ಗುರುವಾರ , ಏಪ್ರಿಲ್ 22, 2021
28 °C
ರಾಯಲ್ ಆರ್ಕಿಡ್ ಹೋಟೆಲ್ ದುರಂತ

ಆಡಳಿತ ಮಂಡಳಿ ಪ್ರತಿವಾದಿ ಮಾಡಲು ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಮಿಕರು ಮ್ಯಾನ್‌ಹೋಲ್‌ನಲ್ಲಿ ಇಳಿದು, ಉಸಿರುಗಟ್ಟಿ ಮೃತಪಡುವ ಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಇದಕ್ಕೆ ಸಂಬಂಧಿಸಿದ ಅರ್ಜಿಯೊಂದರಲ್ಲಿ ಶಿವಮೊಗ್ಗದ ರಾಯಲ್ ಆರ್ಕಿಡ್ ಹೋಟೆಲ್‌ನ ಆಡಳಿತ ಮಂಡಳಿಯನ್ನೂ ಪ್ರತಿವಾದಿಯನ್ನಾಗಿ ಮಾಡುವಂತೆ ನಿರ್ದೇಶನ ನೀಡಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ಒಡೆತನದ್ದು ಎನ್ನಲಾದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಇತ್ತೀಚೆಗೆ ಮ್ಯಾನ್‌ಹೋಲ್ ಶುಚಿಗೊಳಿಸುತ್ತಿದ್ದ ವೇಳೆ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ನಿರ್ದೇಶನ ನೀಡಿದೆ.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್) ಎಂಬ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, `ಮುಂದಿನ ವಿಚಾರಣೆ ಸಂದರ್ಭ, ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಜರಾಗಬೇಕು' ಎಂದು ನಿರ್ದೇಶನ ನೀಡಿದೆ.

ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಮೃತಪಟ್ಟಿರುವವರ ಕುಟುಂಬದ ಸದಸ್ಯರಿಗೆ ಪರಿಹಾರ ವಿತರಣೆ ಆಗುತ್ತಿಲ್ಲ. ಶಿವಮೊಗ್ಗದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ನಡೆದ ಘಟನೆಯನ್ನು ಪೊಲೀಸರು ಆಕಸ್ಮಿಕ ಎಂದು ಕರೆದಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ಶಿವಮೊಗ್ಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್‌ನ ಆಡಳಿತ ಮಂಡಳಿಯ ಪ್ರಮುಖರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ಬದಲು, ಆ ಕೆಲಸದ ಉಸ್ತುವಾರಿ ವಹಿಸಿದ್ದವರ ವಿರುದ್ಧ ಮಾತ್ರ ಎಫ್‌ಐಆರ್ ದಾಖಲಿಸಿರುವುದು ಏಕೆ ಎಂದು ನ್ಯಾಯಪೀಠ ಪ್ರಶ್ನಿಸಿತು.

`ಇದು ಯಡಿಯೂರಪ್ಪ ಅವರ ಕುಟುಂಬಕ್ಕೆ ಸೇರಿದ್ದು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದು ಸತ್ಯವಲ್ಲ' ಎಂದು ಸರ್ಕಾರದ ಪರ ವಕೀಲರು ಹೇಳಿದರು. `ಈ ಪ್ರಕರಣವನ್ನು ಮುಚ್ಚಿಹಾಕಲು ಬಿಡುವುದಿಲ್ಲ. ರಾಜಕಾರಣಿಗಳ ಆಣತಿಯಂತೆ ಪೊಲೀಸರು ವರ್ತಿಸುವುದನ್ನು ನಾವು ಮಹಾರಾಷ್ಟ್ರದಲ್ಲೂ ನೋಡಿದ್ದೇವೆ. ಅದು ಇಲ್ಲೂ ನಡೆಯಬಾರದು' ಎಂದು ನ್ಯಾಯಪೀಠ ಹೇಳಿತು. ವಿಚಾರಣೆ ಮುಂದೂಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.