ಆಡಳಿತ ಪಕ್ಷದ ಕೈಗೊಂಬೆಯಾಗಿರುವ ಸ್ಪೀಕರ್: ಆರೋಪ

7

ಆಡಳಿತ ಪಕ್ಷದ ಕೈಗೊಂಬೆಯಾಗಿರುವ ಸ್ಪೀಕರ್: ಆರೋಪ

Published:
Updated:

ಮಡಿಕೇರಿ: ‘ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಆಡಳಿತ ಪಕ್ಷದ ಕೈಗೊಂಬೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಆರೋಪಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಕಳೆದ 30 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇಂತಹ ವಿಧಾನಸಭಾ ಅಧ್ಯಕ್ಷರನ್ನು ನೋಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಆಡಳಿತ ಪಕ್ಷ ಹೇಳಿದಂತೆ ಸ್ಪೀಕರ್ ಕುಣಿಯುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸನ್ಹೆ ಮಾಡಿದರೆ ಸಾಕು. ಅದೇ ರೀತಿ ಸ್ಪೀಕರ್ ನಡೆದುಕೊಳ್ಳುತ್ತಾರೆ. ಬೋಪಯ್ಯ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುತ್ತಿಲ್ಲ’ ಎಂದು ಆರೋಪಿಸಿದರು.‘ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಲು ವಿಧಾನಸಭಾ ಅಧ್ಯಕ್ಷರಿಗೆ ಅಧಿಕಾರವೇ ಇಲ್ಲ’ ಎಂದು ಪ್ರತಿಪಾದಿಸಿದ ಅವರು, ‘ಇದೀಗ, ಮುಖ್ಯಮಂತ್ರಿಗಳ ಕುರ್ಚಿ ಹೋಗುತ್ತದೆ ಎಂಬ ಕಾರಣಕ್ಕಾಗಿ 15 ಜನ ಶಾಸಕರನ್ನು ಅಮಾನತುಗೊಳಿಸಲು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಂದ ವರದಿ ತರಿಸಿಕೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆಗಳನ್ನು ನೋಡಿಲ್ಲ’ ಎಂದು ವಿಷಾದದಿಂದ ನುಡಿದರು.‘ಕಳೆದ ಎರಡೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಬಡವರಿಗೆ ಒಂದೇ ಒಂದು ಆಶ್ರಯ ಮನೆ ಕಟ್ಟಿಸಿಕೊಟ್ಟಿದ್ದರೆ ಹೇಳಲಿ. ನಾನು ಮುಖ್ಯಮಂತ್ರಿಗಳನ್ನು ಟೀಕಿಸುವುದನ್ನು ಇಂದಿನಿಂದಲೇ ನಿಲ್ಲಿಸುತ್ತೇನೆ. ಅಭಿವೃದ್ಧಿಯನ್ನು ವಿರೋಧ ಪಕ್ಷಗಳು ಸಹಿಸುತ್ತಿಲ್ಲ ಎಂದು ಯಡಿಯೂರಪ್ಪ ಹರಿಹಾಯುತ್ತಿದ್ದಾರೆ. ನಾವು ಯಾವ ಅಭಿವೃದ್ಧಿ ಕೆಲಸಗಳಿಗೆ ಯಡಿಯೂರಪ್ಪ ಅವರಿಗೆ ಅಡ್ಡಗಾಲು ಹಾಕಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಸವಾಲು ಹಾಕಿದರು.‘ನಮ್ಮ ಸರ್ಕಾರ ಇದ್ದಾಗ ಬಡವರಿಗೆ 3 ರೂಪಾಯಿ ದರದಲ್ಲಿ 25 ಕೆ.ಜಿ. ಅಕ್ಕಿ ಕೊಟ್ವಿ. ಅದನ್ನು ನಿಲ್ಲಿಸಿ ಈಗ ತಲೆಗೆ 4 ಕೆ.ಜಿ. ಅಕ್ಕಿ ಕೊಡ್ತಿದ್ದಾರೆ. 25 ಕೆ.ಜಿ. ಅಕ್ಕಿ ಕೊಟ್ಟರೆ ಯಡಿಯೂರಪ್ಪನವರ ಗಂಟೇನು ಹೋಗುತ್ತೆ? ಅವರ ಅಪ್ಪನ ಮನೆಯಿಂದ ಏನಾದರೂ ಅಕ್ಕಿ ತಂದು ಕೊಡ್ತಾರೆಯೇ? ಬಡವರಿಗೆ ಸರ್ಕಾರದ ಹಣ ಖರ್ಚು ಮಾಡಲು ಯಡಿಯೂರಪ್ಪನವರಿಗೆ ಹೊಟ್ಟೆ ಉರಿಯುತ್ತೆ’ ಎಂದು ಟೀಕಿಸಿದರು.‘12 ವರ್ಷದ ಮಕ್ಕಳು ಕೂಡ ಪ್ರತಿ ದಿನ ನಾಲ್ಕೈದು ಸಾರಿ ಊಟ ಮಾಡ್ತಾರೆ. ಆದರೆ, ಈ ಯಡಿಯೂರಪ್ಪ ಮಕ್ಕಳು ತಿನ್ನುವಷ್ಟು ಕೂಡ ಅಕ್ಕಿ ಕೊಡ್ತಿಲ್ಲ. ಬಡವರ ಮಕ್ಕಳ ಹೊಟ್ಟೆ ಮೇಲೆ ಏಕೆ ಹೊಡೀತಿದ್ದೀರಿ ಯಡಿಯೂರಪ್ಪಾ’ ಎಂದು ಸಿದ್ದರಾಮಯ್ಯ ತಮ್ಮದೇ ಆದ ದಾಟಿಯಲ್ಲಿ ಚುಚ್ಚಿದರು. ಸ್ನೇಹಿತನೊಬ್ಬನ ಪತ್ನಿ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾದ ಆರೋಪದ ಮೇರೆಗೆ ಸಚಿವ ಹರತಾಳು ಹಾಲಪ್ಪ ರಾಜೀನಾಮೆ ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ‘ಕಾಫಿ, ಟೀ ಕುಡಿಯುವುದಕ್ಕೂ ಬಿಜೆಪಿಯವರನ್ನು ಮನೆಯೊಳಗೆ ಕರೀ ಬೇಡಿ’ ಎಂದು ಸಿದ್ದರಾಮಯ್ಯ ಕರೆ ನೀಡಿದಾಗ ಸಭೆಯಲ್ಲಿ ಸಿಳ್ಳೆಗಳು ಮೊಳಗಿದವು.‘ಸಾಂಕ್ರಾಮಿಕ ರೋಗ ಕೊಲ್ಲಲು ಮಾರ್ಗದರ್ಶನ ನೀಡಿ’

