ಆಟೋ ಚಾಲಕರ ಪ್ರತಿಭಟನೆ

7

ಆಟೋ ಚಾಲಕರ ಪ್ರತಿಭಟನೆ

Published:
Updated:

ರಟ್ಟೀಹಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ಎದುರಿಗೆ ಇರುವ ಆಟೋ ನಿಲ್ದಾಣದಲ್ಲಿ ಶುಕ್ರವಾರ ಸಂತೆಗೆಂದು ವ್ಯಾಪಾರಸ್ಥರು ಹಾಕಿದ ಟೆಂಟ್‌ನೊಳಗೆ ಆಟೋ ನಿಲ್ಲಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ರಟ್ಟೀಹಳ್ಳಿ ಆಟೋ ನಿಲ್ದಾಣಕ್ಕೆ ಪ್ರಶಸ್ತವಾದ ಸ್ಥಳವಿಲ್ಲದ ಕಾರಣ ಗ್ರಾಮ ಪಂಚಾಯಿತಿ ಎದುರಿಗೆ ತಾತ್ಕಾಲಿಕ ನಿಲ್ದಾಣದ ವ್ಯವಸ್ಥೆ ಮಾಡಿಕೊಡಲಾಗಿತ್ತು.

 

ಆದರೆ ಪ್ರತಿ ಶುಕ್ರವಾರ ಸಂತೆ ಇರುವುದರಿಂದ ಈ ಸ್ಥಳದಲ್ಲಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಆಗ ಆಟೋ ಚಾಲಕರಿಗೆ ತೀವ್ರ ಕಿರಿಕಿರಿಯಾಗುವುದರಿಂದ  ಪ್ರತಿ ಶುಕ್ರವಾರ ಆಟೋಗಳನ್ನು  ಗ್ರಾಮದ ಸರ್ಕಲ್‌ನಲ್ಲಿರುವ ತಂಗು ದಾಣದ ಹತ್ತಿರ ನಿಲ್ಲಿಸಬೇಕೆಂದು ಈ ಹಿಂದಿನ ಸಭೆಗಳಲ್ಲಿ ತಿಳಿಸಲಾಗಿತ್ತು. ಇದಕ್ಕೆ ಆಟೋ ಮಾಲೀಕರೂ ಒಪ್ಪಿಗೆ ಸೂಚಿಸಿದ್ದರು.ಆದರೆ ಆಟೋ ನಿಲ್ಲಿಸಬೇಕಾಗಿದ್ದ ತಂಗುದಾಣದ ಎದುರಿಗೆ ಹಣ್ಣಿನ ಮತ್ತು ಸಿಹಿತಿನಿಸಿನ ಅಂಗಡಿಗಳು ಕಾಯಂ ಇರುವುದರಿಂದ ಆಟೋಗಳಿಂದಾಗಿ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಅಲ್ಲಿನ ಅಂಗಡಿಯವರು ದೂರಿದ್ದರಿಂದ ಆಟೋ ಮಾಲೀಕರು ಈಗ ಸಂತೆ ನಡೆಯುವ ಸ್ಥಳದಲ್ಲಿಯೇ ಶುಕ್ರವಾರವೂ ಆಟೋ ನಿಲ್ಲಿಸುತ್ತೇವೆಂದು ಪಟ್ಟು ಹಿಡಿದರು.ವ್ಯಾಪಾರಸ್ಥರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಆಟೋ ಮಾಲೀಕರ ನಡುವೆ ತೀವ್ರ ವಾಗ್ವಾದ ನಡೆಯಿತು. ವ್ಯಾಪಾರಸ್ಥರು ಹಾಕಿದ ಟೆಂಟ್‌ನೊಳಗೆ ಆಟೋಗಳನ್ನು ನಿಲ್ಲಿಸಿ ಪ್ರತಿಭಟನೆ ಮುಂದುವರಿಸಿದರು.ಸ್ಥಳಕ್ಕೆ ಧಾವಿಸಿದ ಪೊಲೀಸ್ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ‘ವ್ಯಾಪಾರಸ್ಥರಿಗೆ ಮತ್ತು ಸಂತೆಗೆ ತೊಂದರೆ ಕೊಡಬೇಡಿ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ’ ಎಂದು ಗ್ರಾಪಂ ಅಧ್ಯಕ್ಷ ಕಿರಣಕುಮಾರ ಬಾಜೀರಾಯರ ಹೇಳಿದ್ದರಿಂದ ಚಾಲಕರು ಪ್ರತಿಭಟನೆ ಹಿಂತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry