ಭಾನುವಾರ, ಏಪ್ರಿಲ್ 11, 2021
25 °C

ಆಡಿಸಿದಳು ಯಶೋದೆ ಜಗದೋದ್ಧಾರನಾ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಆಡಿಸಿದಳು ಯಶೋದೇ ಜಗದೋದ್ಧಾರನಾ... ದಾಸರ ಪದಗಳ ಇಂಪು ಕಿವಿಯಿಂದ ಮರೆಯಾಗುವುದೇ ಇಲ್ಲ. ಅದಕ್ಕೆ ದೃಶ್ಯ ರೂಪಕದಂತೆ ಮುದ್ದು ಕೃಷ್ಣರನ್ನು ಆಡಿಸುತ್ತಿದ್ದ ಯಶೋದೆಯರು, ಗೋಪಿಕೆಯರು ಪಡುತ್ತಿದ್ದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದಾಗಿದ್ದವು.ಇದೆಲ್ಲ ನಡೆದುದು ನಗರದ ಮಾರ್ಕೆಟ್ ಸಮೀಪದ ರಾಘವೇಂದ್ರ ಮಠದಲ್ಲಿ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗುರುವಾರ ರಾಘವೇಂದ್ರ ಮಿತ್ರ ಬಳಗ ಮತ್ತು ಹಿಂದೂ ಜಾಗರಣ ವೇದಿಕೆಯ ಮಂಗಳೂರು ಘಟಕಗಳು ಹಮ್ಮಿಕೊಂಡ 40ನೇ ವರ್ಷದ ಮೊಸರು ಕುಡಿಕೆ ಉತ್ಸವ ಮತ್ತು ಐದನೇ ವರ್ಷದ ಕೃಷ್ಣವೇಷ ಸ್ಪರ್ಧಾ ಸ್ಥಳದಲ್ಲಿ ನಂದಗೋಕುಲವೊಂದು ಸೃಷ್ಟಿಯಾಗಿತ್ತು. ಯಶೋದೆಯರು, ಗೋಪಿಕೆಯರ ಸಂಭ್ರಮ ಮೇರೆ ಮೀರಿತ್ತು. ಮುದ್ದುಕೃಷ್ಣರು, ಕಿಶೋರಕೃಷ್ಣರೆಲ್ಲ ಕಣ್ಮನ ಸೆಳೆದುಬಿಟ್ಟರು.ಒಟ್ಟು ಮೂರು ವಿಭಾಗಗಳಲ್ಲಿ ಕೃಷ್ಣ ವೇಷ ಸ್ಪರ್ಧೆಗಳು ನಡೆದವು. ಮುದ್ದುಕೃಷ್ಣ, ಬಾಲಕೃಷ್ಣ ಮತ್ತು ಕಿಶೋರಕೃಷ್ಣ ವಿಭಾಗಗಳಲ್ಲಿ ಈ ಸ್ಪರ್ಧೆಗಳಿದ್ದವು. 75ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದುದು ಮುದ್ದುಕೃಷ್ಣ ವಿಭಾಗದ ಮಕ್ಕಳು.ಈಗಷ್ಟೇ ಅಂಬೆಗಾಲು ಇಡಲು ಆರಂಭಿಸಿದ ಮಕ್ಕಳ ಹಾವ ಭಾವವನ್ನು ನೋಡುವುದೇ ಖುಷಿಯ ವಿಚಾರ. ಹೆಚ್ಚಿನ ಮಕ್ಕಳು ಇದೇ ಪ್ರಥಮ ಬಾರಿಗೆ ವೇದಿಕೆ ಹತ್ತಿದ್ದರು. ಅವರ ಅಮ್ಮಂದಿರಿಗೆ, ಅಪ್ಪ, ಅಕ್ಕ, ಅಣ್ಣಂದಿರಿಗೂ ಏನೋ ಸಂತಸ. ಏನೇ ಮಾಡಲಿ, ವೇದಿಕೆಯಲ್ಲಿ ಒಂದಿಷ್ಟು ಸಮಯ ಇರಲಿ ಎಂಬ ಕಾತರ. ನಿಜಕ್ಕೂ ಈ ಮುದ್ದು ಕೃಷ್ಣ ಸ್ಪರ್ಧಿಗಳು ಯಾರ ನಿರೀಕ್ಷೆಯನ್ನೂ ಹುಸಿಗೊಳಿಸಲಿಲ್ಲ. ತುಂಟತನ, ಚುರುಕುತನಗಳೇ ಮೈದಳೆದಂತೆ ಕೆಲವು ಮಕ್ಕಳು ವರ್ತಿಸಿದರೆ, ಇನ್ನು ಕೆಲವರು ಅಮ್ಮನ ಸೆರಗು ಬಿಡಲು ಒಪ್ಪದೆ ಅಕ್ಷರಶಃ ಯಶೋದೆಯನ್ನು ನೆನಪಿಸಿಬಿಟ್ಟರು. ಕೆಲವು ಮುದ್ದುಕೃಷ್ಣರನ್ನು ವೇದಿಕೆಗೆ ಹತ್ತಿಸಿದ ಬಾಲಕಿಯರು ಗೋಪಿಕೆಯರಂತೆ ಕಂಡುಬಂದರು.ಸಭಾಂಗಣದಲ್ಲಿ 100ಕ್ಕೂ ಹೆಚ್ಚು ಜನರಿದ್ದರು. ಕ್ಯಾಮೆರಾ ಕಣ್ಣುಗಳೂ ಕೋರೈಸುತ್ತಿದ್ದವು. ಮಕ್ಕಳಿಗೆ ಬಿಡಿ, ಹಿರಿಯರಿಗೂ ಇಂತಹ ಸ್ಥಿತಿಯಲ್ಲಿ ಒಂದಿಷ್ಟು ಕಸಿವಿಸಿ ಸಹಜ. ಮುಗ್ಧ ಮಕ್ಕಳಿಗಂತೂ ಇದೆಲ್ಲ ಹೊಸ ಲೋಕವೇ ಸರಿ. ಕೃಷ್ಣನ ವೇಷ, ಕೊಳಲು, ತಲೆಯ ಕಿರೀಟ, ನವಿಲಿನ ಗರಿಗಳ ಕಿರಿಕಿರಿ ಅನುಭವಿಸುತ್ತಲೇ ಈ ಮಕ್ಕಳು ನೋಡುತ್ತಿದ್ದವರನ್ನು ಮುದಗೊಳಿಸಿದರು. ಒಂದು ಮಗು ಮಡಿಕೆಯಿಂದ ಕೃಷ್ಣನು ಬೆಣ್ಣೆಯನ್ನು ತಿಂಬಂತೆ ಕೆನ್ನೆಗೆಲ್ಲ ಮೆತ್ತಿಕೊಂಡು ಐಸ್‌ಕ್ರೀಂ ತಿಂದುಬಿಟ್ಟರೆ, ಮತ್ತೊಂದು ಮಗು ಬಿಸ್ಕೆಟ್ ತಿಂದುಬಿಟ್ಟಿತು. ಮತ್ತೊಂದು ಮಗು ಕೈಯಲ್ಲಿ ಹಾವು ಹಿಡಿದು ಕಾಳಿಂಗ ಮರ್ಧನನನ್ನು ನೆನಪಿಸಿತು. ಒಂದಿಬ್ಬರು ಮಕ್ಕಳು ಮೈಕ್‌ನಲ್ಲಿ ಭಾಷಣ ಮಾಡುವ ಉತ್ಸಾಹವನ್ನೂ ತೋರಿಸಿಬಿಟ್ಟರು. ವಿಶೇಷವೆಂದರೆ ಆ ಕಂದಮ್ಮಗಳು ಇನ್ನೂ ಅಪ್ಪ, ಅಮ್ಮ, ಅಜ್ಜಿ ಎಂದು ಹೇಳುವುದೇ ಕಷ್ಟವೆಂಬಂತಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.