ಆಟೊ ಪರಿಷ್ಕೃತ ಪ್ರಯಾಣದರ ಕನಿಷ್ಠ ರೂ 25

7

ಆಟೊ ಪರಿಷ್ಕೃತ ಪ್ರಯಾಣದರ ಕನಿಷ್ಠ ರೂ 25

Published:
Updated:

ಮೈಸೂರು: ಆಟೊ ಎಲ್‌ಪಿಜಿ ದರ ದಿಢೀರ್‌ ಹೆಚ್ಚಳ ಮಾಡಿದ್ದರಿಂದ ಜಿಲ್ಲಾ ಆಟೊ ಚಾಲಕರು ಮತ್ತು ಮಾಲೀಕರ ಒಕ್ಕೂಟ ಮತ್ತು ವಿವಿಧ ಸಂಘಟನೆಗಳಿಗೆ ಸೇರಿದ ಆಟೊ ಚಾಲಕರು ಮತ್ತು ಮಾಲೀಕರೊಂದಿಗೆ ಮಂಗಳವಾರ ಸಭೆ ನಡೆಸಿದ ಜಿಲ್ಲಾಡಳಿತ, ಆಟೊ ಪ್ರಯಾಣದರವನ್ನು ಪರಿಷ್ಕರಿಸಿ, ಕನಿಷ್ಠ ದರ ₨ 25 ಮತ್ತು ಪ್ರತಿ ಕಿ.ಮೀ.ಗೆ ₨ 13 ದರ ನಿಗದಿ ಮಾಡಿ ಆದೇಶ ಹೊರಡಿಸಿತು. ಪರಿಷ್ಕೃತ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.ದರ ಪರಿಷ್ಕರಣೆ ಕುರಿತು ಅಧಿಕಾರಿಗಳು ಮತ್ತು ಆಟೊ ಚಾಲಕರು ಮತ್ತು ಮಾಲೀಕರೊಂದಿಗೆ ಸಾಕಷ್ಟು ವಾಗ್ವಾದ ನಡೆಯಿತು. ಆದರೆ, ಜಿಲ್ಲಾಧಿಕಾರಿ ಸಿ. ಶಿಖಾ ಅವರು ನೂತನ ದರ ಪ್ರಕಟಿಸಿದ ಕೂಡಲೇ ಆಟೊ ಚಾಲಕರು ಅದಕ್ಕೆ ಒಪ್ಪಲಿಲ್ಲ. ಪ್ರಯಾಣದರ ಕನಿಷ್ಠ ₨ 30 ಮತ್ತು ಪ್ರತಿ ಕಿ.ಮೀ.ಗೆ ₨ 15 ನಿಗದಿ ಮಾಡಿದರೆ ಮಾತ್ರ ಅದಕ್ಕೆ ನಾವು ಒಪ್ಪುತ್ತೇವೆ. ಇಲ್ಲವಾದಲ್ಲಿ ಆಟೊ ತೆಗೆಯುವುದಿಲ್ಲ ಎಂದು ಹೇಳಿ ಗದ್ದಲ ಮಾಡಿದ ಆಟೊ ಚಾಲಕರು ಮತ್ತು ಮಾಲೀಕರು ಸಭೆಯಿಂದ ಹೊರನಡೆದರು.ಸಭೆಯಲ್ಲಿ ಗದ್ದಲ:  ಕೇಂದ್ರ ಸರ್ಕಾರ ಆಟೊ ಎಲ್‌ಪಿಜಿ ದರವನ್ನು ರಾತ್ರೋರಾತ್ರಿ ಹೆಚ್ಚಳ ಮಾಡುತ್ತದೆ. ಆದರೆ, ದರ ಪರಿಷ್ಕರಣ ಮಾಡಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಸಿದರೂ ಕೂಡಲೇ ದರ ಪರಿಷ್ಕರಣೆ ಮಾಡುವುದಿಲ್ಲ. ದರ ಹೆಚ್ಚಳದಿಂದ ಚಾಲಕರ ಸ್ಥಿತಿ ಹೇಳತೀರದಾಗಿದೆ. ಮನೆಗೆ ನಿತ್ಯ 100 ರೂಪಾಯಿ ತೆಗೆದುಕೊಂಡು ಹೋಗುವುದೂ ಕಷ್ಟವಾಗಿದೆ. ಪ್ರಯಾಣದರ ಕನಿಷ್ಠ ₨ 30 ಮತ್ತು ಪ್ರತಿ ಕಿ.ಮೀ. ₨ 15 ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಕೈಗಾರಿಕಾ ಪ್ರದೇಶಕ್ಕೆ ಹೋಗಲು ಒಂದೂವರೆ ಪಟ್ಟು ದರ ನೀಡಬೇಕು. ಇಲ್ಲವಾದಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬಾಡಿಗೆ ಹೋಗುವುದಿಲ್ಲ ಎಂದು ಹೇಳಿದರು. ಇದಕ್ಕೆ ಜಿಲ್ಲಾಧಿಕಾರಿ  ಒಪ್ಪಲಿಲ್ಲ. ಇದಕ್ಕೆ ಒಪ್ಪದ ಆಟೊ ಚಾಲಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರು ಉದಾಹರಣೆ ಬೇಡ: ಬೆಂಗಳೂರಿನ ಆರ್‌ಟಿಎ ನಿರ್ಣಯಕ್ಕೆ ಅನುಗುಣವಾಗಿ ಮೈಸೂರಿನಲ್ಲೂ ದರ ನಿಗದಿ ಮಾಡಲಾಗಿದೆ ಎಂದು ಪದೆ ಪದೇ ಹೇಳುತ್ತಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಟೊ ಚಾಲಕರು, ರಾಜಧಾನಿ ಬೆಂಗಳೂರನ್ನು ನೀವು ಉದಾಹರಣೆ ಕೊಡಬೇಡಿ. ಅಲ್ಲಿಯ ಜೀವನ ಶೈಲಿ ಬೇರೆ, ಇಲ್ಲಿಯ ಜೀವನ ಶೈಲಿಯೇ ಬೇರೆ ಎಂದು ಅಧಿಕಾರಿಗಳಿಗೆ ಚುಚ್ಚಿದರು.ಮೋರಿ ಮೇಲೆ ನಮ್ಮ ಬದುಕು: ಗ್ರಾಮಾಂತರ ಬಸ್‌ ನಿಲ್ದಾಣದ ಬಳಿ ಇದ್ದ ಪ್ರೀಪೇಯ್ಡ್‌ ಆಟೊ ಸೇವೆಯನ್ನು ಬದಲಿಸಿ ನಮ್ಮಗಳ ಹೊಟ್ಟೆ ಮೇಲೆ ಹೊಡೆಯಲಾಗಿದೆ. ಇದೀಗ ಮೋರಿ ನೀರಿನ ಮೇಲೆ ನಿತ್ಯ ನಿಂತು ಮುಂದೆ ಸಾಗಬೇಕು. ಆಟೊ ಚಾಲಕರಿಗೆ ಕಣ್ಣೀರು ಬರುತ್ತಿಲ್ಲ. ರಕ್ತ ಕಣ್ಣೀರು ಬರುತ್ತಿದೆ. ಜಿಲ್ಲಾಧಿಕಾರಿ ಖುದ್ದು ಸ್ಥಳಕ್ಕೆ ಬಂದು ಪರಿಶೀಲಿಸಬೇಕು. ಆಗ ಸಮಸ್ಯೆ ಅರ್ಥವಾಗಿ ನಿಮಗೂ ಕಣ್ಣೀರು ಬರುತ್ತದೆ ಎಂದು ಪ್ರೇಮ್‌ಮೋಹನ್‌ ಜಟ್ಟಿ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಿಖಾ ಅವರು ‘ಪೊಲೀಸರು, ಆರ್‌ಟಿಒ ಅಧಿಕಾರಿಗಳೊಂದಿಗೆ ಒಮ್ಮೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.ಪೊಲೀಸರಿಂದ ಕಿರುಕುಳ: ‘ಗ್ರಾಮಾಂತರ ಬಸ್‌ ನಿಲ್ದಾಣದ ಬಳಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿ ಆಟೊ ಚಾಲಕರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ. ಅನಗತ್ಯ ಕಿರುಕುಳ ನೀಡುತ್ತಾರೆ. ಆಟೊ ಚಾಲಕರು ನಿಕೃಷ್ಟವಾಗಿ ನೋಡುವುದನ್ನು ನಿಲ್ಲಿಸಬೇಕು’ ಎಂದು ಚಾಲಕರು ಡಿಸಿಪಿ (ಅಪರಾಧ– ಸಂಚಾರ) ಎಂ.ಎಂ. ಮಹದೇವಯ್ಯ ಅವರ ಎದುರು ಅಳಲು ತೋಡಿಕೊಂಡರು. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.ಎಲ್ಲವನ್ನು ಪರಿಶೀಲಿಸಿ: ‘ಆಟೊ ಎಲ್‌ಪಿಜಿ ದರ ಹೆಚ್ಚಳ ಒಂದನ್ನೇ ಮುಂದಿಟ್ಟುಕೊಂಡು ಕನಿಷ್ಠ ದರ ₨ 30 ನಿಗದಿ ಮಾಡಲು ನೀವು ಹಿಂದೇಟು ಹಾಕಬೇಡಿ. ಆಟೊ ಎಲ್‌ಪಿಜಿ, ವಿಮೆ, ಬಿಡಿ ಭಾಗಗಳು ಹಾಗೂ ಕುಟುಂಬ ನಿರ್ವಹಣೆ ಎಲ್ಲವನ್ನು ಪರಿಗಣಿಸಬೇಕು’ ಎಂದು ಎಸಿಐಸಿಎಂ ಸಂಘಟನೆ ಸಂಚಾಲಕ ಎಂ. ಲಕ್ಷ್ಮಣ ತಿಳಿಸಿದರು. ಸಭೆಯಲ್ಲಿ ಎಸ್ಪಿ ಆರ್‌. ದಿಲೀಪ್‌, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಭಾಗವಹಿಸಿದ್ದರು.‘ಮಧ್ಯರಾತ್ರಿಯಿಂದಲೇ ಜಾರಿ’

‘ಆಟೊ ಎಲ್‌ಪಿಜಿ ದರ ಏರಿಕೆ ಮಾಡಿ ರುವುದರಿಂದ ಆಟೊ ಚಾಲಕರು ಮುಷ್ಕರ ಆರಂಭಿಸಿದ್ದರು. ಹಾಗಾಗಿ, ಸಭೆ ಕರೆದು ಆಟೊ ಪ್ರಯಾಣದರ ಕನಿಷ್ಠ

₨ 25 ಮತ್ತು ಪ್ರತಿ ಕಿ.ಮೀ.ಗೆ ₨ 13 ಪರಿಷ್ಕೃತ ದರ ನಿಗದಿ ಮಾಡಲಾಗಿದೆ. ಎಲ್‌ಪಿಜಿ ದರ ಹೆಚ್ಚಳ ಶೇ 15 ಮತ್ತು ಇತರೆ ಖರ್ಚು ವೆಚ್ಚಗಳಿಗೆ ಶೇ 10 ಸೇರಿ ಒಟ್ಟು  ಶೇ 25ರಷ್ಟು ದರ ಪರಿಷ್ಕರಿ ಸಲಾಗಿದೆ. ಪರಿಷ್ಕೃತ ದರ ಮಧ್ಯರಾತ್ರಿ­ಯಿಂದಲೇ ಜಾರಿಯಾಗಲಿದೆ. ಇದಕ್ಕಿಂತ ಹೆಚ್ಚಿನ ದರ ನಿಗದಿ ಮಾಡಿದರೆ ಜನ ಸಾಮಾನ್ಯರಿಗೆ ತೊಂದರೆ ಆಗುತ್ತದೆ. ಮುಂದೆ ಎಲ್‌ಪಿಜಿ ಆಟೊ ಪ್ರಯಾಣದರ ಹೆಚ್ಚಳ ಆದರೆ ತುರ್ತುಸಭೆ ಕರೆದು ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು’

–ಸಿ. ಶಿಖಾ, ಜಿಲ್ಲಾಧಿಕಾರಿಭಿನ್ನಮತ ಸ್ಫೋಟ

ಜಿಲ್ಲಾ ಮತ್ತು ನಗರ ಆಟೊ ಚಾಲಕರ ಮತ್ತು ಮಾಲೀಕರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳಿಂದ ಬಂದಿದ್ದ ಆಟೊ ಚಾಲಕರು ತಮ್ಮ ಅಭಿಪ್ರಾಯಗಳನ್ನು ತಿಳಿಸುವಾಗ ಭಿನ್ನಮತ ಸ್ಫೋಟ ಗೊಂಡಿತು. ಕೆಲ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಕೆಲವರು ಮಾತನಾಡುತ್ತಿದ್ದರೆ, ಮತ್ತೆ ಕೆಲವರು ತಮಗೂ ಅಭಿಪ್ರಾಯ ತಿಳಿಸಲು ಅವಕಾಶ ಮಾಡಿಕೊಡುವಂತೆ ಮತ್ತೊಬ್ಬರ ಮೇಲೆ ಎಗರಿ ಬೀಳುತ್ತಿದ್ದರು. ಕೆಲ ಸಂದರ್ಭದಲ್ಲಿ ವಾಗ್ವಾದ ತಾರಕಕ್ಕೆ ಏರಿದಾಗ ಅಧಿಕಾರಿಗಳು ಸಭೆಯನ್ನು ನಿಯಂತ್ರಣ ತೆಗೆದುಕೊಳ್ಳಲು ಆಗಲಿಲ್ಲ. ಆಗ ಪೊಲೀಸ್‌ ಮತ್ತು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.ಜ. 10ರವರೆಗೆ ತಟಸ್ಥ

ಜಿಲ್ಲಾಡಳಿತ ಪರಿಷ್ಕರಣೆ ಮಾಡಿರುವ ದರವನ್ನು ಖಂಡಿಸಿ ಆಟೊ ಮುಷ್ಕರ ಮುಂದುವರಿಸುವುದಾಗಿ ಸಭೆಯಿಂದ ಹೊರನಡೆದಿದ್ದ ಜಿಲ್ಲಾ ಆಟೊ ಚಾಲಕರು ಮತ್ತು ಮಾಲೀಕರ ಒಕ್ಕೂಟದವರು ಮತ್ತೆ ಸಭೆ ನಡೆಸಿ, ಜ. 10ರವರೆಗೆ ತಟಸ್ಥವಾಗಿರಲು ನಿರ್ಧರಿಸಿದ್ದಾರೆ.

‘ಕನಿಷ್ಠ ಪ್ರಯಾಣ ದರ ರೂ 30 ಮತ್ತು ಪ್ರತಿ ಕಿ.ಮೀ.ಗೆ ರೂ 15 ನಿಗದಿ ಮಾಡುವವರೆಗೂ ನಾವು ಆಟೊ ಓಡಿಸುವುದಿಲ್ಲ ಎಂದು ಸಂಸದರಿಗೆ ತಿಳಿಸಿದೆವು. ಜ. 10ರಂದು ಜಿಲ್ಲಾಧಿಕಾರಿ ಜೊತೆ ಮತ್ತೆ ಸಭೆ ನಡೆಸಲಾಗುವುದು. ಅಲ್ಲಿವರೆಗೂ ತಟಸ್ಥವಾಗಿರುವಂತೆ ಅವರು ತಿಳಿಸಿದ್ದಾರೆ.

ಸಂಸದರ ಮಾತಿಗೆ ಮನ್ನಣೆ ನೀಡಿ ಆಟೊ ಚಾಲಕರು ಮುಷ್ಕರ ಹಿಂದಕ್ಕೆ ಪಡೆದಿದ್ದಾರೆ. ಜಿಲ್ಲಾಡಳಿತ ನಿಗದಿ ಮಾಡಿರುವ ಪರಿಷ್ಕೃತ ದರವನ್ನು ಒಪ್ಪಿ ಸಾರ್ವಜನಿಕರು ನೀಡಿದರೆ ಅದನ್ನು ಪಡೆಯಲು ಚಾಲಕರು ಒಪ್ಪಿದ್ದಾರೆ’ ಎಂದು ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry