ಆಡಳಿತ ಪಕ್ಷದಿಂದ ಕೆಜೆಪಿಗೆ ಪರೋಕ್ಷ ಬೆಂಬಲ

6
ಸಮನವಳ್ಳಿ ಗ್ರಾಮ: ಜೆಡಿಎಸ್ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಟೀಕೆ

ಆಡಳಿತ ಪಕ್ಷದಿಂದ ಕೆಜೆಪಿಗೆ ಪರೋಕ್ಷ ಬೆಂಬಲ

Published:
Updated:

ಸೊರಬ: ರೈತರ ಹಿತ ಕಾಪಾಡುತ್ತೇನೆ ಎಂದು ಅಧಿಕಾರ ವಹಿಸಿಕೊಂಡ ಯಡಿಯೂರಪ್ಪ ಹಾವೇರಿಯಲ್ಲಿ ಸಾಧನೆ ಮಾಡಿದ್ದು ರೈತರ ಮೇಲೆ ಗುಂಡಿನ ದಾಳಿ ಹಾಗೂ ಕೆಜೆಪಿ ಸಮಾವೇಶ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.ತಾಲ್ಲೂಕಿನ ಆನವಟ್ಟಿ ಹೋಬಳಿಯ ಸಮನವಳ್ಳಿ ಗ್ರಾಮದಲ್ಲಿ ಭಾನುವಾರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೈತರಿಗೆ ಹಾಗೂ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ನೀಡದ ಬಿಜೆಪಿ ಸರ್ಕಾರ ಹಾವೇರಿಯಲ್ಲಿ ಉದ್ಘಾಟನೆಯಾದ ಕೆಜೆಪಿ ಸಮಾವೇಶಕ್ಕೆ ದಿನವಿಡಿ ವಿದ್ಯುತ್ ಪೂರೈಕೆ ಮಾಡಿ ಟಿವಿ ಚಾನಲ್‌ಗಳಲ್ಲಿ ಪರೋಕ್ಷವಾಗಿ ಕೆಜೆಪಿ ಪಕ್ಷದ ಪ್ರಚಾರ ಮಾಡಿದೆ. ರಾಜ್ಯ ಸರ್ಕಾರದಲ್ಲಿರುವ ಸಚಿವರು ಪರೋಕ್ಷವಾಗಿ ಕೆಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಆಡಳಿತ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಖಂಡನೀಯ ಎಂದರು.ಬಿಜೆಪಿ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ಆರ್ಥಿಕ ದಿವಾಳಿಯತ್ತ ಸಾಗಿದೆ. ಆಡಳಿತಕ್ಕೆ ಬರುವ ಮುನ್ನಾ ನೀಡಿದ ಭರವಸೆ ಈಡೇರಿಸಲು ವಿಫಲವಾಗಿದೆ. ಹೆಸರಿಗೆ ಮಾತ್ರ ಸರ್ಕಾರವಿದ್ದು, ತಾಂತ್ರಿಕವಾಗಿ ವಿಫಲವಾಗಿದ್ದು, ಇಂತಹ ನೀತಿಗೆಟ್ಟ ಸರ್ಕಾರದಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದರು.ತಾವೆಂದೂ ರೈತರನ್ನು ಮುಳುಗಿಸುವ ನೀರಾವರಿ ಯೋಜನೆಗೆ ಅವಕಾಶ ಕೊಡುವುದಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಭತ್ಯೆ, ರೈತರ ಕೃಷಿ ಸಾಲ ಮನ್ನಾ ಮಾಡುವ ಭರವಸೆ ನೀಡಿದರು.ಜೆಡಿಎಸ್ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಕಾರ್ತೀಕ್ ಪ್ರಾಸ್ತಾವಿಕ ಮಾತನಾಡಿ, ಮಧು ಬಂಗಾರಪ್ಪ ಅವರಂಥ ಸಜ್ಜನ ವ್ಯಕ್ತಿತ್ವವುಳ್ಳವರಿಗೆ ತ್ಲ್ಲಾಲೂಕಿನ ಜನ ಶಕ್ತಿ ತುಂಬುವ ಮೂಲಕ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ. ರುದ್ರಗೌಡ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಕುಮಾರ್, ಯುವ ಅಧ್ಯಕ್ಷ ಸಂಜೀವ ಲಕ್ಕವಳ್ಳಿ, ಖಲಂದರ್ ಸಾಬ್, ಪ್ರಶಾಂತ ನೆಲ್ಲಿಕೊಪ್ಪ, ವೀರೇಶ ಕೊಟಿಗೇರ್, ರಮೇಶ ಕಳ್ಳಿಕೊನೆ, ಗ್ರಾಮ ಪಂಚಾಯ್ತಿ ಸದಸ್ಯ ಸುಭಾಷ, ರೇವಣಸಿದ್ದಯ್ಯ, ಪ್ರಕಾಶ, ಸಿದ್ದಲಿಂಗ, ಪ್ರಕಾಶ ಹೊಸಳ್ಳಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry