ಶುಕ್ರವಾರ, ಮೇ 14, 2021
21 °C

ಆಟೊ ಪ್ರಯಾಣ: ಬಾಡಿಗೆ ದರ ರೂ.20

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದಲ್ಲಿ ಸಂಚರಿಸುವ ಆಟೊ ರಿಕ್ಷಾ ಪ್ರಯಾಣದ ಕನಿಷ್ಠ ಬಾಡಿಗೆ ದರ 20 ರೂಪಾಯಿ. ನಂತರದ ಪ್ರತಿ ಕಿಲೋಮೀಟರ್‌ಗೆ 5 ರೂಪಾಯಿಯಂತೆ ದರವನ್ನು ನಿಗದಿ ಮಾಡಲಾಗಿದೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಾರ್ವಜನಿಕರು, ಆಟೊ ರಿಕ್ಷಾ ಚಾಲಕರು, ಮಾಲಿಕರು, ಸಂಘ-ಸಂಸ್ಥೆಗಳು, ಸಾರಿಗೆ ಪ್ರಾಧಿಕಾರದೊಡನೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಯಿತು.15 ರೂಪಾಯಿ ಕನಿಷ್ಠ ಬಾಡಿಗೆ ದರ, ನಂತರದ ಪ್ರತಿ ಕಿಮೀಗೆ 10 ರೂಪಾಯಿ ಅಥವಾ 20 ರೂಪಾಯಿ ಕನಿಷ್ಠ ಬಾಡಿಗೆ ದರ, ನಂತರದ ಪ್ರತಿ ಕಿಮೀ 5 ರೂಪಾಯಿಯನ್ನು ನಿಗದಿ ಮಾಡಬಹುದು ಎಂದು  ಜಿಲ್ಲಾಧಿಕಾರಿ ನುಡಿದರು.ನಂತರ ನಡೆದ ಚರ್ಚೆಯ ಬಳಿಕ, ಎರಡನೇಯ ಅಂಶವನ್ನು ತ್ರಿಚಕ್ರ ವಾಹನ ಮಾಲಿಕರು ಮತ್ತು ಚಾಲಕರ ಸಂಘದ ಪ್ರಮುಖರಾದ ಕೆ.ವಿ.ಸುರೇಶ್‌ಕುಮಾರ್ ,ಅಮ್ಜದ್ ಪಾಷಾ, ರಮೇಶ್, ಮಂಜುನಾಥ್ ಒಪ್ಪಿಕೊಂಡರು.ಡೀಸೆಲ್ ಬಳಸಿ ಚಲಿಸುವ ಆಟೊ ರಿಕ್ಷಾಗಳನ್ನು (ಆಪ್ಪೆ) ನಗರದ ಒಳ ಪ್ರದೇಶಗಳಲ್ಲಿ ಸಂಚರಿಸುವುದಕ್ಕೆ ತಡೆಯೊಡ್ಡಬೇಕು. ನಿಯಮ ಮೀರಿ ಹತ್ತಾರು ಮಂದಿಯನ್ನು ಸಾಗಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.ನಗರ ಸಾರಿಗೆ: ನಗರದ ಒಳ ಮತ್ತು ಹೊರ ಭಾಗದಲ್ಲಿ ಸಂಚರಿಸಲು ನಗರ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬ ನಾಗರಿಕರ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಗರ ಸಾರಿಗೆ ಸೌಕರ್ಯ ವನ್ನು ನೀಡುವಷ್ಟು ಕೋಲಾರ ವಿಸ್ತಾರವಾಗಿಲ್ಲ. ಹೀಗಾಗಿ, ನಗರದ ಯಾವ ಸ್ಥಳದಿಂದ ಯಾವ ಸ್ಥಳಕ್ಕೆ, ಎಷ್ಟು ಬಾರಿ ಬಸ್ ಸಂಚರಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎಂಬ ಕುರಿತು ಬರೆಹ ರೂಪದಲ್ಲಿ ನೀಡಿದರೆ ಕ್ರಮ ಕೈಗೊಳ್ಳಬಹುದು ಎಂದು ನುಡಿದರು.ಗ್ರಾಮಾಂತರ ಸಾರಿಗೆ ಬಸ್‌ಗಳಲ್ಲಿ ಈಗಾಗಲೇ ಈ ಅನುಕೂಲವಿದೆ. ಗ್ರಾಮೀಣ ಸಾರಿಗೆಯ ಯಾವುದೇ ಬಸ್ ಹತ್ತಿ 6 ಕಿಮೀ ಅಂತರದಲ್ಲಿ ಪ್ರಯಾಣಿಸ ಬಹುದಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರಿ ಅಧಿಕಾರಿ ಎಚ್.ರಮಣಗೌಡ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.ಸೇತುವೆ ದುರಸ್ತಿ: ಬಂಬೂ ಬಜಾರ್‌ನಲ್ಲಿ ಕುಸಿದ ರಾಜ ಕಾಲುವೆ ಸೇತುವೆಯನ್ನು ದುರಸ್ತಿ ಮಾಡದೆ ಹಲವು ತಿಂಗಳಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎಂದು ನಾಗರಿಕ ಅಮ್ಜದ್‌ಪಾಷಾ ವಿವರಿಸಿದರು.ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, 13ನೇ ಹಣಕಾಸು ಯೋಜನೆಯಲ್ಲಿ ಸೇತುವೆ ದುರಸ್ತಿಗೆ ಹಣ ವಿನಿಯೋಗಿಸಲು ಸಾಧ್ಯವಿದೆ. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿ, ಸೇತುವೆ ಯಾವ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂಬುದೂ ಸೇರಿದಂತೆ ವರದಿ ಕೊಡಿ ಎಂದು ನಗರಸಭೆ ಆಯುಕ್ತೆ ಆರ್.ಶಾಲಿನಿಯವರಿಗೆ ಸೂಚಿಸಿದರು.ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಡಾ.ಕೆ.ತ್ಯಾಗ ರಾಜನ್, ನಾಗರಿಕರಾದ ತ್ಯಾಗರಾಜ್, ನಾಗರಾಜ ಶೆಣೈ, ನಗರ ಸರ್ಕಲ್ ಇನ್ಸ್‌ಪೆಕ್ಟರ್ ಆರ್‌ಎಸ್‌ಟಿ ಖಾನ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.