ಶುಕ್ರವಾರ, ನವೆಂಬರ್ 15, 2019
21 °C

ಆಡಳಿತ ವೈದ್ಯಾಧಿಕಾರಿ ಸೇರಿ ಮೂವರ ಅಮಾನತು

Published:
Updated:

ಹೊಸಕೋಟೆ: ಹಣ ದುರುಪಯೋಗ ಹಾಗೂ ಕರ್ತವ್ಯಲೋಪ ಆರೋಪದ ಮೇರೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸೇರಿದಂತೆ ಮೂವರು ವೈದ್ಯರನ್ನು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಎಸ್.ಸೆಲ್ವಕುಮಾರ್ ಆದೇಶ ಹೊರಡಿಸಿದ್ದಾರೆ.ಈ ಹಿಂದೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ಶ್ರೀನಿವಾಸ್, ಈಗಿನ ದಂತ ವೈದ್ಯರಾದ ಡಾ.ಬಿ.ಎಸ್.ರಘುಕುಮಾರ್ ಹಾಗೂ ಮಹಿಳಾ ವೈದ್ಯಾಧಿಕಾರಿ ಡಾ.ಎಂ. ವತ್ಸಲಾ ಅಮಾನತುಗೊಂಡವರು. ಶಿಸ್ತು ಕ್ರಮಕ್ಕೆ ಬಾಕಿ ಇರಿಸಿ ಈ ಮೂವರನ್ನು ಅಮಾನತುಗೊಳಿಸಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಾಗೃತ ಕೋಶ ವಿಭಾಗದವರು 2005ರಿಂದ 2010ರವರೆಗೆ ಆಸ್ಪತ್ರೆಯ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ದಾಖಲೆಗಳನ್ನು ಪರಿಶೀಲಿಸಿದ್ದರು.ಅದರಂತೆ, ಈ ವೈದ್ಯರು ಆಸ್ಪತ್ರೆಯಲ್ಲಿ ಸಂಗ್ರಹವಾದ ಶುಲ್ಕವನ್ನು ಬ್ಯಾಂಕಿಗೆ ಜಮೆ ಮಾಡದೆ ಇರುವುದು, ಔಷಧಿಗಳನ್ನು ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚಿಗೆ ಖರೀದಿಸಿದ್ದರೂ ದಾಸ್ತಾನು ಮಾಡಲು ತೆಗೆದುಕೊಳ್ಳದೆ ಇರುವುದು, ಬಿಲ್‌ಗಳ ಮೇಲೆ ದಿನಾಂಕ ನಮೂದಿಸದೆ ಇರುವುದು, ದಾಸ್ತಾನಿನಲ್ಲಿ ಔಷಧಿಗಳಿದ್ದರೂ ಮತ್ತೆ ಖರೀದಿಸಿರುವಂತಹ ಲೋಪಗಳು ಕಂಡು ಬಂದಿವೆ. ಅಲ್ಲದೆ, ಯಂತ್ರವೊಂದನ್ನು ಖರೀದಿಸಿದ ದಿನದಿಂದಲೂ ಉಪಯೋಗಿಸದೇ ಇದ್ದರೂ ಅದರ ಬೆಲೆಗಿಂತಲೂ ಹೆಚ್ಚು ಬೆಲೆ ನೀಡಿ ರಿಪೇರಿ ಮಾಡಿಸಿರುವುದು ತಪಾಸಣೆಯಿಂದ ಬೆಳಕಿಗೆ ಬಂದಿದೆ.ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಫಲಾನುಭವಿಗಳಿಗೆ ಚೆಕ್ ಬದಲಿಗೆ ನಗದು ಮೂಲಕ ಹಣ ವಿತರಿಸಲಾಗಿದ್ದು, ಇದಕ್ಕೆ ಸೂಕ್ತ ದಾಖಲೆಗಳಿಲ್ಲದಿರುವುದು, ಆಸ್ಪತ್ರೆಯಲ್ಲಿನ ನಡಾವಳಿ ಪುಸ್ತಕವನ್ನು ತಿದ್ದಿರುವುದು, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ನಗದು ಪುಸ್ತಕದಲ್ಲಿ ಲೆಕ್ಕ ಪರಿಶೋಧಕರು ಬರೆದ ಟಿಪ್ಪಣಿ ಹರಿದು ನಾಶಗೊಳಿಸಿರುವ ಆರೋಪವನ್ನು ಈ ವೈದ್ಯರು ಎದುರಿಸುತ್ತಿದ್ದಾರೆ.ಪ್ರಭಾರ ಅಧಿಕಾರಿ: ಮಹಿಳಾ ವೈದ್ಯಾಧಿಕಾರಿ ಡಾ.ವತ್ಸಲಾ ಅವರನ್ನು ಅಮಾನತುಗೊಳಿಸಿರುವುದರಿಂದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಎನ್.ಶಕೀಲ ಅವರು ಪ್ರಭಾರ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.

ಪ್ರತಿಕ್ರಿಯಿಸಿ (+)