ಮಡಿಕೇರಿ: ‘ಕಾಂಗ್ರೆಸ್‌ನಲ್ಲಿ ನಮ್ಮವರೇ ನಮ್ಮವರನ್ನು ಸೋಲಿಸುವ ದೊಡ್ಡ ಸಾಂಕ್ರಾಮಿಕ ರೋಗವಿದೆ. ಇದನ್ನು ಕೊಲ್ಲಲು ಕೆಪಿಸಿಸಿ ಅಧ್ಯಕ್ಷರು ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಬುಧವಾರ ಕೋರಿದರು. ಕಾವೇರಿ ಹಾಲ್‌ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಎಲ್ಲರೂ ನಾಯಕರೇ. ನಾಯಕರೆಲ್ಲಾ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ. ಪರಸ್ಪರ ಭಿನ್ನಾಭಿಪ್ರಾಯ, ಗುಂಪುಗಾರಿಕೆ, ಸ್ವಾರ್ಥವನ್ನು ಬದಿಗೊತ್ತಿ ಪಕ್ಷವನ್ನು ಸಂಘಟಿಸುವ ಕಾಲ ಘಟ್ಟದಲ್ಲಿ ನಾವಿದ್ದೇವೆ ಎಂಬುದನ್ನು ಯಾರೂ ಮರೆಯಬಾರದು’ ಎಂದು ಹೇಳುವ ಮೂಲಕ ಎಲ್ಲರ ಗಮನಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry