ಭಾನುವಾರ, ಡಿಸೆಂಬರ್ 8, 2019
21 °C

ಆಟೊ ಮೇಳದಲ್ಲಿ ಕಾರು, ಬೈಕ್ ಪಾರುಪತ್ಯ

Published:
Updated:
ಆಟೊ ಮೇಳದಲ್ಲಿ ಕಾರು, ಬೈಕ್ ಪಾರುಪತ್ಯ

`ಈಕಾರು ಭಾರತದ ಜನ ಸಾಮಾನ್ಯರ ಯಾವುದೇ ಆಕ್ಷೇಪಣೆ ಇಲ್ಲದೆ ಅವರ ಬಯಕೆಯನ್ನು ಪೂರೈಸಲಿದೆ ಎನ್ನುವುದು ನನ್ನ ಭಾವನೆ. ಅದರಂತೆ ಈ ನೂತನ ಕಾರು ರಾಷ್ಟ್ರ ನಿರ್ಮಾಣದ ಪ್ರತಿ ಹಂತದಲ್ಲೂ ನೆರವಾಗಲಿದೆ ಎನ್ನುವುದು ನನ್ನ ಭರವಸೆ~

 ಮಧ್ಯಮ ವರ್ಗದ ಕಾರೆಂದೇ ಬಿಂಬಿತವಾಗಿದ್ದ ಮಾರುತಿ 800 ಬಿಡುಗಡೆಗೊಳಿಸಿ ಈ ರೀತಿ ಮಾತನಾಡಿದಾಗ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಕಣ್ಣುಗಳು ತೇವಗೊಂಡಿದ್ದವು.ದೇಶದ ಪ್ರತಿ ಮಧ್ಯಮವರ್ಗದ ಕುಟುಂಬವೂ ಒಂದು ಕಾರನ್ನು ಹೊಂದಬೇಕೆಂಬ ಕನಸು ಕಂಡಿದ್ದ ಇಂದಿರಾ ಅವರ ಪುತ್ರ  ಸಂಜಯ ಗಾಂಧಿ  ತಮ್ಮ ಕನಸು ನನಸಾಗುವ ವೇಳೆಗೆ ತೀರಿಕೊಂಡಿದ್ದರು. ಅಂದು 14ನೇ ಡಿಸೆಂಬರ್ 1983 ಸಂಜಯ ಗಾಂಧಿ ಅವರ ಜನ್ಮ ದಿನ.

ಅಂದೇ ಮಾರುತಿ 800 ಭಾರತದ ರಸ್ತೆಗಿಳಿಯಿತು. ಆಗ ಅದರ ಬೆಲೆ ದೆಹಲಿಯಲ್ಲಿ ಕೇವಲ ರೂ 52 ಸಾವಿರ. ಅದನ್ನು ಖರೀದಿ ಮಾಡಿದ ಮೊದಲಿಗ ಏರ್ ಇಂಡಿಯಾ ಅಧಿಕಾರಿ, ದೆಹಲಿ ಮೂಲದ ಹರ್‌ಪಾಲ್ ಸಿಂಗ್. ಅಲ್ಲಿಂದ ಸುಮಾರು ಮೂರು ವರ್ಷಗಳ ನಂತರ ಮಾರುತಿ 800 ಹೊಸರೂಪ ಪಡೆಯಿತು. ಇದಕ್ಕೆ ಪೂರಕವಾಗಿ 1985ರಲ್ಲಿ `ಆಟೋ ಎಕ್ಸ್‌ಪೋ~ ಉದಯವಾಯಿತು. ಅದರ ಮೊದಲ ಪ್ರದರ್ಶನ 1986ರ ಜ. 3ರಂದು.ಭಾರತೀಯ ಕೈಗಾರಿಕೆಗಳ ಒಕ್ಕೂಟ, ಭಾರತೀಯ ವಾಹನ ತಯಾರಕರ ಸಂಘ ಹಾಗೂ ಭಾರತೀಯ ವಾಹನ ಬಿಡಿಭಾಗ ತಯಾರಕರ ಒಕ್ಕೂಟ ಜಂಟಿಯಾಗಿ ದೆಹಲಿಯ ಪ್ರಗತಿ ಮೈದಾನದಲ್ಲಿ ಏರ್ಪಡಿಸಿದ್ದ ಮೇಳದಲ್ಲಿ ಆಲ್ವಿನ್ ನಿಸ್ಸಾನ್, ಡಿಸಿಎಂ ಟೋಯೊಟಾ, ಎಸ್ಕಾರ್ಟ್, ಗುಜರಾತ್ ನರ್ಮದಾ, ಜಾವಾ, ಕೈನೆಟಿಕ್, ಕೆಲ್ವಿನೇಟರ್, ಮಹಾರಾಷ್ಟ್ರ ಸ್ಕೂಟರ್, ಮೆಜೆಸ್ಟಿಕ್ ಆಟೊ, ಶ್ರೀ ಚಾಮುಂಡಿ ಮೊಪೆಡ್ ಇತ್ಯಾದಿ ಕಂಪೆನಿಗಳು ತಮ್ಮ ಸಂಶೋಧನೆ, ಕಾರ್ಮಿಕರ ಪರಿಶ್ರಮದಿಂದ ಮೂಡಿದ ಉತ್ಪನ್ನಗಳನ್ನು ಪ್ರದರ್ಶಿಸಿದವು.ಭಾರತೀಯ ವಾಹನ ತಯಾರಿಕಾ ಕ್ಷೇತ್ರದಲ್ಲಿ ಅದೊಂದು ಮೈಲಿಗಲ್ಲು.  ಇದೀಗ ಆಟೋ ಎಕ್ಸ್‌ಪೋಗೆ ಬೆಳ್ಳಿ ಹಬ್ಬದ ಸಂಭ್ರಮ. ಜತೆಗೆ ವಾಹನ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿರುವ ಈ ಸಂದರ್ಭದಲ್ಲಿ ಭಾರತದ ಆಟೊ  ಎಕ್ಸ್‌ಪೋ ಇಡೀ ಜಗತ್ತಿನ ಗಮನ ಸೆಳೆದಿದೆ. ಈ ಇಪ್ಪತ್ತೈದು ವರ್ಷಗಳಲ್ಲಿ ಆಯೋಜಿಸಲಾಗಿರುವ ಹಾಗೂ ಈಗ ಆಯೋಜಿಸಲಾಗುತ್ತಿರುವ  11 ಆಟೊ  ಎಕ್ಸ್‌ಪೋಗಳು ಒಂದಕ್ಕಿಂತ ಒಂದು ವಿಭಿನ್ನ.ವರ್ಷದಿಂದ ವರ್ಷಕ್ಕೆ ವಾಹನ ತಯಾರಿಕೆಯಲ್ಲಿನ ಅಭಿವೃದ್ಧಿ, ಸಂಶೋಧನೆ, ವಿನ್ಯಾಸ, ಖರೀದಿಸಲು ಹಣಕಾಸು ನೆರವು ನೀಡುತ್ತಿರುವ ಹಣಕಾಸು ಸಂಸ್ಥೆಗಳು ಹೀಗೆ ತಮ್ಮ ಉತ್ಪನ್ನಗಳ ಜಾಹೀರಾತಿಗೊಂದು ಉತ್ತಮ ವೇದಿಕೆಯನ್ನು `ಆಟೊ  ಎಕ್ಸ್‌ಪೊ~  ಕಲ್ಪಿಸಿದೆ.

 

ಜತೆಗೆ ವರ್ಷದಿಂದ ವರ್ಷಕ್ಕೆ ಪಾಲ್ಗೊಳ್ಳುತ್ತಿರುವ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆರಂಭದಲ್ಲಿ ಕೆಲವೇ ಕೆಲವು ಕಂಪೆನಿಗಳೊಂದಿಗೆ ಒಂಬತ್ತು ದಿನಗಳ ಕಾಲ ಪ್ರದರ್ಶನ ಕಂಡ `ಆಟೊ ಎಕ್ಸ್‌ಪೊ~ ತನ್ನ ಮುಂದಿನ ಪ್ರದರ್ಶನ ನೀಡಿದ್ದು ಆರು ವರ್ಷಗಳ ನಂತರ. ಏಕೆಂದರೆ ಭಾರತದಲ್ಲಿ ವಾಹನ ತಯಾರಿಕಾ ಕ್ಷೇತ್ರಕ್ಕೆ ಭವಿಷ್ಯವ್ಲ್ಲಿಲ ಎಂಬ ನಿರಾಸೆಯ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದರಿಂದ ಪಾಲ್ಗೊಳ್ಳುವ ಕಂಪೆನಿಗಳು ನಿರಾಸಕ್ತಿ ತೋರಿದ್ದವು.ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಖರೀದಿದಾರರ ಸಂಖ್ಯೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ, ಭರವಸೆಯ ಬೆನ್ನು ಹತ್ತಿ 1993ರಲ್ಲಿ `ಆಟೊ ಎಕ್ಸ್‌ಪೊ~ ತನ್ನ ದ್ವಿತೀಯ ಪ್ರದರ್ಶನವನ್ನು ಆಯೋಜಿಸಿತು. ಅದನ್ನು ಉದ್ಘಾಟಿಸಿದವರು ಅಂದಿನ ಹಣಕಾಸು ಸಚಿವ ಡಾ.ಮನಮೋಹನ್ ಸಿಂಗ್.ವಾಹನ ತಯಾರಿಕೆಯಲ್ಲಿ ಸಹಯೋಗ, ಮಾರಾಟಗಾರರು, ಸೇವಾ ಜಾಲಗಳ ವಿಸ್ತರಣೆ, ಡೀಲರ್‌ಗಳು ಹಾಗೂ ಗ್ರಾಹಕರನ್ನು ತಲುಪಲು ಸರ್ವ ಪ್ರಯತ್ನವನ್ನೂ ಮಾಡಲು ಮನಮೋಹನ್ ಸಿಂಗ್ ಕರೆ ನೀಡಿದ್ದರು. ಇದು ಆ ವರ್ಷ ಪಾಲ್ಗೊಂಡು ಏಳು ರಾಷ್ಟ್ರಗಳ ವಾಹನ ತಯಾರಕರ ಪಾಲಿಗೆ ಕೆಂಪು ಹಾಸಿನ ಸ್ವಾಗತವಾಗಿತ್ತು.  ಇದಾದ ಮೂರು ವರ್ಷಗಳ (1996) ನಂತರ ನಡೆದ ಮೂರನೇ `ಆಟೊ ಎಕ್ಸ್‌ಪೊ~ನಲ್ಲಿ ಮೋಟಾರು ಕಾರು ತಯಾರಕೆಯಲ್ಲಿ ಸಿದ್ಧ ಹಸ್ತರೆನಿಸಿದ್ದ ಡೆವೂ, ಹ್ಯುಂಡೈ, ಫೋರ್ಡ್ ಹಾಗೂ ಹೋಂಡಾಗಳು ಪಾಲ್ಗೊಂಡು ತಮ್ಮ ಭವಿಷ್ಯದ ಕಾರುಗಳನ್ನು ಪ್ರದರ್ಶಿಸಿದವು.ತಮ್ಮ ಭವಿಷ್ಯ ಭಾರತದಲ್ಲಿದೆ ಎಂದು ಅರಿತ ವಿದೇಶಿ ವಾಹನ ತಯಾರಿಕಾ ಕಂಪೆನಿಗಳು ಮಧ್ಯಮವರ್ಗದವರನ್ನೇ ಹೆಚ್ಚು ಕೇಂದ್ರೀಕರಿಸಿ ಪುಟ್ಟ ಕಾರುಗಳಲ್ಲಿ ಪ್ರತಿಯೊಬ್ಬರ ಬಹುತೇಕ ಅಪೇಕ್ಷೆಗಳನ್ನು ಪೂರೈಸುವಂಥ ಸೌಲಭ್ಯವಿರುವ ವಾಹನಗಳ ತಯಾರಿಕೆಗಿಳಿದವು.ಇದಾದ ನಂತರ ನಡೆದ `ಆಟೊ ಎಕ್ಸ್‌ಪೊ~ಗಳಲ್ಲಿ ಗಣನೀಯವಾಗಿ ಪಾಲ್ಗೊಳ್ಳುವ ಕಂಪೆನಿಗಳು ಹೆಚ್ಚಾದವು. ಭಾರತದ ವಾಹನ ಖರಿದಿದಾರರಲ್ಲೂ ಉತ್ಸಾಹ ಹೆಚ್ಚಾಯಿತು. ಜತೆಗೆ ಅವರ ಅಪೇಕ್ಷೆಗಳೂ ಹೆಚ್ಚಾಗುತ್ತಾ ಹೋದವು. ಹೀಗಾಗಿ ಗ್ರಾಹಕರ ಅಪೇಕ್ಷೆಯನ್ನೂ ಮೀರಿದ ಸೌಲಭ್ಯವುಳ್ಳ ವಾಹನಗಳು `ಆಟೊ ಎಕ್ಸ್~ನಲ್ಲಿ ಪ್ರದರ್ಶನ ಕಂಡವು. ನಂತರದ ವರ್ಷಗಳಲ್ಲಿ ಅವುಗಳು ಗ್ರಾಹಕರ ಕೈಗೂ ಸೇರಿದವು.1998, 2000, 2002, 2004, 2006, 2008 ಹಾಗೂ 2010ರ `ಅಟೊ ಎಕ್ಸ್‌ಪೊ~ಗಳನ್ನು ಗಮನಿಸಿದಾಗ ಪಾಲ್ಗೊಳ್ಳುತ್ತಿರುವ ಕಂಪೆನಿಗಳ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚು. ಅವುಗಳಲ್ಲಿ ಪುಟ್ಟ ಮೊಪೆಡ್‌ಗಳಿಂದ ಹಿಡಿದು ಬೃಹತ್ ಟ್ರಕ್‌ಗಳವರೆಗೂ ವಿವಿಧ ಮಾದರಿಯ ವಾಹನಗಳು ಪ್ರದರ್ಶನಗೊಳ್ಳುತ್ತಿವೆ.ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ವಾಹನಗಳ ಸಂಖ್ಯೆ ಏರುತ್ತಲೇ ಇದೆ. 2009ರಲ್ಲಿ ಏಳೂವರೆ ಲಕ್ಷ ವಾಹನಗಳು ದೇಶದಲ್ಲಿ ಮಾರಾಟವಾಗಿವೆ. 2010ರಲ್ಲಿ ಈ ಸಂಖ್ಯೆ 12 ಲಕ್ಷವನ್ನು ಮೀರಿದೆ. ಹೀಗೆ ವರ್ಷದಿಂದ ವರ್ಷಕ್ಕೆ ವಾಹನಗಳ ಮಾರಾಟ ಸಂಖ್ಯೆಯಲ್ಲಿ ಶೇ 30ರಷ್ಟು ಏರಿಕೆ ದಾಖಲಾಗುತ್ತಿರುವುದು ಭಾರತದತ್ತ ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.ವಾಹನ ತಯಾರಕರ ಅಂದಾಜಿನ ಪ್ರಕಾರ 2015ರ ವೇಳೆಗೆ ಭಾರತದಲ್ಲಿ ವಾರ್ಷಿಕ ಒಟ್ಟು ಐವತ್ತು ಲಕ್ಷ ವಾಹನಗಳು ಮಾರಾಟವಾಗಬಹುದಂತೆ. ಅದರಂತೆ 2020ರ ವೇಳೆಗೆ ವಾಹನ ಮಾರಾಟ ಸಂಖ್ಯೆ ಒಂದು ಕೋಟಿಯ ಆಸುಪಾಸಿನಲ್ಲಿ ಇರಲಿದೆ ಎಂದು ನ್ಯೂಯಾರ್ಕ್ ಟೈಮ್ಸ ವರದಿ ಮಾಡಿದೆ.ಹ್ಯುಂಡೈ, ನಿಸ್ಸಾನ್, ಟೋಯೊಟಾ, ಫೋಕ್ಸ್‌ವ್ಯಾಗನ್, ಸುಜುಕಿ ಕಂಪೆನಿಗಳು ಭಾರತದಲ್ಲಿ ತಮ್ಮ ತಯಾರಿಕಾ ಘಟಕವನ್ನು ವಿಸ್ತರಿಸಿಕೊಂಡಿವೆ. ಭಾರತೀಯರ ಅಗತ್ಯಕ್ಕೆ ತಕ್ಕಂತೆ ಕೈಗೆಟುಕುವ ಬೆಲೆಗೆ, ಕಡಿಮೆ ಇಂಧನ ಬೇಡುವ ವಾಹನಗ ತಯಾರಿಕೆಯತ್ತ ಈ ಕಂಪೆನಿಗಳು ತಮ್ಮ ಮುಂದಿನ ಯೋಜನೆಗಳನ್ನು ರೂಪಿಸಿಕೊಂಡಿವೆ. ಜತೆಗೆ ಇತರ ದೇಶಗಳಿಗೂ ಇಲ್ಲಿಂದಲೇ ಕಾರು ತಯಾರಿಸಿ ರಫ್ತು ಮಾಡುತ್ತಿವೆ.ಹೆಚ್ಚು ಮಾರಾಟವಾಗುವ ಬೈಕ್‌ಗಳು

ದೇಶದಲ್ಲಿ ಕಾರುಗಳ ಕಾರುಬಾರು ಎಷ್ಟೇ ಇದ್ದರೂ. ಈಗಲೂ ಬೈಕುಗಳೇ ಹೆಚ್ಚು ಮಾರಾಟವಾಗುತ್ತಿವೆ. ಭಾರತದಲ್ಲಿ ಒಟ್ಟು ಮಾರಾಟವಾಗುವ ವಾಹನಗಳಲ್ಲಿ ದ್ವಿಚಕ್ರ ವಾಹನದ ಪಾಲು ಶೇ 76.23, ಸಾರಿಗೆ ವಾಹನಗಳು ಶೇ. 15.86, ವಾಣಿಜ್ಯ ವಾಹನಗಳು ಶೇ. 4.32 ಹಾಗೂ ತ್ರಿಚಕ್ರ ವಾಹಗಳ ಪಾಲು ಶೇ. 3.58.

 ಹೀಗಿದ್ದಿರೂ ಜಾಗತಿಕ ಮಟ್ಟದಲ್ಲಿ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ.ಈ ಲೆಕ್ಕಾಚಾರದ ಪ್ರಕಾರ ತ್ರಿಚಕ್ರ ವಾಹನ ಮಾರಾಟ ತೀರಾ ಕಡಿಮೆ ಇದ್ದರೂ ಜಾಗತಿಕ ಮಟ್ಟದಲ್ಲಿ ತ್ರಿಚಕ್ರ ವಾಹನ ಹಾಗೂ ಟ್ರ್ಯಾಕ್ಟರ್‌ಗಳ ತಯಾರಿಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಹೀಗೆ ವಾಹನಗಳ ಒಟ್ಟು ತಯಾರಿಕೆಯನ್ನು ನೋಡಿದಾಗ ಕಳೆದ ವರ್ಷ ದೇಶೀಯ ಮಾರುಕಟ್ಟೆಯ್ಲ್ಲಲಿ ಮಾರಾಟವಾದ ವಾಹನಗಳ ಸಂಖ್ಯೆ 11 ಲಕ್ಷ.ಈ ವಹಿವಾಟಿನ ಒಟ್ಟು ಅಂದಾಜು ಮೊತ್ತ ್ಙ 2,08,487 ಕೋಟಿ. ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ವಾಹನಗಳ ಮಾರಾಟ ಶೇ 44.9ರಷ್ಟು ವೃದ್ಧಿ ದಾಖಲಿಸಿದೆ. ಇನ್ನು ಭಾರತದಿಂದ ರಫ್ತಾಗುವ ವಾಹನಗಳ ಒಟ್ಟು ವಹಿವಾಟು ಕಳೆದ ವರ್ಷ 4.5 ಶತಕೋಟಿ ಡಾಲರ್(ರೂ 23,400 ಕೋಟಿ) ನಷ್ಟಾಗಿದೆ.  ಸತತವಾಗಿ ಏರುತ್ತಿರುವ ಪೆಟ್ರೋಲ್ ಬೆಲೆಯಿಂದ ದೇಶದಲ್ಲೆಗ ಡೀಸೆಲ್ ಕಾರುಗಳಿಗೆ ಶುಕ್ರದೆಸೆ. ಆದರೂ ಸಹ ಡಾಲರ್ ಎದುರು ರೂಪಾಯಿ ಅಪಮೌಲ್ಯ, ದುಬಾರಿ ಬ್ಯಾಂಕ್ ಬಡ್ಡಿದರ ಹಾಗೂ ಇನ್ನಿತರ ಕಾರಣಗಳಿಂದ ಕಳೆದ ವರ್ಷ ಕಾರುಗಳ ಮಾರಾಟ ತುಸು ಕಡಿಮೆಯಾಗಿದೆ.ಹೊಸ ಭರವಸೆಯೊಂದಿಗೆ  ನಾಳೆ (ಜ. 5ರಿಂದ) ದೆಹಲಿಯ ಪ್ರಗತಿ ಮೈದಾನದಲ್ಲಿ 11ನೇ `ಆಟೊ ಎಕ್ಸ್‌ಪೊ~ ಆರಂಭವಾಗಲಿದೆ. ಏಷ್ಯಾದಲ್ಲೇ ಅತಿ ದೊಡ್ಡ ಪ್ರದರ್ಶನ ಇದು ಎಂಬ ಹೆಗ್ಗಳಿಕೆ ಇದ್ದರೂ ಜಾಗತಿಕಮಟ್ಟದಲ್ಲಿ ಭಾರೀ ಗಮನ ಸೆಳೆಯುವ ಪ್ರದರ್ಶನ ಮೇಳ ಎಂಬುದೇನೂ ಸುಳ್ಳಲ್ಲ.ಈ ಬಾರಿ 20ಕ್ಕೂ ಹೆಚ್ಚು ದೇಶಗಳ ಎರಡು ಸಾವಿರಕ್ಕೂ ಅಧಿಕ ವಾಹನ ಹಾಗೂ ಬಿಡಿಭಾಗ ಹಾಗೂ ಪರಿಕರಗಳ ತಯಾರಕರು ಪಾಲ್ಗೊಳ್ಳುತ್ತಿದ್ದಾರೆ. ಅಂದಾಜಿನ ಪ್ರಕಾರ 50ಕ್ಕೂ ಹೆಚ್ಚು ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)