ನೀರು ತೊಟ್ಟಿಕ್ಕುವುದನ್ನು ನೋಡಿರಬಹುದು. ಅದು ಕೂಲೆಂಟ್ ಕರಗಿ ಹೊರಗೆ ಹರಿಯುವುದೇ ಆಗಿದೆ.

 

ಪ್ರತಿಕ್ರಿಯಿಸಿ (+)