ಬುಧವಾರ, ಜನವರಿ 22, 2020
23 °C

ಆಟೊ ದರ ಏರಿಕೆಗೆ ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟೊ ದರ ಏರಿಕೆಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಆಟೊ ದರ ಏರಿಕೆಯಿಂದ ಪ್ರಯಾಣಿಕರು ಜೇಬಿಗೆ ಕತ್ತರಿ ಬೀಳುವ ಚಿಂತೆಯಲ್ಲಿದ್ದರೆ, ಆಟೊ ಚಾಲಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.ದರ ಏರಿಕೆಯಾಗಿರುವುದು ಸಾಮಾನ್ಯ ಪ್ರಯಾಣಿಕರ ಪಾಲಿಗೆ ಹೊರೆ ಎನಿಸಿದರೂ ಪರಿಷ್ಕೃತ ದರದಿಂದ ಮಧ್ಯಮ ವರ್ಗದ ಪ್ರಯಾಣಿಕರಿಗೆ ಹೊರೆ ಏನೂ ಆಗಿಲ್ಲ ಎಂಬುದು ನಗರ ಬಹುಪಾಲು ಜನರ ಅಭಿಪ್ರಾಯ.‘ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಂತೆ ಆಟೊ ದರವೂ ಏರಿಕೆಯಾಗಿದೆ. ಆಟೊ ದರ ಏರಿಕೆಯಾಗಿ ವರ್ಷವೇ ಆಗಿತ್ತು. ಹಳೆಯ ದರಕ್ಕಿಂತ ರೂ 5 ಹೆಚ್ಚಾಗಿರುವುದರಿಂದ ದರ ಏರಿಕೆ ಹೊರೆ ಎನಿಸುತ್ತಿಲ್ಲ’ ಎಂದು ರಾಜಾಜಿನಗರ ನಿವಾಸಿ ಮೋಹನ್‌ ಹೇಳಿದರು.‘ಆಟೊ ಪ್ರಯಾಣಿಕರ ಪಾಲಿಗೆ ಈ ದರ ಏರಿಕೆ ಹೊರೆ ಏನೂ ಅನಿಸುವುದಿಲ್ಲ. ಆದರೆ, ಕಾಯುವಿಕೆ ಶುಲ್ಕ ಹೆಚ್ಚಳದಿಂದ ಸ್ವಲ್ಪ ಹೊರೆ ಎನಿಸುತ್ತದೆ. ಆದರೂ ನಗರದ ವಾಹನ ದಟ್ಟಣೆಯ ಮಧ್ಯೆ ಆಟೊದಲ್ಲಿ ಓಡಾಡುವಾಗ ಇದೆಲ್ಲ ಅನಿವಾರ್ಯ. ಎಲ್ಲ ಮಹಾನಗರಗಳಲ್ಲಿ ಇರುವಂತೆ ನಗರದಲ್ಲೂ ಆಟೊ ದರ ಏರಿಕೆಯಾಗಿದೆ. ಇದಕ್ಕೆ ಹೊಂದಿಕೊಂಡು ಹೋಗಬೇಕು’ ಎಂದವರು ಕಲ್ಯಾಣನಗರದ ದೇವಕಿ.

ದರ ಹೆಚ್ಚಳದಿಂದ ಹೆಚ್ಚಿನ ಹೊರೆಯೇನೂ ಆಗಿಲ್ಲ ಎಂಬ ಅಭಿಪ್ರಾಯ ಪ್ರಯಾಣಿಕರದ್ದಾದರೆ, ಪರಿಷ್ಕೃತ ದರದಿಂದ ಸಿಹಿಯೂ ಇಲ್ಲ, ಕಹಿಯೂ ಇಲ್ಲ ಎಂಬುದು ಆಟೊ ಚಾಲಕರ ಮಾತು.‘ನೂತನ ದರದಿಂದ ಸಂತೋಷವೂ ಇಲ್ಲ, ಅಸಮಾಧಾನವೂ ಇಲ್ಲ.  ಎರಡು ವರ್ಷಗಳಿಂದ ಆಟೊದರ ಪರಿಷ್ಕರಣೆ ಯಾಗಿರಲಿಲ್ಲ. ಈಗ ಸ್ವಲ್ಪಮಟ್ಟಿಗಾದರೂ ದರ ಏರಿಕೆಯಾಗಿರುವುದು ಸಮಾಧಾನ ತಂದಿದೆ. ಕನಿಷ್ಠ ರೂ 30 ಕ್ಕೆ ದರ ಏರಿಕೆ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಆದರೆ, ರೂ 25ಕ್ಕೆ ಏರಿಕೆಯಾಗಿರುವುದು ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ’ ಎಂದು ಕಮಲಾನಗರದ ಆಟೊ ಚಾಲಕ ಶ್ರೀನಿವಾಸಮೂರ್ತಿ ಹೇಳಿದರು.‘ಪರಿಷ್ಕೃತ ದರದಿಂದ ಸಮಾಧಾನವಾಗಿದೆ. ಕನಿಷ್ಠ ದರದ ಏರಿಕೆಯ ಜತೆಗೆ ಕಾಯುವಿಕೆ ದರವೂ ಹೆಚ್ಚಾಗಿರುವುದರಿಂದ ಸ್ವಲ್ಪ ಮಟ್ಟಿಗೆ ತೃಪ್ತಿ ತಂದಿದೆ. ಆದರೆ, ದರ ಏರಿಕೆಯ ಕಾರಣಕ್ಕೆ ತುಂಬಾ ಸಂತೋಷ ಪಡಬೇಕಾದ ಪರಿಸ್ಥಿತಿ ಏನೂ ಇಲ್ಲ’ ಎಂದಿದ್ದು ಕಂಠೀರವನಗರದ ಆಟೊಚಾಲಕ ದೇವರಾಜ್‌.ಕಾಯುವಿಕೆ ದರ

ಮೊದಲ ಐದು ನಿಮಿಷ ಉಚಿತ ನಂತರ ಪ್ರತಿ 15 ನಿಮಿಷಕ್ಕೆ ರೂ 5ಲಗೇಜ್ ದರ

20 ಕೆ.ಜಿವರೆಗೆ ಉಚಿತ. ನಂತರದ ಪ್ರತಿ 20 ಕೆ.ಜಿಗೆ ರೂ 2ಪ್ರಯಾಣಿಕರಿಗೂ ಹೊರೆಯಾಗಬಾರದು

ದರ ಏರಿಕೆಯಿಂದ ಪ್ರಯಾಣಿಕರಿಗೂ ಹೊರೆಯಾಗ ಬಾರದು ಎಂಬ ಕಾರಣಕ್ಕೆ ಪರಿಷ್ಕೃತ ದರಕ್ಕೆ ಸಮ್ಮತಿ ಸೂಚಿಸಿದ್ದೇವೆ. ಡೀಸೆಲ್‌ ದರ ಏರಿಕೆಯಾದ ಕೂಡಲೇ ಬಸ್‌ ದರ ಏರಿಕೆಯಾಗುತ್ತದೆ. ಆದರೆ, ಆಟೊ ದರ ಏರಿಕೆ ಎರಡು ವರ್ಷಕ್ಕೊಮ್ಮೆ ಮಾತ್ರ ಆಗುತ್ತಿದೆ. ಮುಂದೆ ಪ್ರತಿ ಬಾರಿ ಎಲ್‌ಪಿಜಿ ದರ ಏರಿಕೆಯಾದಾಗ ಆಟೊ ದರ ಕನಿಷ್ಠ ರೂ1 ಹೆಚ್ಚಳ ಮಾಡಬೇಕು.

– ಎಂ.ಮಂಜುನಾಥ್‌,

ಅಧ್ಯಕ್ಷ, ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ
ಸಮಾಧಾನ ತಂದಿದೆ

ಆಟೊ ದರ ಏರಿಕೆ ಸಮಾಧಾನ ತಂದಿದೆ. ಕಾಯುವಿಕೆ ದರ ಹೆಚ್ಚಳದಿಂದ ಸ್ವಲ್ಪಮಟ್ಟಿದೆ ತೃಪ್ತಿಯಾಗಿದೆ. ಈವರೆಗೆ ಕಾಯುವಿಕೆ ದರ ಗಂಟೆಗೆ ರೂ 4 ಮಾತ್ರ ಇತ್ತು. ಈಗ ಮೊದಲ ಐದು ನಿಮಿಷದ ನಂತರ ಪ್ರತಿ 15 ನಿಮಿಷಕ್ಕೆ ರೂ 5 ಹೆಚ್ಚಳ ಮಾಡಿರುವುದು ಚಾಲಕರ ಪಾಲಿಗೆ ಸ್ವಲ್ಪಮಟ್ಟಿಗೆ ಸಂತಸ ತಂದಿದೆ.

– ನಾಗರಾಜ್‌, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಆಟೊ ಚಾಲಕರ ಒಕ್ಕೂಟ

 

ಪ್ರತಿಕ್ರಿಯಿಸಿ (+)