ಆಡುಭಾಷೆ ಅರಿಯದಿದ್ದರೆ...

7
ವೈದ್ಯ– ಹಾಸ್ಯ

ಆಡುಭಾಷೆ ಅರಿಯದಿದ್ದರೆ...

Published:
Updated:

ನಾನು ವೈದ್ಯ ವೃತ್ತಿಯನ್ನು ಹೊಸದಾಗಿ ಆರಂಭಿಸಿದ ದಿನಗಳು. ಮೈಸೂರು ಜಿಲ್ಲೆಯ  ಹುಣಸೂರು ತಾಲ್ಲೂಕಿನ ಚೆಲ್ಲಹಳ್ಳಿ ಗ್ರಾಮದಲ್ಲಿ ಕ್ಲಿನಿಕ್ ಪ್ರಾರಂಭಿಸಿದ್ದೆ. ಅದು  ಪುಟ್ಟದೊಂದು ಕೊಠಡಿಯಾಗಿತ್ತು. ರೋಗಿಗಳನ್ನು ನೋಡು­ವುದಕ್ಕೆ ಪ್ರತ್ಯೇಕ ಕೊಠಡಿಯಿಲ್ಲದ ಕಾರಣ ಮಧ್ಯ ಒಂದು ಪರದೆ ಬಿಟ್ಟು ಯಾರಿಗೂ ಮುಜುಗರ ಆಗದಂತೆ ಮಾಡಿದ್ದೆ. ಆದರೆ ಪರೀಕ್ಷಾ ಸ್ಥಳ ಮಾತ್ರ ಪಾರದರ್ಶಕ­ವಾಗೇ ಇತ್ತು. ವೈದ್ಯ– ರೋಗಿಗಳ ನಡುವೆ ನಡೆಯುತ್ತಿದ್ದ ಸಂಭಾಷಣೆ ಅಂಗಳದಲ್ಲಿ ನೆರೆದಿದ್ದವರಿಗೆಲ್ಲ ಕೇಳಿಸುತ್ತಿತ್ತು.ಒಮ್ಮೆ ನವ ವಿವಾಹಿತೆಯೊಬ್ಬಳು ಮುಜುಗರದಿಂದಲೇ  ಒಳಗೆ ಬಂದಳು. ಪರೀಕ್ಷಾ ಟೇಬಲ್ ಮೇಲೆ ಕುಳಿತಳು. ಇತರ ರೋಗಿಗಳು ತಾವು ಬೇಗನೇ ತೋರಿಸಿಕೊಳ್ಳಬೇಕೆಂಬ ಕಾತರದಿಂದ ಪರಸ್ಪರ ನೂಕಾಡುತ್ತಾ ಇದ್ದರು. ಏನು  ತೊಂದರೆ ಎಂಬ ಮಾಮೂಲು ಪ್ರಶ್ನೆ ಕೇಳಿದೆ. ಅವಳು ಮಾತನಾಡಲಿಲ್ಲ. ಯಾಕಮ್ಮ ಮಾತು ಬರೋದಿಲ್ವಾ ಎಂದರೂ ಸುಮ್ಮನಿದ್ದಳು. ಸೆರಗಿನ ಅಂಚನ್ನು ಬಾಯಲ್ಲಿ ಸಿಕ್ಕಿಸಿಕೊಂಡು ನಾಚಿದಳು. ಬೇರೆ ರೋಗಿಗಳು ಅವಸರ ಮಾಡುತ್ತಿದ್ದರು. ಅದೇನು ಬಾಯಿ ಬಿಟ್ಟು ಹೇಳು ಮಗಾ ಅಂದ ಅವರಜ್ಜ. ಅವಳು ನಾಚುತ್ತಲೇ ಕೊನೆಗೆ, ಸಾರ್ ನನಗೆ ಸಂಸಾರದಲ್ಲಿ ಕಷ್ಟ ಆಗುತ್ತೆ ಅಂದಳು.ಸಂಸಾರ ಅಂದ ಮೇಲೆ ಕಷ್ಟ ಸುಖ ಇದ್ದದ್ದೆ. ಯಾರಿಗಿಲ್ಲಾ ಹೇಳು? ಈಗಷ್ಟೇ ಮದುವೆ ಆಗಿದ್ದೀಯಾ, ಮುಂದೆ ಸರಿ ಹೋಗುತ್ತೆ. ಹೊಸದರಲ್ಲಿ ಎಲ್ಲರಿಗೂ ಕಷ್ಟ, ಹೆಚ್ಚಿಗೆ ತಲೆಕೆಡಿಸ್ಕೊಬೇಡ  ಎಂದು ಬುದ್ಧಿಮಾತು ಹೇಳಿ, ಬೇರೆ ಏನಾದರೂ ತೊಂದರೆ ಇದೆಯಾ ಎಂದೆ. 

ಅಲ್ಲಿ ಇದ್ದವರೆಲ್ಲರೂ ಗೊಳ್ಳೆಂದು ನಕ್ಕರು. ಅವಳು ಮಾತ್ರ ಮುಖ ಮುಚ್ಚಿಕೊಂಡು ಓಡಿದಳು. ನನಗೆ ಏನೂ ಅರ್ಥ ಆಗಲಿಲ್ಲ.ರೋಗಿಗಳೆಲ್ಲ  ಖಾಲಿ ಆದ ಮೇಲೆ, ನಮ್ಮ ನೌಕರ  ನಿಂಗಜ್ಜನನ್ನು, ಯಾಕಜ್ಜ ಆಗ ನನ್ನ ಮಾತಿಗೆ ನಕ್ಕಿದ್ದು ಎಂದೆ. ಅವನು ಮತ್ತೊಮ್ಮೆ ನಕ್ಕ. ನೀವು ಅಂಗೆ ಹೇಳಿದ್ರೆ ನಗದೇ ಇರೋ­­ಕಾ­ಗುತ್ತಾ ಸಾರ್ ಎಂದು ನನ್ನನ್ನೇ ಪ್ರಶ್ನಿಸಿದ. ಕಡೆಗೆ ನಗು ತಡೆಯಲಾರದೆ ನನ್ನ ಮುಗ್ಧ ಪ್ರಶ್ನೆಗೆ ಅಲ್ಲಿದ್ದವರೊಬ್ಬರು ಉತ್ತರ ಹೇಳಿದರು.ಸಂಸಾರದಲ್ಲಿ ಕಷ್ಟ ಅಂದ್ರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಕಷ್ಟ ಆಗುತ್ತೆ ಎಂದರ್ಥ ಎಂದರು. ವಾಕ್ಯದ ಒಳ ಅರ್ಥ ಕೇಳಿ ನನಗೂ ನಗು ತಡೆಯಲಾಗಲಿಲ್ಲ. ವೈದ್ಯರಿಗೆ ವೈದ್ಯಕೀಯ ಜ್ಞಾನದ ಜೊತೆಗೆ ಆಯಾ ಸ್ಥಳಗಳ ಆಡುಭಾಷೆಯೂ ಗೊತ್ತಿರಬೇಕು. ಇಲ್ಲವಾದಲ್ಲಿ ಅಪಹಾಸ್ಯಕ್ಕೆ ಈಡಾಗುವುದು ಖಂಡಿತಾ.ಹಳೆ ಮೈಸೂರು ಭಾಗದಲ್ಲಿ ಆರಂಭ ಅಂದರೆ ವ್ಯವಸಾಯ. ರೈತರನ್ನು ಏನ್ ಕೆಲಸ ಮಾಡ್ತಿಯಾ ಅಂತ ಕೇಳಿದ್ರೆ, ಅವರು ಆರಂಭ ಮಾಡ್ತೀವಿ ಅಂತಾರೆ. ಹಾಗೆಂದರೆ ಏನೆಂದು ತಿಳಿಯದೆ ನಾವು, ಏನನ್ನು ಆರಂಭ ಮಾಡ್ತೀಯಾ ಎಂದೇ­ನಾ­ದರೂ ಪ್ರಶ್ನಿಸಿದರೆ ಅದು ಅವರಿಗೆ ಅರ್ಥವಾಗುವುದಿಲ್ಲ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry