ಮಂಗಳವಾರ, ಮೇ 17, 2022
24 °C
ಜನಸಾಮಾನ್ಯರಿಗೆ ಆಹಾರದ ಲಭ್ಯತೆ 1990ರಲ್ಲಿ ತಲೆಗೆ 510 ಗ್ರಾಂ ಇತ್ತು. ಈಗ ಅದು 438 ಗ್ರಾಂಗೆ ಇಳಿದಿದೆ. ಇದಕ್ಕೆ ಯಾರು ಹೊಣೆ?

ಆಡಿಕೊಳ್ಳಲು ಬ್ಯಾಡಿ ಬಡವಾರ ಬದುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತ ಚಳವಳಿ, ಕಾರ್ಮಿಕ ಚಳವಳಿ, ರೈತ ಚಳವಳಿಯ ಸಂದರ್ಭದಲ್ಲಿ ಕರ್ನಾಟಕದ ಉದ್ದಗಲಗಳಲ್ಲಿ ಸೀಳಿ ನಡೆದ ಈ ಹಾಡಿನ ತುಣುಕುಗಳು ಮತ್ತೊಮ್ಮೆ ಭಾರತದ ಬದುಕನ್ನು ಉಳ್ಳವರ ನಡುವೆ ಉಚ್ಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಶಾರಿಗಂಜಿಗಾಗಿ ಸೇರು ಬೆವರು ಸುರಿಸುತ

ಊರೂರು ತಿರುಗುವರ‌್ಯಾರಣ್ಣ

ಈ ನಾಡ ಕಟ್ಟಿದವರು ನಾವೆಲ್ಲಿಗೋಗಬೇಕು

ಕೂಲಿಯವರು ನಾವು ಕೇಳಣ್ಣ

ದೇವನೂರರ ಲೇಖನದ ಹಿನ್ನೆಲೆಯಲ್ಲಿ, `ಪ್ರಜಾವಾಣಿ' ಬಡವ-ಶ್ರೀಮಂತರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಂವಾದಕ್ಕೆ ವೇದಿಕೆ ಒದಗಿಸಿದೆ. ಅದಕ್ಕಾಗಿ ಧನ್ಯವಾದಗಳು.ಬಡವರಿಗಾಗಿ ಸರ್ಕಾರ ಸುರಿಯುತ್ತಿರುವ ಹಣ ಶ್ರೀಮಂತರ ಕಷ್ಟಾರ್ಜಿತ ತೆರಿಗೆ ಹಣ; ಈ ದೇಶದ ಬಹುಸಂಖ್ಯಾತರು ಬಡವರಾಗಲು ಶ್ರೀಮಂತರು ಕಾರಣರಲ್ಲ, ರಾಜಕಾರಣಿಗಳು, ದೇಶ ಹಾಳುಗೆಡವಲು ಸಮಾಜವಾದಿಗಳು, ಕಮ್ಯೂನಿಸ್ಟರು, ಬಡವರ ಸೋಮಾರಿತನ, ಆಸೆಬುರುಕತನವೇ ಕಾರಣ ಎಂದು ಕೆಲವರು ಉರಿ ಕಾರಿದ್ದಾರೆ.ಜಮೀನ್ದಾರರು, ಟಾಟಾ ಬಿರ‌್ಲಾ, ಅಂಬಾನಿಗಳು ಹುಟ್ತನೇ ಚಿನ್ನದ ಚಮಚ ಬಾಯಲ್ಲಿ ಇಟ್ಕೊಂಡು, ಆಸ್ತಿ-ಪಾಸ್ತಿನ ಕಟ್ಟಿಕೊಂಡು ಹುಟ್ಟಲಿಲ್ಲ. ಭಾರತದ ಪಾಳೇಗಾರಿ ವ್ಯವಸ್ಥೆ ಈ ನೆಲದ ನೈಸರ್ಗಿಕ ಸಂಪತ್ತೆಲ್ಲವನ್ನು ಬಲವಂತವಾಗಿ ಮತ್ತು ಸೈದ್ಧಾಂತಿಕವಾಗಿ ಬಹುಜನರಿಂದ ಕಿತ್ತುಕೊಂಡು ತಮ್ಮಲ್ಲಿ ಶೇಖರಿಸಿಕೊಂಡು ಶ್ರೀಮಂತ ಮತ್ತು ಬಡವ ಎನ್ನುವ ವರ್ಗವನ್ನು ಸೃಷ್ಟಿಸಿತು ಎಂದು ಸಾಬೀತು ಮಾಡಲು ರಿಸರ್ಚಿನ ಅಗತ್ಯವಿಲ್ಲ. ಈ ದೇಶದ ರಾಜಕಾರಣಿಗಳು ಬಡವರಲ್ಲ, ಬಡವರ ಪ್ರತಿನಿಧಿಗಳೂ ಅಲ್ಲ. ಶ್ರಿಮಂತರ ಅನುಯಾಯಿಗಳೆಂದು ತಿಳಿದುಕೊಳ್ಳಲು ಚುನಾವಣಾ ಆಯೋಗದ ಬಳಿ ಧಂಡಿ ಪುರಾವೆಗಳಿವೆ.ಜಗತ್ತಿನ ಯಾವುದೇ ದೇಶದ ಸಂಪತ್ತನ್ನು ಸೃಷ್ಟಿಸಿದವರು ಮುಂದೆ ಸೃಷ್ಟಿಸುವವರು ಶ್ರಮಿಕರು ಅಂದರೆ ದುಡಿಯುವ ಜನ, ಎನ್ನುವ ಸರಳ ಸತ್ಯವನ್ನು ಕೌಟಿಲ್ಯನಿಂದ ಹಿಡಿದು ಆಡಂ ಸ್ಮಿತ್, ಕಾರ್ಲ್‌ಮಾರ್ಕ್ಸ್‌ವರೆಗೂ ಅಲ್ಲಿಂದ ಅಮರ್ತ್ಯಸೇನ್‌ನಂತಹ ಪಂಡಿತರ ಕಾಲದಲ್ಲಿಯೂ ವಿವಿಧ ಪ್ರಕಾರಗಳಲ್ಲಿ ಹೇಳುತ್ತಾ ಬರಲಾಗಿದೆ. ನಾರಾಯಣಮೂರ್ತಿಯಂತಹವರ ಕೇವಲ ರೂ100 ಕೋಟಿ ತೆರಿಗೆ, ದುಡಿಮೆಗಾರರ ಮಿಗುತಾಯದ ಅಲ್ಪಾಂಶ ಮಾತ್ರ. ಈ ದೇಶದ ಸಂಪತ್ತಿನ ಶೇ.80 ಭಾಗ ಬೆರಳೆಣಿಕೆಯಷ್ಟಿರುವ ಶ್ರಿಮಂತರ ಕೈಯಲ್ಲಿದೆ! ಆದರೆ ತಾವೇ ಸೃಷ್ಟಿಸಿದ ಸಂಪತ್ತಿಗೆ ಶೇ.90ಭಾಗ ತೆರಿಗೆಯನ್ನು ಕಟ್ಟುತ್ತಿರುವವರು ಪುನಃ ಶ್ರಮಿಕರೇ ಸ್ವಾಮಿ.ಬೀಡಿ ಕೊಂಡರೂ ತೆರಿಗೆ, ಸಾರಾಯಿ ಕುಡಿದರೂ ತೆರಿಗೆ, ಕರೆಂಟ್ ಉರಿಸಿದರೂ ತೆರಿಗೆ, ಬೇಳೆ ಕೊಂಡರೂ ತೆರಿಗೆ, ಸಿನಿಮಾ ನೋಡಿದರೂ ತೆರಿಗೆ ಕುಂತರೂ ತೆರಿಗೆ, ನಿಂತರೂ ತೆರಿಗೆ. ಶ್ರಿಮಂತರು ನಲ್ಲಿ ತೆರಿಗೆ ಕಟ್ಟದಿದ್ದರೆ ನೀರು ಬಂದ್ ಆಗುವುದಿಲ್ಲ, ವಿದ್ಯುತ್ ಬಿಲ್ ಕಟ್ಟದಿದ್ದರೆ ಲೈನ್ ಕಟ್ಟಾಗಲ್ಲ, ಐಷಾರಾಮಿ ಕಾರನ್ನು ಯಾವತ್ತೂ ಪೊಲೀಸ್ ತಡೆದು ಲೈಸೆನ್ಸ್ ಕೇಳಿಲ್ಲ, ಬ್ಯಾಂಕಿನವರು ಮನೆ ಜಪ್ತಿಮಾಡಿ ಹರಾಜಿಗಿಟ್ಟಿಲ್ಲ. ಇವೆಲ್ಲಾ ದಾಳಿ ಬಡವರ ಮೇಲೆ ಮಾತ್ರ ಸ್ವಾಮಿ.2008-2011ರ ಅವಧಿಯಲ್ಲಿ 2,28,045 ಕೋಟಿ ರೂಪಾಯಿಗಳಷ್ಟು ತೆರಿಗೆಯನ್ನ ಸರ್ಕಾರ ಈ ದೇಶದ ಕಾರ್ಪೊರೇಟ್ ಕಂಪೆನಿಗಳಿಗೆ ವಿನಾಯಿತಿ ನೀಡಿದೆಯಲ್ಲಾ ಇದಕ್ಕೆ ಏನು ಹೇಳ್ತೀರಾ?ಈ ದೇಶದ ಬಡತನಕ್ಕೆ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತ ಕಾರಣ ಎಂದು ಹೇಳಿದ್ದೀರಿ. ಈ ಎರಡೂ ಸಿದ್ಧಾಂತವನ್ನು ಈ ದೇಶ 65 ವರ್ಷಗಳಲ್ಲಿ ಅಳವಡಿಸಿಕೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಂಡಿಲ್ಲವೆ? ಭಾರತ ಸರ್ಕಾರದ ಸ್ಯಾಂಪಲ್ ಸರ್ವೇ ಆಫ್ ಇಂಡಿಯದ ಸಂಶೋಧನಾ ವರದಿ  ಹೀಗೆ ಹೇಳುತ್ತದೆ: ದೇಶದ 52 ಲಕ್ಷ ಕೃಷಿ ಕಾರ್ಮಿಕರು ಮಾಸಿಕ ರೂ 3000ಕ್ಕೂ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ, ಶೇಕಡ 48  ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ, ಶೇಕಡ 52 ಜನಕ್ಕೆ ಸ್ವಂತ ಮನೆ ಇಲ್ಲ. ಮೊದಲೇ ಉದ್ಯೋಗದ ಅಭಾವ, ಜೊತೆಗೆ 1990ರ ಅವಧಿಯಲ್ಲಿ  ಇದ್ದ ಉದ್ಯೋಗದ ಸಂಖ್ಯೆ 8,57,232.  ಅದು 2010ರಲ್ಲಿ 7,81,013ಕ್ಕೆ ಕುಸಿದು ನಿವ್ವಳ 76219 ಉದ್ಯೋಗ ಕಡಿತವಾಗಿದೆ.  ಜನಸಾಮಾನ್ಯರಿಗೆ ಆಹಾರದ ಲಭ್ಯತೆ 1990ರಲ್ಲಿ ತಲೆಗೆ 510 ಗ್ರಾಂ ಇತ್ತು. ಈಗ ಅದು 438 ಗ್ರಾಂಗೆ ಇಳಿದಿದೆ. ಇದಕ್ಕೆ  ಯಾರು ಹೊಣೆ? ರೂ 5000 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಶ್ರಿಮಂತರು ಭಾರತದಲ್ಲಿ 2003ರಲ್ಲಿ 13 ಜನ ಇದ್ದರು, 2011ರಲ್ಲಿ ಅವರ ಸಂಖ್ಯೆ 55 ಆಗಿದೆ . ಸ್ವಾತಂತ್ಯೋತ್ತರ ಭಾರತದಲ್ಲಿ 90ರ ದಶಕದವರೆಗೂ ಜಾಗತಿಕ ಮಟ್ಟದ ಶ್ರಿಮಂತರಿರಲಿಲ್ಲ.ಕೇವಲ 20 ವರ್ಷಗಳಲ್ಲಿ ಇವರೆಲ್ಲಾ ಹೇಗೆ ಶ್ರಿಮಂತರಾದರು ಗೊತ್ತೆ? ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸಿಕೊಂಡು ತಾವೇ ಮಾಲೀಕರಾದರು, ಜಮೀನುಗಳನ್ನು ಕಿತ್ತುಕೊಂಡು ತಮ್ಮ ಹೆಸರಿಗೆ ಬರೆಸಿಕೊಂಡರು. (ಎ.ಟಿ.ರಾಮಸ್ವಾಮಿ ವರದಿಯನ್ನೊಮ್ಮೆ ನೋಡಿ) ಶ್ರಿಮಂತರ ಪರವಾಗಿ ಇಷ್ಟೆಲ್ಲಾ ಮಾಡಿದ ಸರ್ಕಾರಗಳು ಬಡವರನ್ನು ಇನ್ನಷ್ಟು ಬಡವರಾಗಿಸಿ ಬೀದಿಗೆ ಭಿಕ್ಷೆಗೆ ನಿಲ್ಲಿಸಿದೆ. ಈಗ ಅಕ್ಕಿ ನೀಡುತ್ತಿರುವುದು ಕಣ್ಣೊರೆಸುವ ಸಲುವಾಗಿಯಷ್ಟೇ ಹೊರತು ಅದರಿಂದ ಯಾವ ಬಡವನೂ ದಿನಕಳೆಯುವುದರೊಳಗೆ ಶ್ರಿಮಂತನಾಗಿಬಿಡುವುದಿಲ್ಲ.ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿಗಾಗಿ 17 ಲಕ್ಷದ 40 ಸಾವಿರ ಎಕರೆಯಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅರಣ್ಯಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ಜನರನ್ನು ಒಕ್ಕಲೆಬ್ಬಿಸಿ ಬೇಲಿ ಹಾಕಿಕೊಳ್ಳಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪತ್ತನ್ನು ಶ್ರಿಮಂತರು ಲೂಟಿ ಮಾಡಿದ್ದಾರೆ. ಹಾಗಾಗಿ 91ರಲ್ಲಿ ಶೇ. 35.42 ಇದ್ದ ಬಡವರ ಪ್ರಮಾಣ 99ರಲ್ಲಿ 38.6ಕ್ಕೇರಿದೆ ಅದು 2011ರಲ್ಲಿ 42.08ಕ್ಕೆ ಮುಟ್ಟಿದೆ.ಈಗೆಷ್ಟಾಗಿದೆ ಎನ್ನುವುದನ್ನು ಸರಳ ಗಣಿತದಿಂದ ಲೆಕ್ಕ ಹಾಕಬಹುದು. (ಮನಮೋಹನ ಸಿಂಗ್ ಮತ್ತು ಮೊಂಟೆಕ್‌ಸಿಂಗ್ ಅಹ್ಲುವಾಲಿಯರ ಮಾನದಂಡದ ಪ್ರಕಾರ ದಿನಕ್ಕೆ ರೂ 30ತಲಾಆದಾಯ ಗಳಿಸುವವ ಮಾತ್ರ ಬಡವ ಎಂದು ಅಂದುಕೊಂಡರೆ) ಬಡವರ ಪ್ರಮಾಣ ಹೀಗೇ ಹೆಚ್ಚುತ್ತಾ ಹೋಗುವುದಾದರೆ ಸರ್ಕಾರಗಳು ಯಾಕೆ ಬೇಕು? ಅಕ್ಕಿ ಭಿಕ್ಷೆ ನೀಡಲಾ?

ಜಾಗತಿಕವಾಗಿ ಭಯೋತ್ಪಾದನೆ ಹೆಮ್ಮರವಾಗಿ ಬೆಳೆದು ನಿಂತದ್ದು ಯಾವಾಗ? ಮೂರನೇ ಜಗತ್ತಿನ ದೇಶಗಳಲ್ಲಿ ಹಸಿವು, ಬಡತನಗಳಿಂದ ಜನ ಸಾಯಲು ಆರಂಭವಾದದ್ದು ಯಾವಾಗ? ಭಾರತದಲ್ಲಿ ರೈತರ ಆತ್ಮಹತ್ಯೆಯ ಸರಣಿ ಆರಂಭವಾದದ್ದು ಯಾವಾಗ? ಭಾರತದ ಸಾರ್ವಜನಿಕ ಉದ್ದಿಮೆಗಳು (ಎಚ್.ಎಂ.ಟಿ, ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಗಳು, ಆಹಾರೋತ್ಪನ್ನ ಕಾರ್ಖಾನೆಗಳು, ವಿಮಾನ ಕಾರ್ಖಾನೆಗಳು ಇತ್ಯಾದಿ) ಸ್ವಾವಲಂಬಿತನ ಕಳೆದುಕೊಂಡು ಬಹುರಾಷ್ಟ್ರೀಯ ಕಂಪೆನಿಗಳಿಗೆ ಶರಣಾಗಲಾರಂಭಿಸಿದ್ದು ಯಾವಾಗ? ಎಲ್ಲವೂ 1990ರ ನಂತರ. ಏಕೆ ಗೊತ್ತೆ?1990ರವರೆಗೂ ಭಾರತ ಸಮಾಜವಾದಿ ಹಾದಿಯಲ್ಲಿ ಮುನ್ನಡೆಯುತ್ತಿತ್ತು.ಸೋವಿಯತ್ ಪತನದ  ನಂತರ, ಜಾಗತಿಕ ಬಂಡವಾಳಶಾಹಿಯು ಆವರಿಸಿಕೊಂಡು ಭಾರತವೂ ಸೇರಿದಂತೆ ಮೂರನೇ ಜಗತ್ತಿನ ದೇಶಗಳನ್ನು ಹಾಳುಗೆಡಹುತ್ತಿದೆ ಎನ್ನುವ ಸತ್ಯವನ್ನು ತಿಳಿದುಕೊಳ್ಳಲು ಐತಿಹಾಸಿಕ ದೃಷ್ಟಿಕೋನ ಮತ್ತು ವೈಚಾರಿಕ ಪ್ರಜ್ಞೆಯ ಅಗತ್ಯ ಇದೆ.ಶತ ಶತಮಾನಗಳಿಂದ ಭಾರತದ ತಳಸಮುದಾಯದ ಜನರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಜೀವನದ ಮೇಲೆ ಪುರೋಹಿತ ಮತ್ತು ಪಾಳೇಗಾರಿ ವರ್ಗ ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ದಬ್ಬಾಳಿಕೆ ನಡೆಸಿದ್ದರಿಂದ ಭಾರತ ಇಂದು ಅಸಮಾನ ಭಾರತವಾಗಿ ನೈತಿಕ ಹಾಗೂ ಆರ್ಥಿಕ ದಿವಾಳಿತನದತ್ತ ಸಾಗುತ್ತಿದೆ. ಇದನ್ನೇ ದೇವನೂರರು ಎದೆಯಾಳದ ನೋವು, ಸ್ವಾನುಭವ ಹಾಗೂ ಸಮಗ್ರ ಅಧ್ಯಯನದ ಸತ್ಯದಿಂದ ತೋಡಿಕೊಂಡಿರುವುದು.ಆಡಿಕೊಳ್ಳಲು ಬ್ಯಾಡಿ

ಬಡವಾರ ಬದುಕ ಕತ್ತಲ

ಬೆಳದಿಂಗಳೋಳಗ

ಭಿನ್ನ-ಭೇದವ ಮಾಡಬ್ಯಾಡಿರಿ.

- ಅಹಮದ್ ಎಚ್.ಎ, ರೂಪ ಹಾಸನ, ಧರ್ಮೇಶ್, ನವೀನ್ ಕುಮಾರ್ ಎಚ್.ಆರ್.,ಮಮತ ಶಿವು, ಹಾಸನ

ಎಲ್ಲಿಂದ ಬರುತ್ತದೆ?

ದಿನಾಂಕ 18ರ `ಸಂಗತ' ಅಂಕಣದಲ್ಲಿ ವಿ.ಆರ್. ಕಾರ್ಪೆಂಟರ್ ಅವರು ರಾಜಕೀಯ ಪಕ್ಷಗಳು ಚುನಾವಣೆ ಸಮಯದಲ್ಲಿ ಕೊಡುವ ಸೀರೆಯಿಂದ ನಮ್ಮ ತಾಯಂದಿರ ಅಕ್ಕತಂಗಿಯರ, ಹೆಂಡತಿಯ ಮಾನಮುಚ್ಚಲು ಹೆಣಗಾಡುತ್ತೇವೆ ಎಂದು ಹೇಳಿದ್ದಾರೆ.  ರಾಜಕೀಯ ಪಕ್ಷಕ್ಕೆ, ಚುನಾವಣೆಗೆ ನಿಂತಿರುವ ಅಭ್ಯರ್ಥಿಗೆ ಬಡವರಿಗೆ ಸೀರೆ ನೀಡಲು ಹಣ ಎಲ್ಲಿಂದ ಬರುತ್ತದೆ ಎಂದು ಅವರಿಗೆ ತಿಳಿದಿದೆಯೇ ?  ಯಾವ ಅಭ್ಯರ್ಥಿಯೂ ಬೆವರು ಸುರಿಸಿ ದುಡಿದ ಹಣವನ್ನು ಖರ್ಚು ಮಾಡುವುದಿಲ್ಲ.  ಅದು ದೇಶದ ಸಂಪತ್ತನ್ನು ಲೂಟಿ ಹೊಡೆದು ಸಂಪಾದಿಸಿದ ಹಣ (ಉದಾಹರಣೆಗೆ ಬಳ್ಳಾರಿಯ ರೆಡ್ಡಿ ಬಂಧುಗಳು), ಸಮಾಜ ಘಾತುಕ ಉದ್ಯಮಿಗಳಿಂದ ಪಡೆದ ಹಣ ಆಗಿರುತ್ತದೆ.ನಿಮ್ಮ ಹೆಣ್ಣುಮಕ್ಕಳಿಗೆ ಸೀರೆಯನ್ನು ನೀಡಲು ಅವರು ಖರ್ಚು ಮಾಡುವ ಹಣ ಮುಂದೆ ತಮ್ಮ ಸ್ವಂತಕ್ಕೆ ಕೋಟ್ಯಂತರ ರೂಪಾಯಿ ಸಂಪಾದಿಸಿಕೊಳ್ಳುವುದಕ್ಕೆ ಬಂಡವಾಳವಾಗುತ್ತದೆ.  ನಮ್ಮ ದೇಶದ ಜನ ಬಡವರಾಗಿಯೇ ಉಳಿದಿರುವುದಕ್ಕೆ ವಿದ್ಯೆ ಮತ್ತು ಅರಿವಿನ ಕೊರತೆಯೇ ಹೊರತು ಸಂಪನ್ಮೂಲದ ಕೊರತೆಯಲ್ಲ.

ಎಚ್.ಎಸ್. ಶ್ರೀಮತಿ,ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.