ಶನಿವಾರ, ಮೇ 28, 2022
27 °C

ಆಟೊ ಪರವಾನಗಿ ದಂಧೆಗೆ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆಟೊರಿಕ್ಷಾ ಪರವಾನಗಿ ಮಾರಾಟ ದಂಧೆ ತಡೆಯುವ ಉದ್ದೇಶದಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಕಡಿಮೆ ಬೆಲೆಗೆ ಆಟೊ ಖರೀದಿಗೆ ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಸಾರಿಗೆ ಸಚಿವ ಆರ್.ಅಶೋಕ ತಿಳಿಸಿದರು.ಜೆಎನ್ ನರ್ಮ್ ಯೋಜನೆಯಡಿ ಬಿಎಂಟಿಸಿ ನಿರ್ಮಿಸಿರುವ ಕೋರಮಂಗಲ ಟಿಟಿಎಂಸಿ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.‘ಆಟೊರಿಕ್ಷಾ ಪರವಾನಗಿ ಮಾರಾಟ ಒಂದು ದಂಧೆಯಾಗಿ ಪರಿಣಮಿಸಿದೆ.ಇದರಿಂದ ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗಿದೆ. ಆಟೊ ರಿಕ್ಷಾ ಖರೀದಿದಾರರು ಇದರಿಂದ ತೊಂದರೆಗೆ ಸಿಲುಕಿದ್ದಾರೆ.ಇದನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ’ ಎಂದು ಹೇಳಿದರು.‘ದಂಧೆಯಿಂದ ಆಟೊ ರಿಕ್ಷಾ ಖರೀದಿದಾರರಿಗೆ  20ರಿಂದ 50 ಸಾವಿರ ರೂಪಾಯಿ ಅಧಿಕ ಹೊರೆ ಬೀಳುತ್ತಿದೆ.ಇದನ್ನು ತಪ್ಪಿಸಲು ಈಗಿರುವ ನಿಯಮಗಳನ್ನು ಮಾರ್ಪಾಡುಗೊಳಿಸಲಾಗುವುದು.ನಗರದಲ್ಲಿ ಮೊದಲು ಈ ಬದಲಾವಣೆ ತಂದು ನಂತರ ರಾಜ್ಯದ ಪ್ರಮುಖ ಪಟ್ಟಣಗಳಿಗೆ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.‘800 ಚ.ಕಿ.ಮೀ ವಿಸ್ತೀರ್ಣವಿರುವ ನಗರದಲ್ಲಿ ಅಕ್ರಮವಾಗಿ ಆಟೊ ಸಂಚಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ.15ರಿಂದ 20 ಸಾವಿರ ಹೊರರಾಜ್ಯದ ಆಟೊಗಳು ನಗರದಲ್ಲಿ ಸಂಚರಿಸುತ್ತಿರುವುದು ತಿಳಿದುಬಂದಿದೆ.ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಅಕ್ರಮ ಆಟೊಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ರಸ್ತೆಗೆ ಇಳಿಯುತ್ತಿರುವ ಆಟೊಗಳು ಅನಿಲ ಚಾಲಿತ ವ್ಯವಸ್ಥೆ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದರು.‘ಜಿಪಿಎಸ್ ವ್ಯವಸ್ಥೆ ಅಳವಡಿಸುವ ಮೂಲಕ ಬಸ್ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಒದಗಿಲಾಗುವುದು. ಈ ವ್ಯವಸ್ಥೆಯಿಂದಾಗಿ ಬಸ್‌ಗಳ ನಿಗದಿತ ವೇಳೆಯ ಸಂಚಾರ, ತೆರಳುತ್ತಿರುವ ಮಾರ್ಗ ಮುಂತಾದ ಅಂಶಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು ಪ್ರಾಯೋಗಿಕ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದರು.‘ನಗರದ ಹೊಸಕೋಟೆ, ಕೆಂಗೇರಿ ಮುಂತಾದ ಕಡೆಗಳಲ್ಲಿ ನಕಲಿ ಪಾಸ್‌ಗಳನ್ನು ವಿತರಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಪ್ರಯಾಣಿಕರು ತೊಂದರೆಗೆ ಸಿಲುಕುವಂತಾಗಿದ್ದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.ಇನ್ನು 15 ದಿನಗಳಲ್ಲಿ ವರದಿ ಬರಲಿದ್ದು ನಂತರ ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.