ಆಡಳಿತದ ಲೋಪ ಸರಿಪಡಿಸಲು ಪತ್ರಿಕೆ ಸಹಕಾರಿ

7

ಆಡಳಿತದ ಲೋಪ ಸರಿಪಡಿಸಲು ಪತ್ರಿಕೆ ಸಹಕಾರಿ

Published:
Updated:

ಬೀದರ್: ಆಡಳಿತದಲ್ಲಿನ ಲೋಪದೋಷಗಳನ್ನು ತೋರಿಸುವ ಮೂಲಕ ಪತ್ರಿಕೆಗಳು ಅದನ್ನು ಸರಿಪಡಿಸಲು ನೆರವಾಗುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ನಾಯಕ್ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮೀಣ ಪತ್ರಕರ್ತರ ವೃತ್ತಿ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಮಾಧ್ಯಮಗಳು ಸಮಾಜದ ಮೂರನೆ ಕಣ್ಣು ಇದ್ದಂತೆ. ದಿನನಿತ್ಯದ ಆಡಳಿತದಲ್ಲಿ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ತಪ್ಪು -ಒಪ್ಪುಗಳು ಎತ್ತಿ ತೋರಿಸುವ ಮೂಲಕ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಪತ್ರಿಕಾ ವರದಿಗಳು ನೆರವಾಗುತ್ತವೆ ಎಂದು ಹೇಳಿದರು.ಪತ್ರಕರ್ತರ ಉಪಯೋಗಕ್ಕಾಗಿ ವಾರ್ತಾ ಇಲಾಖೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಬಿಆರ್‌ಜಿಎಫ್ ಯೋಜನೆ ಅಡಿಯಲ್ಲಿ ಸುಸಜ್ಜಿತ ವಾಹನ ಒದಗಿಸಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಲು ಇದನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.ಅತಿಥಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಶಿವಾನಂದ ಅವರು, ವೃತ್ತಿ ನಿಷ್ಠೆ ಹಾಗೂ ವೈಯಕ್ತಿಕ ಪ್ರಾಮಾಣಿಕತೆ ಪತ್ರಕರ್ತರ ಶಕ್ತಿಯಾಗಿದೆ. ವಾಸ್ತವಾಂಶಗಳನ್ನು ಮಾತ್ರ ಪತ್ರಿಕಾ ವರದಿಗಳಲ್ಲಿ ಬರೆಯಬೇಕು. ವ್ಯಕ್ತಿಗತ ವಿಷಯಗಳನ್ನು ಸುದ್ದಿಯಲ್ಲಿ ಬರೆಯಬಾರದು. ಪತ್ರಕರ್ತರು ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಇನ್ನಷ್ಟು ವೃತ್ತಿಪರರಾಗಲು ಸಾಧ್ಯವಿದೆ ಎಂದು ಹೇಳಿದರು.ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ವಿಪುಲ ಅವಕಾಶಗಳು ಇವೆ. ಇಂಗ್ಲಿಷ್ ಭಾಷೆಯನ್ನು ಕರಗತ ಮಾಡಿಕೊಳ್ಳುವ ಮೂಲಕ ಗ್ರಾಮೀಣ ಪತ್ರಕರ್ತರು ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಅವಕಾಶ ಪಡೆದುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಾಳಪ್ಪ ಅಡಸಾರೆ ಅಧ್ಯಕ್ಷತೆ ವಸಿದ್ದರು. ಪತ್ರಕರ್ತ ಮಾರುತಿ ಬಾದೊಡ್ಡಿ ನಿರೂಪಿಸಿದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್ ವಂದಿಸಿದರು.ಸೋಮವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಮಾಧ್ಯಮ ಅಕಾಡೆಮಿಯ ಸದಸ್ಯ ಓಂಕಾರ ಕಾಕಡೆ ಅವರು, ಕಾಸಿಗಾಗಿ ಸುದ್ದಿ, ಹಾಗೂ ನೀರಾ ರಾಡಿಯಾ ಪ್ರಕರಣಗಳಿಂದ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪ್ರಸ್ತುತ ಮಾಧ್ಯಮಗಳು ಸಮಾಜವನ್ನು ನಿಯಂತ್ರಿಸುತ್ತಿವೆ. ಮತ್ತು ನಿರ್ದೇಶಿಸುತ್ತಿವೆ. ಹೀಗಾಗಿ ಪತ್ರಕರ್ತರ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು.ಪತ್ರಕರ್ತರು ವಸ್ತುನಿಷ್ಠವಾಗಿ ಬರೆಯಬೇಕು. ಮತ್ತು ಸಮಾಜದ ಹಿತ ಹಾಗೂ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಬೇಕು ಎಂದು ಪತ್ರಕರ್ತ ಸದಾನಂದ ಜೋಶಿ ತಿಳಿಸಿದರು. ಎರಡನೇ ದಿನದ ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಅವರು ಗ್ರಾಮೀಣ ಯುವ ಪತ್ರಕರ್ತರ ಹೊಣೆಗಾರಿಕೆಗಳು ಕುರಿತು, ಪರ್ತಕರ್ತ ದೇವು ಪತ್ತಾರ್ ಅವರು ಪತ್ರಿಕಾ ಬರವಣಿಗೆ ಭಾಷೆ ಕುರಿತು ಉಪನ್ಯಾಸ ನೀಡಿದರು.

 

ಮಾಧ್ಯಮಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರ ಮಾರ್ಗಗಳು ಕುರಿತು ನಡೆದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ವಿಶ್ವನಾಥ ಪಾಟೀಲ್, ಗಂಧರ್ವ ಸೇನಾ ಹಾಗೂ ಶಿವರಾಜ ಕಾಡಾದೆ ಭಾಗವಹಿದ್ದರು. ಹೃರಿಕೇಶ ಬಹಾದ್ದೂರ ದೇಸಾಯಿ ಆಶಯ ಭಾಷಣ ಮಾಡಿದರು. ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ 70 ಮಂದಿ ವೃತ್ತಿನಿರತ ಪತ್ರಕರ್ತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry