ಆಡು ಭಾಷೆಗಳಲ್ಲಿ ಯೂನಿಕೋಡ್‌ ಶಿಷ್ಟತೆ: ಹಕ್ಕೊತ್ತಾಯ

7

ಆಡು ಭಾಷೆಗಳಲ್ಲಿ ಯೂನಿಕೋಡ್‌ ಶಿಷ್ಟತೆ: ಹಕ್ಕೊತ್ತಾಯ

Published:
Updated:
ಆಡು ಭಾಷೆಗಳಲ್ಲಿ ಯೂನಿಕೋಡ್‌ ಶಿಷ್ಟತೆ: ಹಕ್ಕೊತ್ತಾಯ

ಬೆಂಗಳೂರು: ‘ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ ಭಾಷೆಗಳ ಅಕ್ಷರ ಮಾದರಿಗಳಲ್ಲಿ ಯೂನಿಕೋಡ್‌ ಶಿಷ್ಟತೆ ಅಳವಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆ ಭಾಷೆಗಳ ಲೇಖಕರು ಹಕ್ಕೊತ್ತಾಯ ಮಂಡಿಸಿದರು.ನಗರದಲ್ಲಿ ಶನಿವಾರ ನಡೆದ ಬೆಂಗಳೂರು ಸಾಹಿತ್ಯೋತ್ಸವದ ‘ಸೊಲ್ಲ ಸೊಬಗು– ಆಡು ನುಡಿಯ ಸಾಹಿತ್ಯ ಸೊಬಗು’ ಗೋಷ್ಠಿಯಲ್ಲಿ ಸಮನ್ವಯ­ಕಾರ­­ರಾಗಿದ್ದ ಹಿರಿಯ ಸಾಹಿತಿ ಡಾ.ಬಿ.ಎ.ವಿವೇಕ ರೈ ಈ ಹಕ್ಕೊತ್ತಾಯ ಮಂಡಿಸಿದರು.‘ತುಳು, ಬ್ಯಾರಿ, ಕೊಂಕಣಿ ಹಾಗೂ ಕೊಡವ ಭಾಷೆಗಳ ಕರ್ನಾಟಕ ಜೀವಾಳಗಳು. ಈ ಭಾಷೆಗಳ ಲೇಖಕರು ಕನ್ನಡವನ್ನು ಒಪ್ಪಿಕೊಂಡು ಮಾತೃಭಾಷೆ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕನ್ನಡಿಗರು ಕೂಡಾ ಈ ಭಾಷೆಗಳು ತಮ್ಮದೇ ಭಾಷೆ ಎಂಬಂತೆ ಪ್ರೀತಿಯಿಂದ ಕಂಡಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು.ಜಾನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ, ‘50 ಲಕ್ಷ ಜನರಿಗೆ ತುಳು ಮನೆಮಾತು. ತುಳು ಮಾತನಾಡುವ ಒಂದು ಕೋಟಿ ಜನರು ಇದ್ದಾರೆ. ಈ ಭಾಷೆಗೆ 2,000 ವರ್ಷಗಳ ಇತಿಹಾಸ ಇದೆ. ಉಳಿದ ದ್ರಾವಿಡ ಭಾಷೆಗಳಿಗೆ ಹೋಲಿಸಿದರೆ ತುಳುವಿಗೆ ಸಾಹಿತ್ಯ ಇತಿಹಾಸ ಕಡಿಮೆ. 600 ವರ್ಷಗಳ ಸಾಹಿತ್ಯ ಇತಿಹಾಸ ಇದೆ. ಕನ್ನಡ ಲೇಖಕರೇ ತುಳು ಲೇಖಕರು’ ಎಂದು ವಿಶ್ಲೇಷಿಸಿದರು.‘ಮೌಖಿಕ ಸಾಹಿತ್ಯದ ದೃಷ್ಟಿಯಿಂದಲೂ

ತುಳು ಸಂಪದ್ಭರಿತ ಭಾಷೆ. ನೂರಾರು ಪಾಡ್ದನಗಳು, ಸಾಕಷ್ಟು ಆರಾಧನೆಯ ಹಾಡುಗಳು, ಕುಣಿತದ ಹಾಡುಗಳು ಈ ಭಾಷೆಯಲ್ಲಿ ರಚನೆಯಾಗಿವೆ. ತುಳು­ನಾಡಿನ ಎರಡು ತಾಲ್ಲೂಕಿನಲ್ಲಿ ಸರಿಯಾಗಿ ಹುಡುಕಾಡಿದರೆ 50 ಸಾವಿರ ಜಾನಪದ ಕಥೆಗಳು ಸಿಗಬಹುದು’ ಎಂದರು.‘ಸುಧಾ’ ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ. ಹನೀಫ್‌, ‘ಕರಾವಳಿ ಹಾಗೂ ಮಲೆನಾಡಿನ ಐದು ಜಿಲ್ಲೆಗಳಲ್ಲಿ ಬ್ಯಾರಿ ಮಾತನಾಡುವವರು ಇದ್ದಾರೆ. 18 ಲಕ್ಷ ಮಂದಿ ಬ್ಯಾರಿ ಭಾಷೆ ಮಾತನಾಡುತ್ತಾರೆ. ಭಾಷೆಗೆ 60 ವರ್ಷಗಳ ಸಾಹಿತ್ಯಿಕ ಪರಂಪರೆ ಇದೆ. 1990ರ ದಶಕದಲ್ಲಿ ಬ್ಯಾರಿ ಆಸ್ಮಿತೆ ಬಗ್ಗೆ ಗೌರವ ಜಾಸ್ತಿ ಆಯಿತು. 15 ವರ್ಷಗಳಲ್ಲೇ 500ಕ್ಕೂ ಅಧಿಕ ಬ್ಯಾರಿ ಭಾಷೆಯ ಪುಸ್ತಕಗಳು ಪ್ರಕಟವಾಗಿವೆ. ಕವನ ಸಂಕಲನಗಳು ಹೇರಳವಾಗಿ ರಚನೆಯಾಗಿವೆ’ ಎಂದರು.‘ವಿಶೇಷವೆಂದರೆ 1200 ಜಮಾತ್‌­ಗಳಲ್ಲಿ ಕನ್ನಡ ಆಡಳಿತ ಭಾಷೆ. ಇತ್ತೀಚಿನ ದಿನಗಳಲ್ಲಿ ಬ್ಯಾರಿ ಭಾಷೆಗೆ ಇಂಗ್ಲಿಷ್‌­ನಿಂದ ದೊಡ್ಡ ಅಪಾಯ ಎದುರಾಗಿದೆ. ಇಂಗ್ಲಿಷ್‌ ಹೊಡೆತದಿಂದ ಅನೇಕ ಬ್ಯಾರಿ ಶಬ್ದಗಳು ಮರೆಯಾಗಿವೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಲೇಖಕಿ ಡಾ.ರೇಖಾ ವಸಂತ್‌, ‘12ನೇ ಶತಮಾನದ ಹುಣಸೂರು ಶಾಸನದಲ್ಲಿ ಕೊಡವ ಭಾಷೆಯ ಬಗ್ಗೆ ಉಲ್ಲೇಖ ಇದೆ. ಇದು ಕೊಡವರ ಮಾತೃಭಾಷೆ ಎಂಬ ತಪ್ಪು ಕಲ್ಪನೆ ಇದೆ. ಕೊಡವರು, ಬುಡಕಟ್ಟು ಜನರು ಸೇರಿದಂತೆ 23 ಸಮುದಾಯಗಳ ಜನರು ಈ ಭಾಷೆ ಬಳಸುತ್ತಿದ್ದಾರೆ’ ಎಂದರು.ಕೊಂಕಣಿ ಲೇಖಕ ಪ್ರೊ.ಎಡ್ವಿನ್‌ ಜೆ.ಎಫ್‌. ಡಿಸೋಜ, ‘ಕೊಂಕಣಿ ಸ್ವತಂತ್ರ ಭಾಷೆ ಎಂದು ಸರ್ಕಾರ ಮಾನ್ಯತೆ ಕೊಟ್ಟಿದೆ. ದುಃಖದ ಸಂಗತಿಯೆಂದರೆ ನಾಗರಿ ಲಿಪಿಯಲ್ಲಿ ಬರೆದರೆ ಮಾತ್ರ ಕೊಂಕಣಿ ಲೇಖಕರಿಗೆ ಪ್ರಶಸ್ತಿ ಸಿಗುತ್ತಿದೆ. ಕನ್ನಡದಲ್ಲಿ ಬರೆದವರಿಗೆ ಪ್ರಶಸ್ತಿ ದೊರಕುತ್ತಿಲ್ಲ. ಕೊಂಕಣಿ ಲೇಖಕರು ಜಗತ್ತಿನ ಸಮಸ್ಯೆಗಳ ಬಗ್ಗೆ ಬರೆಯಬೇಕು’ ಎಂದು ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry