ಗುರುವಾರ , ಮೇ 26, 2022
31 °C

ಆಡಳಿತದಲ್ಲಿ ಕನ್ನಡ ಘೋಷಣೆಯಷ್ಟೇ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯ ಸರ್ಕಾರದ ವಿವಿಧ ಕಚೇರಿ ಹಾಗೂ ನಿಗಮ-ಮಂಡಳಿಗಳಲ್ಲಿ ಪೂರ್ಣವಾಗಿ ಕನ್ನಡ ಬಳಸುವ ಉದ್ದೇಶದಿಂದಲೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ರಚನೆಯಾಗಬೇಕಾದ ಕನ್ನಡ ಜಾಗೃತಿ ಸಮಿತಿ ಕಳೆದ ಎರಡು ವರ್ಷದಿಂದ ರಚನೆಯಾಗದ ಪರಿಣಾಮ ‘ಆಡಳಿತದಲ್ಲಿ ಕನ್ನಡ’ ಎಂಬ ಸರ್ಕಾರದ ಹೇಳಿಕೆ ಘೋಷಣೆಯಾಗಿಯೇ ಉಳಿದಿದೆ.ಸರ್ಕಾರಿ ಇಲಾಖೆಯ ಪ್ರತಿ ಸಿಬ್ಬಂದಿ ಪೂರ್ಣ ಕನ್ನಡದಲ್ಲಿಯೇ ವ್ಯವಹಾರ ನಡೆಸುವುದು ಕಡ್ಡಾಯ. ಇಂತಹ ಪ್ರಗತಿ ತೋರಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಅನಿವಾರ್ಯ ಎಂಬ ಎಚ್ಚರಿಕೆಯನ್ನು ಕಳೆದ ವರ್ಷ ನಡೆಸಲಾದ ಕನ್ನಡ ಜಾಗೃತಿ ವರ್ಷಾಚರಣೆ ಸಂದರ್ಭದಲ್ಲಿ ನೀಡಲಾಗಿತ್ತು. ಆದಾಗ್ಯೂ ಹತ್ತಾರು ಇಲಾಖೆಗಳಲ್ಲಿ ಶೇ. 100ರಷ್ಟು ಕನ್ನಡ ಅನುಷ್ಠಾನ ಜಾರಿ ಸಾಧ್ಯವಾಗಿಲ್ಲ.ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ, ಕನ್ನಡ ಜಾಗೃತಿ ಸಮಿತಿ ರಚನೆಗೆ ಒತ್ತುನೀಡುವ ಮೂಲಕ ಅಧಿಕಾರಿ ವರ್ಗದಲ್ಲಿ ಒಂದಿಷ್ಟು ಚುರುಕು ಮುಟ್ಟಸಿಲು ಕಾರಣರಾಗಿದ್ದರು. ಆದರೆ ಕಳೆದ 2 ವರ್ಷದಿಂದ ಇಂತಹ ಸಮಿತಿ ರಚನೆಯಾಗಿಲ್ಲ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆಯಾಗಬೇಕು.2010ರಲ್ಲಿ ಸಮಿತಿ ರಚನೆಯಾಗದೇ ಇದ್ದಾಗ 2011ರಲ್ಲಾದರೂ ಈ ಕೆಲಸ ಆಗಬಹುದು ಎಂಬ ನಿರೀಕ್ಷೆ ಇತ್ತು. ಈಗ ಮಾರ್ಚ್ ಮುಗಿಯುತ್ತ ಬಂದಿದ್ದರೂ ಸಮಿತಿ ರಚನೆ ಸುದ್ದಿಯೇ ಇಲ್ಲ. ಕನ್ನಡ-ಸಂಸ್ಕೃತಿ ಇಲಾಖೆ ಇಲ್ಲವೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆಗೆ ಒಲವು ತೋರಿಸುತ್ತಿಲ್ಲ.ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳ ದೈನಂದಿನ ಎಲ್ಲ ಬಗೆಯ ವ್ಯವಹಾರ ಅನಿವಾರ್ಯ ಸಂದರ್ಭ ಹೊರತುಪಡಿಸಿ ಶೇ. 100ರಷ್ಟು ಕನ್ನಡದಲ್ಲಿಯೇ ನಡೆಯಬೇಕು ಎನ್ನುವುದು ಸರ್ಕಾರದ ಆದೇಶ. 2000ರ ಏ. 11ರಂದು ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಬಿ.ಕೆ.ಭಟ್ಟಾಚಾರ್ಯ, ಹೊರಡಿಸಿದ ಸುತ್ತೋಲೆ ಪ್ರಕಾರ ಇಲಾಖೆಗಳು ತಮ್ಮ ವಿವಿಧ ಹಂತದ ಕಚೇರಿ ವ್ಯವಹಾರದಲ್ಲಿ ಸಂಪೂರ್ಣವಾಗಿ ಕನ್ನಡ ಬಳಸುವುದು ಅನಿವಾರ್ಯ.ದಕ್ಷಿಣ ಕನ್ನಡದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಬಳಕೆ ಪ್ರಮಾಣ ಗಮನಿಸಿದರೆ ಒಟ್ಟು 71 ಇಲಾಖೆಗಳಲ್ಲಿ ಅರ್ಧದಷ್ಟು ಇಲಾಖೆಗಳಲ್ಲಿ ಮಾತ್ರವೇ ಕನ್ನಡ ಬಳಕೆ ಇದೆ. 31 ಇಲಾಖೆಗಳಲ್ಲಿ ಕನ್ನಡ ಬಳಕೆ ಪ್ರಮಾಣ ಶೇ. 100ರ ಗುರಿ ತಲುಪಿಲ್ಲ. ಇದನ್ನು ಇತ್ತೀಚಿನ ಸಮೀಕ್ಷಾ ವರದಿ(2011ರ ಫೆಬ್ರವರಿ) ಸ್ಪಷ್ಟಪಡಿಸಿದೆ. ಪರಿಣಾಮ, ಸರ್ಕಾರದ ‘ಆಡಳಿತದಲ್ಲಿ ಕನ್ನಡ’ ಕೇವಲ ಘೋಷಣೆಯಷ್ಟೇ ಆಗಿದೆ ಎನಿಸುತ್ತಿದೆ.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ವಾಣಿಜ್ಯ ತೆರಿಗೆ ಇಲಾಖೆ, ಪ್ರವಾಸೋದ್ಯಮ ಕಚೇರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಿಂದ ಹೊರಡಿಸಲಾದ ಪತ್ರಗಳು, ವ್ಯವಹರಿಸಿದ ಕಡತ, ಕಚೇರಿಗೆ ಬಂದ ಪತ್ರಗಳ ಸಮೀಕ್ಷಾ ವರದಿ ಗಮನಿಸಿದರೆ ಕನ್ನಡ ಸ್ಥಿತಿ ಇಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಕ್ಷೇಮದಿಂದ ಇಲ್ಲ ಎನ್ನಬಹುದು.ಪ್ರತಿ ತಿಂಗಳಲ್ಲಿ ಕಚೇರಿಗೆ ಸಾರ್ವಜನಿಕರು ಹಾಗೂ ಇತರೆ ಇಲಾಖೆಗಳಿಂದ ಬಂದ ಕನ್ನಡ ಭಾಷೆಯ ಪತ್ರಗಳೆಷ್ಟು, ಇಂಗ್ಲಿಷ್‌ನಲ್ಲಿದ್ದ ಪತ್ರಗಳೆಷ್ಟು, ಕಚೇರಿಯಿಂದ ಹೊರಡಿಸಲಾದ ಪತ್ರಗಳಲ್ಲಿ ಕನ್ನಡದಲ್ಲಿ ಎಷ್ಟು, ಇಂಗ್ಲಿಷ್‌ನಲ್ಲಿ ಎಷ್ಟು, ನಿರ್ವಹಿಸಲಾಗುತ್ತಿರುವ ಕಡತಗಳಲ್ಲಿ ಕನ್ನಡದಲ್ಲಿ ಎಷ್ಟಿವೆ, ಇಂಗ್ಲಿಷ್‌ನಲ್ಲಿ ಎಷ್ಟು ಎಂಬುದರ ಮಾಹಿತಿ ಆಧಾರದ ಮೇಲೆ ಈ ಪ್ರಗತಿ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾಗುತ್ತದೆ.ಸಾಕ್ಷರತೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಏಕೆ ಕನ್ನಡ ಪೂರ್ಣವಾಗಿ ಬಳಕೆಯಾಗುತ್ತಿಲ್ಲ ಎನ್ನುವ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್ ವಿವರಣೆ ನೀಡುವುದು ಹೀಗೆ.4-5 ವರ್ಷಗಳಿಗೆ ಹೋಲಿಸಿದರೆ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಗುರಿ ತಲುಪದ ಇಲಾಖೆಗಳ ಮುಖ್ಯಸ್ಥರಿಗೆ ಪ್ರತಿ ತಿಂಗಳ ಜಿ.ಪಂ. ಕೆಡಿಪಿ ಸಭೆಯಲ್ಲಿ ಎಚ್ಚರಿಕೆ ನೀಡಲಾಗುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ, ಆದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರದಿ ನೀಡಬಹುದೆ ಹೊರತು ಮತ್ತೇನು ಮಾಡಲಾಗುವುದಿಲ್ಲ ಎಂಬ ಅಸಹಾಯಕತೆ ತೋಡಿಕೊಂಡರು.ಕನ್ನಡ ಜಾಗೃತಿ ಸಮಿತಿ ರಚನೆಯಾಗದ ಪರಿಣಾಮ ಕನ್ನಡ ಬಳಸದ ಅಧಿಕಾರಿಗಳಿಗಳಿಗೆ ಭಯವೇ ಇಲ್ಲದಂತಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ಯಾವ ತೊಂದರೆಯೂ ಇಲ್ಲ, ಈ ಸಂಬಂಧ ತಾವು ಯಾವುದೇ ಸಹಕಾರ ನೀಡಲೂ ಸಿದ್ಧ ಎನ್ನುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ್, ಭಾಷೆ ಕುರಿತು ಅಧಿಕಾರಿಗಳಲ್ಲಿ ಬದ್ಧತೆ ಅಗತ್ಯ ಎನ್ನುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.