ಭಾನುವಾರ, ಏಪ್ರಿಲ್ 18, 2021
23 °C

ಆಟ ಓಟದ ಪಾಠ

ಪ್ರಜಾವಾಣಿ ವಾರ್ತೆ ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ಅಂದು ಬೆಳಗಾವಿ ಕ್ರೀಡಾ ವಸತಿ ನಿಲಯಕ್ಕೆ ಸೇರಿದ್ದ ಎಸ್.ವಿ.ಸುನೀಲ್ ಈಗ ಒಲಿಂಪಿಕ್ಸ್‌ಗೆ ಆಯ್ಕೆಯಾದ ಭಾರತ ಹಾಕಿ ತಂಡದ ಪ್ರಮುಖ ಆಟಗಾರ. ಭಾರತೀಯ ಸೇನೆಯ ಉದ್ಯೋಗಿ. ವೇಗದ ಓಟಗಾರ್ತಿ ವಿಜಾಪುರದ ತಿಪ್ಪವ್ವ ಸಣ್ಣಕ್ಕಿ ರೈಲ್ವೆ ಉದ್ಯೋಗಿ. ಗುಲ್ಬರ್ಗ ವಿ.ವಿ. ಪ್ರತಿನಿಧಿಸಿದ ಕ್ರಿಕೆಟ್‌ಪಟು ಯರ‌್ರೇಗೌಡ(ರೈಲ್ವೇಸ್) ಮತ್ತು ರಘೋತ್ತಮ ನವಿಲೆ (ಬ್ಯಾಂಕ್) ಅಧಿಕಾರಿಗಳು. ತ್ರಿವಿಧ ದೂರ ಜಿಗಿತ ಸಾಧಕ ಶ್ರೀಧರ್ ಪೊಲೀಸ್ ಉದ್ಯೋಗಿ.

ಸಾವಿರಾರು ವಿದ್ಯಾರ್ಥಿಗಳು ಉದ್ಯೋಗಕ್ಕೆ ಶಿಕ್ಷಣದ ಹಿಂದೆ ಓಡಿದರೆ, ಯಶಸ್ವಿ ಓಟಗಾರನ ಹಿಂದೆ ಉದ್ಯೋಗ ಓಡಿ ಬರುತ್ತದೆ. ಇದು ಕ್ರೀಡೆಯ ಯಶಸ್ಸು.



ದೈಹಿಕ, ಮಾನಸಿಕವಾಗಿ ಸದೃಢರಾಗಿಸುವ ಕ್ರೀಡೆಯನ್ನು ಔದ್ಯೋಗಿಕ ಶಿಕ್ಷಣದ ಸಂದರ್ಭದಲ್ಲಿ ಖಾಸಗಿ ಶಾಲಾ-ಕಾಲೇಜು, ಪೋಷಕರು, ವಿದ್ಯಾರ್ಥಿಗಳು ಕಡೆಗಣಿಸುತ್ತಿದ್ದಾರೆ. ಆದರೆ ಕ್ರೀಡೆ ಇಂದು ಕೇವಲ ಮೈದಾನಕ್ಕೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳನ್ನು ಎಳೆವೆಯಲ್ಲೇ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವ್ಯಕ್ತಿಯಾಗಿ ರೂಪಿಸುತ್ತಿದೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಟೆನಿಸ್, ಫುಟ್‌ಬಾಲ್, ಕ್ರಿಕೆಟ್, ರಗ್ಬಿ, ಗಾಲ್ಫ್, ಅಥ್ಲೆಟ್‌ಗಳು ಕಾಣಿಸಿಕೊಳ್ಳುತ್ತಿದ್ದಾರೆ. ಆಟೋಟಗಳು ಇಂದು ಶಿಕ್ಷಣ, ಉದ್ಯೋಗ, ಆರ್ಥಿಕ ಕ್ಷೇತ್ರವಾಗಿ ಬೆಳೆದು ನಿಂತಿವೆ. ಹಲವರಿಗೆ ಬದುಕು ಕಲ್ಪಿಸಿದೆ.



ಶಿಕ್ಷಣ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗವೇ ಇದೆ. ಇಲ್ಲಿ ಹಲವಾರು ವಿದ್ಯಾರ್ಥಿಗಳು ಸ್ನಾತಕೋತ್ತರ, ಪದವಿ, ಡಿಪ್ಲೊಮೊ ಅಭ್ಯಸಿಸುತ್ತಿದ್ದರೆ, 12 ಮಂದಿ ಪಿಎಚ್‌ಡಿ ಮಾಡುತ್ತಿದ್ದಾರೆ. ಕ್ರೆಡಿಟ್ ಬೇಸ್ಡ್  ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದ ಬಳಿಕ ಕ್ರೀಡಾ ಸಾಧಕ ವಿದ್ಯಾರ್ಥಿಗೆ ಹೆಚ್ಚುವರಿ ಅಂಕ ದೊರೆಯುತ್ತಿದೆ. ಅವರಿಗಾಗಿ ಒಳಾಂಗಣ ಕ್ರೀಡಾಂಗಣ, 400 ಮೀ ಟ್ರ್ಯಾಕ್‌ನ ಸರ್ವ ಸುಸಜ್ಜಿತ ಅಂಗಣ, ಜಿಮ್, ಟೆನಿಸ್, ಬ್ಯಾಸ್ಕೆಟ್‌ಬಾಲ್ ಕೋರ್ಟ್ ಸೇರಿದಂತೆ ಹಲವು ಸೌಲಭ್ಯಗಳಿವೆ.



`ಕ್ರೀಡೆಯಲ್ಲಿ ಹೆಚ್ಚಾಗಿ ಬಡ ವಿದ್ಯಾರ್ಥಿಗಳೇ ಬರುತ್ತಾರೆ. ಆದರೆ ಈ ಭಾಗದ ಉದ್ಯಮಿ, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಂಘಗಳು, ರಾಜಕೀಯ ಮುಖಂಡರು ನೀಡಿರುವ ಪ್ರೋತ್ಸಾಹ ಕಡಿಮೆ. ಇನ್ನೊಂದೆಡೆ ಸುಶಿಕ್ಷಿತರೂ ಕ್ರೀಡೆಯ ಸಾಧ್ಯತೆಯನ್ನು ಮನಗಂಡಿಲ್ಲ. ಹೀಗಾಗಿ ಪ್ರತಿಭೆಗಳಿದ್ದರೂ ಅವಕಾಶ ವಂಚಿತರಾಗಿದ್ದಾರೆ~ ಎನ್ನುತ್ತಾರೆ ವಿಶ್ವವಿದ್ಯಾಲಯದ ದೈಹಿಕ ನಿರ್ದೇಶಕ ಡಾ. ಪಾಸೋಡಿ. (ಮೊ.9448140078)

`ಕ್ರೀಡೆ ಒಂದೆಡೆ ಆರೋಗ್ಯ ಕಾಪಾಡುತ್ತದೆ. ಇನ್ನೊಂದೆಡೆ ಶೀಘ್ರವೇ ಸಾವಿರಾರು ದೈಹಿಕ ಶಿಕ್ಷಕ, ನಿರ್ದೇಶಕ, ತರಬೇತುದಾರ ಹುದ್ದೆಗಳು ಸೃಷ್ಟಿಯಾಗಲಿವೆ~ ಎನ್ನುತ್ತಾರೆ ದೈಹಿಕ ಶಿಕ್ಷಕ ಶಿವಲಿಂಗಪ್ಪ ಗೌಳಿ.



ಸಂಸ್ಥೆಗೂ ಶ್ರೇಯ: `ಬಹುತೇಕ ಶಿಕ್ಷಣ ಸಂಸ್ಥೆಗಳು ವಾರ್ಷಿಕ ಫಲಿತಾಂಶ ಬಂದಾಗ ಜಾಹೀರಾತು ನೀಡುತ್ತವೆ. ಆದರೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷ ಕೆಲವು ಕ್ರೀಡಾ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ತರಬೇತಿ-ಶಿಕ್ಷಣ ನೀಡುತ್ತದೆ. ಅವರ ನಿರಂತರ ಸಾಧನೆ ಪರಿಣಾಮ ಸಂಸ್ಥೆಯ ಹೆಸರು ವರ್ಷವಿಡೀ ರಾಜ್ಯ, ರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಮಿನುಗುತ್ತದೆ. ಕ್ರೀಡೆಯನ್ನು ಪ್ರೋತ್ಸಾಹಿಸಿದರೆ, ವಿದ್ಯಾರ್ಥಿ ಮಾತ್ರವಲ್ಲ, ಸಂಸ್ಥೆಗಳೂ ಪ್ರಸಿದ್ಧಿ ಪಡೆಯುತ್ತವೆ~ ಎಂದು ಕ್ರೀಡಾಪಟುವೊಬ್ಬರು ವಿವರಿಸಿದರು.



ಕ್ರೀಡಾ ಮತ್ತು ಯುವಜನ ಇಲಾಖೆಯು ಪ್ರತಿ ವರ್ಷ ಸಬ್ ಜ್ಯೂನಿಯರ್ (5-7ತರಗತಿ), ಜ್ಯೂನಿಯರ್ (7-10) ಮತ್ತು ಸೀನಿಯರ್ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಉಚಿತ ತರಬೇತಿ-ಶಿಕ್ಷಣ ನೀಡುತ್ತದೆ. ಅಂತಹ ಕ್ರೀಡಾ ವಸತಿ ನಿಲಯ ಗುಲ್ಬರ್ಗ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಬಳಿ ಇದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಸಬ್‌ಜ್ಯೂನಿಯರ್ ತರಬೇತಿ ವಸತಿ ನಿಲಯಗಳಿವೆ. ಅಲ್ಲಿಂದ ಉದ್ಯೋಗಕ್ಕೆ ಕಾಲಿರಿಸಿದ ಸಾಧಕರ ಪಟ್ಟಿಯೇ ಇದೆ~ ಎನ್ನುತ್ತಾರೆ ತರಬೇತುದಾರ ರಾಮಚಂದ್ರ. 



  ಕ್ರೀಡೆಯು ಶಿಕ್ಷಣ- ಉದ್ಯೋಗವಾಗಿ ಅವಕಾಶದ ಅಂಗಣವನ್ನೇ ತೆರೆದಿದೆ. ಆಸಕ್ತರು ಇನ್ನಷ್ಟು ವಿಚಾರಕ್ಕೆ (ದೂರವಾಣಿ- 08472-263286; ಡಾ.ಭೈರೆಡ್ಡಿ -9902838759; ಡಾ.ಕನ್ನೂರ್-9448414223) ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.