ಸೋಮವಾರ, ಜೂನ್ 14, 2021
22 °C

ಆಡಂಬರದ ಜೀವನ ಶೈಲಿಗೆ ಮಾರು ಹೋದ ಮಠ- ಮಾನ್ಯ ಪರಂಪರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನುಷ್ಯ ತೀರ ಹತಾಶನಾಗಿ ಆತ್ಮಸ್ಥೈರ್ಯ ಕಳೆದುಕೊಂಡಾಗ ಗುಡಿ, ಗುಂಡಾರಗಳಿಗೆ ತೆರಳುತ್ತಾನೆ. ಜ್ಯೋತಿಷಿಗಳತ್ತ ನಡೆಯುತ್ತಾನೆ. ಹಾಗೆಯೇ ಮಠಗಳಿಗೂ ಹೋಗುತ್ತಾನೆ. ಮಠದಲ್ಲಿನ ಗುರುವಿನ ಬೋಧನೆಯಿಂದ ಕ್ರಮೇಣ ಆತ್ಮಸ್ಥೈರ್ಯ ತಂದುಕೊಳ್ಳುತ್ತಾನೆ. ಚಿಗುರಿದ ಮರದಂತಾಗಲು ಯತ್ನಿಸುತ್ತಾನೆ.ಮಠಗಳು ಮತ್ತು ಅವುಗಳ ಗುರುಗಳು ಸರ್ಕಾರದ ನೆರವು ಹಾಗೂ ಕಾಣಿಕೆ ರೂಪದಲ್ಲಿ ಬರುವ ಹಣ ಹಾಗೂ ಉಳ್ಳವರ ಉದಾರ ನೆರವಿನ ಹಣದಿಂದ ಅನಾಥರು ಹಾಗೂ ಬಡ ಮಕ್ಕಳಿಗೆ ಉಚಿತ ವಿದ್ಯೆ ನೀಡುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಹೀಗೆ ಹಲವು ರೀತಿಯಲ್ಲಿ ಸಮಾಜದಿಂದ ಏನನ್ನೂ ಅಪೇಕ್ಷಿಸದೆ ಅದರ ಸೇವೆ ಮಾಡುವ ಗುರುಗಳಿಗೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನವಿದೆ. ಆದ್ದರಿಂದಲೇ ನಮ್ಮ ದೇಶದ ಜನರು ಮಠಗಳಿಗೆ ಮತ್ತು  ಸ್ವಾಮೀಜಿಗಳಿಗೆ ಅಪಾರ ಭಕ್ತಿ, ಗೌರವಗಳನ್ನು ತೋರಿಸುತ್ತ ಬಂದಿದ್ದಾರೆ.ನಮ್ಮ  ಹಲವಾರು ಮಠಗಳ ಸ್ವಾಮೀಜಿಗಳು ವಿದೇಶಗಳಲ್ಲಿಯೂ ತಮ್ಮ (ಶಾಖೆ) ಮಠಗಳನ್ನು ಸ್ಥಾಪಿಸಿದ್ದಾರೆ. ವಿದೇಶಗಳ ಧಾರ್ಮಿಕ ನಾಯಕರು ಭಾರತಕ್ಕೆ ಬಂದು ಇಲ್ಲಿ ಮಠ, ಮಂದಿರಗಳನ್ನು ಸ್ಥಾಪಿಸಿದ ಉದಾಹರಣೆಗಳು ವಿರಳ. ನಮ್ಮ ಸ್ವಾಮೀಜಿಗಳ ಬೋಧನೆಯಿಂದ ಆಕರ್ಷಿತರಾದ ವಿದೇಶಿ ಆಗರ್ಭ ಶ್ರೀಮಂತರು ತಮ್ಮ ಸಂಪತ್ತನ್ನು ಮಠಗಳಿಗೆ ದಾನ ಮಾಡಿದ ಅನೇಕ ಉದಾಹರಣೆಗಳಿವೆ. ಇದಕ್ಕೆ ಕಾರಣ ಮಠಗಳ ಪರಂಪರೆ, ಸದುದ್ದೇಶ,  ಗುರುಗಳ ಆಧ್ಯಾತ್ಮಿಕ ಚಿಂತನೆ, ಸಮಾಜ ಸೇವಾ ಕಾರ್ಯಗಳು ಹಾಗೂ ಅವರ ಪಾರದರ್ಶಕ ಬದುಕು ಮತ್ತು ಸರಳ ಜೀವನ.ನಮ್ಮ ದೇಶಕ್ಕೆ ದೊಡ್ಡ ಗುರು ಪರಂಪರೆ ಇದೆ. ಅವರಿಗೆ ಜಾತಿ, ಮತ, ಧರ್ಮಗಳ ಬೇಲಿ ಇರುವುದಿಲ್ಲ. ಮಾನವೀಯತೆಯೇ ಅವರ ಧರ್ಮ. ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ಅವರ ಚಿಂತನೆ. ಎಲ್ಲ ಜೀವಿಗಳಿಗೂ ಸಹಾಯ ಮಾಡುವ ಉದಾರ ಗುಣ ಅವರದು.