ಆಡಳಿತ-ವಿರೋಧ ಪಕ್ಷ ಜಟಾಪಟಿ

ಶನಿವಾರ, ಜೂಲೈ 20, 2019
22 °C

ಆಡಳಿತ-ವಿರೋಧ ಪಕ್ಷ ಜಟಾಪಟಿ

Published:
Updated:

ನರಸಿಂಹರಾಜಪುರ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ವಾಗ್ವಾದ, ಗದ್ದಲ ಹಾಗೂ ವಿರೋಧ ಪಕ್ಷದ ಸದಸ್ಯರ ಬಹಿಷ್ಕಾರದ ನಡುವೆ ನಡೆಯಿತು.ಸಭೆ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯ ಸುಕುಮಾರ್ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಜಮಾ ಖರ್ಚಿನ ಲೆಕ್ಕಚಾರ ನೀಡಿ ಸಭೆ ನಡೆಸಿ ಎಂದು  ಆಗ್ರಹಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯ ಜಯರಾಮ್ ಮತ್ತು ಸುಕುಮಾರ್ ನಡುವೆ ತೀವ್ರವಾಗ್ವಾದ ನಡೆಯಿತು.ಈ ನಡುವೆ ಮಾತನಾಡಿದ ಸದಸ್ಯ ಅಫ್ರೋಜ್ ನಾಮನಿರ್ದೇಶನ ಸದಸ್ಯರಿಗೆ ಹೆಚ್ಚಿನ ಹಕ್ಕಿಲ್ಲ ಎಂದರು. ಇದು ಆಡಳಿತ ಪಕ್ಷದ ನಾಮನಿರ್ದೇಶಕ ಸದಸ್ಯರನ್ನು ಕೆರಳಿಸಿತು. ಸದಸ್ಯ ಸನ್ನಿ ಮತ್ತು ಅಫ್ರೋಜ್ ನಡುವೆ ಮತ್ತೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಾಧಿಕಾರಿ ಶಂಕರಪ್ಪ ಸದಸ್ಯರ ಹಕ್ಕಿನ ಬಗ್ಗೆ ವಿವರಣೆ ನೀಡಿದರು.

 

ಕಾಂಗ್ರೆಸ್ ಸದಸ್ಯ ಲೇಖಾ ವಸಂತ್ ತಮ್ಮ ವಿರುದ್ಧ ಅಸಂವಿಧಾನಿಕ ಪದಗಳನ್ನು ಬಳಸಿದ್ದಾರೆಂದು ಆಡಳಿತ ಪಕ್ಷದ ಸದಸ್ಯರು ಮಾಡಿರುವ ಆರೋಪ ಸಭೆಯ ನಡಾವಳಿ ಪುಸಕ್ತದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಒಂದು ಹಂತದಲ್ಲಿ ಈ ವಿಚಾರ ತಾರಕಕ್ಕೇರಿ ವಿರೋಧ ಪಕ್ಷದ ಸದಸ್ಯರು ಸಭಾ ತ್ಯಾಗ ಮಾಡಿದರು. ನಂತರ ಸಭೆ ಸುಗಮವಾಗಿ ನಡೆಯಿತು.ಸ್ವಯಂ ಘೋಷಿತ ಆಸ್ತಿತೆರಿಗೆಯನ್ನು ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕಿದ್ದು, ಅದರಂತೆ 2005-6ನೇ ಸಾಲಿನ ಆಸ್ತಿಮೌಲ್ಯಕ್ಕೆ ಶೇಕಡ 15ರಷ್ಟು 2011-12ನೇ ಸಾಲಿಗೆ ಅನ್ವಯವಾಗುವಂತೆ ಆಸ್ತಿ ತೆರಿಗೆ ಪರಿಷ್ಕರಿಸಲು ಸಭೆ ಒಪ್ಪಿಗೆ ನೀಡಿತು.ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅಂಗನವಾಡಿ ಕಟ್ಟಡ ನಿರ್ಮಿಸಿಕೊಡುವಂತೆ ಬಂದಿರುವ ಪತ್ರದ ವಿಚಾರ ಚರ್ಚೆಗೆ ಬಂದಾಗ ರಾಘವೇಂದ್ರ ಬಡಾವಣೆ, ನೆಹರು ರಸ್ತೆ ಮತ್ತು ಅಂಬೇಡ್ಕರ್ ನಗರದಲ್ಲಿ 3 ಅಂಗನವಾಡಿಗಳ ನಿರ್ಮಾಣಕ್ಕೆ ಸಭೆ ಅನುಮೋದಿಸಿತು.ಪಟ್ಟಣದ ಬಸ್ ನಿಲ್ದಾಣದಿಂದ ಮಂಡಗದ್ದೆ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧ ಮಾಡಬೇಕೆಂಬ ಸಾರ್ವಜನಿಕರ ಮನವಿಯ ಬಗ್ಗೆ ಚರ್ಚೆ ನಡೆಸಿದ ಸಭೆ ಈ ಬಗ್ಗೆ  ಶಾಸಕರ ಹಾಗೂ ಪೊಲೀಸ್ ಇಲಾಖೆಯ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲು ತೀರ್ಮಾನಿಸಿತು.ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ವಿಶೇಷ ಸಭೆ ಕರೆದು ಚರ್ಚಿಸಲು ತೀರ್ಮಾನಿಸಲಾಯಿತು. ಮಿನಿ ವಿಧಾನ ಸೌಧಕ್ಕೆ ಉಚಿತವಾಗಿ ನಿವೇಶನ ನೀಡಿರುವುದಾಗಿ ಸಾರ್ವಜನಿಕರಲ್ಲಿ ವಿರೋಧ ಪಕ್ಷದವರು ಅಪ ಪ್ರಚಾರದಲ್ಲಿ ತೋಡಗಿದ್ದಾರೆಂದು ಆರೋಪಿಸಿದ ಸಭೆ, ಹಳೆಯ ತಾಲ್ಲೂಕು ಕಚೇರಿ ನಿವೇಶನ ಹಾಗೂ ಶಿವಮೊಗ್ಗ ರಸ್ತೆಯಲ್ಲಿರುವ ಅಬಕಾರಿ ಇಲಾಖೆಯ ಕಟ್ಟಡವಿರುವ 150/150 ಅಡಿಗಳ ಜಾಗವನ್ನು ಪಟ್ಟಣ ಪಂಚಾಯಿತಿಗೆ ಪಡೆದು ನಿವೇಶನ ನೀಡಲಾಗಿದೆ ಇದರಿಂದ ಪಟ್ಟಣ ಪಂಚಾಯಿತಿಗೆ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ ಎಂದು ಮುಖ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು.ನಾಗಲಾಪುರ ಗ್ರಾಮದ ಸರ್ವೆ ನಂ 193ರಲ್ಲಿ ಉಳಿದಿರುವ ಜಾಗವನ್ನು 10 ಜು. 2010ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಈ ಜಾಗ ಮಂಜೂರಾತಿಗೆ ತಹಸೀಲ್ದಾರರಿಗೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು.

 

ಪತ್ರಕರ್ತರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಾಗಲಾಪುರ ಗ್ರಾಮದಲ್ಲಿ ಮಂಜೂರಾಗುವ ಸ್ಥಳದಲ್ಲೇ ನಿವೇಶನ ನೀಡುವುದು ಸೂಕ್ತವೆಂದು ಸದಸ್ಯ ಆಶೀಶ್ ಕುಮಾರ್ ತಿಳಿಸಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಸುರೇಶ್ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ರಾಜಶೇಖರ್, ಉಪಾಧ್ಯಕ್ಷೆ ಉಷಾ ಮಂಜುನಾಥ್, ಮುಖ್ಯಾಧಿಕಾರಿ ಶಂಕರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry