ಗುರುವಾರ , ಮೇ 6, 2021
25 °C

ಆಡಳಿತಾತ್ಮಕ ಗೊಂದಲದಲ್ಲಿ ಪಂಚಾಯತ್ ರಾಜ್‌ ವ್ಯವಸ್ಥೆ

ಮತ್ತೀಹಳ್ಳಿ ಮದನ ಮೋಹನ Updated:

ಅಕ್ಷರ ಗಾತ್ರ : | |

ಯೋಜನೆಯನ್ನು ರೂಪಿಸುವ ಕ್ರಿಯೆ ಕೆಳಹಂತದಲ್ಲಿ ಆರಂಭವಾಗಿ ಮೇಲಕ್ಕೆ ತಲುಪಬೇಕು ಎಂಬುದು ವಿಕೇಂದ್ರೀಕರಣದ ಮೂಲ ಉದ್ದೇಶ. ಆದರೆ ಅಧಿಕಾರವನ್ನು ಹಂಚಿಕೊಳ್ಳಲು ಸಿದ್ಧವಿಲ್ಲದ ರಾಜಕೀಯ ನೇತೃತ್ವ ಮತ್ತು ಹಳೆಯ ವ್ಯವಸ್ಥೆಯನ್ನು ಬದಲಾಯಿಸಲು ಮನಸ್ಸಿಲ್ಲದ ಅಧಿಕಾರ ಶಾಹಿ ಮಾತ್ರ ವಿಕೇಂದ್ರೀಕರಣವನ್ನು ಸೋಲಿಸುವಲ್ಲಿ ಯಶಸ್ವಿಯಾಗಿವೆ. ಪರಿಣಾಮವಾಗಿ ಪಂಚಾಯತ್ ರಾಜ್ ಸಂಸ್ಥೆಗಳು ಆಡಳಿತಾತ್ಮಕ ಗೊಂದಲದ ಸುಳಿಯಲ್ಲಿ ಸಿಲುಕಿವೆ.

ಕರ್ನಾಟಕದಲ್ಲಿ ಅಧಿಕಾರ ವಿಕೇಂದ್ರೀ­ಕರಣದ ಪ್ರಯೋಗ ಶುರುವಾಗಿ ಸುಮಾರು ಮೂರು ದಶಕಗಳಾಗಿವೆ. ಆ ಅವಧಿಯಲ್ಲಿ ಹಲವು ಬದ­ಲಾ­ವ­ಣೆ­ಗಳಾಗಿವೆ. ಮೂರು ಬಾರಿ ಕಾನೂ­ನನ್ನು ಬದಲಾ­ಯಿಸ­ಲಾಗಿದೆ. ಈಗ ನಾಲ್ಕನೇ ಬಾರಿಗೆ ಕಾಯ್ದೆ­ಯನ್ನು ಆಮೂಲಾಗ್ರವಾಗಿ ಬದ­ಲಾಯಿಸಿ ಕಾರ್ಯರೂಪಕ್ಕೆ ತರಲು ರಂಗ ಸಜ್ಜಾಗುತ್ತಿದೆ.ಎರಡು ಹಂತದ ಚುನಾಯಿತ ಪಂಚಾಯತಿ ವ್ಯವಸ್ಥೆಯನ್ನು ಮೂರು ಹಂತದ ವ್ಯವಸ್ಥೆಯಾಗಿ ಪರಿವರ್ತಿಸಲಾಗಿದೆ. ಹಲವಾರು ಗ್ರಾಮಗಳಿ­ಗೊಂದು  ಮಂಡಲ ಪಂಚಾಯತಿಯ ಬದಲು  ಗ್ರಾಮ­ಕ್ಕೊಂದು ಪಂಚಾಯಿತಿಗಳಾಗಿವೆ. ತಾಲ್ಲೂಕು ಪಂಚಾಯಿತಿಗಳೂ ಈಗ ಚುನಾಯಿತ ಸಂಸ್ಥೆ­ಗಳಾಗಿವೆ. ಸಂವಿಧಾನದ ೭೩ನೆಯ ತಿದ್ದು­ಪಡಿಯ ರಕ್ಷಣೆ ಇರುವದರಿಂದ ಪಂಚಾಯಿತಿ­ಗಳಿಗೆ ಐದು ವರ್ಷಕ್ಕೊಮ್ಮೆ ಚುನಾವಣೆಗಳು ನಿರಾತಂಕ­ವಾಗಿ ನಡೆಯುವ ವ್ಯವಸ್ಥೆಯಾಗಿದೆ. ಅನವಶ್ಯಕ­ವಾಗಿ ಚುನಾವಣೆ ಮುಂದೂಡಲೂ ರಾಜ್ಯ ಸರ್ಕಾರ ಪ್ರಯತ್ನಿಸಿದಾಗ ನ್ಯಾಯಾಲಯಗಳು ಮಧ್ಯ ಪ್ರವೇಶಿಸಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿವೆ. ಇದರ ಜೊತೆಗೇ ಪಂಚಾಯತ್ ರಾಜ್ ಸಂಸ್ಥೆ­ಗಳಿಗೆ ಹರಿದು ಬರುವ ಹಣ ಗಣನೀಯ ಪ್ರಮಾಣ­ದಲ್ಲಿ ಹೆಚ್ಚಾಗಿದೆ. ಈ ಸಂಸ್ಥೆಗಳ ಸದಸ್ಯ­ರಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಆಯ್ಕೆಯಲ್ಲಿ ಪಾಲ್ಗೊ­ಳ್ಳಲು ಅನುವಾಗುವಂತೆ ಮತದಾನದ ಹಕ್ಕು ದೊರೆತಿದೆ.ಇಷ್ಟೆಲ್ಲಾ ಆದರೂ ಈ  ಹೊಸ ಆಡಳಿತ ವ್ಯವಸ್ಥೆ ಇನ್ನೂ ತನ್ನದೇ ಆದ ನೆಲೆಯೊಂದನ್ನು ಕಂಡು­ಕೊಳ್ಳಲು ಕರ್ನಾಟಕ ರಾಜ್ಯ­ದಲ್ಲಂತೂ ಸಾಧ್ಯ­ವಾಗಿಲ್ಲ. ಅಧಿಕಾರ ವಿಕೇಂದ್ರೀಕರಣದ ಅರಿವನ್ನು ಗ್ರಾಮೀಣರಿಗೆ ಮುಟ್ಟಿಸುವ ಉದ್ದೇಶವು ನೆರ­ವೇರಿಲ್ಲ.  ಇದಕ್ಕೆ ಹಲವು ಕಾರಣಗಳಿವೆ. ಮುಖ್ಯ­ವಾಗಿ ರಾಜಕೀಯ ನಾಯಕತ್ವ, ಶಾಸಕಾಂಗ ಮತ್ತು ಕಾರ್ಯಾಂಗ­ಗಳಲ್ಲಿ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಇರುವ ಬದ್ಧತೆಯ ಅಭಾವ,   ಅಧಿಕಾರ ಹಂಚಿಕೊಳ್ಳುವ ವಿಷಯದಲ್ಲಿ ಅವರಿಗಿರುವ ಹಿಂಜರಿಕೆ ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಗೊಂದಲಗಳ ಸುಳಿಗೆ ಸಿಲುಕಿಸಿದೆ.ಸ್ಥಳೀಯ ಸಮಸ್ಯೆಗಳನ್ನು ಗುರುತಿಸುವಿಕೆ ಮತ್ತು   ಅದಕ್ಕೆ ಪರಿಹಾರ ಕಂಡುಕೊಳ್ಳುವದು ಸ್ಥಳೀಯರ ಸಹ­ಯೋಗದಿಂದ ಆಗಬೇಕೇ ಹೊರತು, ಎಲ್ಲೋ ದೂರದಲ್ಲಿ ಇರುವ ಬೆಂಗಳೂರಿನಿಂದ ಅಲ್ಲ ಎಂಬುದು ಅಧಿ­ಕಾರ ವಿಕೇಂದ್ರೀಕರಣದ ಮೂಲತತ್ವ.  ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ­ಯಲ್ಲಿ ಜನರ ಜೊತೆಗೆ ನೇರ ಸಂಪರ್ಕವಿರುವುದು  ಗ್ರಾಮ ಪಂಚಾಯಿತಿಗೆ ಮಾತ್ರ. ಗ್ರಾಮ ಪಂಚಾ­ಯತಿಯ ಕರ್ತವ್ಯ ನಿರ್ವಹಣೆಗೆ ಗ್ರಾಮ ಸಭೆ­ಗಳೂ ಮುಖ್ಯ ಘಟಕಗಳಾಗಬೇಕು ಎಂಬ ಕಾನೂನು ತರು­ವುದರ ಮೂಲಕ ಸಾರ್ವಜನಿಕರ ಸಾರ್ವ­ಭೌಮ­ತ್ವದ ಕಲ್ಪನೆಯನ್ನು ಸಾಕಾರಗೊಳಿಸಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಗ್ರಾಮಸಭೆಗಳೇ ನಡೆಯು­ತ್ತಿಲ್ಲ. ಅಲ್ಲಿಲ್ಲಿ ನಡೆದರೆ ಅವುಗಳಲ್ಲಿ ಗ್ರಾಮದ ಜನರು ಭಾಗವಹಿಸುತ್ತಿಲ್ಲ. ಹೀಗಾಗಿ ಗ್ರಾಮ ಪಂಚಾ­ಯಿತಿಯ ಕಾರ್ಯನಿರ್ವಹಣೆ ಜನರ ಉಸ್ತುವಾರಿ­ಯಲ್ಲಿರಬೇಕು ಎಂಬ ಪರಿಕಲ್ಪನೆ ಈಡೇರು­ತ್ತಿಲ್ಲ. ಗ್ರಾಮಸಭೆಗಳಲ್ಲಿ ಹಾಜರಾತಿ ಬಹಳ ಕಳಪೆಯಾಗಿದೆ ಎಂದರೆ ಇಡೀ ಪ್ರಯೋಗವು ಜನರ ಲಕ್ಷ್ಯವನ್ನು ಸೆಳೆದಿಲ್ಲ ಎಂದರ್ಥ.ಪಂಚಾಯತ್ ರಾಜ್ ವ್ಯವಸ್ಥೆ ಕಾರ್ಯರೂಪಕ್ಕೆ ಬಂದ ಮೂರು ದಶಕಗಳ ಅವಧಿಯಲ್ಲಿ ಮೂರೂ ಪ್ರಮುಖ ರಾಜಕೀಯ ಪಕ್ಷಗಳೂ ಕನಿಷ್ಠ ಒಂದೊಂದು ಅವಧಿಗೆ ಅಧಿಕಾರಕ್ಕೇರಿವೆ. ಯಾವ ಪಕ್ಷದ ಅಧಿಕಾರದ ಕಾಲದಲ್ಲಿಯೂ ಪಂಚಾಯತ್ ರಾಜ್ ವ್ಯವಸ್ಥೆ ಬೆಳೆದು ಬೇರು ಬಿಡುವುದಕ್ಕೆ ಬೇಕಿರುವ ವಾತಾವರಣ ಸೃಷ್ಟಿಯಾಗಲಿಲ್ಲ.  ಈ ಪಕ್ಷಗಳ ನಡುವಣ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ  ಅಧಿಕಾರ ವಿಕೇಂದ್ರೀಕರಣ ಪ್ರಯೋಗವನ್ನು ಉಪೇಕ್ಷಿಸುವಲ್ಲಿ ಎಲ್ಲರದ್ದೂ ಏಕಾಭಿಪ್ರಾಯ. ಈ ಉಪೇಕ್ಷೆ ಯಾವ ಮಟ್ಟಿಗೆ ಇದೆ ಎಂದರೆ ಯಾವ ಪಕ್ಷವೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ  ಪಂಚಾ­ಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ವಿಷಯ­ವನ್ನು ಪ್ರಸ್ತಾಪಿಸುವುದಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಕರ್ನಾಟಕದಲ್ಲಿ ಬಲ­ಗೊಂಡದ್ದು ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಪಕ್ಷದ ಆಡಳಿತವಿದ್ದಾಗ. ಇದಕ್ಕೆ ಸಾಂವಿಧಾನಿಕ ರಕ್ಷಣೆ ಕೊಟ್ಟದ್ದು ಕಾಂಗ್ರೆಸ್. ಪಂಚಾ­ಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿದ ಅವಿಭಜಿತ ಜನತಾದಳ ಒಡೆದು ನಶಿಸಿಹೋಗಿದೆ. ಅದರ ರಾಜಕೀಯ ಪರಂಪರೆಯನ್ನೇ ಮುಂದು­ವರಿ­ಸು­ತ್ತೇವೆಂದು ಹೇಳುವ ಜಾತ್ಯತೀತ ಜನತಾದಳ ಈ ಪ್ರಯೋಗದಲ್ಲಿ ಯಾವ ಉತ್ಸುಕತೆಯನ್ನು ತೋರಿಲ್ಲ. ಅಷ್ಟೇಕೆ ಹಿಂದೆ ಪಂಚಾಯತ್  ರಾಜ್ ವ್ಯವಸ್ಥೆಯನ್ನು ಬಲಪಡಿಸಲು ರಾಮಕೃಷ್ಣ ಹೆಗಡೆ ಮತ್ತು ನಜೀರ್ ಸಾಬ್ ಅವರು ಕೆಲಸ ಮಾಡು­ತ್ತಿದ್ದಾಗಲೇ ದೇವೇಗೌಡರು ಹೆಚ್ಚಿನ ಉತ್ಸಾಹ­ ತೋರಿರಲಿಲ್ಲ. ಅಧಿಕಾರ ವಿಕೇಂದ್ರೀಕರಣ ಪ್ರಯೋಗ ತಮ್ಮ ಪಕ್ಷದ ಕಾರ್ಯಕ್ರಮವೆಂದು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಘೋಷಿಸಿ­ಕೊಂಡಿ­ದ್ದರೂ ಕರ್ನಾಟಕ­ದ ಕಾಂಗ್ರೆಸಿಗರು ವಿಕೇಂದ್ರೀ­ಕರಣವನ್ನು ಪೂರ್ಣ ಮನಸ್ಸಿನಿಂದ ಒಪ್ಪಿರ­ಲಿಲ್ಲ. ರಾಮಕೃಷ್ಣ ಹೆಗಡೆ ಬಣದವರು ಬಿಜೆಪಿ ಸೇರಿದರೂ ವಿಕೇಂದ್ರೀಕರಣ ವಿಷಯ ತಮಗೆ ಅಪರಿ­ಚಿತ­ವೆಂಬಂತೆ ಇದ್ದಾರೆ. ಬಿಜೆಪಿಯ ನಿಲುವು ಇದ­ಕ್ಕಿಂತ ಭಿನ್ನವಲ್ಲ. ಶಾಸನ ಸಭೆಯಲ್ಲಿ ನಡೆಯುವ ಚರ್ಚೆಗಳಿಗೂ ಇಂಥದ್ದೊಂದು ಮಿತಿ ಇದೆ. ಅಧಿಕಾರ ವಿಕೇಂದ್ರೀ­ಕ­ರಣದ ವಿಚಾರ ಚರ್ಚೆಗೆ ಬರುವುದಿಲ್ಲ. ಬಂದರೂ ಅದು ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡಿ­ರುವ ಅಧಿಕಾರವನ್ನು ಮೊಟಕುಗೊಳಿಸು­ವುದಕ್ಕೆ ಸೀಮಿತ­ವಾಗಿ­ರುತ್ತದೆ. ರಾಜಕೀಯ ನಾಯಕತ್ವ ವಿಕೇಂದ್ರೀಕರಣದ ಬಗ್ಗೆ ಉತ್ಸಾಹದ ತೋರಿಸದೇ ಇರುವುದರಿಂದ ಕಾರ್ಯಾಂಗ ಈ ಕೆಲಸವನ್ನು ಹೆಚ್ಚು ಮುತುವರ್ಜಿ­ಯಿಂದ  ಮಾಡಬೇಕು  ಎಂದು ಇಚ್ಛಿಸುವುದೇ ತಪ್ಪಾ­ಗುತ್ತದೆ. ಇದರಿಂದಾಗಿ ಅಧಿಕಾರದ ಹಸ್ತಾಂತರ  ಕಾಗದದ ಮೇಲಷ್ಟೇ ಉಳಿದಿದೆ.ರಾಜ್ಯ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಿ­ಗಳು ಮತ್ತು ಅವರ ಖಾತೆಯ ಹಿರಿಯ ಅಧಿಕಾರಿಗಳೇ  ಸಾರ್ವಭೌಮರು.  ಪಂಚಾಯತ್ ರಾಜ್ ಸಂಸ್ಥೆಗಳ ಅಳಲು, ಅಹವಾಲುಗಳನ್ನು ಕೇಳುವ, ಚರ್ಚಿಸುವ ವ್ಯವಧಾನ ಯಾರಿಗೂ ಇಲ್ಲ.  ಪಂಚಾ­ಯತ್ ಅಭಿವೃದ್ಧಿ ಮಂಡಳಿ ಸಭೆಗಳು ನಡೆ­ಯುವುದೇ ಇಲ್ಲ. ಪಂಚಾಯತ್ ರಾಜ್ ಸಂಸ್ಥೆಗಳ ಸಮಸ್ಯೆಗಳತ್ತ ಸರ್ಕಾರದ ಗಮನಸೆಳೆಯಲು ಅನೌಪ­ಚಾರಿಕ ವೇದಿಕೆಗಳ ಮೂಲಕ ಪ್ರಯತ್ನಗಳು ನಡೆದಿವೆ. ಕಾಂಗ್ರೆಸ್‌ನ ವೀರಪ್ಪ ಮೊಯಿಲಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮಂತ್ರಿಗಳಾಗಿದ್ದ ದಿವಂಗತ ಎಂ. ವೈ ಘೋರ್ಪಡೆಯವರ ಕೆಂಗಣ್ಣಿಗೆ ಗುರಿಯಾಗಿ ಈ ಅನೌಪಚಾರಿಕ ವೇದಿಕೆ ಅಲ್ಲಿಗೇ ಮುರುಟಿ ಹೋಯಿತು. ದಿವಂಗತ ಅಬ್ದುಲ್ ನಜೀರ್ ಸಾಬ್ ಅವರ ನಂತರ ಬಂದ ಇತರ ಯಾವ  ಪಂಚಾಯತ್ ರಾಜ್ ಮಂತ್ರಿಗಳು ಹೊಸದಾಗಿ ಜನ್ಮ ತಾಳಿರುವ ಈ ಸಂಸ್ಥೆಗಳ ಮಾರ್ಗದರ್ಶಕರಾಗಲಿಲ್ಲ.ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳೂ ಒಂದು ಬಗೆಯಲ್ಲಿ ಏಕಪಕ್ಷೀಯ­ವಾದವು. ಈ ಸಂಸ್ಥೆಗಳು ಅನುಷ್ಠಾನ­ಗೊಳಿಸ­ಬೇಕಾದ ಯೋಜನೆಗಳು,  ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾ­ಯಿತಿ­ಗಳಿಗೆ ಬಜೆಟ್‌ನಲ್ಲಿ ಕೊಡಲಾಗುವ ಹಣ­ಕಾಸಿನ ಸೌಲಭ್ಯ, ಅನುದಾನಗಳು ಮೊದ­ಲಾದ­ವು­ಗಳೆಲ್ಲವನ್ನೂ ಸರ್ಕಾರವೇ ನಿರ್ಧರಿಸುತ್ತದೆ. ಪಂಚಾಯತ್ ರಾಜ್ ಸಂಸ್ಥೆಗಳ ಜೊತೆಗೆ ಸಮಾ­ಲೋಚಿಸುವ ಪರಿಪಾಠವೇ ಬೆಳೆದು ಬಂದಿಲ್ಲ. ಜಿಲ್ಲೆಗಳ ಯೋಜನೆಗಳು ಮತ್ತು ಅದರ ವೆಚ್ಚ­ ಸರಕಾರಿ ಅಧಿಕಾರಿ­ಗಳಿಂದ ಪಡೆದ ಮಾಹಿತಿಯ ಮೇಲೆ ನಿರ್ಧಾರ­­ವಾಗು­ತ್ತದೆಯೇ ಹೊರತು  ಪಂಚಾಯತ್ ರಾಜ್ ಸಂಸ್ಥೆಗಳ ಬೇಡಿಕೆ ಮತ್ತು ಅಗತ್ಯಗಳ ಮೇಲೆ ಅಲ್ಲ. ವಾರ್ಷಿಕ ಯೋಜನೆ ರೂಪಿಸುವ ಪ್ರಕ್ರಿಯೆ ಕೆಳಹಂತಗಳಿಂದ ಶುರುಮಾಡಿ ಮೇಲಿನ ತನಕ ಹೋಗಬೇಕೆನ್ನುವ ಸದುದ್ದೇಶದಿಂದ  ಜಿಲ್ಲಾ ಯೋಜನಾ ಸಮಿತಿಗಳನ್ನು  ಸ್ಥಾಪಿಸಬೇಕೆಂದು  ಕಾನೂ­ನಿ­ನಲ್ಲಿ ಹೇಳಿದ್ದರೂ  ಅದು ಕಾರ್ಯರೂಪಕ್ಕೆ ಬಂದೇ ಇಲ್ಲ.ಇಡೀ ರಾಜ್ಯಕ್ಕೊಂದು ಕಾರ್ಯಕ್ರಮ ರೂಪಿಸಿ ಅನುಷ್ಠಾನ­ಗೊಳಿ­ಸುವ ಸ್ಥಿತಿಯನ್ನು ಬದಲಾಯಿಸ­ಬೇಕೆಂ­ಬುದೇ ವಿಕೇಂದ್ರೀಕರಣದ ಉದ್ದೇಶವಾಗಿತ್ತು. ಅದನ್ನು ಮರೆತುದರಿಂದ ಮಲೆನಾಡಿಗೆ ಸರಿಹೊಂದುವ ಕಾರ್ಯಕ್ರಮಗಳನ್ನು ಬಯಲು­ಸೀಮೆಯ ಪಂಚಾಯಿತಿಗಳೂ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಇಲ್ಲವಾದರೆ ಹಣ ಬಳಕೆಯಾಗದೆ ವ್ಯರ್ಥವಾಗುತ್ತದೆ. ಪ್ರತಿ ಅನುದಾನವೂ ನಿರ್ದಿಷ್ಟ ಉದ್ದೇಶಕ್ಕೆ ತಳುಕು ಹಾಕಿಕೊಂಡೇ ದೊರೆಯುವುದರಿಂದ ಅವುಗಳನ್ನು ಇತರ ಉದ್ದೇಶಗಳಿಗೆ ಬಳಸುವುದಕ್ಕೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಧ್ಯವಿಲ್ಲ.ಈಗಲೂ ಜಿಲ್ಲೆಯ ಅಭಿವೃದ್ಧಿ ಸಂಬಂಧಿತ ವಿಚಾರಗಳಲ್ಲಿಯೂ ಜಿಲ್ಲಾಧಿಕಾರಿಯ ಮಾತೇ ಕೊನೆ. ಅಭಿವೃದ್ಧಿ ಕಾರ್ಯದ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾಧಿ­ಕಾರಿಯ ಅಧೀನದಲ್ಲಿ ಇರುವ ಅಧಿಕಾರಿ ಮಾತ್ರ. ಜಿಲ್ಲೆಯ ಮುಖ್ಯ ವಿಷಯಗಳಲ್ಲಿ ಜಿಲ್ಲಾಧಿಕಾರಿಗಳ ಮಾತು  ನಡೆಯುತ್ತದೆಯೇ ಹೊರತು,  ಜಿಲ್ಲಾ ಪಂಚಾಯತಿ ಅಧ್ಯಕ್ಷ, ಮುಖ್ಯ ಕಾರ್ಯ­ನಿರ್ವಾಹಣಾಧಿಕಾರಿಗಳದ್ದಲ್ಲ. ಸದ್ಯದ ಉದಾಹರಣೆ­­ಯನ್ನು ತೆಗೆದುಕೊಂಡರೆ ಇದು ಚೆನ್ನಾಗಿ ಅರ್ಥವಾಗುತ್ತದೆ. ಮಳೆ ಕಡಿಮೆಯಾಗಿ­ರುವುದ­ರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಕುರಿತಂತೆ ಸರ್ಕಾರ ಕೇಳುತ್ತಿ­ರುವುದು ಜಿಲ್ಲಾಧಿಕಾರಿಗಳ ಮಾತುಗಳನ್ನು ಮಾತ್ರ. ನಿರ್ದೇಶನಗಳನ್ನು ನೀಡುತ್ತಿರುವುದೂ ಅವರಿಗೇ. ಚುನಾಯಿತ  ಜನಪ್ರತಿನಿಧಿಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರನ್ನು ನಿಮ್ಮ ಪ್ರದೇಶದ ಸಮಸ್ಯೆಗೆ ಏನು ಪರಿಹಾರ ಏಂದು ಯಾರೂ ಕೇಳುತ್ತಿಲ್ಲ.  ಜಿಲ್ಲಾಧಿಕಾರಿಗಳು ಹೇಳಿದಂತೆ ಕೆಲಸ ಮಾಡುವುದು ಜಿಲ್ಲಾ ಪಂಚಾ­ಯಿತಿ­ಗಳ ಕೆಲಸವಾಗಿಬಿಟ್ಟಿದೆ.ಮೂರು ಹಂತದ ಪಂಚಾಯಿತಿ ವ್ಯವಸ್ಥೆಯಲ್ಲಿ ನಿಯೋಜಿತ­ರಾದ ಹೆಚ್ಚಿನವರು ಎರವಲು ಸೇವೆಯ ಮೇಲೆ ವಿವಿಧ ಸರಕಾರಿ ಇಲಾಖೆಗಳಿಂದ ಬಂದವರು. ಅವರ  ನಿಷ್ಠೆ ತಮ್ಮ ಸಂಬಂಧಿತ ಇಲಾಖೆಗೆ ಇರುವುದರಿಂದ ಅವರಿಂದ ಕೆಲಸ ತೆಗೆದುಕೊಳ್ಳು­ವುದಕ್ಕಾಗಲೀ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವುದಕ್ಕಾಗಲೀ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತ ವ್ಯವಸ್ಥೆ ಗೊಂದಲದ ಗೂಡಾಗಿದೆ.ಇದಕ್ಕೆ ತಾಜಾ ಉದಾಹರಣೆಯೆಂದರೆ  ಗ್ರಾಮ ಪಂಚಾಯಿತಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ನೇಮಕ ಮತ್ತು ಅವರ ಕಾರ್ಯ­ನಿರ್ವಹಣೆ. ಒಂದು ಕಾಲದಲ್ಲಿ ಪಂಚಾ­ಯಿತಿಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿಧಾನ­ಗತಿಯಲ್ಲಿ ನಡೆಯಲು ಸಿಬ್ಬಂದಿಯ ಅಭಾವವೇ ಮುಖ್ಯ ಕಾರಣ ಎನ್ನಲಾಗುತ್ತಿತ್ತು. ಕಾಮಗಾರಿಗಳ ಅಳತೆಯ ಪುಸ್ತಕದಲ್ಲಿ ಸಹಿ ಹಾಕುವುದಕ್ಕೂ ಸಿಬ್ಬಂದಿ ಇರುತ್ತಿರಲಿಲ್ಲ. ಮೇಲಾಗಿ ಅವುಗಳಿಗೆ ಈಗ ಹೆಚ್ಚಿನ ಹಣ ಹರಿದು ಬರುತ್ತಿರುವುದರಿಂದ  ಕಾರ್ಯದರ್ಶಿ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆಯಿತ್ತು. ಇದನ್ನು