ಆಡಳಿತ ವಿಕೇಂದ್ರೀಕರಣ: `ಜನಸ್ನೇಹಿ'ಗೆ ಚಾಲನೆ

7

ಆಡಳಿತ ವಿಕೇಂದ್ರೀಕರಣ: `ಜನಸ್ನೇಹಿ'ಗೆ ಚಾಲನೆ

Published:
Updated:
ಆಡಳಿತ ವಿಕೇಂದ್ರೀಕರಣ: `ಜನಸ್ನೇಹಿ'ಗೆ ಚಾಲನೆ

ಚಿಂತಾಮಣಿ: `ಕಂದಾಯ ಇಲಾಖೆಯಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಮತ್ತು ಹೋಬಳಿ ಕೇಂದ್ರಗಳಲ್ಲಿ ಆಡಳಿತ ವಿಕೇಂದ್ರೀಕರಣ ಮಾಡುವ ಸಲುವಾಗಿ ಸರ್ಕಾರ ಅಟಲ್‌ಜಿ ಜನಸ್ನೇಹಿ ಕೇಂದ್ರಗಳನ್ನು ತೆರೆಯುತ್ತಿದೆ' ಎಂದು ತಹಶೀಲ್ದಾರ್ ಎಂ.ಎನ್.ಮಂಜುನಾಥ್ ತಿಳಿಸಿದರು.ತಾಲ್ಲೂಕಿನ ಉಪ್ಪರಪೇಟೆ ಗ್ರಾಮದಲ್ಲಿ ಮಂಗಳವಾರ ಅಂಬಾಜಿದುರ್ಗ ಹೋಬಳಿಯ ಅಟಲ್‌ಜಿ ಜನಸ್ನೇಹಿ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ರೈತರು ತಾಲ್ಲೂಕು ಕಚೇರಿಗಳಿಗೆ ಅಲೆದಾಡಬಾರದು. ಹೋಬಳಿ ಮಟ್ಟದಲ್ಲೇ ಅವರಿಗೆ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಜನಸ್ನೇಹಿ ಕೇಂದ್ರ ಆರಂಭಿಸಲಾಗಿದೆ' ಎಂದರು.`ಗ್ರಾಮಗಳ ಹಂತದಲ್ಲಿ ಕಾರ್ಯದರ್ಶಿಗಳು ಮತ್ತು ಹೋಬಳಿ ಹಂತಗಳಲ್ಲಿ ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರು ಕಾರ್ಯನಿರ್ವಹಿಸುತ್ತಾರೆ. ಹೋಬಳಿಯ ವ್ಯಾಪ್ತಿಯಲ್ಲಿ ಎಲ್ಲ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಾರೆ. ಸಕಾಲದಲ್ಲಿ ನೀಡಲಾಗುತ್ತಿದ್ದ 21 ಸೇವೆಗಳನ್ನು 36ಕ್ಕೆ ಏರಿಸಲಾಗಿದೆ. ಹೊಸ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು' ಎಂದು ಅವರು ಮನವಿ ಮಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟಶಿವಾರೆಡ್ಡಿ ಮಾತನಾಡಿ, `ಅಧಿಕಾರಿಗಳು ನಾಯಕರು, ಮುಖಂಡರನ್ನು ಗಮನದಲ್ಲಿಟ್ಟುಲ್ಲಿಟ್ಟು ಕೆಲಸ ಮಾಡದೇ ಸಾಮಾನ್ಯಜನರಿಗೆ ಉಪಯೋಗವಾಗುವಂತೆ ಕಾರ್ಯನಿರ್ವಹಿಸಬೇಕು'ಎಂದರು.ಹಿರಿಯ ಮುಖಂಡ ನಾರಾಯಣಸ್ವಾಮಿ ಮಾತನಾಡಿ, `ನೂತನವಾಗಿ ಪ್ರಾರಂಭಿಸಲಾಗಿರುವ ಅಟಲ್‌ಜಿ ಜನಸ್ನೇಹಿ ಕೇಂದ್ರಗಳು ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಬೇಕು. ಹಿಂದಿನ ನೆಮ್ಮದಿ ಕೇಂದ್ರಗಳಂತೆ ನೆಮ್ಮದಿ ಕೆಡಿಸುವ ಕೆಲಸಗಳನ್ನು ಮಾಡಬಾರದು. ಅಧಿಕಾರಿಗಳು ಬೇಜವಾಬ್ದಾರಿ ತೋರದೆ ಸ್ಥಳೀಯವಾಗಿ ಜನರಿಗೆ ಸಿಗುವಂತಾಗಬೇಕು' ಎಂದರು.`ಅಂಬಾಜಿ ದುರ್ಗ ಹೋಬಳಿಯ ಅಟಲ್‌ಜಿ ಜನಸ್ನೇಹಿ ಕೇಂದ್ರವನ್ನು ನಗರದ ಬಾಗೇಪಲ್ಲಿ ಕ್ರಾಸ್‌ನಲ್ಲಿ ತೆರೆದಿದ್ದರೆ ಅನುಕೂಲವಾಗುತ್ತಿತ್ತು. ಉಪ್ಪರಪೇಟೆಯಲ್ಲಿ ಪ್ರಾರಂಭಿಸಿರುವುದು ಶೆಟ್ಟಿಹಳ್ಳಿ ಮತ್ತು ಕೋಟಗಲ್ ಪಂಚಾಯಿತಿಗಳ ಜನರಿಗೆ ಅನಾನುಕೂಲವಾಗಿದೆ. ಈ ಬಗ್ಗೆ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಗಿದೆ' ಎಂದು ಅವರು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ನರಸಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಚ್ಚಿರೆಡ್ಡಿ, ಉಪ ತಹಶೀಲ್ದಾರ್ ಆನಂದ್, ಕಂದಾಯ ನಿರೀಕ್ಷಕ ನಾರಾಯಣಪ್ಪ ಹಾಗೂ ಹೋಬಳಿಯ ಹಲವಾರು ಮುಖಂಡರು ಭಾಗವಹಿಸಿದ್ದರು.

ಗೌರಿಬಿದನೂರು; ಜನಸ್ನೇಹಿ ಕೇಂದ್ರಕ್ಕೆ ಚಾಲನೆ

ಗೌರಿಬಿದನೂರು:
`ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ತ್ವರಿತ ಮತ್ತು ಪರಿಣಾಮಕಾರಿಯಾಗಿ ನಿಗದಿತ ಕಾಲಮಿತಿಯಲ್ಲಿ ಒದಗಿಸುವ ನಿಟ್ಟಿನಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಅಟಲ್‌ಜಿ ಜನಸ್ನೇಹಿ ಕೇಂದ್ರಕ್ಕೆ ಚಾಲನೆ ನೀಡಿದ ಅವರು, `ಸಾರ್ವಜನಿಕರು ತಮಗೆ ಅವಶ್ಯವಿರುವ ಜಾತಿ ಆದಾಯ ದೃಢೀಕರಣ ಪತ್ರ, ವೃದ್ಧಾಪ್ಯ ವೇತನ,ಆದಾಯ ದೃಢೀಕರಣ ಪತ್ರ, ಸಣ್ಣಅತಿ ಸಣ್ಣ ರೈತರ ದೃಢೀಕರಣ ಪತ್ರ ಸೇರಿದಂತೆ 36 ಬಗೆಯ ವಿವಿಧ ದಾಖಲೆ ಪತ್ರಗಳನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸಲಾಗುವುದ' ಎಂದರು.`ಸರ್ಕಾರದಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿ ತಾಲ್ಲೂಕಿಗೆ 2 ಕೋಟಿ ರೂಪಾಯಿ ಹಣ ಮಂಜೂರಾಗಿದ್ದು, ಇದರಲ್ಲಿ 50 ಲಕ್ಷ ರೂಪಾಯಿಯನ್ನು ಜನಸ್ನೇಹ ಕೇಂದ್ರಕ್ಕೆ ಬಳಸಲಾಗುವುದು. 50 ಲಕ್ಷ ರೂಪಾಯಿಯನ್ನು   ಹಿರೇಬಿದನೂರು ಕ್ರೀಡಾಂಗಣಕ್ಕೆ ವಿನಿಯೋಗಿಸಲಾಗುವುದು. 25 ಲಕ್ಷ ರೂಪಾಯಿಯನ್ನು ಮಾಜಿ ಸಚಿವ ಲಕ್ಷ್ಮೀಪತಿಯವರ ಹೆಸರಿನಲ್ಲಿ ರಮಾಪುರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಬಳಸಲಾಗುವುದು. ಇನ್ನೂ 25 ಲಕ್ಷ ರೂಪಾಯಿಯನ್ನು ಮುನ್ಸಿಪಾಲ್ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುವುದು' ಎಂದು ಅವರು ತಿಳಿಸಿದರು. ತಹಶೀಲ್ದಾರ್ ಆರ್.ನಾಗರಾಜಶೆಟ್ಟಿ, ಪುರಸಭೆ ಉಪಾಧ್ಯಕ್ಷ ವಿ.ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ.ಸತೀಶ್, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.ಶಿಡ್ಲಘಟ್ಟದಲ್ಲಿ ಜನಸ್ನೇಹಿ ಆರಂಭ

ಶಿಡ್ಲಘಟ್ಟ:
ನೆಮ್ಮದಿ ಕೇಂದ್ರಗಳಲ್ಲಿ ಸಿಗುತ್ತಿದ್ದ ಸೇವೆಗಳೆಲ್ಲವೂ ಇನ್ನು ಮುಂದೆ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಲ್ಲಿ ಸಿಗುತ್ತದೆ ಎಂದು ತಹಸೀಲ್ದಾರ್ ಎಲ್.ಭೀಮಾನಾಯ್ಕ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಅಟಲ್‌ಜಿ ಜನಸ್ನೇಹಿ ಸೇವಾಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ರಾಜ್ಯಾದ್ಯಂತ ಈ ಹಿಂದೆ ಇದ್ದ ನೆಮ್ಮದಿ ಕೇಂದ್ರಗಳ ವಿರುದ್ದ ಸಾರ್ವಜನಿಕರಿಂದ ದೂರ ಕೇಳಿ ಬರುತಿತ್ತು. ಜನರಿಗೆ ಅನುಕೂಲವಾಗಲೆಂದೇ ಅಟಲ್‌ಜಿ ಜನಸ್ನೇಹಿ ಸೇವಾ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ' ಎಂದರು.ಜಿಲ್ಲಾಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಶಿರಸ್ತೇದಾರ್ ಕೃಷ್ಣಾನಾಯಕ್, ರಾಜಸ್ವ ನಿರೀಕ್ಷಕ ಮಂಜುನಾಥ್ ಮತ್ತಿತರರು ಹಾಜರಿದ್ದರು. ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಾಡಕಚೇರಿಯಲ್ಲಿ ಮಂಗಳವಾರ ಅಟಲ್‌ಜೀ ಜನಸ್ನೇಹಿ ಸೇವಾಕೇಂದ್ರದ ಉದ್ಘಾಟನೆಯನ್ನು ಉಪತಹಸೀಲ್ದಾರ್ ರಾಮಚಂದ್ರ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಬಿ.ಎಂ.ಅಶ್ವತ್ಥಪ್ಪ, ಮಾಜಿ ಉಪಾಧ್ಯಕ್ಷ ದ್ಯಾವಪ್ಪ, ಮಂಜುಳ ನರಸಿಂಹಪ್ಪ, ಸದಸ್ಯ ಅಮೀರ್ ಜಾನ್,  ಪ್ರಭಾರಿ ರಾಜಸ್ವ ನಿರೀಕ್ಷಕ ಮುನಿನಾರಾಯಣಪ್ಪ ಮತ್ತಿತರರು ಹಾಜರಿದ್ದರು.

ಅಟಲ್ ಜನಸ್ನೇಹಿ  ಪ್ರಾರಂಭ

ಬಾಗೇಪಲ್ಲಿ:
ಸರ್ಕಾರಿ ಸೌಲಭ್ಯ, ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು. ಜನರಿಗೆ ಸಮರ್ಪಕ ಮಾಹಿತಿ ಮತ್ತು ಮಾರ್ಗದರ್ಶನ ನೀಡುವಂಥ ಕಾರ್ಯ ಆಗಬೇಕು ಎಂದು ಶಾಸಕ ಎನ್.ಸಂಪಂಗಿ ತಿಳಿಸಿದರು.

ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಮಂಗಳವಾರ `ಅಟಲ್‌ಜಿ ಜನಸ್ನೇಹಿ ಕೇಂದ್ರ' ಉದ್ಘಾಟಿಸಿ ಮಾತನಾಡಿದ ಅವರು, `ಸರ್ಕಾರ ಪ್ರತಿ ಹೋಬಳಿಗಳಲ್ಲಿ ಜನಸ್ನೇಹಿ ಕೇಂದ್ರ ತೆರೆಯುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ಕೇಂದ್ರಗಳಿಗೆ ಕೂಡಲೇ ಉಪತಹಶೀಲ್ದಾರ್, ಸಿಬ್ಬಂದಿ ನೇಮಿಸಬೇಕು' ಎಂದರು.`ನಿರಂತರ ಜ್ಯೋತಿ ಕಾಮಗಾರಿ ಪ್ರಗತಿ ಹಂತದಲ್ಲಿ ಇದೆ. ಪಾತಪಾಳ್ಯ ಮತ್ತು ಚೇಳೂರು ವಿದ್ಯುತ್ ಸಬ್‌ಸ್ಟೇಷನ್‌ಗಳ ಕಾಮಗಾರಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ವಿದ್ಯುತ್ ಕಲ್ಪಿಸಲಾಗುವುದು. ಅಂಗವಿಕಲ, ವಿಧವಾ, ಸಂಧ್ಯಾಸುರಕ್ಷಾ ಯೋಜನೆಗಳ ವೇತನಗಳನ್ನು ಮುಂದಿನ 15 ದಿನಗಳೊಳಗೆ ಅರ್ಹ ಫಲಾನುಭವಿಗಳಿಗೆ ಕಲ್ಪಿಸಬೇಕು' ಎಂದು ಅವರು ತಿಳಿಸಿದರು.ತಹಶೀಲ್ದಾರ್ ಟಿ.ಎನ್.ಕೃಷ್ಣಮೂರ್ತಿ ಮಾತನಾಡಿ `ತಾಲ್ಲೂಕಿನ ಕಸಬಾ, ಮಿಟ್ಟೇಮರಿ, ಚೇಳೂರು, ಪಾತಪಾಳ್ಯ, ಗೂಳೂರು ಹೋಬಳಿಗಳ ಗ್ರಾಮಸ್ಥರು ಸಂಬಂಧಿಸಿದ ಜನಸ್ನೇಹಿ ಕೇಂದ್ರದಲ್ಲಿ ಎಲ್ಲ ರೀತಿಯ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಬಹುದು. ದಾಖಲೆ ಪರಿಶೀಲಿಸಿದ ನಂತರ ಪ್ರಮಾಣಪತ್ರ ವಿತರಿಸಲಾಗುವುದು. ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು' ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಮರಾವತಿ, ನಾರಾಯಣಮ್ಮ, ಸಾವಿತ್ರಮ್ಮ, ಎಂ.ವಿ.ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಂಕರರೆಡ್ಡಿ, ಗೋಪಾಲಕೃಷ್ಣ, ಪುರಸಭಾ ಮುಖ್ಯಾಧಿಕಾರಿ ಆರ್.ಶ್ರೀಕಾಂತ್, ಅಧ್ಯಕ್ಷೆ ಸುಜಾತಮ್ಮ, ಉಪಾಧ್ಯಕ್ಷ ಮಹಮ್ಮದ್‌ಜಾಕೀರ್, ಉಪತಹಶೀಲ್ದಾರ್ ಮುನಿರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry