ಸೋಮವಾರ, ಜೂನ್ 14, 2021
26 °C

ಆಡುವಾಗಲೇ ಕೊನೆಯುಸಿರೆಳೆದ ಹಿರಿಯ ಕ್ರಿಕೆಟಿಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಡುವಾಗಲೇ ಕೊನೆಯುಸಿರೆಳೆದ ಹಿರಿಯ ಕ್ರಿಕೆಟಿಗ

ಹುಬ್ಬಳ್ಳಿ: ಅವರು ಔಟ್ ಆದಾಗ ತಂಡದ ಗೆಲುವಿಗೆ ಕೇವಲ ಐದು ರನ್ ಬೇಕಿದ್ದವು. ತಂಡ ಮಿಕ್ಕ ಐದು ರನ್ ಗಳಿಸಿ ಜಯದ ಸಂಭ್ರಮದಲ್ಲಿ ಇರುವಾಗಲೇ ಅವರ ಉಸಿರೇ ನಿಂತುಬಿಟ್ಟಿತು. ನಗರದ ಹಿರಿಯ ಕ್ರಿಕೆಟ್ ಆಟಗಾರ ಜಗದೀಶ ಹಿರೇಮಠ (63) -ಗೆಳೆಯರ ಪಾಲಿಗೆ ನೆಚ್ಚಿನ ಜಗ್ಗೂ- ಭಾನುವಾರ ನಡೆದ ಹಿರಿಯರ ಕ್ರಿಕೆಟ್ ಪಂದ್ಯದಲ್ಲಿ ಆಡುತ್ತಲೇ ಕೊನೆಯುಸಿರೆಳೆದರು.

 

ರೈಲ್ವೆ ಕ್ರೀಡಾಂಗಣದಲ್ಲಿ ನಡೆದ ಹುಬ್ಬಳ್ಳಿ ಮತ್ತು ವಾಸ್ಕೊ ಹಿರಿಯರ ತಂಡಗಳ ನಡುವಿನ ಪಂದ್ಯ ಈ ದುರಂತಕ್ಕೆ ಸಾಕ್ಷಿಯಾಯಿತು. ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿಯಾಗಿದ್ದ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಬ್ಯಾಟಿಂಗ್‌ಗೆ ಹೋದಾಗಲೇ ಹಿರೇಮಠ ಒಂದಿಷ್ಟು ಆಯಾಸ ಅನುಭವಿಸಿದರು. ಸಹಾಯಕ ರನ್ನರ್ ಆಗಿ ಶಿವಾನಂದ ಗುಂಜಾಳ ಹೋಗಿದ್ದರು. ಗೆಲ್ಲುವ ಉಮೇದಿನಿಂದ ಆಡಿದ ಅವರು, 15 ರನ್ ಗಳಿಸಿದ ನಂತರ ಔಟ್ ಆಗುತ್ತಿದ್ದಂತೆ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಆಗ ಇನ್ನೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದವರು ಅವರ ನೆಚ್ಚಿನ ಸ್ನೇಹಿತ ಬಾಬಾ ಭೂಸದ್.ಪೆವಿಲಿಯನ್‌ಗೆ ಹೋಗಿ ಕುರ್ಚಿ ಮೇಲೆ ಕುಳಿತ ಹಿರೇಮಠ ಅವರನ್ನು ಉತ್ತಮ ಆಟ ಆಡಿದ್ದಕ್ಕೆ ಅಭಿನಂದಿಸಲು ವಿಜಯ್ ಕಾಮತ್ ಅವರ ಬಳಿ ತೆರಳುವ ವೇಳೆಗೆ ಅಸ್ವಸ್ಥರಾಗಿ ಕುಸಿದಿದ್ದರು. ಸ್ಥಳದಲ್ಲೇ ಇದ್ದ ತಂಡದ ಆಟಗಾರ ಡಾ. ಲಿಂಗರಾಜ ಬಿಳೇಕಲ್ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಹತ್ತಿರದ ವಿವೇಕಾನಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಹಿರೇಮಠ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. `ತೀವ್ರ ಹೃದಯಾಘಾತದಿಂದ ಸಾವು ಸಂಭವಿಸಿದೆ~ ಎಂದು ವೈದ್ಯರು ಘೋಷಿಸಿದರು.ಮೊದಲು ಬ್ಯಾಟ್ ಮಾಡಿದ್ದ ವಾಸ್ಕೊ ತಂಡ 125 ರನ್ ಗಳಿಸಿತ್ತು. ತಂಡವನ್ನು ಗೆಲ್ಲಿಸಿಯೇ ಬರುತ್ತೇನೆ ಎಂದು ಪ್ಯಾಡ್ ಕಟ್ಟಿಕೊಂಡು ಮೇಲಿನ ಕ್ರಮಾಂಕದಲ್ಲಿ ಆಡಲು ತೆರಳಿದ್ದರು ಆಲ್‌ರೌಂಡರ್ ಹಿರೇಮಠ. ತಂಡದ ಜಯ ಖಚಿತಪಡಿಸಿಕೊಂಡೇ ಅವರು ಕಣ್ಣು ಮುಚ್ಚಿದರು.ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನ ಹಿರಿಯ ಸದಸ್ಯರಾಗಿದ್ದ ಹಿರೇಮಠ, ವಿಜಯ್ ಕಾಮತ್, ಪ್ರಮೋದ್ ಕಾಮತ್, ನಿತ್ಯಾನಂದ ಶೆಟ್ಟಿ, ರಾಜೇಶ್ ಕಾಮತ್ ಸೇರಿದಂತೆ ಹಲವು ಆಟಗಾರರಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡಿದವರು. ಕೆಎಸ್‌ಸಿಎ ಧಾರವಾಡ ವಲಯ ನಿಮಂತ್ರಕ ಭೂಸದ್ ಸೇರಿದಂತೆ ಹಲವು ಹಿರಿಯ ಆಟಗಾರರು ಹಿರೇಮಠ ಅವರ ನಿಧನಕ್ಕೆ ಕಂಬನಿ ಮಿಡಿದರು. ರಾತ್ರಿ ನಡೆದ ಅಂತ್ಯಕ್ರಿಯೆಯಲ್ಲಿ ವಾಸ್ಕೊ ತಂಡದ ಸದಸ್ಯರೂ ಸೇರಿದಂತೆ ಹಲವು ಹಿರಿಯ ಆಟಗಾರರು ಪಾಲ್ಗೊಂಡಿದ್ದರು.ಮುಂದಿನ ವರ್ಷದಿಂದ ನಡೆಯುವ ಹಿರಿಯ ಟೂರ್ನಿಗೆ `ಜಗ್ಗೂ ಕಪ್ ಕ್ರಿಕೆಟ್ ಟೂರ್ನಿ~ ಎಂದು ಹೆಸರಿಸಲಾಗಿದೆ ಎಂದು ವಾಸ್ಕೊ ತಂಡದ ಜಾನ್ ಫೆರ್ನಾಂಡಿಸ್ ಪ್ರಕಟಿಸಿದರು. ಹುಬ್ಬಳ್ಳಿ ತಂಡದ ಪರ ಬಾಬಾ, ವಿಜಯ್, ಪ್ರಮೋದ್ ಅವರಲ್ಲದೆ ಕೈಲಾಸ ಮುನ್ವರ್, ನಿತ್ಯಾನಂದ ಶೆಟ್ಟಿ ಆಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.