ನಿವಾರಿಸುವುದಕ್ಕೆ ಸರ್ಕಾರ  ರಾಜ್ಯದ ೫೬೦೦ಕ್ಕಿಂತ ಹೆಚ್ಚಿರುವ ಗ್ರಾಮ ಪಂಚಾಯಿತಿಗಳಿಗೆ ಪ್ರತ್ಯೇಕವಾಗಿ ಪಿಡಿಓಗಳನ್ನು ನೇಮಿಸುವ ಪ್ರಕ್ರಿಯೆ ಆರಂಭಿಸಿತು. ಈಗಾಗಲೇ ೪೨೨೮ ಪಿಡಿಓಗಳ ನೇಮಕವಾಗಿದೆ. ಇನ್ನೂ ೧೨೦೦ ಪಿಡಿಓಗಳ ನೇಮಕ ಆಗಬೇಕಾಗಿದೆ.ಇವರೆಲ್ಲರೂ ಪಂಚಾಯಿತಿ ಅಧ್ಯಕ್ಷರ ಅಧೀನದಲ್ಲಿ ಕೆಲಸ ಮಾಡಬೇಕು. ಇತ್ತಿಚಿನ ದಿನಗಳಲ್ಲಿ ಅಧ್ಯಕ್ಷರು ಮತ್ತು ಪಿಡಿಓಗಳ ನಡುವಿನ ಹೊಂದಾಣಿಕೆ ಪ್ರಶ್ನೆ ಉದ್ಭವಿಸಿದೆ. ಹಲವು ಪಿಡಿಓಗಳು  ಬಿಲ್ಲು ಪಾಸು ಮಾಡುವುದಕ್ಕೆ ತಮ್ಮ ಮೇಲೆ ಅಧ್ಯಕ್ಷರು ಮತ್ತು ಸದಸ್ಯರಿಂದ ಬರುತ್ತಿರುವ  ಒತ್ತಡವನ್ನು ತಾಳಲಾಗದೇ ಆತ್ಮಹತ್ಯೆಗೂ ಮುಂದಾಗಿದ್ದಾರೆ. ಸರ್ಕಾರವೇನೋ ಇವರನ್ನು ನೇಮಕ ಮಾಡಿದೆ. ಆದರೆ ಅವರಿಗೆ ಚುನಾಯಿತ ಪ್ರತಿನಿಧಿಗಳ ಜೊತೆಗೆ ಕೆಲಸ ಮಾಡುವುದಕ್ಕೆ ಬೇಕಿರುವ ತರಬೇತಿಯನ್ನು ಕೊಟ್ಟಿಲ್ಲ.  ಭ್ರಷ್ಟ ಜನಪ್ರತಿನಿಧಿಗಳಿಂದ ತಮ್ಮನ್ನು ಕಾಯುವವರು ಯಾರು ಎಂಬ ಪ್ರಶ್ನೆ  ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿರುವ ಪಿಡಿಓಗಳನ್ನು ಕಾಡುತ್ತಿದೆ. ಈ ವಿಷಯದಲ್ಲಿ ಸರ್ಕಾರ ಕೂಡಾ ರಚನಾತ್ಮಕವಾದ ಏನನ್ನೂ ಮಾಡುತ್ತಿರುವಂತೆ ಕಾಣಿಸುತ್ತಿಲ್ಲ. ಅಧಿಕಾರ ವಿಕೇಂದ್ರೀಕರಣದ ಮಾರ್ಗ ಹೆಚ್ಚು ದುರ್ಗಮ­ವಾಗುತ್ತಿದೆ. ಹೊಸ ವ್ಯವಸ್ಥೆ ಬದಲಾವಣೆಯ ಹರಿಕಾರನಾಗಬೇಕೆಂದು ಇಚ್ಛಿಸುತ್ತಿರುವವರಿಗೆ ದೀರ್ಘ ಸುರಂಗದೊಳಗಿನ ಕತ್ತಲೇ ಹೆಚ್ಚಾಗಿ ಬೆಳಕಿನ ಕಿರಣಗಳು ಮಬ್ಬಾಗುತ್ತಿವೆ.(ಲೇಖಕರು ಪಂಚಾಯತ್ ರಾಜ್ ಸಂಸ್ಥೆಗಳ ಕುರಿತು ವಿಶೇಷ ಆಸಕ್ತಿಯುಳ್ಳ ಹಿರಿಯ ಪತ್ರಕರ್ತ.)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.