ಅಂಥವರನ್ನು ಅವರು ಗತಿಸಿದ ನಂತರವೂ ಜನರು ಆರಾಧಿಸುತ್ತಾರೆ. ಅಂತಹ ಗುರುಗಳ ದೊಡ್ಡ ಪರಂಪರೆಯೇ ಇದೆ. ಅಂಥವರು ಎಲ್ಲಾ ಧರ್ಮ, ಎಲ್ಲಾ ವರ್ಗಗಳ ಜನರ ಮನೆ ಹಾಗೂ ಮನಸ್ಸಿನಲ್ಲೂ ಎಲ್ಲ ಕಾಲಕ್ಕೂ ಉಳಿಯುತ್ತಾರೆ.ಇಂದು ನಗರಗಳು ಬೆಳೆದಿವೆ. ತಂತ್ರಜ್ಞಾನ ಮುಂದುವರಿದಂತೆ ಕೆಲವು ಮಠಗಳು ಹಾಗೂ ಮಠಾಧೀಶರ ಜೀವನ ಶೈಲಿ ಬದಲಾಗಿದೆ. ಕೆಲವರ ಆಧ್ಯಾತ್ಮ ಚಿಂತನೆಗಳನ್ನು ಕೇಳಲು ಇಂದು ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾಥ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ದೃಷ್ಟಿಕೋನದಲ್ಲಿ ಬದಲಾವಣೆ ಆಗಿದೆ. ಸರಳ ಜೀವನ ಮಾಡುತ್ತಿದ್ದ ಗುರುಗಳು ಆಡಂಬರದ ಜೀವನದತ್ತ ವಾಲುತ್ತಿದ್ದಾರೆ.ಪ್ರಚಾರಗಳಿಂದ ದೂರವೇ ಉಳಿದು ಜನರಿಗೆ ಮಾರ್ಗದರ್ಶಿಯಾಗಿದ್ದ ಕೆಲವರು ಇಂದು ಪ್ರಚಾರ ಪ್ರಿಯರಾಗಿದ್ದಾರೆ. ತಮ್ಮದೇ ಜಾತಿ, ಉಪ ಜಾತಿಗಳ ಸಂಘಟನೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಕಟೌಟ್‌ಗಳಲ್ಲಿ ಕೆಲವರು ರಾರಾಜಿಸಲಾರಂಭಿಸಿದ್ದಾರೆ. ಜಾತಿ, ಉಪ ಜಾತಿಗೊಂದು ಮಠಗಳು ಸ್ಥಾಪನೆಯಾಗುತ್ತಿವೆ. ಸಮಾಜದ ಅಂಧತ್ವವನ್ನು ತೊಡೆದು ಹಾಕುವ ಕೆಲಸ ಮಾಡುತ್ತಿದ್ದ ಮಠಗಳು ಈಗ ತಮ್ಮ ಹಾಗೂ ತಮ್ಮ ಜಾತಿಯ ಜನರ ಅಭಿವೃದ್ಧಿಯಲ್ಲಿ ತೊಡಗಿಕೊಂಡು ತಾವೇ ಅಂಧತ್ವದ ಹೊದಿಕೆಯಡಿಯಲ್ಲಿ ಸಿಲುಕಿ ಕೊಂಡಿವೆ.ಮಠದ ಅಭಿವೃದ್ಧಿ ಮತ್ತು ಜಾತಿಯ ರಕ್ಷಣೆಗಾಗಿ ತಮ್ಮ ಜಾತಿಯ ರಾಜಕೀಯ ನಾಯಕರನ್ನು ಹುಟ್ಟುಹಾಕುತ್ತಿವೆ. ಇಂತಹ ನಾಯಕರ ಪರವಾಗಿ ಮಠಗಳು ಎದ್ದು ನಿಲ್ಲುತ್ತವೆ. ಕೆಲ ಮಠಾಧೀಶರು ತಮ್ಮದೇ ಕೋಟೆ ಕಟ್ಟಿಕೊಂಡಿದ್ದಾರೆ. ಭೂ ಕಬಳಿಕೆ, ಹೈಟೆಕ್ ಶಾಲೆ, ಕಾಲೇಜು, ಹೈಟೆಕ್ ಆಸ್ಪತ್ರೆಗಳನ್ನು ಆರಂಭಿಸಿ ಅವನ್ನೆಲ್ಲ ಹಣ ಗಳಿಕೆಯ ಮಾಧ್ಯಮಗಳನ್ನಾಗಿ ಮಾಡಿಕೊಂಡಿದ್ದಾರೆ. ಉದ್ಯಮಿಗಳಂತೆ, ರಾಜಕಾರಣಿಗಳಂತೆ ವರ್ತಿಸುತ್ತ ಹಣವಂತರಿಗೆ ಹತ್ತಿರವಾಗುತ್ತ ಕೆಳ ಸಮುದಾಯಗಳ ಜನರಿಂದ ದೂರ ಆಗುತ್ತಿದ್ದಾರೆ. ಇಂತಹ ಹತ್ತಾರು ಉದಾಹರಣೆಗಳು ಇಂದು ಎಲ್ಲರ ಕಣ್ಣ ಮುಂದಿವೆ.

ಇದರ ಫಲ ಎನ್ನುವಂತೆ ಶಾಲಾ ಕಾಲೇಜುಗಳ ಸ್ಥಾಪನೆಗೆ ಪೈಪೋಟಿ ಹೆಚ್ಚಿದೆ.

 

ಹಿಂದುಳಿದ, ದಲಿತ ವರ್ಗಗಳ ಜನರ ಕಷ್ಟಗಳಿಗೆ ಸ್ಪಂದಿಸುವ ನೆಪದಲ್ಲಿ ಅವರನ್ನು ಮತಾಂತರಕ್ಕೆ ಉತ್ತೇಜನ ನೀಡುವ ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿವೆ. ಈ ಬೆಳವಣಿಗೆಗಳನ್ನು ತಡೆಯುವುದಕ್ಕೆ ನಮ್ಮ ಮಠ ಮಾನ್ಯಗಳು ಸ್ಪಂದಿಸುತ್ತಿಲ್ಲ.ನಮ್ಮ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮ ಹಾಗೂ ಪರಂಪರೆಯನ್ನು ರಕ್ಷಣೆ ಮಾಡುವ ಮಠಗಳ ಉದ್ದೇಶ ಬದಲಾಗಿದೆ. ಕೆಳ ವರ್ಗದ ಜನರು ಸಣ್ಣ ಪುಟ್ಟ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಬಲವಂತದ ಮತಾಂತರಗಳು ಹೆಚ್ಚಾಗಿವೆ. ಮಠ ಮಾನ್ಯಗಳು ಇತ್ತ ಗಮನ ಹರಿಸುತ್ತಿಲ್ಲ. ಬದಲಾದ ಪರಿಸ್ಥಿತಿಯ ಬಗ್ಗೆ ಯೋಚನೆಯನ್ನೇ ಮಾಡದ ಮಠಾಧೀಶರು ತಮ್ಮದೇ ಆದ ಲೆಕ್ಕಾಚಾರಗಳಲ್ಲಿ ಮುಳುಗಿದ್ದಾರೆ.ಆಧುನಿಕತೆಯ ಹೆಸರಿನಲ್ಲಿ ಜನರ ಜೀವನ ಶೈಲಿಯೂ ಬದಲಾಗುತ್ತಿದೆ. ನಮ್ಮ ಸಾಂಪ್ರದಾಯಿಕ ಶಿಕ್ಷಣ, ಸಂಸ್ಕೃತಿಯ ಸ್ವರೂಪಗಳು ಬದಲಾಗುತ್ತಿವೆ. ಆಧುನಿಕ ಜೀವನ ಶೈಲಿಗೆ ಮನಸೋತ ಮಠಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಅರ್ಥವಿಲ್ಲದ ಆಚರಣೆಗಳಿಗೆ ಮುಂದಾಗಿ ಪ್ರಚಾರದ ಬೆನ್ನುಹತ್ತಿವೆ. ಈ ಬೆಳವಣಿಗೆಗಳಿಂದ ನಿಜಕ್ಕೂ ಶೋಷಣೆಗೆ ಒಳಗಾದವರು ಬಡವರು ಮತ್ತು ಧಾರ್ಮಿಕ ಮಾರ್ಗದರ್ಶನ ಇಲ್ಲದ ದುರ್ಬಲ ವರ್ಗಗಳ ಜನರು.ಇಂತಹ ಬದಲಾವಣೆಗೆ ನಮ್ಮ ಕಾಲದ ಮಠಗಳು ತೆರೆದುಕೊಳ್ಳುತ್ತಿವೆ. ಅದೇ ಈ ಕಾಲದ ದುರಂತ.

    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.