‘ವಾಹನ ಪಾರ್ಕಿಂಗ್ ಸಮಸ್ಯೆ ತಡೆಯುವ ಉದ್ದೇಶದಿಂದ ನಗರದಲ್ಲಿ 10 ಸಾವಿರ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸಲು ಚಿಂತಿಸಲಾಗಿದೆ. ಬಿಬಿಎಂಪಿ ಸಕಾರಾತ್ಮಕವಾಗಿ ಸ್ಪಂದಿಸಿದರೆ ಈ ಸಮಸ್ಯೆ ನಿವಾರಿಸುವುದು ಕಷ್ಟದ ಸಂಗತಿಯಲ್ಲ’ ಎಂದರು.‘ಹೃದ್ರೋಗಿಗಳು ದೂರದ ಆಸ್ಪತ್ರೆಗಳಿಗೆ ತೆರಳಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಕಷ್ಟದ ಸಂಗತಿಯಾಗಿದ್ದು ಟಿಟಿಎಂಸಿ ಕಟ್ಟಡಗಳಲ್ಲಿಯೇ ಚಿಕಿತ್ಸೆ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ಸಂಬಂಧ ನಾರಾಯಣ ಹೃದಯಾಲಯದ ಜೊತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.‘ಟಿಕೆಟ್‌ನಿಂದ ಬಂದ ಹಣವನ್ನು ಹೊರತುಪಡಿಸಿ ಇತರೆ ಆದಾಯ ಮೂಲಗಳಿಂದ ಬಿಎಂಟಿಸಿ ವಾರ್ಷಿಕ 25 ಕೋಟಿ ರೂಪಾಯಿ ಆದಾಯಗಳಿಸಿದೆ. ಸೈನಿಕರ ಕುಟುಂಬಗಳಿಗೆ 10 ವರ್ಷಗಳ ಕಾಲ ಉಚಿತ ಬಸ್‌ಪಾಸ್ ನೀಡಲು ಇದೇ ಮೊದಲ ಬಾರಿಗೆ ಚಿಂತಿಸಲಾಗಿದೆ. ವಿದ್ಯಾರ್ಥಿಗಳಿಗೆ ಶೇ 75ರಷ್ಟು ರಿಯಾಯ್ತಿ ಹೊಂದಿದ ಪಾಸ್‌ಗಳನ್ನು ವಿತರಿಸಲಾಗುತ್ತಿದೆ’ ಎಂದರು.ಮೇಯರ್ ಎಸ್.ಕೆ.ನಟರಾಜ್ ಮಾತನಾಡಿ ‘ನಗರದಲ್ಲಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು ರಸ್ತೆ ವಿಸ್ತರಣೆಗೆ ಸಾರ್ವಜನಿಕರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ. ನಗರದ ಅಭಿವೃದ್ಧಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಜನರ ಸಹಕಾರ ಅತಿಮುಖ್ಯವಾಗಿದೆ’ ಎಂದರು. ‘ಪರಿಸರ ಮಾಲಿನ್ಯ ಸೇರಿದಂತೆ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿವೆ.ಹಸಿರು ನಗರಿ ಎಂಬ ಜನಪ್ರಿಯತೆ ಉಳಿಯುವಂತೆ ನಗರವನ್ನು ರೂಪಿಸುವ ಅಗತ್ಯವಿದೆ’ ಎಂದು ಹೇಳಿದರು.ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ‘ಮೆಟ್ರೊ ಸೌಕರ್ಯ ನಗರದ ಇನ್ನಷ್ಟು ಭಾಗಗಳಿಗೆ ವಿಸ್ತರಿಸಬೇಕಿದೆ. ಇದರಿಂದ ಸಂಚಾರ ಸಮಸ್ಯೆ ನಿವಾರಣೆಯಾಗಲಿದೆ. ಸಾರ್ವಜನಿಕರು ಖಾಸಗಿ ವಾಹನಗಳನ್ನು ರಸ್ತೆಗಿಳಿಸದೇ ಸಮೂಹ ಸಾರಿಗೆಗೆ ಒತ್ತು ನೀಡುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.‘ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾರಿಗೆ ಕ್ಷೇತ್ರದಲ್ಲಿ ಸುಧಾರಣೆಗೆ ಚಾಲನೆ ದೊರೆಯಿತು. ದಕ್ಷ ಸಚಿವರು ಹಾಗೂ ಅಧಿಕಾರಿ ಇದ್ದರೆ ಒಳ್ಳೆಯ ಕಾರ್ಯ ಸಾಧ್ಯವಿದೆ.ಆರ್. ಅಶೋಕ ಅವರ ನೇತೃತ್ವದಲ್ಲಿ ಸಾರಿಗೆ ಕ್ಷೇತ್ರ ಉತ್ತಮ ಪ್ರಗತಿ ಸಾಧಿಸುತ್ತಿದೆ’ ಎಂದು ಅವರು ಹೇಳಿದರು.ವಿಧಾನ ಪರಿಷತ್ ಸದಸ್ಯ ಡೆರಿಕ್ ಫುಲಿನ್‌ಫಾ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ, ಸಾರಿಗೆ ಇಲಾಖೆಯ ಆಯುಕ್ತ ಭಾಸ್ಕರ್ ರಾವ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಜಮೀರ್ ಪಾಶಾ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ, ಬಿಬಿಎಂಪಿ ಸದಸ್ಯೆ ಪಿ.ಎಂ. ಸರೋಜ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.