ಭಾನುವಾರ, ಜೂನ್ 13, 2021
25 °C

ಆಡಳಿತ ಕುಸಿತ: ನೌಕರರು ಆತ್ಮಾವಲೋಕನ ಮಾಡಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಡಳಿತ ಕುಸಿತ: ನೌಕರರು ಆತ್ಮಾವಲೋಕನ ಮಾಡಿಕೊಳ್ಳಿ

ರಾಮನಗರ: `ದಶಕದ ಹಿಂದೆ ರಾಷ್ಟ್ರದಲ್ಲಿಯೇ ಕರ್ನಾಟಕದ ಆಡಳಿತ ವ್ಯವಸ್ಥೆ ಮುಂಚೂಣಿಯಲ್ಲಿತ್ತು. ಆದರೆ ಈಗ ಅದು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದಕ್ಕೆ ಕಾರಣ ಏನು? ಎಲ್ಲಿ ಲೋಪವಾಗಿದೆ ಎಂಬುದನ್ನು ಸರ್ಕಾರಿ ನೌಕರರಾದ ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ~ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕ ಅಶ್ರಫುಲ್ ಹಸನ್ ತಿಳಿಸಿದರು.ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಕರ್ನಾಟಕ ನಾಗರಿಕ ಸೇವೆಗಳ ಖಾತ್ರಿ ಕಾಯ್ದೆ-2011~ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.`ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದು ಹೇಳಲಾಗುತ್ತದೆ. ಆದರೆ ಸರ್ಕಾರಿ ನೌಕರರಾದ ನಾವು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾಗರಿಕರಿಗೆ ಎಂತಹ ಸೇವೆಯನ್ನು ನೀಡುತ್ತಿದ್ದೇವೆ ಎಂಬುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು~ ಎಂದರು. `ಸರಿಯಾಗಿ ಕೆಲಸ ಮಾಡದ ಕಾರಣ ನಮ್ಮ ಮೇಲೆ ನಿಗಾ ಇಡಲು ಅಧಿನಿಯಮವೊಂದು ಜಾರಿಗೆ ಬಂದಿರುವುದು ದುರಂತವೇ ಸರಿ. ಈ ಮೂಲಕ ದಂಡ ಹಾಕಿಸಿಕೊಳ್ಳಬೇಕಾಗಿ ಬಂದಿರುವುದು ಶೋಚನೀಯ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.`ಉತ್ತರದಾಯಿತ್ವ, ಹೊಣೆಗಾರಿಕೆ, ಪಾರದರ್ಶಕತೆ ಈ ಮೂರು ಗುಣಗಳು ಸರ್ಕಾರಿ ಸಿಬ್ಬಂದಿಯಲ್ಲಿ ಇರಬೇಕು~ ಎಂದರು. `ಪ್ರಸ್ತುತ 11 ಇಲಾಖೆ 151 ಸೇವೆಗಳನ್ನು ಈ ನೂತನ ಕಾಯ್ದೆಯಡಿ ತರಲಾಗಿದೆ.  ಕಾಲಮಿತಿಯೊಳಗೆ ಗುಣಮಟ್ಟದ ಸೇವೆಯನ್ನು ಒದಗಿಸುವುದೇ ಈ ಕಾಯ್ದೆಯ ಉದ್ದೇಶವಾಗಿದೆ.

 

ಈ ಕಾಯ್ದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ದಂಡಿಸುವ ಮತ್ತು ಶಿಕ್ಷಿಸುವ ಶಕ್ತಿಯನ್ನು ಹೊಂದಿದೆ. ಈಗಾಗಲೇ ದೇಶದ ಕೆಲವು ರಾಜ್ಯಗಳು ಈ ಕಾಯ್ದೆಯನ್ನು ಅಳವಡಿಸಿಕೊಂಡಿವೆ. ಈ ಸಾಲಿನಲ್ಲಿ ಕರ್ನಾಟಕ 10ನೇ ರಾಜ್ಯವಾಗಿದೆ ಎಂದು ಮಾಹಿತಿ ನೀಡಿದರು. ಜಿ.ಪಂ. ಸಿಇಒ ಕೆ.ಎಸ್.ವೆಂಕಟೇಶಪ್ಪ, ಉಪ ಕಾರ್ಯದರ್ಶಿ ಸಿದ್ದರಾಮಯ್ಯ, ತಹಶೀಲ್ದಾರ್‌ಗಳು, ಉಪ ವಿಭಾಗಾಧಿಕಾರಿ, ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.