ಭಾನುವಾರ, ಜೂನ್ 13, 2021
26 °C

ಆಟೊ ಸಂಘದವರ ಮರೆಯಲಾಗದ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ತಂಗಿ ವೃತ್ತಿಯಲ್ಲಿ ನೇತ್ರ ವೈದ್ಯೆ. ಜನೋಪಕಾರವನ್ನು  ಸ್ವಲ್ಪ ಹೆಚ್ಚು ಎನ್ನುವ ರೀತಿಯಲ್ಲೇ ಮಾಡುತ್ತಿದ್ದಾಳೆ. ಅದರಲ್ಲೂ ಬಡವರಿಗೆ ವೈದ್ಯಕೀಯ ಸಹಾಯವನ್ನಲ್ಲದೆ ಹಣದ ನೆರವನ್ನೂ ನೀಡುತ್ತಿರುತ್ತಾಳೆ.

ಒಮ್ಮೆ ಅವಳು ಬಿಡುವಿನ ವೇಳೆಯಲ್ಲಿ ತನ್ನ ಬಡಾವಣೆಯ ಆಟೊರಿಕ್ಷಾ ಚಾಲಕರಿಗಾಗಿ ಉಚಿತವಾಗಿ ನೇತ್ರ ಪರೀಕ್ಷೆ, ರಕ್ತದೊತ್ತಡದ ತಪಾಸಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಳು. ಆ ಬಡಾವಣೆಯ ಆಟೊರಿಕ್ಷಾ ಚಾಲಕರು ತಮ್ಮ ಬೇರೆ ಬಡಾವಣೆಯ ಚಾಲಕರನ್ನು ಕರೆತಂದಿದ್ದರು. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರ ನೇತೃತ್ವದಲ್ಲೇ ಎಲ್ಲಾ ವ್ಯವಸ್ಥಿತವಾಗಿ ನಡೆಯುವ ಗೊಂದಲವಿರಲಿಲ್ಲ. ಎಲ್ಲಾ ಶಾಂತವಾಗಿದ್ದಿತು. ಸರದಿಯಲ್ಲೇ ಬಂದು ತಪಾಸಣೆ ಮಾಡಿಸಿಕೊಂಡರು. ನನ್ನ ತಂಗಿ ತನಗೆ ಬಂದಿದ್ದ ಮೆಡಿಕಲ್ ಸ್ಯಾಂಪಲ್ ಮಾತ್ರೆಗಳನ್ನೆಲ್ಲಾ ಹಂಚಿ ಇನ್ನೂ ಅವರ ವಿಶ್ವಾಸ ಗಳಿಸಿಕೊಂಡಳು. ಕೊನೆಯಲ್ಲಿ ಅವಳಿಗೆ ಶಾಲು ಹೊದೆಸಿ ಹಣ್ಣಿನ ತಟ್ಟೆಯನ್ನು ಕೊಟ್ಟು ಮರ್ಯಾದೆಯನ್ನೂ ತೋರಿಸಿದರು. ಅವಳ ಬಗ್ಗೆ ಅಧ್ಯಕ್ಷರು ಒಂದೆರಡು ಒಳ್ಳೆಯ ಮಾತುಗಳನ್ನಾಡಿದರು. ಲಘು ಉಪಾಹಾರದೊಂದಿಗೆ ಸಭೆ ಮುಕ್ತಾಯವಾಯಿತು.

ಅನೇಕ ಜನ ಚಾಲಕರು ಒಂದು ನನ್ನ ತಂಗಿಯನ್ನು ಸುತ್ತುವರಿದು ಅನೇಕ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಅಷ್ಟರಲ್ಲಿ ನನ್ನ ತಂಗಿಗೆ ಬೆಳಗ್ಗೆ ಆಪರೇಷನ್ ಮಾಡಿದ ರೋಗಿಯೊಬ್ಬರ ಸ್ಥಿತಿ ನೆನಪಾಗಿ ಅವರ ಸ್ಥಿತಿಯನ್ನು ವಿಚಾರಿಸಲು ಮೊಬೈಲಿಗೆ ನೋಡಿದಳು. ಮೊಬೈಲು ಅವಳಿಟ್ಟಿದ್ದ ಜಾಗದಲ್ಲಿ ಇದ್ದರೆ ತಾನೇ? ಎಲ್ಲಿ ಹೋಯಿತು? ಯಾರೋ ಎಗರಿಸಿದ್ದರು. ಇವಳ ಪರದಾಟವನ್ನು ನೋಡಿ ಸಂಘದವರು ಹುಡುಕಲಾರಂಭಿಸಿದರು. ಸಂಘದ ಅಧ್ಯಕ್ಷನಿಗೂ ತಿಳಿಯಿತು. ಅವರು ಕೂಡಲೇ ಮುಖ್ಯದ್ವಾರದ ಬಾಗಿಲನ್ನು ಭದ್ರಪಡಿಸಲು ತಮ್ಮ ಗೆಳೆಯರಿಗೆ ಸೂಚಿಸಿದರು. ಅದರಂತೆ ಬಾಗಿಲು ಮುಚ್ಚಲಾಯಿತು. ಅಧ್ಯಕ್ಷರು ಮೈಕನ್ನು ಕೈಗೆ ತೆಗೆದುಕೊಂಡು ದೊಡ್ಡ ದನಿಯಲಿ ಮಾತನಾಡಿದರು- `ಗೆಳೆಯರೇ ಈಗೊಂದು ಅಚಾತುರ್ಯ ನಡೆದಿದೆ, ಇಲ್ಲಿಯವರೆಗೂ ನಮ್ಮ ವೈದ್ಯಕೀಯ ಸೇವೆ ನಡೆಸಿದ ಡಾಕ್ಟರಮ್ಮನವರ ಮೊಬೈಲು ಕಳುವಾಗಿದೆ. ಇಲ್ಲಿಯವರೆಗೂ ಅದು ಇಲ್ಲಿದ್ದುದನ್ನು ನಾನೇ ನೋಡಿದ್ದೇನೆ. ಹೀಗೆಂದು ಹೇಳಲು ನಾಚಿಕೆಯಾಗುತ್ತದೆ. ಅದು ಪತ್ತೆಯಾಗುವವರೆಗೂ ಯಾರನ್ನೂ ಹೊರ ಬಿಡಲಾಗುವುದಿಲ್ಲ. ಇದು ನಮ್ಮ ಸಂಘಕ್ಕೇ ಆಗಿರುವ ಅವಮಾನ. ಪೊಲೀಸರನ್ನು ಕರೆಸುವುದು ನನಗೆ ಇಷ್ಟವಿಲ್ಲ. ಪರಿಸ್ಥಿತಿ ಹೀಗೆ ವಿಕೋಪಕ್ಕೆ ಹೋಗುವ ಮೊದಲೇ ಸಹಕರಿಸಿ. ಮೊಬೈಲನ್ನು ತಂದುಕೊಟ್ಟು ತಪ್ಪು ಒಪ್ಪಿಕೊಂಡರೆ ಅದು ನಿಮ್ಮ ದೊಡ್ಡ ಗುಣವನ್ನು ತೋರಿಸುತ್ತದೆ.

ಹಾಗಿಲ್ಲದೆ ನಿಮ್ಮ ಸ್ವಾಭಿಮಾನ ಅಡ್ಡಬಂದರೆ ಅದನ್ನು ಮೆಲ್ಲನೆ ಅಲ್ಲಿಯೇ ಕುರ್ಚಿಯ ಮೇಲೋ, ಕಿಟಕಿಯಲ್ಲೋ ಅಥವಾ ಜಮಖಾನದ ಮೇಲೆ ಇಟ್ಟುಬಿಡಿ, ಇದು ನಮ್ಮ ಸಂಘದ ಮರ್ಯಾದೆ ಪ್ರಶ್ನೆ. ತಪ್ಪು ಶಾಶ್ವತವಾಗಿ ಉಳಿದುಬಿಡುತ್ತದೆ~ ಎಂದು ಹೇಳುತ್ತಿರುವಾಗಲೇ ಹೋ ಎನ್ನುವ ಶಬ್ದದೊಂದಿಗೆ ಸಂಘದ ಸದಸ್ಯರೊಬ್ಬರು ಕೆಳಗೆ ಜಮಖಾನದ ಮೇಲೆ ಬಿದ್ದಿದ್ದ ಮೊಬೈಲನ್ನು ತಂದು ತೋರಿಸಿದರು.

ಅದು ನನ್ನ ತಂಗಿಯದೇ ಆಗಿದ್ದಿತು. ನನ್ನ ತಂಗಿಗೆ ಅಧ್ಯಕ್ಷರ ಕಾಳಜಿ ಮೆಚ್ಚುಗೆಯಾಯಿತು. ತಿಳಿಯಬೇಕಾದ ವಿಷಯ ಇಷ್ಟೇ: ದಕ್ಷತೆ, ಸಾಮರ್ಥ್ಯ. ಸಮಯೋಚಿತ ಪ್ರಜ್ಞೆ ಇರುವ ನಾಯಕರಿಂದ ಸಂಘ ಖಂಡಿತವಾಗಿ ಮುಂದುವರಿಯುತ್ತದೆ, ದೇಶಕ್ಕೂ ಇದು ಅನ್ವಯವಾಗುತ್ತದೆ. ಈ ಘಟನೆ ಕೇಳಿದ ಮೇಲೆ ನನಗೆ ಆಟೊದವರ ಬಗ್ಗೆ ಗೌರವ ಹೆಚ್ಚಾಯಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.