ಆಟೊ ಮುಷ್ಕರ: ಪ್ರಯಾಣಿಕರ ಪರದಾಟ

7
ಗ್ಯಾಸ್ ದರ ಹೆಚ್ಚಳಕ್ಕೆ ಖಂಡನೆ

ಆಟೊ ಮುಷ್ಕರ: ಪ್ರಯಾಣಿಕರ ಪರದಾಟ

Published:
Updated:

ಮೈಸೂರು: ಆಟೊ ಗ್ಯಾಸ್‌ ದರ ಹೆಚ್ಚಳ ಖಂಡಿಸಿ ಆಟೊ ಚಾಲಕರು ನಗರದಲ್ಲಿ ಬುಧವಾರ ದಿಢೀರ್‌ ಮುಷ್ಕರ ಆರಂಭಿಸಿದರು. ಆಟೊ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.ಆಟೊ ಗ್ಯಾಸ್‌ ದರವನ್ನು ಲೀಟರ್‌ಗೆ 11 ರೂಪಾಯಿಯನ್ನು ಬುಧವಾರ ಮಧ್ಯರಾತ್ರಿಯಿಂದ ಜಾರಿ ಬರುವಂತೆ ಕೇಂದ್ರ ಸರ್ಕಾರ ದಿಢೀರ್ ಹೆಚ್ಚಳ ಮಾಡಿತು. ಮುಂಜಾನೆಯೆ ಚಾಲಕರು ಆಟೊಗೆ ಗ್ಯಾಸ್‌ ತುಂಬಿಸಲು ಹೋದಾಗ ಹಿಂದಿನ ದಿನ ಇದ್ದ ಲೀಟರ್‌ಗೆ ರೂ 55.21ರ ಬದಲಿಗೆ, ರೂ 66.30ಕ್ಕೆ ಹೆಚ್ಚಳ ಮಾಡಲಾಗಿತ್ತು. ಇದರಿಂದ ಆಟೊ ಚಾಲಕರು ಕಂಗಾಲಾದರು. ಎಲೆತೋಟದ ಬಳಿ ಇರುವ ಬಂಕ್ ಮತ್ತು ಧನ್ವಂತರಿ ರಸ್ತೆಯ ಬಂಕ್‌ ಬಳಿ ಆಟೊಗಳು ಗ್ಯಾಸ್‌ ತುಂಬಿಸಲು ಸಾಲುಗಟ್ಟಿ ನಿಂತವು.ಈ ನಡುವೆ ಆಟೊ ಚಾಲಕರ ಸಂಘಟನೆಗಳು ರಾತ್ರೋರಾತ್ರಿ ಗ್ಯಾಸ್‌ ದರ ಹೆಚ್ಚಳ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ಮಾಡಿದರು. ಇದರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗೊಂದಲದ ವಾತಾವರಣ ನಿರ್ಮಾಣವಾಯಿತು.ಗ್ಯಾಸ್‌ ದರವನ್ನು ಏಕಾಏಕಿ ಹೆಚ್ಚಳ ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಸರ್ಕಾರ ಆಟೊ ಮೀಟರ್‌ ದರವನ್ನು ಕನಿಷ್ಠ ರೂ 25ಕ್ಕೆ ನಿಗದಿ ಮಾಡಲು ಹಿಂದೇಟು ಹಾಕುತ್ತಿದೆ. ಹಲವಾರು ತಿಂಗಳಿಂದ ಬೇಡಿಕೆಯನ್ನು ಮುಂದಿಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ಯಾಸ್‌ ದರವನ್ನು ಹೆಚ್ಚಳ ಮಾಡಲು ಇರುವ ಕಾಳಜಿ, ಕನಿಷ್ಠ ಪ್ರಯಾಣ ದರ ನಿಗದಿ ಮಾಡಲು ಏಕಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಕಚೇರಿ ಎದುರು ಮೈಸೂರು ಜಿಲ್ಲಾ ಶ್ರೀಕುವೆಂಪು ಸರಕು ಹಾಗೂ ಪ್ರಯಾಣಿಕರ ಆಟೊ ಚಾಲಕರ ಸಮಿತಿ ನೇತೃತ್ವದಲ್ಲಿ ಆಟೊ ಚಾಲಕರು ಪ್ರತಿಭಟನೆ ಮಾಡಿದರೆ, ಗ್ರಾಮಾಂತರ ಬಸ್‌ ನಿಲ್ದಾಣದ ಬಳಿ ಪ್ರೀ ಪೇಯ್ಡ್ ಆಟೊ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮತ್ತೆ ಕೆಲವರು ಮುಷ್ಕರಕ್ಕೆ ಬೆಂಬಲ ನೀಡದೆ ಆಟೊ ಓಡಿಸುತ್ತಿದ್ದ ದೃಶ್ಯ ಕಂಡುಬಂತು.ಸಂಚಾರ ಪೊಲೀಸರಿಂದ ಡ್ರಾಪ್‌

ದಿಢೀರ್‌ ಆಟೊ ಮುಷ್ಕರದಿಂದ ತೊಂದರೆ ಗೀಡಾಗಿ ಗ್ರಾಮಾಂತರ ಬಸ್‌ ನಿಲ್ದಾಣದ ಬಳಿ ನಿಂತಿದ್ದ ಪ್ರಯಾಣಿಕರನ್ನು ಸಂಚಾರ ಪೊಲೀಸರು ಇಲಾಖೆಯ ವಾಹನಗಳಿಗೆ ಹತ್ತಿಸಿ ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಡ್ರಾಪ್‌ ಕೊಡುವ ಮೂಲಕ ಸಹಕರಿಸಿದರು. ಇದರಿಂದ ಆಟೊ ಹತ್ತಲು ಕಾದು ನಿಂತಿದ್ದ ಪ್ರಯಾಣಿಕರು ಪೊಲೀಸರ ಸಹಾಯದಿಂದ ಬಸ್‌ ನಿಲ್ದಾಣ ತಲುಪಿದರು.ಬೆಂಗಳೂರಿನಲ್ಲಿ ನಿಗದಿ ಮಾಡಿರುವ ಆಟೊ ಮೀಟರ್‌ ಕನಿಷ್ಠ ಪ್ರಯಾಣ ದರವನ್ನು ಮೈಸೂರಿನಲ್ಲೂ ನಿಗದಿ ಮಾಡಬೇಕು. ಮೈಸೂರಿನಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬಾಡಿಗೆ ಹೋದರೆ ವಾಪಸ್‌ ಬರುವಾಗ ಬಾಡಿಗೆ ಸಿಗುವುದಿಲ್ಲ. ಹಾಗಾಗಿ, ಬೆಂಗಳೂರಿಗಿಂತ ಹೆಚ್ಚಿನ ಕನಿಷ್ಠ ಮೀಟರ್‌ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.7 ದಿನಗಳ ಒಳಗೆ ಕನಿಷ್ಠ ಪ್ರಯಾಣ ದರ ಮತ್ತು ದಿಢೀರ್‌ ಹೆಚ್ಚಳ ಮಾಡಿರುವ ಗ್ಯಾಸ್‌ ದರ ಇಳಿಸಬೇಕು. ಇಲ್ಲವಾದಲ್ಲಿ ಮುಷ್ಕರ ಮುಂದುವರಿಸಲಾಗುವುದು ಎಂದು ಗಡುವು ನೀಡಿದರು. ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದ ಬಳಿಕ ಆಟೊ ಚಾಲಕರು ಸ್ಥಳದಿಂದ ಕದಲಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry